Sunday, August 23, 2009

ದೇವಕಿಯಾಸರೆ ದೊರೆತರೆ ಬದುಕು. ದೊರಕದಿದ್ದರೆ ಸಾವು.

ಬದುಕು ಅಂದ್ರೆ ಏನು ದೇವಕಿ? ನಾನು ತಿಳಿದಿದ್ದಿಷ್ಟೇ ನಿನ್ನ ಎರಡು ಕಣ್ಣ ಹನಿಗಳನ್ನ ಒರೆಸುವುದು. ಸಾಧ್ಯವಾದರೆ ಯಾವತ್ತು ನಿನ್ನ ಕಂಗಳಿಂದ ಹನಿಗಳು ಜಾರದಿರುವಂತೆ ನೋಡಿಕೊಳ್ಳುವುದು, ಒಂದೆರೆಡು ಮೊಳ ಮಲ್ಲಿಗೆಯನ್ನ ನಿನ್ನ ಮುಂದಿರಿಸಿ ನೀನು ಕಣ್ಣು ತುಂಬಿಕೊಂಡು ನೋಡುವುದನ್ನ ನಾನು ಕಣ್ಣು ತುಂಬಿಕೊಳ್ಳುವುದು, ನಿನ್ನ ಕಷ್ಟಗಳಿಗೆ ಆಗುವುದು ನಿನ್ನ ಸುಖಗಳಿಗೆ ತಾಗುವುದು, ಕದ್ದಾದರೂ ಸರಿ ಒಂದು ಒಂದು ಮುತ್ತನ್ನಿಕ್ಕಿವುದು, ಸಾಕು ಬೇಡವೆಂದರೂ ನಿನಗೆ ಇನ್ನೊಂದಿಷ್ಟು ತುತ್ತು ತಿನಿಸುವುದು. ನಿನ್ನ ಕಣ್ಣುಗಳಲ್ಲಿ ನನ್ನದೊಂದಿಷ್ಟು ಕನಸುಗಳನ್ನ ತುಂಬುವುದು, ನನಸಾಗಲಿ ಅನ್ನುತ್ತಾ ದೇವರಲ್ಲಿ ಬೇಡಿಕೊಳ್ಳುವುದು, ಇಷ್ಟೇ ನಾನು ನನಗೆ ಅಂದುಕೊಂಡ ಬದುಕು. ಆದರೆ ಇಷ್ಟು ಸಣ್ಣ ಕೋರಿಕೆಗಳು ಕೂಡ ಫಲಿಸುವ ಸಣ್ಣ ಸೂಚನೆಗಳು ನನಗೆ ಕಾಣಿಸುತ್ತಿಲ್ಲ. ಎಲ್ಲ ಮರೆತು ಹೋಗಿದ್ದ ಈ ವಾಸು ಮತ್ತೆ ಎಲ್ಲವನ್ನು ನೆನಪು ಮಾಡಿಕೊಂಡು ವಾಪಾಸು ಬಂದಿದ್ದಾನೆ. ಇಷ್ಟು ಕೊರಿಕೆಗಳಲ್ಲಿ ಒಂದಾದರು ನಿಜವಾಗಬಹುದ ಅನ್ನುವ ಆಸೆಯಿಂದ ಬಂದಿಲ್ಲ. ಆದರೆ ನಿನ್ನ ಕುರಿತಾಗಿ ಮತ್ತಷ್ಟು ಕನಸುಗಳನ್ನ ಹೆಣೆಯೋದಕ್ಕೆ ಬಂದಿದ್ದಾನೆ. ಎದೆಯ ಒಳಗೆ ಸತ್ತು ಸಮಾಧಿಯಾಗಿದ್ದ ಎಲ್ಲ ಕನಸುಗಳಿಗೆ ಮತ್ತೆ ಜೀವ ಕೊಟ್ಟು ಬದುಕಿನ ಕೊನೆಯ ಯುದ್ಧವನ್ನ ಆರಂಬಿಸುತ್ತಿದ್ದಾನೆ. ದೇವಕಿಯಾಸರೆ ದೊರೆತರೆ ಬದುಕು. ದೊರಕದಿದ್ದರೆ ಸಾವು.

Wednesday, August 19, 2009

ಇಲ್ಲೇ ಹತ್ತಿರದಲ್ಲಿ ಇದ್ದುಕೊಂಡು ನಿನ್ನ ನೆನಪಲ್ಲಿದ್ದುಬಿಡುತ್ತೇನೆ.

ಭಾರವಾದ ಎದೆಯ ಹೊತ್ತುಕೊಂಡು ಆತ್ಮೀಯ ಅನ್ನಿಸಿಕೊಂಡ ಆತ್ಮೀಯನಲ್ಲದ (ನಮ್ಮ?) ಅಮೇರಿಕಾಕ್ಕೆ ಕಾಲಿಟ್ಟೆನಾದರೂ ಮೊದಲ ಹೆಜ್ಜೆ ಇಡುವಾಗಲೇ ನಾನಿಲ್ಲಿ ಹೆಚ್ಚು ದಿನ ಇರಲಾರೆ ಅನ್ನಿಸಿದ್ದು ನಿನ್ನಷ್ಟೇ ಸತ್ಯ. ನಿನ್ನ ನೆನಪುಗಳನ್ನೆಲ್ಲ ಮೂಟೆಕಟ್ಟಿ ಬಿಟ್ಟು ಬಂದೆನಾದರೂ ಮತ್ತೆ ಮತ್ತೆ ಅಪ್ಪಿಕೊಳ್ಳುತ್ತಿದ್ದ ನಿನ್ನ ಕನಸು ಕನವರಿಕೆಗಳನ್ನ ದೂರ ತಳ್ಳಲಾರದೇ ಅಸಹಾಯಕನಾಗಿದ್ದೂ ಕೂಡ ಮೊನ್ನೆ ಮೊನ್ನೆ ಸೆಲ್ಯೂಟ್ ಹೊಡೆದೆವಲ್ಲ ಆ ಸ್ವಾತಂತ್ರ್ಯದ ದಿನದಷ್ಟೇ ಸತ್ಯ. ನಾನು ನಿನ್ನ ಮೇಲಿಟ್ಟಿದ್ದ ಪ್ರೀತಿಗೆ ಆದ ವಂಚನೆ, ಅವಮಾನ ನಿರಾಸೆ ಇವೆಲ್ಲವೂ ಸೇರಿ ಸ್ವಲ್ಪ ದಿನ ನನ್ನನ್ನಿಲ್ಲಿ ಬಂಧಿಸಿಟ್ಟಿದ್ದವು ದೇವಕಿ. ಆದರೇ ಎಲ್ಲಕ್ಕಿಂತ ಮಿಗಿಲಾಗಿ ನೀನು ನನ್ನನ್ನ ಆರಾಧಿಸುತ್ತಿದ್ದ ಪರಿಯ ನೆನಪಾಯಿತು ನೊಡು ಆ ಹೊತ್ತಿನಲ್ಲಿ ನಾನು ನಾನಾಗಿರಲಿಲ್ಲ. ಮನಸ್ಸಿನ ಪುಟಗಳಲ್ಲಿ ದೇವಕಿ ನಾನಂದುಕೊಂಡಷ್ಟು ಕೆಟ್ಟವಳಲ್ಲ ಅಂತ ಯಾಕನ್ನಿಸಿತೋ ಗೊತ್ತಿಲ್ಲ ದೇವರ ಮುಂದೆ ಸಣ್ಣದೊಂದು ದೀಪ ಹಚ್ಚಿಕೊಂಡು ಕುಳಿತುಬಿಟ್ಟೆ. ಹಾಗೆ ಕುಳಿತವನು ಕೇಳಿಕೊಂಡ ಒಂದೇ ಒಂದು ಕೋರಿಕೆಯೆಂದರೇ ದೇವರೇ, ನನ್ನ ದೇವಕಿಯ ತಪ್ಪುಗಳನ್ನ ಕ್ಷಮಿಸಿಬಿಡು.


