Friday, July 10, 2009

ಆದರೂ ನನ್ನ ತುಟಿಯ ಕಿರುನಗು ಸತ್ತಿಲ್ಲ..

ಅದೊಂದು ಕನಸು ನನಗ್ಯಾಕೆ ಬಿತ್ತೋ...

ಕಾಶ್ಮೀರದ ದಾಲ್ ಸರೋವರದಲ್ಲಿ ನಾನು ನೀನು ಬೋಟ್ ಹೌಸ್ ನಲ್ಲಿ ತಂಗಿದ್ವಿ....ಅದು ಬೋಟು ಅನ್ನೋದಕ್ಕೇ ಸಾಧ್ಯವಿಲ್ಲ ಅನ್ನೋತರದಲ್ಲಿ ಅರಮನೆ ರೀತಿಯಲ್ಲಿ ಸಿಂಗರಿಸಿದ್ದರು ನಮಗಾಗಿ.ಅದಕ್ಕೆ ತಕ್ಕುದಾದ ಉಡುಗೆಯಲ್ಲಿ ನಾವೂ ಇದ್ವಿ.ದೂರದಲ್ಲಿ ಮ್ಯೂಸಿಕ್ ಟೀಮ್ ಒಂದು ಮೇಡ್ ಫಾರ್ ಈಚ್ ಅದರ್ ವಾಕ್ಯಕ್ಕೆ ಅದ್ಭುತವಾದ ರಾಗ ಸಂಯೋಜನೆ ಮಾಡಿ ಹಾಡುತ್ತಿದ್ದರು,ಅದೂ ನಮಗಾಗಿ...ನೀರಲ್ಲಿ, ನೀರೂ ಕಾಣಿಸದ ಹಾಗೆ ದುಂಡು ಮಲ್ಲಿಗೆಯನ್ನ ಚೆಲ್ಲಿದ್ದರು...ಮಧ್ಯದ ಅಮಲಿನಲ್ಲಿರುವವರನ್ನು ವಿವಿಧ ರೂಪದಲ್ಲಿ ನೋಡಿದ್ದೇನೆ...ನಕ್ಕಿದ್ದೇನೆ...ಹೀಗೂ ಉಂಟಾ ಅಂದುಕೊಂಡಿದ್ದೇನೆ...ಆದರೆ ಆ ಬೋಟ್ ಹೌಸಿನಲ್ಲಿ ನಮ್ಮನ್ನು ನೋಡಿದವರು ಪ್ರೇಮಿಗಳು ಹೀಗೂ ಇದ್ದಾರಾ ಅನ್ನುವ ಹಾಗಿದ್ವಿ . ಯಾವ ಸಿನಿಮಾದಲ್ಲು ನೃತ್ಯ ನಿರ್ದೇಶಕರ ಕಲ್ಪನೆಗೂ ಸಿಗದವರ ಹಾಗೆ ಅಷ್ಟು ಅದ್ಭುತವಾಗಿ, ಶ್ರೀಮಂತವಾಗಿ. ಮಲ್ಲಿಗೆ ಸುವಾಸನೆ ನಮ್ಮನ್ನ ಅಮಲಿನ ಕಡಲಿಗೆ ನೂಕಿತ್ತು. ನಿನ್ನ ನೆನಪಲ್ಲದೆ ಬೇರೆ ಯಾವುದು ಕ್ಷಣದ ನೆನಪಿಗೂ ಬಾರದ ಹಾಗೆ ಇಂದ್ರಿಯಗಳ ಎಲ್ಲ ಬಾಗಿಲುಗಳನ್ನು ಮುಚ್ಚಿತ್ತು. ದೊಡ್ಡದಾದ ಹಾಲು, ಚಂದ್ರಾಕೃತಿಯ ಸ್ಟೇಜು, ನೀನು ಕುಣಿದಾಗ ನಾನು ಅಭಿಮಾನಿಯಾಗುತ್ತಿದ್ದೆ. ನಾನು ಕುಣಿಯುವಾಗ ನೀನು ಅಭಿಮಾನಿಯಾಗುತ್ತಿದ್ದೆ ಇನ್ನೇನು ಇಬ್ಬರೂ ಸುಸ್ತಾಗಿ ವಿರಮಿಸುತ್ತೇವೋ ಅನ್ನುವಾಗ ಇಬ್ಬರೂ ಆವೇಶಭರಿತವಾಗಿ ಮತ್ತಷ್ಟು ಕುಣಿಯುತಿದ್ವಿ.


