Saturday, July 25, 2009

ನನಗೆ ನಿನಗಿಂತ ಬೇರೊಂದು ಕನಸು ಬೇಕಿತ್ತಾ ?

ಅದೊಂದು ಏಕಾಂತ ಸ್ಥಳ...

ಆ ಜಾಗದಲ್ಲಿ ಒಂದು ಬತ್ತಿ ಹೋದ ತೊರೆ. ಅಲ್ಲಿ ಕುಳಿತು ನಿನ್ನ ನೆನಪು ಮಾಡಿಕೊಳ್ಳುತ್ತಿದ್ದೆ. ಇದ್ದಕ್ಕಿದ್ದಂತೆ ಬತ್ತಿ ಸತ್ತು ಹೋಗಿದ್ದ ತೊರೆ ಜುಳುಜುಳು ಪಿಸುಧನಿಯೊಂದಿಗೆ ನೀರು ತುಂಬಿ ಚಲಿಸಲಾರಂಬಿಸಿತು.

ಅದರ ದಡದಲ್ಲಿ ನನಗೆ ಹೆಸರು ಹೇಳಲು ಬಾರದ ಕೆಲವು ಹೂವುಗಳು ಬೆಳೆಯಲಾರಂಬಿಸಿದವು. ಹಾಡು ಕಟ್ಟುವ ಹಕ್ಕಿಗಳ ಆಗಮನವಾಯಿತು. ಇದ್ದಕ್ಕಿದ್ದಂತೆ ನನ್ನನ್ನ ನಾನೆ ಮರೆಯುವಷ್ಟು ಅಲ್ಲಿನ ವಾತಾವರಣವೆಲ್ಲ ಬದಲಾಯಿತು...

ಗೆಳತಿ...
ನನಗೆ ನೀನು ತುಂಬಾ ನೆನಪಾದೆ. ಜೊತೆಗೆ ನೀನಿದ್ದಿದ್ದರೆ ಹೆಸರೇ ಗೊತ್ತಿಲ್ಲದ ಹೂವನ್ನ ತೆಗೆದು ನಿನ್ನ ಮುಡಿಗಿಡುತ್ತಿದ್ದೆ. ಹಾಡು ಹೇಳುವ ಅನಾಮಿಕ ಹಕ್ಕಿಗೆ ನಿನ್ನ ಪರಿಚಯಿಸುತ್ತಿದ್ದೆ. ನಿನ್ನ ಕೈ ಹಿಡಿದು ಸುಮ್ಮನೆ ನದಿತೀರದಲ್ಲಿ ಮಾತೆ ಆಡದಂತೆ ಒಂದು ಸುತ್ತು ಹಾಕುತ್ತಿದ್ದೆ. ಆದರೇ ಅದನ್ನೆಲ್ಲ ನಾನು ಹಣೆಯಲ್ಲಿ ಬರೆದುಕೊಂಡು ಬಂದಿಲ್ಲ ನೋಡು.


ಆ ತೊರೆಯ ಪಕ್ಕ ಕುಳಿತವನಿಗೆ ಯಾವ್ಬುದೋ ಅನಾಮಿಕರ ಗುಂಪೊಂದು ರಾಶಿ ರಾಶಿ ಕಾಗದಗಳನ್ನ ತಂದುಕೊಟ್ಟು ಮರೆಯಾಯಿತು. ಹಾಗೆ ರಾಶಿ ರಾಶಿ ಕಾಗದಗಳನ್ನ ತೊರೆಯ ಪಕ್ಕ ಸುರಿದುಕೊಂಡು ಒಂದೊಂದನ್ನೂ ದೋಣಿಗಳನ್ನ ಮಾಡುತ್ತ ಒಂದೊಂದರಲ್ಲೂ ಅದೆಷ್ಟೊ ತೂಕದ ಕನಸುಗಳನ್ನ ತೇಲಿಬಿಡುತ್ತೇನೆ. ನಿನ್ನ ನೆನಪಿನ ಮಧುರ ಹೆಸರಿನ ಅಚ್ಚೊತ್ತುತ್ತಾ....

