Thursday, July 23, 2009

ರಾಜನ ಪ್ರಾಣ ಹಿಮದಲ್ಲೆ ಲೀನವಾಗಿತ್ತು ಹಿಮವಾಗಿ

ದೇವಕೀ...... ಜೋರಾಗಿ ನಾನು ಕೂಗೋ ಸದ್ದು ನನಗೇ ಕೇಳಿಸುತ್ತಿಲ್ಲ...

ಇಲ್ಲಿ ಏನಿದ್ದರೂ ನಾನೆ ...ನಿಮ್ಮ ಸತ್ತ ಪ್ರೀತಿಯ ಜೀವಂತಿಕೆಗೂ ...ಪ್ರೀತಿಯ ಗಂಧ ಗೊತ್ತಿರದ ಸನ್ಯಾಸಿಗೂ ಅದರ ಪಾಟ ಹೇಳಿಕೊಡುವವನೂ ನಾನೆ ಅನ್ನುತ್ತಾ ಭೂಮಿಯನ್ನೆ ನೊರೆ ಹಾಲಲ್ಲಿ ಮೀಯಿಸುವಂತೆ ಕಾಣುವ ನಯಾಗರ ಜಲಪಾತದ ಅಂಚಲ್ಲಿ ನಾನು ನಿಂತಿದ್ದೇನೆ ನಿನ್ನ ನೆನಪಲ್ಲೆ ಬಿಳಿನೊರೆಗಳಿಗೆ ಧುಮುಕಿದರೆ ಹೇಗೆ ಅನ್ನುವ ಯೋಚನೆಯೊಂದಿಗೆ... ಅದು ನನ್ನನ್ನು ತಟ್ಟಿ ಸಂತೈಸಬಹುದಾ ಚಿರನಿದ್ದೆಯ ಅಪ್ಪುಗೆ ಕೊಟ್ಟು...ಅಥವಾ ಹೇಗಾದರು ಮಾಡಿ ನಿನ್ನನ್ನೊಮ್ಮೆ ಇಲ್ಲಿಗೆ ಕರೆದುಕೊಂಡು ಬಂದು ತೋರಿಸಲಾ ...ಮತ್ತೆ ನಮ್ಮ ಪ್ರೀತಿಯ ಮರುಹುಟ್ಟಿಗಾಗಿ...ಆಸೆ ಎನೋ ಕಾಡುತ್ತಿದೆ ಆದರೆ ಅದೆಷ್ಟು ನಿಷ್ಪ್ರಯೊಜಕ ಎಂಬುದೂ ಕಾಡುತ್ತಿದೆ ನಾನು ನಿನ್ನ ನೆನಪಿಗೂ ನಿನ್ನವನಾಗಿ ಉಳಿದಿಲ್ಲವಲ್ಲ ನಿನ್ನೊಳಗೆ.ಅದ್ಯಾರೊ ನೆಟ್ಟು ಹೋಗಿದ್ದಾರಲ್ಲಾ ನಿನ್ನ ಮಡಿಲೊಳಗೆ ಅವರ ಇರುವನ್ನ...

ಹೀಗೆಲ್ಲ ಕಲ್ಪಿಸಿಕೊಂಡೇ ನಿನ್ನ ನೆನಪಿನ ಕೈಯ್ಯನ್ನು ನನ್ನ ಹೆಗಲ ಮೇಲೇರಿಸಿಕೊಂಡು ಸಾವಿರಾರು ಜನಗಳ ಮಧ್ಯೆ ನಾನು ಸಾಗುತ್ತಿದ್ದೇನೆ ನಾನೂ ಒಂಟಿಯಾಗಿರಲಿಲ್ಲ ಇವಳು ದೂರಾಗುವವರೆಗೂ ಎಂದು ಹೇಳಿಕೊಂಡು...ನೀನು ಹಿಂದೆಲ್ಲ ನನ್ನ ಜೊತೆ ಹಾಕಿದ ಹೆಜ್ಜೆಗಳು ಇಂದೂ ಜೊತೆಬಿಡುತ್ತಿಲ್ಲ ಅವಳಿಲ್ಲದಿದ್ದರೇನು ಜೊತೆಯಾಗಲು ನಾವಾದರು ಇದ್ದೇವಲ್ಲ ಅವಳಿರುವನ್ನು ನಿನ್ನೆದೆಯಲ್ಲಿ ಸದಾ ಅಚ್ಚೊತ್ತಲು ....

