Tuesday, September 22, 2009

ಅವಳಿಲ್ಲದಿದ್ದರೂ ಕರೆದು ಕೂರಿಸುವೆ

ನಿನ್ನೆಯೂ ನನಗೆ ಕಾಫೀಡೇಗೆ ಹೋಗೋ ಮನಸ್ಸಾಯ್ತು. ಅಲ್ಲಿ ಬೇರೆಬೇರೆ ಪ್ಲೇವರ್ ಕಾಫಿ ಸಿಗುತ್ತೆ ಅನ್ನೋದಕ್ಕಿಂತ ಬೇರೆಬೇರೆ ಪ್ರೀತಿಯ ಪ್ಲೇವರ್ ಗಮನ ಸೆಳೆಯುತ್ತದೆ.ಅಲ್ಲಿ ಯಾರತಂಟೆಯೂ ಇಲ್ಲ.ಇನ್ನೊಬ್ಬರು ನೋಡುತ್ತಾರೆಂಬ ಅಳುಕೂ ಇಲ್ಲದ ಬ್ಯಾಚುಲರ್ಸ್ ಗೆ...ಕಾಲೇಜು ಹುಡುಗ ಹುಡುಗಿಯರಿಗೆ ಹೇಳಿಮಾಡಿಸಿದ ಜಾಗ...ಯಾರಿಗಾದ್ರು ಅರ್ಜೆಂಟಾಗಿ ಮೀಟಿಂಗ್ ನಡೆಸೋಕೆ ಜಾಗ ಸಿಕ್ಕಿಲ್ಲಾಂದ್ರೆ ಒಂದೊಂದು ಕಾಫಿ ಆರ್ಡರ್ ಮಾಡಿ ಒಂದೆರಡು ಗಂಟೆ ಕುಳಿತ್ರೂ ಯಾರೂ ಬೇಡ ಅನ್ನೊದಿಲ್ಲ.
a lot can happen over a coffee-ಈ ರೀತಿಯ ವಾಕ್ಯ ಕಾಫೀ ಶಾಪ್ ನಲ್ಲಿರೋದು ತುಂಬಾ ಅರ್ಥಗರ್ಭಿತ ಆನಿಸುತ್ತೆ.

ಇಲ್ಲಿ ಹಲವಾರು ಪ್ರೀತಿ ಹುಟ್ಟುತ್ತೆ ಪ್ರೇಮದ ರೆಕ್ಕೆ ಕಟ್ಟುತ್ತೆ,ಹಾಗೆ ಹಾರಾಡ್ತಾ ಹಾರಾಡ್ತಾ ಕಳಚಿ ಬಿದ್ದ ರೆಕ್ಕೆ ಅವರನ್ನ ಮತ್ತದೆ ಜಾಗದಲ್ಲಿ ಕೂರುವಂತೆ ಮಾಡುತ್ತೆ.ಟಿಶ್ಯೂ ಪೇಪರ್ ನಲ್ಲಿ ಕಣ್ಣೀರೊರೆಸುತ್ತಾ.

ನಿನ್ನೆ ಒಂದು ಈ ರೀತಿಯ ಜೋಡಿಯನ್ನ ನೋಡಿದೆ,ಕಾಲೇಜು ಹುಡುಗ ಹುಡುಗಿಯರ ಗುಂಪೇ ಸೇರಿತ್ತು.ದೂರದಲ್ಲಿ ಕಾಲಿ ಇದ್ದ ಜಾಗದಲ್ಲಿ ಕುತೂಹಲದ ವೀಕ್ಶ್ಯಕನಾಗಿ ನಾನು ಅವರನ್ನೆಲ್ಲ ಗಮನಿಸುತ್ತಿದ್ದೆ.