ಡಾಲರುಗಳನ್ನ ಸಂಪಾದಿಸಿ ಅದ್ಯಾವ ಅರಮನೆಯನ್ನ ಕಟ್ಟೊಕೆ ಇಲ್ಲಿಗೆ ಬಂದೆ ದೇವಕಿ ನಾನು? ಜೊತೆಗೆ ನೀನಿರುವುದಿಲ್ಲ ಅನ್ನುವ ಸತ್ಯ ಗೊತ್ತಿತ್ತರೂ ಬಂದಿದ್ದು ತಪ್ಪಲ್ಲವ? ಮನುಷ್ಯ ಬದುಕೋಕೆ ಮಹಲುಗಳ, ಆಡಂಬರ ಐಶ್ವರ್ಯಗಳ ಮುಲಾಜಿಗೆ ಬಿದ್ದು ಬದುಕಿನ ಅರ್ಥವನ್ನ ಹೇಗೆ ಕಳೆದುಕೊಳ್ಳುತ್ತಾನೆ ಅಂತ ಕನ್ನಡಿ ಮುಂದೆ ನಿಂತು ನನ್ನನ್ನ ನಾನೆ ಪ್ರಶ್ನೆ ಮಾಡಿಕೊಂಡೆ. ನಿನ್ನ ಬಿಟ್ಟು ಬಂದ ನನ್ನಲ್ಲಿ ಉತ್ತರವಿರಲಿಲ್ಲ. ಸಹಜ ಬದುಕಿಗೆ ಆ ಆಡಂಬರದ ದೇಶದ ಅಗತ್ಯ ನನಗಿಲ್ಲ ದೇವಕಿ. ನನ್ನಲ್ಲಿ ಕನಸುಗಳನ್ನ ಹುಟ್ಟುಹಾಕುತ್ತಿದ್ದ ನಿನ್ನ ಅಗತ್ಯ ನನಗೆ ಬೇಕು ಅನ್ನಿಸುತ್ತಿದೆ. ನನ್ನನ್ನ ನೀನು ದೂರವಿಟ್ಟರೂ ಸರಿ ಅಲ್ಲೇ ಹತ್ತಿರದಲ್ಲಿ ಇದ್ದುಕೊಂಡು ನಿನ್ನ ನೆನಪಲ್ಲಿದ್ದುಬಿಡುತ್ತೇನೆ. ಅಮೇರಿಕಾಕ್ಕೆ ಇದ್ದುಬಿಡುವ ತೀವ್ರತೆಯ ಒತ್ತಡಕ್ಕೆ ಅಮೇರಿಕಾದಲ್ಲೇ ಮುಪ್ಪು ಆವರಿಸಿದೆ. ಮನಸ್ಸು ಹಣ್ಣಾಗಿದೆ.


ಮತ್ತೆ ವಾಪಾಸು ಬಂದಿದ್ದೀನಿ ದೇವಕಿ. ನಿನ್ನ ಪಡಿಯೋದಕ್ಕೇನಾ ಅಂತ ನನ್ನನ್ನ ನಾನೆ ಪ್ರಶ್ನೆ ಮಾಡಿಕೊಂಡರೂ ನನಗೀಗ ಉತ್ತರ ಸಿಗುತ್ತಿಲ್ಲ. ಆದರೇ ನಿನ್ನಿಂದ ತುಂಬಾ ದೂರ ಇರಲಾರದ ಈ ವಾಸುವಿನ ಅಸಹಾಯಕತೆಯನ್ನ ಪ್ಲೀಸ್
ಕ್ಷಮಿಸಿಬಿಡು.

Tuesday, August 18, 2009

ಎಲ್ಲೋ ದೂರದಲ್ಲಿ ನಿಂತು ಕದ್ದಾದರೂ ಸರಿ ನಿನ್ನ ನೋಡಬೇಕು..

ಕಣ್ಣೆದುರು ಸುಳಿಯುವಳೇ ನನ್ನ ದೇವಕಿ?!
"ನೇವರಿಸಿ ಸಾಗಿದೆ ತಂಗಾಳಿಯೊಂದು ಸೋಕಿ
ನೆನಪಿನಲ್ಲಿ ಸುಳಿದಂತೆ ನನ್ನ ದೇವಕಿ!"

ಹೀಗೆ ಒಬ್ಬನೇ ಹಾಡಿಕೊಳ್ಳುತಿರುತ್ತಿದ್ದೆ. ನನ್ನ ಒಂಟಿತನದಲಿ ಬಹುಮುಖ್ಯ ಸಾಥಿ ನಿನ್ನ ನೆನಪುಗಳು. ಅವು ಬರೆಸಿದ ಒಂದಿಷ್ಟು ಕವಿತೆಗಳು. ಇತ್ತ ವಿರಹ ಕ್ಷಣ ಕ್ಷಣವೂ ವಿಷವುಣಿಸುತ್ತಿದ್ದರೆ ಕವಿತೆಗಳು ನನ್ನಲ್ಲಿ ಉಸಿರುಮೂಡಿಸುತ್ತಿದ್ದವು. ಅವುಗಳಿಂದಲೇ ಕಾಲಕಳೆಯುತಿತ್ತು. ಆದ್ದರಿಂದಲೇ ಬಹುಶಃ ನಾನೂ ಉಳಿದದ್ದು.