ಅದೆಷ್ಟು ಹಿತಹಿಂಸೆ ಗೊತ್ತಾ ದೇವಕಿ...ನೀನಾದರು ಸುಸ್ತಾಗಿ ನನ್ನ ಭುಜಕ್ಕೊರಗಿ ನಿದ್ದೆ ಹೋಗಬಹುದೇನೋ ...ಇದು ಸದಾ ಎಚ್ಚರವಾಗೇ ಇರುತ್ತದೆ ನಾನೂ ನಿದ್ದೆ ಹೋಗದಂತೆ ತಟ್ಟೆಬ್ಬಿಸುತ್ತಾ...

ಈ ಜಲಪಾತದ ಸದ್ದೇ ಅಲ್ಲಿ ಬರುವವರ ಚರಿತ್ರೆಯ ನೆನಪುಗಳ ಸದ್ದಡಗಿಸಲು ಅಂತನ್ನಿಸುತ್ತಿದೆ...ಹಳೆಯ ಬೇಡವಾದ ನೆನಪುಗಳನ್ನು ತಂದು ನನ್ನನ್ನೂ ಯಾಕೆ ಭಾರತದ ಗಂಗೆಯಂತೆ ಮಲಿನ ಮಾಡುತ್ತೀರಿ ಎಂದು ಕೇಳುತ್ತದೆ.

ಆದರು ಕೆಲವು ಸರ್ತಿಅಂತರ್ಶತ್ರು ಆಗುವ ಮನಸ್ಸು ಯಾವುದನ್ನೂ ಲೆಕ್ಕಿಸದೆ ಏನೇನುಗಳನ್ನೋ ನೆನಪಿಗೆ ತರಿಸುತ್ತದೆ...ನನಗೂ ಕಥೆಯೊಂದು ನೆನಪಿನ ಕದ ತಟ್ಟುತ್ತಿದೆ.

ಒಂದೂರಿನಲ್ಲಿ ಒಬ್ಬ ರಾಜನಿದ್ದಂತೆ...ಅವನಿರುವ ಅರಮನೆಗೆ ಕಾಣುವ ಹಾಗೆ ಬೀದಿಯ ತುದಿಯಲ್ಲಿ ಒಂದು ಮನೆ ಇತ್ತಂತೆ.ಆಮನೆಯಲ್ಲಿ ಒಬ್ಬಳು ಸುಂದರಿಗಿಂತ ಸುಂದರಿ ಅನ್ನುವ ಹಾಗಿರುವ ಸುಂದರಿ ಇದ್ದಳಂತೆ.ಒಂದುದಿನ ಆ ಸುಂದರಿಯನ್ನು ರಾಜ ಕಿಟಕಿಯಿಂದ ನೋಡುತ್ತಾನೆ ಅವಳ ಮೇಲೆ ಆಸೆಯಾಗುತ್ತದೆ...ಅವಳಿಗೆ ತಿಳಿಸುತ್ತಾನೆ.ಆ ಸುಂದರಿ ಒಂದು ಶರತ್ತು ಹಾಕುತ್ತಾಳೆ.

ರಾತ್ರಿ ಸತತವಾಗಿ ಬೀಳುತ್ತಿರುವ ಮಂಜಲ್ಲಿ ಹತ್ತುದಿನಗಳ ಕಾಲ ಕೋಟು ಹ್ಯಾಟುಗಳಿಲ್ಲದೆ ನನ್ನ ಮೆನೆಯ ಕಿಟಕಿಗೆ ಕಾಣಿಸುವ ಹಾಗೆ ಇಡೀ ರಾತ್ರಿ ಬೀದಿಯಲ್ಲಿ ನಿಲ್ಲಬೇಕು ಹತ್ತನೇ ದಿನ ನಾನು ನಿನಗೆ ಹಾರಹಾಕುತ್ತೇನೆ....