ಒಂದು ಬದಿಯಲ್ಲಿ ಹುಡುಗಿಯರು ಸೇರಿದ್ದರೆ ಅವಳಲ್ಲಿ ಒಬ್ಬಳು ಕಣ್ಣತುದಿಯಲ್ಲಿ ಕಾಡಿಗೆ ಜಾರದಂತೆ ನೀರುತುಂಬಿಸಿಕೊಂಡಿದ್ದಳು.ಇನ್ನೊಂದು ಬದಿಯಲ್ಲಿ ಹುಡುಗರು ಸೇರಿದ್ದರೆ ಒಬ್ಬಾತ ನಾಳೆಯಿಂದ ಪ್ರಪಂಚದಲ್ಲಿ ಊಟಕ್ಕೆ ಏನೂ ಸಿಗೋದೇ ಇಲ್ವಲ್ಲಾ ಅನ್ನೋತರದಲ್ಲಿ ಸ್ವರ್ಗಸ್ತನಾದಂತೆ ಕುಳಿತಿದ್ದ.ಇದ್ದಕ್ಕಿದ್ದಂತೆ ಅವನು ತನ್ನ ಮೊಬೈಲನ್ನು ನೆಲಕ್ಕೆ ಜೋರಾಗಿ ಜಾಡಿಸಿಬಿಟ್ಟ ...ಬೇರೆಯವರು ಅದನ್ನು ಆಯತೊಡಗಿದರು...ಕೆಲವರು ಅವನಿಗೆ ಗದರತೊಡಗಿದರು...ಹುಡುಗಿಯರು ಅವನ ಸ್ಟಂಟ್ ಅಂದರು...ಕೆಲಹೊತ್ತಿನ ಮೌನದ ನಂತರ ಆ ಇಬ್ಬರು ಹುಡುಗ ಹುಡುಗಿಯನ್ನ ಅಲ್ಲೇ ಬಿಟ್ಟ ಮಿಕ್ಕವರು ದೂರದ ಟೇಬಲ್ಲಿನತ್ತ ಸರಿದರು.ಅವನು ಅವಳತ್ತ ಅವಳು ಅವನತ್ತ ಸರಿಯಲಿಲ್ಲ ಒಂದಷ್ಟು ಹೊತ್ತಿನ ನಂತರ ಇಬ್ಬರಿಗೂ ಮಧ್ಯೆ ಇದ್ದ ಟೆಬಲ್ಲಿನತ್ತ ತಮ್ಮನ್ನು ಕುಳ್ಳಿರಿಸಿಕೊಂಡರು...ಹಾಗೇ ಕೂತಿದ್ದ ಅವರ ಕುರ್ಚಿ ಬಿಸಿ ಆಯಿತೇ ಹೊರತು ಮಾತುಗಳು ಹೊರಡಲೇ ಇಲ್ಲ.