ಒಳಗಿನ ಭಾವನೆಗಳನ್ನು ಈ ಬ್ಲಾಗಲ್ಲದೇ ನಿನಗೆ ತಿಳಿಸುವುದಾದರೂ ಹೇಗಿತ್ತು? ಎಷ್ಟೊಂದು ಭಾವಗಳು ಎದೆಯಲ್ಲಿ ಕುದಿಯುತ್ತಿದ್ದವು? ನಿನ್ನ ಒಂದು ಮುಖದರ್ಶನಕ್ಕಾಗಿ ಜನುಮವಿಡೀ ಕಾಯುವ ಶಿಕ್ಷೆ ವಿಧಿಸಿದರೂ ಪರವಾಗಿಲ್ಲ ಅನ್ನುವಷ್ಟು ಎಲ್ಲ ಕಳಕೊಂಡ ಫಕೀರನಾಗಿದ್ದೇನೆ. ಆಗಷ್ಟೇ ಖಾರ ತಿಂದವ ನೀರು ಬಯಸುವಷ್ಟು ತೀವ್ರವಾಗಿ ನಿನ್ನ ನೋಡಬೇಕು, ಒಮ್ಮೆ ನಿನ್ನ ಮಡಿಲು ಸೇರಬೇಕು, ನನ್ನೆಲ್ಲಾ ವಿರಹ, ನೋವುಗಳು ನಿನ್ನ ಮಡಿಲಿನಲ್ಲಿ ಕೊನೆಯುಸಿರೆಳೆವುದನ್ನು ಕಾಣಬೇಕು ಅನ್ನುವ ಭಾವ. ಆದರೆ ಒದ್ದಾಡುವಂತೆ ಮಾಡುವ ಈ ಸಾವಿರ ಸಾವಿರ ಮೈಲುಗಳ ದೂರ. ಶತ್ರುವಾಗಿರುವ ಏಳು ಸಾಗರಗಳು ನಮ್ಮೀರ್ವರ ನಡುಮಧ್ಯೆ.

ನಾನೀಗ ಡಾಲರುಗಳ ಊರಲ್ಲಿ ಕನಸುಗಳನ್ನು ಕಳಕೊಂಡ, ಮುಂದಿನ ಯಾವುದೋ ಅಮೃತಘಳಿಗೆಗಾಗಿ ನನ್ನ ಈಗಿನ ಕ್ಷಣಗಳನ್ನು ಒತ್ತೆಯಿಟ್ಟ, ಎಂದೋ ಒಮ್ಮೆ ದೊರಕಬಹುದಾದ, (ದೊರಕದೆಯೂ ಇರಬಹುದಾದ) ಪ್ರೀತಿಗಾಗಿ ಬದುಕಿನ ಮುಖ್ಯಭಾಗದ ಕಪ್ಪ ಒಪ್ಪಿಸಿದ ಹುಡುಗ. ಇಲ್ಲಿನ ಚಳಿಯಲ್ಲಿ ನಿನ್ನ ನೆನಪು ಕಾಡೋದಂದರೆ ಅದನ್ನು ಬರೀ ಪದಗಳಲ್ಲಿ ವಿವರಿಸೋದು ಹ್ಯಾಗೆ ಸಾಧ್ಯ? ಅದು ಉಪಮಾನಗಳೇ ನೀಡಲಾಗದ ನೋವಿನನುಭವದ ಕಂತೆ. ಲಕ್ಷ ಲಕ್ಷ ಚುಚ್ಚುವಿಕೆಯ ನಿಶಾನಿಯಿರುವ ರಾತ್ರಿಯಾಗಸದ ಕತೆ. ಅದರ ಕೆಲಸ, ಕೇವಲ ನೀನು ನನ್ನ ಬಳಿಯಿಲ್ಲ ಎಂಬ ಸೂಜಿಯನ್ನೇ ಮತ್ತೆ ಮತ್ತೆ ನಾಟುವುದು. ನೆನಪುಗಳ ಈ ಬಗೆಯ ಕಾಡುವಿಕೆಯಿಂದ ತಪ್ಪಿಸಿಕೊಳ್ಳಬೇಕಾದರೆ ಮಾಡಬೇಕಾದ್ದೇನು? ನಾನು ಮತ್ತೆ ಸಂತಸದಲ್ಲಿರಲು, ಬದುಕಬೇಕೆಂಬ ಸ್ಪೂರ್ತಿ ಬರಲು, ಪ್ರೀತಿಯ ಮೇಲೆ ನಂಬಿಕೆ ಹುಟ್ಟಲು, ಸಧ್ಯಕ್ಕೆ ಮಾಡಿಯೇ ತೀರಬೇಕಾದ್ದು ಏನು? ಹೀಗನ್ನಿಸಿದ್ದರಿಂದ ಡಾಲರುಗಳ ಕನಸುಗಳು ತೂಕ ಕಳಕೊಂಡಿವೆ. ಶತ್ರುವಿನಂಥ ಏಳು ಸಾಗರಗಳು ದೃಷ್ಟಿಯುದ್ಧದಲ್ಲೇ ಸೋತ ಸೈನಿಕನಂತಾಗಿವೆ. ನನಗೆ ಎಲ್ಲಕ್ಕಿಂತ ಮುಖ್ಯವಾಗಿರುವ ನಿನ್ನ ಬಿಟ್ಟು ಇದ್ಯಾಕೆ, ಇದೇನು, ಇದ್ಯಾವುದರ ಹಿಂದೆ ಬಿದ್ದಿದ್ದೇನೆ ಅನ್ನಿಸತೊಡಗಿದೆ. ನಿನ್ನ ನೋಟದ ಇಂಧನವಿಲ್ಲದೇ ಖಾಲಿಯಾದ ವಿಮಾನದಂತಾಗಿದೆ ನನ್ನೀ ಮನಸ್ಸು.

ಇಲ್ಲಿ ಸಮಯ ಕಳೆಯಲಾಗುತ್ತಿಲ್ಲ. ಬದುಕಲಾಗುತ್ತಿಲ್ಲ. ನಾನು ಕೃಶವಾಗಿಹೋಗುತ್ತಿದ್ದೇನೆ ಅನ್ನಿಸುತ್ತಿದೆ. ಒಮ್ಮೆ ನಿನ್ನ ನೋಡಬೇಕು, ಎಲ್ಲೋ ಮೂಲೆಯಲ್ಲಿ ನಿಂತು ಕದ್ದಾದರೂ ಸರಿ. ಮತ್ತೆ ಒಂಚೂರು ಬಾಳುವ ಆಸೆ ಬದುಕೀತು ಅನ್ನಿಸಿದೆ. ಅದಕ್ಕೆ ಎಲ್ಲಾ ತೊರೆದು ಬರುತ್ತಿದ್ದೇನೆ ದೇವಕಿ. ಈಗೀಗ

ನೇವರಿಸಿ ಸಾಗಿದೆ ತಂಗಾಳಿಯೊಂದು ಸೋಕಿ
ಕಣ್ಣೆದುರೇ ಸುಳಿದಂತೆ ನನ್ನ ದೇವಕಿ
ಅಂತ ಹಾಡಿಕೊಳ್ಳುತ್ತಿದೆ ಮನಸ್ಸು!