ಆ ದೋಣಿಗಳು ನೀರ ಸ್ಪರ್ಶಕ್ಕೆ ತೇವವಾಗಿ ತನ್ನ ಸ್ವಂತಿಕೆಯನ್ನ ಕಳೆದುಕೊಳ್ಳುವ ಭೀತಿಯನ್ನ ವ್ಯಕ್ತಪಡಿಸದೇ ಪುಳಕಿತವಾಗುತ್ತಾ ಸಾಗುತ್ತವೆ. ಅವುಗಳಿಗೆ ನನ್ನ ನೆನಪಿನ... ಅವಳ ಸ್ಪರ್ಶದ ಖುಷಿ ಇರಬೇಕೇನೊ. ವಾರೆಕೋರೆಯಾಗಿ ನೇರವಾಗಿ ಮನಸ್ಸಿಗೆ ಬಂದಂತೆ ದೂರದಿಂದ ದೂರಕ್ಕೆ ಸಾಗುತ್ತಿವೆ. ಎಲ್ಲಾ ದೋಣಿಗಳಿಗು ನೆನಪಿನ ಹೆಸರೆ ಯಾಕೆ?????

ಒಂದರಲ್ಲಿ ಅವಳನ್ನೆ ಕೂರಿಸಿದರೆ ಹೇಗೆ ಎಂದು ಅವಳ ಹೆಸರೆ ಇಟ್ಟೆ......ದೇವಕಿ

ದೀರ್ಘ ಮುತ್ತಿಕ್ಕಿ .... ಉಸಿರೆಳೆದು.... ಉಸಿರು ಕೊಟ್ಟು....ತೇಲಿಬಿಟ್ಟೆನಲ್ಲ.

ಎಲ್ಲ ನೆನಪಿನ ದೋಣಿಗಳು ತೇಲಿ ತೇಲಿ ಕಣ್ಣೋಟದ ದೂರದ ತೀರದಂಚಿಗೆ ಸರಿದರೂ ದೇವಕಿ ದೋಣಿ ಒಂದು ದಡ ಸೇರಿತ್ತು. ಮತ್ತೆ ಅದನ್ನ ಚಲಿಸಲು ಹತ್ತಿರ ಹೋದವನಿಗೆ ದಡದ ಪಕ್ಕದಲ್ಲಿನ ವಿಶಾಲ ಖಾಲಿಜಾಗ ಆಕರ್ಷಿಸಿತು . ಗುಂಯ್ ಗುಡುವ ನೀರವ ಮೌನದಲ್ಲೂ ಮಧುರ ಧ್ವನಿಯ ಆಲಾಪ ನನ್ನ ಕಿವಿ ತಾಕಲು ಯತ್ನಿಸುತ್ತಿದೆ ಅನ್ನಿಸುವಂತಹ ವಾತಾವರಣ. ವ್ಯಾಮೋಹದ ಉಸಿರಿನ ಉದ್ವೇಗವೋ ಏನೋ ಆ ಖಾಲಿ ಜಾಗಕ್ಕೆ ಕಾಲಿರಿಸಿದೆ. ಕಾಲಿನ ಸ್ಪರ್ಶಕ್ಕೆ ಅಷ್ಟಗಲ ಭೂಮಿ ಹಸಿರಾಯ್ತು. ಇನ್ನೊಂದು ಹೆಜ್ಜೆಗೆ ಹಸಿರುಕ್ಕುವ ಗಿಡಗಳಲ್ಲಿ ಕಂದು ಕೆಂಪಗಿನ ಚಿಗುರೊಡೆದವು. ಒಂದೊಂದು ಹೆಜ್ಜೆಗೂ ಬದಲಾದ ಆ ಜಾಗದಲ್ಲಿ ಕ್ಷಣಕ್ಕೊಂದು ಗಿಡ ಹೆಸರುಗೊತ್ತಿರದ ಹೂವು ಬಿಡುತ್ತ ಪನ್ನೀರ ಕಂಪನ್ನ ತುಂಬಿ ಬಿಡ್ತು. ಅಲ್ಲಿಯವರೆಗೂ ನೋಡಿರದ ಹಕ್ಕಿ ಸುಶ್ರಾವ್ಯವಾಗಿ ಹಾಡುತ್ತಿತ್ತು. ನೀನು ನನ್ನ ಜೊತೆಗಿದ್ದಿದ್ದರೆ ನಿನ್ನ ಹೆಸರನ್ನ ಆ ಹಕ್ಕಿಗೋ ಅಥವ ಆ ಹಕ್ಕಿಯ ಹೆಸರನ್ನ ನಿನಗೋ ಇಟ್ಟು ಇಷ್ಟಗಲ ಕಣ್ಣು ಬಿಟ್ಟು ನಿನ್ನ ನೋಡುತ್ತಿದ್ದೆ.

ಗೆಳತೀ....