ನನಗೆ ಕುತೂಹಲ ಅವರಾಡುವ ಮಾತು ಎಂತದ್ದಿರಬಹುದೆಂದು.ನೋಡುತ್ತಲೇ ಇದ್ದೆ ಅಲ್ಲಿ ದುರುಗುಟ್ಟುವಿಕೆ...ಅಯ್ಯೋ ಅನ್ನಿಸಿಕೊಳ್ಳುವಿಕೆ...ಸ್ವಲ್ಪ ನಸುನಗಿಸಿಕೊಳ್ಳುವಿಕೆ...ಮತ್ತದೇ ಗಾಂಭೀರ್ಯ...ಯಾವ ಕರ್ಮಕ್ಕೆ ಹೀಗೆ ಎಷ್ಟು ಹೊತ್ತು ಕೂತಿರಬೇಕು ಎಂಬ ಚಡಪಡುವಿಕೆ...ಇಬ್ಬರಲ್ಲೂ ನಾನು ಮೊದಲು ಸೋಲಬಾರದೆಂಬ ಅಹಮಿಕೆ ಯಥೇಚ್ಚವಾಗಿ ನಡೀತ್ತಿತ್ತು.ಗುಂಪು ದೂರದಲ್ಲಿದ್ದುಕೊಂಡು ನಗುತ್ತಾ ಅವರಿಬ್ಬರನ್ನು ಕಿಚಾಯಿಸುತ್ತಾ ತಮಗೆ ಬೇಕಾದ್ದನ್ನ ಆರ್ಡರ್ ಮಾಡುತ್ತಾ ಅವರಿಬ್ಬರಿದ್ದ ಟೇಬಲ್ಲಿಗು ಪೇಷ್ಟ್ರಿ ಚಾಕೋಲೇಟ್ ಆರ್ಡರ್ ಮಾಡಿದ್ರು.
ಒಬ್ಬ ಹುಡುಗ ನನ್ನತ್ತ ಮುಖ ಮಾಡಿ ನಕ್ಕ ನನ್ನೆದುರು ಇದ್ದ ಒಂದು ಖಾಲಿ ಸೀಟಿನಲ್ಲಿ ಕೂರಬಹುದಾ ಎಂದು... ನೋಪ್ರಾಬ್ಲೆಮ್ ಅನ್ನೋಹಾಅಗೆ ನಾನೂ ಮಾಡಿದೆ, ಕೇಳೋಣ ಅನ್ನಿಸ್ತು... ನನ್ನಿಂದ ದೇಶಾವರಿ ನಗು ತನ್ನಿಂದ ತಾನೇ ಬಂತು ....ಮಾತು ಶುರು ಆಯಿತು.
.......
......
..........
....
..........ಇಷ್ಟೇ ವಿಷಯ.
ಅವನು ಕಷ್ಟ ಪಟ್ಟು ಸಂಪಾದಿಸಿದ ಅವಳ ಪ್ರೀತಿ....ಅವನು ಸ್ವಲ್ಪ ಫ್ಲರ್ಟ್ ಅಂತೆ....ಅಂತೂ ಎಲ್ಲ ಗೆಳೆಯರ ಒತ್ತಡಕ್ಕೆ ಸೋತು ಅವನ ಪ್ರೀತಿಯನ್ನು ವರಿಸಿದ್ದಾಳೆ ಅದಕ್ಕೆ ಇವತ್ತು ಟ್ರೀಟ್.... ಕಾಲೇಜಿಂದ ಬರ್ತಾ ಇವನಿಗೆ ಅದ್ಯಾವುದೋ ಕಾಲ್ ಬಂತಂತೆ.... ಹುಡುಗಿ ಧ್ವನಿಯದ್ದು....ಕಾಲೇಜಿಂದ ಇಲ್ಲಿವರೆಗೂ ಮಾತಾಡ್ತಿದ್ನಂತೆ ಇವಳ ಬಗ್ಗೆ ಗೊಡವೆಯೇ ಇರಲಿಲ್ವಂತೆ.....
ಇವಿಷ್ಟು ತಿಳಿದ ನಂತರ ನನ್ನಿಂದ ಒಂದು ಮಾತು ಹೊರಬಿತ್ತು ಎದುರಿದ್ದ ಹುಡುಗನಿಗೆ
ಇವರಿಬ್ಬರು ಮದುವೆ ಆಗ್ತಾರಾ?
ಮದ್ವೆಗೋಸ್ಕರನೇ ಪ್ರೀತಿ ಅಂದ್ರೆ ಎಷ್ಟು ಸರಿ ಸಾರ್
ಮೋಸ ,ಕೈಕೊಟ್ಟ ಹಾಗಾಗುತ್ತಲ್ಲ...?
ಇದ್ದಷ್ಟು ದಿನ ಜಾಲಿಯಾಗಿರೋದು ಮುಖ್ಯ ಸಾರ್... ಕಟ್ಕೊಳ್ಳೊವಷ್ಟರಲ್ಲಿ ಏನೇನಾಗುತ್ತೆ ಯಾರಿಗೊತ್ತು?
ಮಾತು ಕೇಳುತ್ತಿದ್ದ ಹಾಗೆ ಯೋಚನೆ ದೇವಕಿಯತ್ತ ಹೊರಳುತ್ತದೆ....ನಾನೂ ಹೀಗೆ ಯೋಚನೆ ಮಾಡಿದ್ದರೆ ಇಂದು ಇಷ್ಟು ಚಿಂತೆ ಆಗ್ತಿತ್ತಾ...ಮುಂದೆ ನೀನು ಹೇಗಾದ್ರು ಆಗು ನಾನು ಹೇಗಾದ್ರು ಇರ್ತೀನಿ ಅನ್ನೋ ಪಾಲಿಸಿ ಎಷ್ಟು ಸರಿ... ಒಟ್ಟಾರೆ ಪ್ರೀತಿಯೇ ಗೊಂದಲದ ಪದ ಅನ್ನಿಸ್ತು.ಎದುರಿಗಿದ್ದ ಹುಡುಗನಿಗೆ ಪ್ರೀತಿ ಅಂದ್ರೇನು ನಿಮ್ಮರ್ಥದಲ್ಲಿ ಅಂದೆ .ಆತ ಲವ್ ಲೆಸ್ ಲೈಫ್ ಈಸ್ ಗ್ಯಾಸ್ ಲೆಸ್ ಸೋಡಾ ಅಂದ.