Sunday, August 9, 2009

ನನ್ನೆಲ್ಲಾ ನೋವುಗಳು ಉತ್ತುಂಗದಲ್ಲಿರುವ ಸಮಯ ಅಂದರೆ ಇದೇನೇ

ರಾತ್ರಿ ಮುಗಿದ ನಂತರ ಹಗಲು. ಕತ್ತಲ ನಂತರ ಬೆಳಕು. ಬಾಡಿದ ಹೂವು ಬಿದ್ದು ನೆಲ ಸೇರಿದರೂ ಮರುದಿನ ಬೆಳಿಗ್ಗೆ ಮತ್ತೊಂದು ಮೊಗ್ಗು.

ಇದು ಪ್ರಕೃತಿ ನಿಯಮ.

ನನ್ನೆಲ್ಲಾ ನೋವುಗಳು ಉತ್ತುಂಗದಲ್ಲಿರುವ ಸಮಯ ಅಂದರೆ ಇದೇನೇ. ತಾನು ಕೊಡುವ ಪರಿಣಾಮಕ್ಕಿಂತ ಭೀಕರ ಸ್ಥಿತಿಯಲ್ಲಿರುವವನನ್ನು ಸಾವು ಕೂಡ ಏನು ಮಾಡೀತು ಎಂಬಂಥ ಪರಿಸ್ಥಿತಿ. ಸುನಾಮಿಯ ನಂತರ ದಡಕ್ಕಿನ್ನು ಅಲೆಯ ಭಯವಿಲ್ಲ. ಅಪ್ಪನ ಬೆಲ್ಟಿನ ರುಚಿ ತಿಂದ ಹುಡುಗನಿಗೆ ಮೇಷ್ಟರು ಕೋಲು ಬೆತ್ತ ತೋರಿದರೆ ಹೆದರುತ್ತಾನಾ? ಅಂತೆಯೇ ಬೇರೆ ನೋವುಗಳು ಬಳಿಬರಲೂ ಕೀಳರಿಮೆ ಹೊಂದುವಷ್ಟು ಪೆಟ್ಟು ತಿಂದಿದೆ ಮನಸ್ಸು.

ಈಗ ಅದೇ ಪ್ರಕೃತಿ ನಿಯಮದ ಪ್ರಕಾರ ನನ್ನ ಬರುವ ನಾಳೆಗಳು ಚೆನ್ನಾಗಿರುತ್ತದಾ? ಈಗಿನಂತೆ ಹಗಲುಗಳು ದಹಿಸದೇ, ಅರಳುವಂತಾಗುತ್ತದಾ? ನಾನು ಮತ್ತೆ ಕನಸು ಕಾಣುವಂತಾಗುತ್ತೇನಾ? ನನ್ನೊಳು ಜೀವನ ಎಂದಿನಂತೆ ಪ್ರವಹಿಸುತ್ತದಾ? ಅದಕ್ಕೆಲ್ಲಾ ತನಗೇನೂ ಮಾಡಲಾಗದು ; ನಿನ್ನ ಸಹಿಯಿಲ್ಲದೇ ಎಂಬಂತೆ ಮುಗುಮ್ಮಾಗಿದ್ದಾನೆ ದೇವರು. ನಿನ್ನ ಪ್ರೀತಿ, ನನ್ನ ಉಸಿರು ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿದೆ. ನಿನ್ನ ಹೂಂ ಉಹೂಂ ಗಳ ಮಧ್ಯೆಯೇ ಜೋಕಾಲಿಯಾಡುತಿದೆ ನನ್ನ ಬದುಕು. ಪ್ರೀತಿಯೆಂದರೆ ಭೀಕರ; ಪ್ರೀತಿಯೆಂದರೆ ಸುಂದರ, ಈ ಎರಡು ವ್ಯಾಖ್ಯೆಗಳಿಗೆ ನಿನ್ನುತ್ತರವೇ ರಿಸಲ್ಟು.

ಹೀಗೆ ನಿನಗೆ ಪತ್ರಗಳನ್ನೇಕೆ ಬರೆಯುತ್ತಿದ್ದೇನೆ. ತಲುಪುವ ಗುರಿಯಿಲ್ಲದ ಈ ಪತ್ರಗಳು ನನ್ನ ನೋವುಗಳನ್ನು ಇಂಗಿಸುತ್ತದಾ? ಕದವಿಕ್ಕಿಕೊಂಡಿರುವವರ ಮನೆಬಾಗಿಲು ಬಡಿದು ತನ್ನಿರವನ್ನು ತಿಳಿಸುತ್ತದಾ? ಎಂದೋ ಒಂದು ದಿನ ಇವೇ ನನ್ನ ಪ್ರೀತಿಯನ್ನು ಉಳಿಸುತ್ತದೆ ಎಂಬುದು ನನ್ನ ನಂಬಿಕೆಯಾ?


ನಿಜಕ್ಕೂ ವಿರಹದ ನೋವುಗಳನ್ನು ಬರಹಗಳು ತೊಡೆದುಹಾಕುತ್ತದಾ?

Saturday, August 8, 2009

ದೇವಕಿ ಹೆಸರಿನ ಅರಮನೆ ಮುರಿದು ಬಿದ್ದಿತ್ತು....