ತಾನು ರಾಜ ಅನ್ನುವುದನ್ನೂ ಮರೆತ ರಾಜ ಅವಳಿಗಾಗಿ ದಿನಾ ರಾತ್ರಿ ಹಿಮಸ್ನಾನ ಮಾಡುತ್ತಾ ರೆಪ್ಪೆಯಲುಗಿಸದೆ ಕಿಟಕಿಯನ್ನೆ ನೋಡುತ್ತಾ ನಿಲ್ಲುತ್ತಾನೆ ...ಆ ಸುಂದರಿ ಅದ್ಯಾವ ಚಿಂತೆ ಇಲ್ಲದೆ ಕಿಟಕಿಯಿಂದ ಬರುವ ಚಳಿಯಪ್ಪುಗೆಗೆ ರಗ್ಗಿನ ಹೊದಿಕೆ ಹೊದ್ದು ನಿರಾಳ ನಿದ್ದೆಯ ಮೊರೆ ಹೋಗುತ್ತಾಳೆ.

ಹತ್ತನೆಯ ದಿನ ರಾಜ ಅದುಮಿಟ್ಟ ಗೆಲ್ಲುವಿಕೆಯ ನಗುವೊಂದಿಗೆ ಬೀದಿಯಲ್ಲಿ ಹಿಮಕ್ಕೊಡ್ಡಿ ತನ್ನನ್ನು ನಿಲ್ಲಿಸಿಕೋತಾನೆ ಕಾತುರದ ನಾಳೆಯ ಮುಂಜಾವಿಗಾಗಿ...ಅವಳು ಆ ರಾತ್ರಿಯೂ ಸವಿನಿದ್ದೆಯ ಆಲಿಂಗನದ ಮುಗುಳು ನಗುವಲ್ಲಿ ರಾತ್ರಿ ಕಳೆದೆದ್ದು ಕಿಟಕಿಯಲ್ಲಿ ಬೀದಿಯತ್ತ ನೋಡುತ್ತಾಳೆ...ರಾಜ ಅದೇ ಖುಶಿಯಲ್ಲಿ ತನ್ನತ್ತಲೆ ಕಣ್ಣು ಮಿಟುಕಿಸದೆ ನೋಡುತ್ತಿದ್ದಾನೆ .ಕೊಟ್ಟ ಮಾತಿನಂತೆ ಆ ಸುಂದರಿ ಬೀದಿಗಿಳಿದು ರಾಜನತ್ತ ಸಾಗಿ ಹಿಂಬದಿಯಿಂದ ಮನಸಾರೆ ತಬ್ಬಿ ಎದುರಿಗೆ ಬಂದು ಅವನಿಗೆ ಹಾರ ಹಾಕುತ್ತಾಳೆ ಅವನ ಕಣ್ಣು ಆಸೆಯಿಂದ ಹಾಗೇ ನೋಡುತ್ತಿದೆ ಇದು ಯಾವತ್ತೂ ಬತ್ತದ ಪ್ರೀತಿ ಎಂದು...ರಾಜನ ಕೊರಳಿಗೆ ಆ ಹಾರ ಭಾರವಾಯಿತು ಅನ್ನಿಸುತ್ತಿದೆ ಅವಳಿಗೆ ಸೋತ ಪ್ರೀತಿಯ ದೇಹದ ಬಾರ ನಿಧಾನಕ್ಕೆ ಅವಳನ್ನು ಆಶ್ರಯಿಸುತ್ತದೆ ನಿಧಾನಕ್ಕೆ ಇಂಚಿಂಚೆ ಕುಸಿಯುತ್ತಾ...ಅವಳ ಪಾದಕ್ಕೆ ತನ್ನ ಜೀವವನ್ನೇ ಅರ್ಪಿಸುತ್ತಾ...ರಾಜನ ಪ್ರಾಣ ರಾತ್ರಿಯಹಿಮದಲ್ಲೆ ಲೀನವಾಗಿತ್ತು ಹಿಮವಾಗಿ, ಆದರೂ ದೇಹ ನಿಂತೇ ಇತ್ತು ಆ ಸುಂದರಿಯ ಕೊನೆ ಸ್ಪರ್ಶಕ್ಕೆ...ನೆನಪಿನ ಮುತ್ತಿಡಲು.