ಕಮಿಟ್ಮೆಂಟ್ ಅಂದ್ರೆ ಮತ್ತೊಂದು ನನ್ನ ಪ್ರಶ್ನೆ ಅವನಿಗೆ ಬೇಡವಾಗಿತ್ತು ...ಕಮಿಟ್ಮೆಂಟ್ ಅರ್ಥ ಇಲ್ಲದ್ದು ನಮ್ಮನ್ನು ಕಿಲ್ಲ್ ಮಾಡುತ್ತೆ ಅಂದು ಆ ಇಬ್ಬರನ್ನು ತೋರಿಸಿದ ಅವರಿಬ್ಬರು ಈ ಹಿಂದೆ ನಮ್ಮಲ್ಲೇನೂ ನಡೆದೇ ಇಲ್ಲ ಎಂಬಂತೆ ಒಬ್ಬರ ಬಾಯಿಗೆ ಮತ್ತೊಬ್ಬರು ಪೇಷ್ಟ್ರಿ ತಿನ್ನಿಸಿಕೊಳ್ಳುತ್ತಿದ್ದರು ಇರೋವಷ್ಟು ಹೊತ್ತು,ದಿನ ಮಜವಾಗಿರೋದು ಪ್ರಾಕ್ಟಿಕಲ್ ಲೈಫ್ ಅಂದವನೆ ಹುಡುಗ ಎದ್ದು ಹೋದ.
ದೇವಕಿನೂ ಈ ಪಾಲಿಸಿ ಅಳವಡಿಸಿಕೊಂಡ್ಲಾ ...?ಹುಡುಗನ ಮಾತಲ್ಲೂ ನಿಜದ ಖನಿಜಾಂಶ ಗೋಚರಿಸುತ್ತಿತ್ತು...ಕಮಿಟ್ಮೆಂಟ್ ಸತ್ವ ಇಲ್ಲದ ವಿಷಕಾರಿ ಪ್ರೀತಿ ಅಂತಲೂ ಅನ್ನಿಸತೊಡಗಿತು.
ಹಾಗಿರುವಾಗಲೇ...
ನನ್ನೆದುರು ಖಾಲಿ ಇದ್ದ ಸೀಟಲ್ಲಿ ದೇವಕಿ ಬಂದು ಕೂತಂತೆ ಬಾಸವಾಯಿತು ನಾನೂ ನನಗೊತ್ತಿಲ್ಲದೆ ಪೇಷ್ಟ್ರಿ ಆರ್ಡರ್ ಮಾಡಿದೆ...
ಇವತ್ತಿಗೂ ನಾನು ನನ್ನ ದೇವಕಿ ಏನು ಇಷ್ಟ ಪಡುತ್ತಾಳೋ ಅದನ್ನು ತಿನ್ನುವಾಗ ಇಲ್ಲವೇ ಅವ್ಳಿಷ್ಟ ಪಡುವ ವಿಚಾರ ಯೋಚಿಸುವಾಗ ನನ್ನ ಜೊತೆಗೀಗ ಅವಳಿಲ್ಲದಿದ್ದರು ನನ್ನೆದುರು ಬಂದು ಕೂರುತ್ತಾಳೆ ...ಬಂದಿಲ್ಲ ಅಂದ್ರೆ ನಾನೆ ಕರೆದು ಕೂರಿಸುತ್ತೇನೆ ಮನಪ್ರೀತಿಯಿಂದ.

2 comments:

  1. ದೇವಕಿ,
    ಚೆನ್ನಾಗಿದೆ, ಬರೆಯುತ್ತಿರಿ

    ReplyDelete
  2. I feel that sometimes things are shown in a very unrealistic manner. Example: When Sunita meets Vasu to tell him about Devaki's pregnancy yesterday, he does not hear even one word from her. In reality, how long will it take for sunita to blurt out one sentence loudley that "Devaki is a surrogate mother" ?

    Also the fact that Yashodha's husband does not speak anything against his wife! He sure is henpecked. You can call it "care" for his wife, but in reality men are not like that. She has done so many stupid things that he would have burst out by now!!

    --an avid watcher

    ReplyDelete