ಅಲ್ಲಿ ನಿನ್ನ ಹೆಸರ ಮರಳಿನ ಮೇಲೆ ಬರೆದು ಮುಗಿಸಿದವನ ಕಂಗಳಲ್ಲಿ ಎಂತದೋ ದಿಗ್ವಿಜಯ ಸಾಧಿಸಿದ ಸೈನಿಕನ ಕಣ್ಣಲ್ಲಿದ್ದ ಹೊಳಪು. ನಿನ್ನ ಹೆಸರ ಸುತ್ತ ಮೂರು ಸುತ್ತು ಗಿರಗಿಟ್ಲೆಯಾಡಿದಂತೆ ಸುತ್ತು ಹೊಡೆದೆ. ಏನೋ ಸಂತೋಷ ಏನೋ ಉಲ್ಲಾಸ. ಬರೆದ ಹೆಸರಿನ ಮೇಲೆ ಮತ್ತೆ ಮತೆ ಕೈಯಾಡಿಸಿದೆ. ಹೆಸರಿಗೆ ಪ್ರೀತಿಯಿಂದ ಒಂದು ಮುತ್ತನ್ನಿಕ್ಕಿ ಹಾಗೆ ನೋಡುತ್ತಾ ನಿಂತೆ. ಒಂದು ಬಗೆಯ ಸಾರ್ಥಕತೆಯ ಭಾವ, ಅಳಿಸಿ ನನ್ನ ಮನದ ನೋವ, ಹಾಗೆ ಮರೆಯಾದಂತಾಯಿತು. ಹೆಸರ ಬರೆದು ಹಾಗೇ ದೇವಕೀ ಅನ್ನುತ್ತ ಸಾಗರ ತೀರದುದ್ದಕ್ಕು ಓಡುತ್ತಿದ್ದೆ. ಅಲ್ಲಿ ನಿನ್ನ ಬಗೆಗಿನ ನನ್ನ ಪ್ರೀತಿಯನ್ನ ಹೇಳಿಕೊಳ್ಳಲು ಯಾವ ಅಡೆತಡೆಗಳಿರಲಿಲ್ಲ. ಯಾರ ಕ್ರೂರ ದೃಷ್ಟಿಗಳೂ ಬೀಳುವ ಅಪಾಯವಿರಲಿಲ್ಲ ಸುತ್ತಲೂ ನೋಡಿದೆ ನನಗೆ ಅಲ್ಲಿ ಯಾವ ದೇವರುಗಳ ಕುರುಹುಗಳೂ ಕಣಿಸುತ್ತಿರಲಿಲ್ಲ. ದೇವಕಿ ಹೆಸರು ಬರೆದ ಮೇಲೆ ದೇವಕಿಗೊಂದು ಪುಟ್ಟ ಮನೆಯ ಮಾಡದಿದ್ದರೇ ಹೇಗೆ ಅಂದುಕೊಂಡು ಕುಳಿತಲ್ಲಿಯೆ ದೇವಕಿಗೆ ಒಂದು ಪುಟಾಣಿ ಗೂಡು ಕಟ್ಟಬೇಕೆನಿಸಿತು. ಪುಟ್ಟ ಗೂಡಾದರೂ ತುಂಬಾ ಪ್ರೀತಿಯಿಂದ ಗೂಡು ಹೆಣೆಯುತ್ತಿದ್ದೆ. ಅಷ್ಟು ಚಿಕ್ಕ ಗೂಡು ಕಟ್ಟೋವಾಗಲೂ ದೇವಕಿಗೋಸ್ಕರ ಒಂದು ಮಹಲನ್ನೇ ಕಟ್ಟುತ್ತಿದ್ದೇನೆ ಅನ್ನಿಸುತ್ತಿತು. ನಿನ್ನ ಮೇಲಿರುವಷ್ಟೇ ಪ್ರೀತಿಯನ್ನ ಅ ಗೂಡಿಗೂ ಧಾರೆಯೆರೆದು ಕಟ್ಟುತಿದ್ದೆ. ಶಾಂತವಾಗಿದ್ದ ಸಾಗರ ಇದ್ದಕ್ಕಿದ್ದಂತೆ ಭೋರ್ಗರೆದ ಶಬ್ಧ. ಆಕಾಶದಷ್ಟೆತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದವು. ಬರೆದ ದೇವಕಿಯ ಹೆಸರೇನಯಿತು ಅಂದುಕೊಂಡು ಹೆಸರಿದ್ದಲ್ಲಿಗೆ ಹೋಗಿ ನೋಡಿದರೇ ಅಲ್ಲಿ ನಿನ್ನ ಹೆಸರಿರಲಿಲ್ಲ. ನಿನ್ನ ಹೆಸರು ಇತ್ತು ಅನ್ನುವ ಕುರುಹುಗಳೂ ಅಲ್ಲಿ ನನಗೆ ಕಣಿಸಲಿಲ್ಲ. ದುಃಖ ಉಮ್ಮಳಿಸಿ ಬಂತು. ಹಿಂದಿರುಗಿ ನೋಡಿದರೇ ಮತ್ತೆ ನಿನಗೆ ಅಂತ ಕಟ್ಟಿದ್ದ ಗೂಡಿನ ಮೇಲು ಅಲೆಗಳು ಅಕ್ರಮಣ ಮಾಡುತ್ತಿದ್ದವು. ಹಾಳು ಸಮುದ್ರಕ್ಕೆ ಶಪಿಸುತ್ತ ಗೂಡು ಇದ್ದಲ್ಲಿಗೆ ಹೋಗಿ ದೇವಕಿ ಹೆಸರಿನ ಅರಮನೆ ಮುರಿದು ಬಿದ್ದಿತ್ತು.


ಈ ಜಗತ್ತಿನಲ್ಲಿ ನನಗೆ ದೇವಕಿಯೊಲವಿಗೆ ಆಸೆರೆಯಾಗುವಂತ ಒಂದೇ ಒಂದು ಜೀವವಿಲ್ಲವಾ ಎಂದು ಗಟ್ಟಿಯಾಗಿ ಕೂಗಬೇಕೆನ್ನಿಸಿತು. ಮತ್ತೆ ಶಾಂತವಾಗಿ ಮಲಗಿದ್ದ ಸಾಗರದತ್ತ ಧೈನ್ಯತೆಯಿಂದ ನೋಡಿ ಕಣ್ಣೀರಿಟ್ಟು ದೇವಕಿ ಹೆಸರು ಮತ್ತು ಅವಳಿಗೊಂದು ಪುಟ್ಟ ಗೂಡು ಕಟ್ಟುತ್ತಿದ್ದೆ.


ದೂರದಲ್ಲೇಲ್ಲೋ ಮತ್ತೆ ಅಲೆಯೇಳುತ್ತಿದ್ದ ಕುರುಹುಗಳು ಕಾಣಿಸುತ್ತಿದ್ದವು.

Thursday, August 6, 2009

ಪ್ರಯಾಸವಾದರೂ ಓಕೆ ನಿನ್ನ ಮರೆಯಲಾರೆ.. ಮರೆಯಲಾಗದು...!!

ಹೌದು. ಎಷ್ಟು ಕಷ್ಟವಾದರೂ ಸರಿ. ಪ್ರಯಾಸಪಟ್ಟಾದರೂ ಓಕೆ; ನಿನ್ನ ಮರೆಯಲೇಬೇಕು!

ಇನ್ನೆಷ್ಟು ದಿನ ಈ ವಿರಹದಲ್ಲೇ ಬದುಕಿದ್ದೂ ಸತ್ತಂತಿರಲು ಸಾಧ್ಯ? ಇನ್ನೆಷ್ಟು ದಿನ ಉಸಿರಾಡುವುದೇ ಭಾರ ಅನ್ನುವಂಥ ಸ್ಥಿತಿ? ಕಾಲಕ್ಕೇ ಬೊಜ್ಜು ಬಂದಂತೆ ಮೆಲ್ಲ ಮೆಲ್ಲ ಹೆಜ್ಜೆ? ಎಷ್ಟು ದಿನವೆಂದು ಆಯಸ್ಸಿಗೆ ವಿರಹದ ಲೆಕ್ಕ ಒಪ್ಪಿಸಬೇಕು? ಅದೆಷ್ಟು ಜನುಮ ಒಪ್ಪಿಗೆಯ ಮೀನಿಗಾಗಿ ಗಾಳ ಹಾಕುತ್ತ ಕುಳಿತ ಬೆಸ್ತನಾಗಲಿ? ಅದಕ್ಕಿಂತ ಒಳಗಿರುವ ನೆನಪನ್ನೆಲ್ಲಾ ಗುಡಿಸಿ ಹಾಕಿ ಎದೆಯಂಗಳದಲ್ಲಿ ಹೊಸ ರಂಗೋಲಿ ಹಾಕಿಬಿಡಬೇಕು.

