Thursday, July 30, 2009

ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ.

ದೇವಕಿ ಪ್ರೀತಿಯಲ್ಲಿ ಹೇಳಿಕೊಂಡಿದ್ದನ್ನ ಮತ್ತು ಹೇಳಿಕೊಳ್ಳಲಾಗದೇ ಇದ್ದಿದ್ದನ್ನ ಒಂದು ತಕ್ಕಡಿಯಲ್ಲಿ ಹಾಕಿ ತೂಗಿದರೆ ಹೇಳಿಕೊಳ್ಳಲಾಗದ್ದೇ ಹೆಚ್ಚು ತೂಗುತ್ತಂತೆ ನಿಜವಾ? ಬಹುಶ ಈ ಪತ್ರವನ್ನ ಓದಿದ ಮೇಲೆ ನಿನಗೆ ನನ್ನ ಮಾತು ನಿಜವನ್ನಿಸಿದರೂ ಅನ್ನಿಸಬಹುದು. ಅಥವ ಇವನೊಬ್ಬ ಸುಳ್ಳ ಅಂತನೂ ಅನ್ನಿಸಿ ಪತ್ರವನ್ನ ಹರಿದೆಸೆದು ನಿರ್ಲಪ್ತತೆಯಿಂದ ಸುಮ್ಮನಿದ್ದುಬಿಡಬಹುದು. ನಿಜ ದೇವಕಿ, ನಿನ್ನ ಮುಂದೆ ಇಲ್ಲಿಯವರೆಗೂ ಹೇಳಲಾರದ ಸಣ್ಣ ಸಣ್ಣ ಸಂಗತಿಗಳು ತುಂಬಾನೆ ಇವೆ. ಸಣ್ಣ ಸಂಗತಿಗಳಾದರೂ ಅದರಲ್ಲಿ ತುಂಬು ಪ್ರೀತಿಯ ಸಾರ್ಥಕತೆ ಇದೆ. ನಿಜವಾದ ಪ್ರೇಮಿಗಳಿಗೆ ಸಣ್ಣ ಸಣ್ಣ ಸಂಗತಿಗಳೂ ಕೂಡ ಬೆಟ್ಟದಷ್ಟು ದೊಡ್ಡದಾದ ನೆಮ್ಮದಿಯನ್ನ ಕೊಡುತ್ತವಂತೆ.



ನಿಜ ಹೇಳ್ತ ಇದ್ದೀನಿ ಕೆಲವೊಮ್ಮೆ ನಿನ್ನ ಹಣೆಗೊಂದು ಮುತ್ತು ಕೊಡಬೇಕೆನ್ನಿಸುತ್ತಿತ್ತು. ಅವಕಾಶ ಸಿಕ್ಕಿದಾಗಲೆಲ್ಲ ನಿನ್ನನ್ನ ಯಾವತ್ತೂ ದೂರಾಗದ ಹಾಗೆ ಗಟ್ಟಿಯಾಗಿ ತಬ್ಬಿಹಿಡಿದು ಕುಳಿತುಬಿಡಬೇಕು ಅನ್ನಿಸುತ್ತಿತ್ತು. ನೂರಾರು ಕಿಲೋಮೀಟರುಗಳ ದೂರವನ್ನ ಒಂದೇ ಒಂದು ಮಾತನಾಡದೆ ನಿನ್ನ ಕಿರುಬೆರಳ ಹಿಡಿದು ನಡೆಯಬೇಕೆನ್ನಿಸುತ್ತಿತ್ತು. ಸುರಿವ ಸ್ವಾತಿ ಮಳೆಯಲ್ಲಿ ನಾನೆ ನಿನ್ನ ಭುಜಕ್ಕೊರಗಿಕೊಂಡು ಪ್ರೇಮಕವಿ ಕೆ.ಎಸ್.ಎನ್ ಅವರ ಒಂದು ಪೂರ್ತಿ ಕವಿತೆಯನ್ನ ನಿನಗೆ ಓದಿಹೇಳಬೇಕೆನ್ನಿಸಿದ್ದು ಸುಳ್ಳಲ್ಲ. ಇದ್ದಕ್ಕಿದ್ದಂತೆ ಕಣ್ಮುಚ್ಚಿ ಉಸಿರು ಕಟ್ಟಿದ ಹಾಗೆ ನಾಟಕವಾಡಿ ನೀನು ಗಾಬರಿ ಬೀಳೋದನ್ನ ಕದ್ದು ನೋಡಿ ನೀನೆಷ್ಟು ಪ್ರೀತಿಸುತ್ತಿಯ ಎಂದು ನಿನ್ನ ಕಿವಿಯಲ್ಲಿ ಹೇಳಿ ಕಣ್ಣು ತುಂಬಿಕೊಳ್ಳಬೇಕೆನ್ನಿಸುತ್ತಿತ್ತು. ದೇವರ ಸನ್ನಿಧಿಯಲ್ಲಿ 3 ಸುತ್ತಿನ ಬದಲು ಮೂವತ್ಮೂರು ಸುತ್ತುಗಳನ್ನ ನಿನ್ನನ್ನ ಹೊತ್ತು ತಿರುಗಿಸಬೇಕೆನ್ನಿಸುತ್ತಿತ್ತು. ಸನಿಹವಿದ್ದಾಗ ನಿನ್ನ ಪ್ರೀತಿಯನ್ನ ದೂರವಿದ್ದಾಗ ನಿನ್ನ ವಿರಹವನ್ನ ಮನಸಾರೆ ಅನುಭವಿಸುವ ಆಸೆಯಾಗುತ್ತಿತ್ತು.



ಹೇಳೋಕೆ ತುಂಬಾನೆ ಇದೆ ದೇವಕಿ. ಕೆಲವು ಕಾರಣಗಳು ನಿನಗೆ ಸಿಲ್ಲಿ ಅನ್ನಿಸಬಹುದು. ಆದರೇ ಕೇವಲ ಭಾವನೆಗಳಲ್ಲೆ ಬದುಕುವ ನನ್ನಂತವರ ಪಾಲಿಗೆ ಈ ಸಣ್ಣ ವಿಷಯಗಳು ಸಣ್ಣ ವಿಷಯಗಳೇನು ಅಲ್ಲ. ಹೀಗೆ ನಿನ್ನ ಬಗ್ಗೆ ಏನೇ ಬರೆದರೂ ಅದು ಯಾಕೋ ಪ್ರೀತಿಯಲ್ಲೇ ಮುಕ್ತಾಯವಾಗುತ್ತದೆ. ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ. ಈ ಅಸಹಾಯಕತೆಗೆ ಏನನ್ನಲಿ?

3 comments:

  1. ದೇವಕಿಗೆ ಹಾಗೆಲ್ಲಾ ಹೇಳಿದರೆ ಅರ್ಥವಾಗುವುದಿಲ್ಲ ವಾಸು... ಹೇಳಲಾಗದೆ ತಕ್ಕಡಿಯಲ್ಲಿ ತೂಗಿದ ಮಾತುಗಳು ಮೌನ ಬೆಳದಿಂಗಳಾಗಿ ಅವಳ ಕೆನ್ನೆ,ಮುಂಗುರುಳು ಸವರುವವರೆಗೆ..ಅದರ ಘಾಡತೆ ಅವಳಿಗೆ ತಟ್ಟುವುದಿಲ್ಲ... ;)

    ReplyDelete
  2. vaaasu dont feel bad da... ur devaki alwaz urs

    ReplyDelete
  3. vaasu... illi neenu bareda ella patragalanau naanu copy madkondu ittiddini gotta. ur just amazing person

    ReplyDelete