ಅದ್ಯಾವ ನೃತ್ಯವೋ ಗೊತ್ತಿಲ್ಲ... ದೇಹದಪ್ಪುಗೆ ಇರಲಿಲ್ಲ. ಆದರೆ ಭಾವೊದ್ವೆಗದ ಸಮ್ಮಿಲನ ಇತ್ತು. ಸಂಗೀತ ಇರಲಿಲ್ಲ ನಮ್ಮಿಬ್ಬರ ಹೆಸರು ಮಾತ್ರ ಅಮಲು ಧ್ವನಿಯಲ್ಲಿ ಹೊರಡುವ ಮಾಧಕತೆಯ ರಾಗದಂತಿತ್ತು . ಅದೆಷ್ಟು ಹೊತ್ತು ಕುಣಿದಿದ್ದೆವೋ ಗೊತ್ತಿಲ್ಲ, ಹೊತ್ತಿಗೆ ಮತ್ತೇರುತ್ತ ದೋಣಿ ಮುಳುಗುತ್ತಿರುವುದೂ ಗೊತ್ತಾಗಲಿಲ್ಲ. ನಮ್ಮನ್ನ ವಂಚಿಸಿ ಮುಳುಗಿಸುವುದು ಚೆಲ್ಲಿರುವ ಮಲ್ಲಿಗೆಯ ಉನ್ಮಾದ ಪರಿಮಳದ ಉದ್ಧೇಶವಿತ್ತೋ ಏನೋ..

ಪಾತಾಳಕ್ಕೆಳೆದುಕೊಂಡೇ ಬಿಡ್ತು.

ಆದರೂ ನಾವು ಸಾಯಲಿಲ್ಲ.. ಯಾಕೆ ಗೊತ್ತಾ..ಅಲ್ಲಿ ನಮ್ಮ ಬಿಗಿದ ಅಪ್ಪುಗೆ ಇತ್ತು. ಸತ್ತರೂ ಒಟ್ಟಿಗೆ ಎಂಬ ಉಸಿರು ಇನ್ನು ಬೆಚ್ಚಗಿನ ಗೂಡು ಕಟ್ಟಿಕೊಂಡಿತ್ತು .ಆ ಉಸಿರನ್ನ ಬಿಡಬೇಡ ಎಂದು ನನಗೆ ನೀನು ನಿನಗೆ ನಾನು ಹೇಳಿಕೊಂಡೇ ಇದ್ವಿ. ನಮ್ಮನ್ನ ಪಾತಾಳಕ್ಕೆಳೆದುಕೊಂಡ ನೀರಿಗೆ ಅವಮಾನ ಆಯ್ತು ಅನ್ನಿಸುತ್ತೆ. ಅದರ ಆಳದೊಡಲು .ನಮ್ಮನ್ನ ಬೇರೆ ಮಾಡಲು ಸಾಧ್ಯವಿಲ್ಲ ಅಂದುಕೊಂಡು ಬಿಡ್ತು. ಅದಕ್ಕೆ ನೀರವ ಮೌನದಲ್ಲೊಂದು ಕುಹುಕತೆಯ ಸುಳಿಯನ್ನು ಹುಟ್ಟಿಸಿ ಛೂ ಬಿಡ್ತು.


ನಮ್ಮನ್ನಾವರಿಸುತ್ತಾ ನಮ್ಮನ್ನ ತಬ್ಬಿಕೊಳ್ಳುತ್ತಾ ಪ್ರಜ್ನೆ ತಪ್ಪುವ ಹಾಗೆ ತಿರುಗಿಸಿಕೊಂಡು ಬಿಡ್ತು.

ಎಚ್ಚರವಾಗಿದೆ..

ನೀನು ಟೈಟಾನಿಕ್ ನಾಯಕಿಯಂತೆ ಹಲಗೆ ಮೇಲಿದ್ದೀಯಾ.. ನಾನು ದುರಂತ ನಾಯಕನಂತೆ ಅಲ್ಲಲ್ಲಿ ಹೆಪ್ಪುಗಟ್ಟಿದ ನೀರ ಕೊರೆತಕ್ಕೆ ಮರಗಟ್ಟಿ ಕಿರು ಬೆರಳನ್ನ ನಿನ್ನ ನೆನಪಿನ ಉಂಗುರಕ್ಕೆ ಸಿಕ್ಕಿಸಿಕೊಂಡಿದ್ದೇನೆ....


ಅದೆಲ್ಲಿಂದಲೋ ಬಂದ ನಾವಿಕರು ನಿನ್ನನ್ನ ಇನ್ನೊಂದು ದೋಣಿಯಲ್ಲಿ ಮಲಗಿಸಿ ಆರೈಕೆ ಮಾಡುತ್ತ ದೂರ ಸಾಗಿಸುತ್ತಾರೆ.. ನಾನು ಹೆಪ್ಪುಗಟ್ಟಿದ ನೀರಲ್ಲಿ ಮತ್ತಷ್ಟು ಹೆಪ್ಪುಗಟ್ಟುತ್ತಾ ನಿನ್ನ ನೆನಪನ್ನು ಇನ್ನಷ್ಟು ಹೆಪ್ಪುಗಟ್ಟಿಸುತ್ತ ಮುಳುಗುತ್ತಿದ್ದೇನೆ.....

ಆದರೂ ನನ್ನ ತುಟಿಯ ಕಿರುನಗು ಸತ್ತಿಲ್ಲ..
ನಿನ್ನ ನೆನಪಿಗಾಗಿ

2 comments:

  1. kiru nagu saayolla vaasu..yaakandre devaki ninnavale yaavattu

    prasaad naayak

    ReplyDelete
  2. Vasu yavaglu nagthane iri Devakigoskara........ e nimma naguvinindhagi Devaki nimage sikke sigthale.......

    ReplyDelete