ಅರಳಿ ನಿಂತ ಮಲ್ಲಿಗೆಯಲಿ ನಿನ್ನದೇ ನಗೆ..
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ..

ಪ್ರತೀ ಕ್ಷಣ ಈಗ ನೀನಲ್ಲಿ ಏನು ಮಾಡುತ್ತಿರಬಹುದು ಅಂತ ಇನ್ನು ಊಹಿಸುತ್ತಾ ಇರಲ್ಲ. ದೇವರೆದುರು ನನ್ನ ಪ್ರಾರ್ಥನೆಯ ಜೋಳಿಗೆ ಬಿಚ್ಚುವಾಗ ನಿನ್ನ ಮೇಲಿನ ಕೋರಿಕೆಗೆ ಕೊನೆಯ ಸ್ಥಾನ. ಬಟ್ಟೆ ಅಂಗಡಿಯಲ್ಲಿನ ಬೊಂಬೆಗುಡಿಸಿದ ಡ್ರೆಸ್ಸು ನಿನಗೆ ಹೇಗೆ ಕಾಣಬಹುದು ಎಂದಿನ್ನು ಕಲ್ಪಿಸಿಕೊಳ್ಳುವುದಿಲ್ಲ. ನಿನ್ನ ಹೆಸರಿಟ್ಟುಕೊಂಡ ಅಂಗಡಿಯ ಮುಂದೆ ನಿಂತು ನಿನ್ನ ನೆನೆಸಿಕೊಳ್ಳುತ್ತಾ ಇನ್ನು ಮೈಮರೆಯೋದಿಲ್ಲ. ರಸ್ತೆ ತಿರುವಿನಲ್ಲಿ ನಿನ್ನನೊಮ್ಮೆ ಭೇಟಿ ಮಾಡಿದ ನೆನಪುಗಳನ್ನಿನ್ನು ಎಂದಿಗೂ ನೇವರಿಸೋಲ್ಲ. ನಿನ್ನ ನೆನಪುಗಳನ್ನು ತೀವ್ರವಾಗಿ ತರಿಸುವ ಭಾವಗೀತೆಗಳನ್ನಿನ್ನು ಗುನುಗುನಿಸಲ್ಲ. ದಿಂಬಿಗಿನ್ನು ಬೇರೆ ನಾಮಕರಣ; ನಿನ್ನ ಹೆಸರಲ್ಲ!

ಬೀಸಿ ಬಂದ ಗಾಳಿಯಲ್ಲಿ ನಿನ್ನ ಪರಿಮಳ..
ಮಾಮರದಲ್ಲಿ ನಿನ್ನದೇ ಗಾನಮಂಜುಳ...

ನಿನ್ನ ಕನಸುಗಳೇ ಬರುವುದಾದರೆ ನನಗಿನ್ನು ನಿದಿರೆಯೇ ಬೇಡ. ವಿರಹವನ್ನು ನೋಡಿ ನಗುವ ಚಂದಿರ ಇನ್ನು ನನ್ನ ಪಾಲಿಗಿನ್ನು ಕುರೂಪಿ. ಅವಳ ಕಣ್ಣುಗಳ ನೆನಪಿಸುವ ನಕ್ಷತ್ರಗಳನ್ನು ನೋಡುವುದು ಭಾದ್ರಪದ ಶುಕ್ಲಪಕ್ಷ ದಲ್ಲಿ ಚಂದಿರನನ್ನು ನೋಡಬಾರದೆಂಬಷ್ಟೇ ಸ್ಟ್ರಿಕ್ಟು. ಜೀವ ಹರಿದು ಹಾಕುವ ವಿರಹಕ್ಕೆ ಇನ್ನು ಅವಳ ನೆನಪುಗಳ ತೇಪೆಯಿಲ್ಲ! ಇನ್ಮೇಲೆ ನಾನು+ನೀನು= ನಾನು ಅಲ್ಲ!

ನಲ್ಲೇ, ನಿನ್ನ ಮರೆಯಲು ಏನೆಲ್ಲಾ ಮಾಡಿದೆ..
ಆದರೂ ಎಲ್ಲೆಲ್ಲೂ ನಿನ್ನಾ ನೆನಪೇ ಕಾಡಿದೆ!

*********
ಅಂತರಾತ್ಮನ ಮತ್ತು ನನ್ನ ಜಗಳ ಹೀಗೆ ಮುಗಿಯುತ್ತದೆ. ಅವಳನ್ನು ಮರೆಯಬೇಕು ಅನ್ನುವ ವಾಕ್ಯವನ್ನೇ ಅಂತರಾತ್ಮ ತಪ್ಪೆನ್ನುತ್ತದೆ. ಅವಳನ್ನು ಮರೆಯುವುದೆಂದರೆ ಅವಳೂ ನೀನೂ ಬೇರೆಯಾಗಬೇಕಲ್ಲವೇ? ಇಬ್ಬರೂ ಒಂದೇ ಆಗಿರುವಾಗ ಮರೆಯುವುದು, ತೊರೆಯುವುದು ಹೇಗೆ ಸಾಧ್ಯ ಅನ್ನುತ್ತದೆ. ಮೌನವಾಗಿ ಸೋಲೊಪ್ಪಿಕೊಳ್ಳುತ್ತೇನೆ. ಕವಿಯೊಬ್ಬನ ಭಾವಗೀತೆಯಂತಹ ಅಂತರಾತ್ಮನ ಮಾತು ವಿಜಯಿಯಾಗುತ್ತದೆ. ನನ್ನ ಮಾತುಗಳೆಲ್ಲ ತಿರುಗುಬಾಣ ಆಗುತ್ತದೆ.

"ಹೌದು. ಎಷ್ಟು ಕಷ್ಟವಾದರೂ ಸರಿ. ಪ್ರಯಾಸವಾದರೂ ಓಕೆ ; ನಿನ್ನ ಮರೆಯಲಾರೆ; ಮರೆಯಲಾಗದು !....."

Wednesday, August 5, 2009

ನಾನಿಲ್ಲಿ ಕತ್ತಲೆಯಲಿ ; ನಿನಗಲ್ಲಿ ಬೆಳಕು!