ದೇವಕಿ ನನ್ನ ಉಸಿರು ಆ ರಾಜನಂತೆ ಬಸಿದು ಹೋಗುವುದಿಲ್ಲ ಹತ್ತಲ್ಲ ನೂರುದಿನ ನಿಂತರೂ ದೇಹ ಬಿಟ್ಟು. ಆದರೂ ನನ್ನನ್ನೂ ಆ ರಾಜನಂತೆ ಮಾಡು ಎಂದು ರಾತ್ರಿ ಕೊರೆವ ಹಿಮಕ್ಕೆ ಮೈಯ್ಯೊಡ್ದುತ್ತೇನೆ...ಹಿಮವನ್ನು ಸೂಜಿಯಂತೆ ಚುಚ್ಚಲು ಬೇಡಿಕೊಳ್ಳುತ್ತೇನೆ...ಒಂದೊಂದು ನರಳುವಿಕೆಗಳು ನಿನ್ನ ನೆನಪಿನ ಉಸಿರಾಗಲಿ... ದೇವಕಿ ನೀನೆಲ್ಲಿದ್ದೀಯೊ ಗೊತ್ತಿಲ್ಲ ಆದರೂ ನಿನ್ನ ಮನಸ್ಸಿಗೆ ರಾತ್ರಿ ಕಿಟಕಿಯ ಬಳಿ ನಿಲ್ಲುವ ಮನಸ್ಸಾಗಲಿ ಎದುರಿಗೆ ಬೀದಿ ಇದ್ದಲ್ಲಿ ವಾಸುವಿನ ಇರುವಿಕೆಯ ನೆನಪು ಸರಿದಾಡಲಿ...ನಸುನಕ್ಕು ಮತ್ತೆ ಸವಿನಿದ್ದೆಯ ತಬ್ಬಿಕೋ...ಹಳೆಯ ನೆನಪುಗಳೆಲ್ಲವನ್ನೂ ಬಾಗಿಲಾಚೆ ಹಾಕಿ...ಬೀದಿಯಲ್ಲಿ ನಿಂತ ವಾಸುಗಾಗಿ...

2 comments:

  1. ನೀನು ಒಂಥರಾ out ಕೇಸ್ ನನ್ನಂಗೆ. ಎದೆಯಲ್ಲಿರೋದೆಲ್ಲ ಕಿತ್ತು ಕಿತ್ತು ಇಟ್ಟಿದ್ದೆ. ತುಂಬಾ ಸುಸ್ತು ಅನ್ಸಿಬಿಡ್ತು. ಕಣ್ಣೀರ ಕೋಡಿಗೆ ಬೆನ್ನು ಹಾಕಿ ನಡೆದಿದ್ದೆ. ಎಲ್ಲ ಖಾಲಿಯಾಗಿ ಬಿಟ್ಟಿತ್ತು, ಗುರಿ ಇಲ್ಲ, ಉದ್ದೇಶ ಇಲ್ಲ. ಎಲ್ಲೆಲ್ಲೊ, ಹೇಗೇಗೋ, ಯಾಕೆ ಅಂತಾನು ತಿಳೀದೇ ಏನೇನೋ ನಡೀತಾ ಇದೆ ಜೀವನದಲ್ಲಿ, ಯಾವುದಕ್ಕೂ ಜಾಸ್ತಿ ಅರ್ಥ ಏನು ಇಲ್ಲ. ಜೀವನ ನಡೆಯುತ್ತೆ ಬದುಕದೆ ಇದ್ದರುನೂ.
    ನೀನು ಪಾಸಿಟಿವ್ ಆಗಬೇಡ, ನಿನ್ನ ಬ್ಲಾಗ್ ನಿಂತು ಹೋಗುತ್ತೆ. ನೀನು ಕೂಡ ಎಲ್ಲ ಹರಿದು ಇಟ್ಟುಬಿಡು. ತಳ ಕಾಣದ ಒಣ ಭಾವಿ ತರ ಆದಮೇಲೆ ಎಲ್ಲ ನಿರಾಳ, ಸ್ಮಶಾನದ ಮೌನ, ಖಾಲಿತನ. ಒಂಟಿತನ ಸಕತ್ ಆರಾಮ ಅನ್ಸುತ್ತೆ.

    - ಶೋಕ

    ReplyDelete
  2. hi i am very happy because its the first time in kannada such a beautiful serial i saw i watch every day i visit blog i can t see the serial

    ReplyDelete