ಹಾಗೆ ನಿನ್ನ ನೋಡುತ್ತಾ ನೋಡುತ್ತ ಇರುವಾಗಲೇ ದೊಡ್ಡದಾದ ಹಳೆಯ ಬಂಗಲೆ ಸೃಷ್ಟಿಯಾಯ್ತು. ಸ್ವಯಂ ಹವಾನಿಯಂತ್ರಿತ ಮನೆ ಅಲ್ಲಿ ಎಲ್ಲವೂ ಅದ್ಭುತ ದೃಶ್ಯ ವೈಭವಗಳೆ.

ದೂರದ ಕೋಣೆಯ ಬಾಗಿಲಿನ ಅಂಚಿನಿಂದ ಸೆರಗೊಂದು ಹಾರುತ್ತಿತ್ತು.

ಮುಂಗುರುಳು ಚೆಲ್ಲಾಡುತ್ತಿತ್ತು. ಬಳೆಯ ಸದ್ದಿನ ಸಂಗೀತ ಓ ಇನಿಯಾ ಅನ್ನುತ್ತಿತ್ತು.

ನಾನೂ ಬದಲಾಗುತ್ತಾ ಹೊದೆ. ನೋಡುನೋಡುತ್ತಿರುವಂತೆಯೇ ನಾನು ಮತ್ತೆ ಅವಳು ದರ್ಬಾರು ನಡೆಸುತ್ತಿದ್ದೆವು.

ಪ್ರಜೆಗಳೆದುರಲ್ಲ!!!!

ಪ್ರೇಮ ಸಾಮ್ರಾಜ್ಯದ ಪ್ರೇಮಿಗಳೆದುರು....

ಆ ರಾಜ್ಯದಲ್ಲಿ ಬದುಕಬೇಕಾದ ನಿಯಮಗಳನ್ನ ಹೇಳಿಕೊಡುತ್ತಿದ್ದೆವು ಎಲ್ಲರೂ ನಮಗೆ ಜೈಕಾರ ಹಾಕುವವರೆ ಜೈಕಾರದ ನಡುವೆ ನನ್ನನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದ ದೋಣಿಯ ನೆನಪಾಯ್ತು ತೊರೆಯ ದಡದತ್ತ ಓಡಿ ಬಂದೆ ಹಿಂತಿರುಗಿ ನೋಡುತ್ತಾ... ನೋಡುತ್ತ್ತಾ.... ಆ ವೈಭವದ ಒಂದೊಂದೇ ಮಹಲುಗಳು ಕುಸಿದು ಬೀಳುತ್ತಿವೆ ಹೆಸರೇ ಗೊತ್ತಿರದ ಹೂಗಳ ಪಕಳೆಗಳು ಉದುರಿ ಬೀಳುತ್ತಿವೆ ಗಿಡಗಳು ಬುಡದಿಂದಲೇ ಬಾಡಿ ಹೋಗುತ್ತಿವೆ ಪರಿಚಯವಿರದ ಹಕ್ಕಿಯ ರಾಗ ಗದ್ಗಧಿತವಾಗುತ್ತಿದೆ, ಕರ್ಕಶವಾಗುತ್ತಿದೆ ನೋಡು ನೋಡುತ್ತಲೇ ಎಲ್ಲವೂ ಮಾಯವಾಗಿ ಮಾಮೂಲಿನಂತೆಯೇ ಹಿಂದಿನ ಖಾಲಿ ಜಾಗವಾಗುತ್ತೆ ನಾನು ನನ್ನವಳ ಹೆಸರು ಬರೆದ ದೋಣಿಯನ್ನ ನೋಡುತ್ತಿದ್ದೇನೆ ತೇವವಾಗಿ ತಳ ಒಡೆದಿದೆ ಅರ್ದ ನೀರು ತುಂಬಿಕೊಂಡಿದೆ।
.....
.....

ಕ್ಷಮಿಸು ದೇವಕಿ ಆಫೀಸಿನ ಕಟ್ಟಡದ ತುತ್ತ ತುದಿಯಲ್ಲಿ ಕುಳಿತು ಒಬ್ಬಂಟಿಗನಾಗಿ ಈಗ ನಾನು ತುಂಬಾ ಧೈನ್ಯತೆಯ ಸ್ಥಿತಿಯಲ್ಲಿ ನನ್ನ ನಾನೇ ಕೇಳಿಕೊಳ್ಳುತ್ತಿದ್ದೇನೆ।


ನನಗೆ ನಿನಗಿಂತ ಬೇರೊಂದು ಕನಸು ಬೇಕಿತ್ತಾ?

1 comment:

  1. ನಿನ್ನ ಕಲ್ಪನೆ ಚನ್ನಾಗಿದೆ ವಾಸು ..ಬೇಗ ದೇಅಕಿಯನ್ನ ಮದುವೆಯಾಗು

    ReplyDelete