"ಐ ಮಿಸ್ ಯೂ"
"ನೀನಿಲ್ಲದೇ ಬದುಕಿರೋಕೆ ಸಾಧ್ಯ ಇಲ್ಲ"
"ನೀ ಬಳಿಯಿರದ ನಿಮಿಷಗಳೆಲ್ಲ ವರುಷಗಳು"


ಇಂಥದ್ದೆಲ್ಲಾ ಸಾಲುಗಳನ್ನು ಸುಮ್ಮನೆ ಹರವಿಕೊಂಡು ಕುಳಿತಿದ್ದೇನೆ. ನನ್ನೆದೆಯ ನೋವಿಗೆ ಅದ್ಯಾವುದೂ ಸರಿಯಾದ ಪದವೆಂದು ಅನ್ನಿಸುತ್ತಿಲ್ಲ. ಚಲನಚಿತ್ರಗಳಲ್ಲಿ ಡೈಲಾಗ್ ಆಗಿ, ಆಕೆಯನ್ನು ಸುಮ್ಮನೆ ಮೆಚ್ಚಿಸಬೇಕೆಂದು ಎಸ್ಸೆಮ್ಮೆಸ್ಸುಗಳಲ್ಲಿ ಕೇವಲ ಬೆರಳುಗಳ ಕ್ರಿಯೆಗಾಗಿಯೇ ಆ ಪದಗಳು ಬಳಸಲ್ಪಟ್ಟಿರುವಾಗ, ವಿರಹದಿಂದ ವಿಲಪಿಸುತ್ತಿರುವ, ನಿನ್ನ ಒಂದು ಭೇಟಿಗಾಗಿ ಪರಿತಪಿಸುತ್ತಿರುವ ಎದೆಯ ಭಾವಕ್ಕೆ ಅದೇ ಪದಗಳನ್ನು ಹೇಗೆ ಬಳಸಲಿ ಹೇಳು? ಯಾವುದಕ್ಕೂ ಎದೆಯ ಬೇಗೆಯನ್ನು ಶಮನ ಮಾಡಲು ತಾಕತ್ತಿಲ್ಲ.


ಇಲ್ಲಿ ಈ ದೂರದೂರಿನಲಿ ನನ್ನ ಪಾಡನ್ನು ಬೇರೆ ಹೇಗೆ ತಿಳಿಸಲಿ ನಿನಗೆ? ನಿನ್ನದೇ ಊರಲ್ಲಿದ್ದಿದ್ದರೆ ಆಕಾಶದಲಿ ಮಲ್ಲಿಗೆಯಂತರಳಿದ ನಕ್ಷತ್ರವೊಂದು ಕಣ್ಣು ಮಿಟುಕಿಸಿ ನೋಡುತಿರುವಾಗ ಅದೇ ಕ್ಷಣ ನೀನೂ ಅದೇ ನಕ್ಷತ್ರವನ್ನೇ ನೋಡುತ್ತಿದ್ದಿರಬಹುದಾ ? ನಮ್ಮಿಬ್ಬರ ವಿರಹವನ್ನು, ಪಡುತಿರುವ ಪಾಡನ್ನು ಕಂಡೇ ಅದು ಪಿಳಿಪಿಳಿಸುತ್ತಿರುವುದಾ ಅಂತೆಲ್ಲಾ ಅಂದುಕೊಳ್ಳಬಹುದಿತ್ತು.


ವಿಪರ್ಯಾಸ ನೋಡು; ಈಗ ನಾನಿಲ್ಲಿ ಕತ್ತಲೆಯಲಿ; ನಿನಗಲ್ಲಿ ಬೆಳಕು! ಒಂಟಿಸೂರ್ಯನೊಬ್ಬ ಹಗಲ ಕ್ಷಣಗಳನ್ನು ಹೇರಿಹೋದ ನೋವಲ್ಲಿ ಒದ್ದಾಡಿದಕ್ಕಾಗಿ ನನಗಿಲ್ಲಿ ಸಾವಿರ ಸಾವಿರ ನಕ್ಷತ್ರಗಳ ಸಮಾಧಾನ. ಕಲೆಗೊಂಡ ಮೊಗದಲ್ಲೂ ಚಂದಿರನ ಸಾಂತ್ವನ ನೀಡುವ ನಗು. ಈ ದಿವ್ಯ ಮೌನದ ರಾತ್ರಿ, ಬೆಳದಿಂಗಳು, ಚುಕ್ಕಿಗಳು ಎಲ್ಲಾ ಒಟ್ಟಾಗಿ ಒಳಹರಿವಿನಲ್ಲಿ, ದೇವಕಿ ನಿನ್ನವಳೇ ಅಂತ ನನಗೆ ಸಮಾಧಾನ ನೀಡದೇ ಹೋಗಿದ್ದರೆ ರಾತ್ರಿಗಳು ಉರುಳುವುದಾದರೂ ಹೇಗಿತ್ತು?


ನಾನು ಉಳಿಯುವುದಾದರೂ ಹೇಗಾಗುತ್ತಿತ್ತು?!

Tuesday, August 4, 2009

ಈ ಕನಸಿನ ಕ್ಷಣ ದೇವಕಿ ನನ್ನಿಂದ ತಪ್ಪಿಹೋಗಿದ್ದು ಹೇಗೆ?

ತಂದೆ-ತಾಯಿಯ ಆಶೀರ್ವಾದದಿಂದ, ಅವರ ಪುಣ್ಯದ ಫಲವಾಗಿ ನನಗೆ ಆಯಸ್ಸು ಹೆಚ್ಚಿರುತ್ತದೆ. ಲೆಕ್ಕ ಪತ್ರ ನೋಡುವಂತೆ ನನ್ನ ಭವಿಷ್ಯ ನೋಡಿದ ಚಿತ್ರಗುಪ್ತ ಆಶ್ಚರ್ಯಚಕಿತನಾಗುತ್ತಾನೆ. ದೇವರ ಬಳಿ ಅದನ್ನು ಕೊಂಡೊಯ್ದು ಕಂಪ್ಲೇಂಟ್ ಕೊಡುತ್ತಾನೆ. ಒಬ್ಬ ಮನುಷ್ಯನಿಗೆ ಹೀಗೆ ಯುಗಗಳ ಕಾಲ ಬದುಕುವ ಅವಕಾಶವಿರುವುದಿಲ್ಲ; ಹಾಗೆ ಮಾಡಿದರೆ ಪ್ರಕೃತಿ ವಿನಾಶವಾಗುತ್ತದೆ ಅಂತೆಲ್ಲಾ ಅನ್ನುತ್ತಾನೆ. ದೇವರಿಗೆ ನಿಜಕ್ಕೂ ಪೇಚಿಗಿಟ್ಟುಕೊಳ್ಳುತ್ತದೆ. ಅತ್ತ ಪುಣ್ಯಫಲಗಳ ಲೆಕ್ಕಾಚಾರವನ್ನು ಧಿಕ್ಕರಿಸುವಂತೆಯೂ ಇಲ್ಲ; ಇತ್ತ ಯುಗಗಳ ಕಾಲ ಆಯಸ್ಸು ಕೊಡುವಂತೆಯೂ ಇಲ್ಲ. ದೇವರಿಗೂ ಒಂದು ಐಡಿಯಾ ಪಕ್ಕನೆ ಹೊಳೆಯುತ್ತದೆ. ಇವನ ಪ್ರೇಯಸಿಯಿಂದ ಇವನನ್ನು ಕೆಲಕಾಲ ದೂರವಿಡಿ. ಅವನ ಕ್ಷಣಗಳೂ ಯುಗಗಳಂತೆ ಕಳೆಯುತ್ತದೆ. ಬಾಳು ಕ್ಷಣಗಳೇ ಆದರೂ ಯುಗವೊಂದು ಬದುಕಿದಂತೆ ಆಗುತ್ತದೆ.

ಪಕ್ಕನೆ ಎಚ್ಚರಾಯಿತು. ಕಂಡಿದ್ದು ಕನಸು. ಹೀಗೆ ಇಂಥಾ ಪರದೇಶದ ಯಾವುದೋ ಒಂದು ಮೂಲೆಯಲ್ಲಿ ನನಗಾಗಿಯೇ ದೇವರು ಕೊಟ್ಟ ದೇವಕಿಯನ್ನು ಕ್ಷಣ ಕ್ಷಣವೂ ನೆನೆಸಿಕೊಳ್ಳುವಾಗ ಇಂಥ ಕನಸು ಮೂಡಿದ್ದು ಹೇಗೆ? ಈ ಕನಸಿನ ಕ್ಷಣ ನನ್ನಿಂದ ದೇವಕಿ ತಪ್ಪಿಹೋಗಿದ್ದು ಹೇಗೆ? ಇದೇ ನಿಜವಿರಬಹುದಾ? ಅವಳಿಂದ ನನ್ನ ದೂರ ಮಾಡಲು ದೇವರು ಹೂಡಿದ ತಂತ್ರವಿರಬಹುದಾ? ಎಂಥೆಂಥಾ ಕೆಟ್ಟಪ್ರೀತಿಗಳ ಮೇಲೂ ಅವನು ಕರುಣೆ ತೋರುತಿರುವಾಗ, ಅಂಥದ್ದೆಲ್ಲ ಯಶಸ್ಸು ಕಾಣುತಿರುವಾಗ, ನನ್ನ-ದೇವಕಿಯ ಕತೆಯೇಕೆ ಹೀಗೆ?

ದೇವರದ್ದೇ ಕಣ್ಣು ಬಿದ್ದಿರಬಹುದಾ?!

Monday, August 3, 2009

ನೀನೆಂಬುದು ಬ್ರಹ್ಮ ನನ್ನ ಹಣೆಯಲಿ ಬರೆದ ಪದವಲ್ಲ...

ದೇವರು ಕೊಟ್ಟ ವರ ಕಿತ್ಕೊಳ್ಳಲ್ಲ!

ಕಳ್ಳಕತ್ತಲೊಂದು ಹೊರಹೋಗುತ್ತಾ ಹೊಸ್ತಿಲಲಿ ಎಡತಾಕುವ ಸಮಯದಲ್ಲಿ ಹುಟ್ಟಿದ ಕನಸು
ನೀನು. ಮುಂಜಾವು, ಹೀಗೆ ನನಸುಗಳಾಗುವ ಕನಸುಗಳನು ಹೊತ್ತು ತರದೇಹೋಗಿದ್ದಿದ್ದರೆ ಇಡೀ ದಿನವೆಂಬ ಈ ಇಪ್ಪತ್ನಾಲ್ಕು ಘಂಟೆಗಳು ಕಳೆಯುವುದು ಹೇಗಾಗುತ್ತಿತ್ತು? ಮುಂಜಾವಿನ ಕನಸುಗಳು ನಿಜವಾಗುತ್ತದೆ ಎಂಬ ಮಾತಿನ ಅರಿವಿದ್ದುದರಿಂದಲೇ ಅಪರಾತ್ರಿಗಳಲ್ಲಿ ಎಚ್ಚರವಾಗಿರುತ್ತಿದ್ದೆನಾ? ಗೊತ್ತಿಲ್ಲ.

ನೀನೆಂಬುದು ಬ್ರಹ್ಮ ನನ್ನ ಹಣೆಯಲಿ ಬರೆದ ಪದವಲ್ಲ ಅನ್ನಿಸುವ ಈ ಕ್ಷಣಗಳ ಈಟಿ ಎದೆಗೆ ನೀಡುವ ನೋವನ್ನು ಯಾವ ರೀತಿ ತೋಡಿಕೊಳ್ಳಲಿ? ಕೊನೆಯ ಪಕ್ಷ ನನ್ನ ಕೊನೆಯ ಸಾಲಾದರೂ ನಿನಗೆ ತಲುಪುತ್ತದೆ ಎಂಬ ಕಿಂಚಿತ್ ಭರವಸೆ ಇಲ್ಲದೆಯೂ ಬರೆಸಿಕೊಳ್ಳುತಿರುವ ಈ ಸಾಲುಗಳ ಋಣ ದೊಡ್ಡದು. ಅವು ನನಗೆ ನೀಡುತಿರುವ ಬದುಕಿನೆಡೆಗಿನ ಪ್ರೀತಿ ದೊಡ್ಡದು.

ಒಬ್ಬ ಅಂಬಿಗನ ಎಕ್ಸ್ ಪೀರಿಯೆನ್ಸ್, ಕುಶಲತೆ ಏನೂ ಕೇಳದೇ ನದಿ ದಾಟಲು ದೋಣಿ ಹತ್ತಿಕೊಳ್ಳುತ್ತೇವಲ್ಲ ಅಂಥದ್ದೇ ನಿಶ್ಕಲ್ಮಶ ನಂಬುಗೆಯೊಂದಿಗೆ ದೇವರನ್ನು ನಂಬಿ ನಿನ್ನನ್ನು ಪ್ರೀತಿಸ್ತಿದ್ದೀನಿ. ಕೈಕೊಟ್ಟ ಹುಡುಗಿಯರ ಎಷ್ಟೋ ಕತೆಗಳಿದ್ದರೂ
ಅವನ್ನೆಲ್ಲಾ ಮನಸಲ್ಲಿ ಗುಡಿಸಿ ಹಾಕಿ ಮತ್ತೆ ಮತ್ತೆ ಪ್ರೀತಿಯೆಡೆಗೆ ತುಡಿಯುವ ಹುಡುಗನ ಪ್ರಾಮಾಣಿಕ, ಮುಗುದ ಮನಸ್ಸಿನ ಹಿಂದೆ ದೇವರ ಕೈ ಇರದೇ ಇರುತ್ತದಾ ಹೇಳು?

ಸಧ್ಯಕ್ಕೆ ನನ್ನ ಉಸಿರೆಳೆಸುತ್ತಿರುವುದು ಒಂದೇ ಒಂದು ನಂಬಿಕೆ :
ದೇವರು ಕೊಟ್ಟ ವರವನ್ನು ಹಾಗೆಲ್ಲ ಮತ್ತೆ ಕಿತ್ತುಕೊಳ್ಳುವ ಕಟುಕನಲ್ಲ!

ಹೌದಲ್ವಾ ದೇವಕೀ..?