Tuesday, June 30, 2009

ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರವಲ್ಲ !

ದೇವರು...
ರವನ್ನು ಕೊಟ್ಟು...
ಕಿತ್ಕೋತಾನ...

ಮನುಷ್ಯ ಸಹಜ ಬದುಕಿನಿಂದ ತುಂಬಾನೆ ದೂರವಿದ್ದ ನನ್ನನ್ನ ಬದುಕಿನ ತೇರ ದಾರಿಗೆ ಕರೆದುಕೊಂಡು ಬಂದ ದೇವತೆ ನೀನು.. ನಿನ್ನನ್ನ ಆತ್ಮಬಂಧುವೆಂದು ಹೆಸರಿಡದೇ ಬೇರೆ ಯಾವ ಹೆಸರಿಡಲಿ ಹೇಳು?. ಕತ್ತಲ ಪ್ರಪಂಚದ ಯಾವುದೋ ಮೂಲೆಯಲ್ಲಿದ್ದ ನನ್ನನ್ನ ಬೆಳಕಿನ ದಾರಿಗೆ ಕೈ ಹಿಡಿದ ನನ್ನ ಬದುಕಿನ ಪುಟ್ಟ ಹಣತೆ ನೀನು ದೇವಕಿ. ನೀನು ಕೊಡುವ ಇಷ್ಟಿಷ್ಟೇ ಬೆಳಕಿನಲ್ಲಿ ನನ್ನ ಈ ಪೂರ್ತಿ ಬದುಕನ್ನ ಕಾಣ ಹೊರಟ ನಿನ್ನ ಬದುಕಿನ ನಾವಿಕ ನಾನು. ನಿನ್ನ ಕುರಿತಾದ ಪ್ರತಿ ಕನಸುಗಳನ್ನು ಆಕಾಶದೆತ್ತರಕ್ಕೇ ಹೋಲಿಸಿ ಸಂಭ್ರಮಿಸಿದ್ದು ಸುಳ್ಳಲ್ಲ ದೇವಕಿ, ಆದರೆ ಅದೇ ಪ್ರೀತಿಯಲ್ಲಿ ಆಕಾಶದ ಅಗಾಧತೆಗೂ ಮಿಗಿಲಾದ ನೋವು ಇದ್ದೀತೆಂದು

ಪ್ರಾಮಿಸ್ ನಿನ್ನಾಣೆ ನನಗೆ ಗೊತ್ತಿಲ್ಲ ದೇವಕಿ.

ಹುಟ್ಟುತ್ತಲೆ ಎಲ್ಲರನ್ನು ಮತ್ತು ಎಲ್ಲವನ್ನೂ ಕಳೆದುಕೊಂಡು ಈ ಜಗತ್ತಿಗೆ ಖಾಲಿ ಜೇಬಿನ ಪಕೀರನಾಗಿ ಬಂದವನು ನಾನು ದೇವಕಿ. ಜೊತೆಗೆ ಈ ಜಗತ್ತಿಗೆಲ್ಲ ಹರಿದು ಹಂಚಿದರೂ ಖಾಲಿಯಾಗದಷ್ಟು ನೋವು, ದುಃಖ, ಹತಾಷೆ, ಒಬ್ಬಂಟಿತನಗಳನ್ನೆಲ್ಲ ಒಡಲಲ್ಲಿಟ್ಟುಕೊಂಡೇ ಬೆಳೆದು ಬಂದ ಮಾಮೂಲಿ ಹುಡುಗ ನಾನು. ಆದರೇ ನನ್ನ ಪಾಲಿಗೆ ಯಾವತ್ತೂ ಇಲ್ಲದಿದ್ದ ಆ ದೇವರು, ಕೆಲ ಸಮಯದಲ್ಲಿ ಕರುಣಾಳುವಾಗಿರುತ್ತಾನೆ ಎಂಬ ಮಾತಿಗೆ ಸಾಕ್ಷಿಯಂತೆ ನನಗೆ ನಿನ್ನ ತೋರಿಸಿಬಿಟ್ಟ ದೇವಕಿ. ಖಾಲಿಯಾಗಿದ್ದ ಬದುಕಿನ ಬಟ್ಟಲುಗಳೆಲ್ಲ ಒಮ್ಮೆಲೆ ತುಂಬಿದ ಹಾಗಾಯಿತು. ತಂದೆ ತಾಯಿಯ ಮುಖವನ್ನೇ ನೋಡಿರದಿದ್ದ ಈ ಹುಡುಗನಿಗೆ ಎಲ್ಲಾ ತಂದೆ ತಾಯಿಚಿiರು ಒಟ್ಟಿಗೆ ಜೋಗುಳ ಹಾಡಿದ ಅನುಭವವಾಗಿದ್ದು ಸುಳ್ಳಲ್ಲ ದೇವಕಿ. ನಿನ್ನ ಮಡಿಲಲ್ಲಿ ಎಲ್ಲ ನೋವುಗಳನ್ನ ಮರೆಸುವಂತ ಮಮತೆ ಅದೆಷ್ಟಿತ್ತು ದೇವಕಿ?. ಒಂದಕ್ಷರಗನ್ನೂ ಬರೆಯದಿದ್ದ ಈ ಬದುಕಿನ ಪುಟಗಳಲ್ಲಿ ನೀನು ಬಂದ ಮೇಲೆ ಮೂಡಿದ್ದು ಬರಿ ಸುವರ್ಣಾಕ್ಷರಗಳೆ ಅಲ್ಲವೆ? ಆದರೆ ಭಯವಾಗುತ್ತಿದೆ ದೇವಕಿ. ಬದುಕಿನ ಪುಟಗಳಲ್ಲಿ ಜೋಗುಳ ಹಾಡುತ್ತಿದ್ದ ಪ್ರತಿ ಅಕ್ಷರಗಳು ಯಾವುದೋ ನೋವಿನ ಗೀತೆಗೆ ಸಾಲುಗಳಾಗುತ್ತಿವೆ. ದೇವಕಿ. ಬದುಕಿನುದ್ದಕ್ಕೂ ನೋವನ್ನ ಜೊತೆಗಿಟ್ಟುಕೊಂಡೇ ಬಲವಂತದ ನಗು ಬಗಲಿಟ್ಟುಕೊಂಡು ಸಾಗುತ್ತಿರೋನು ನಾನು. ಆ ಜೋಳಿಗೆಗೆ ಇನ್ನೊಂದಷ್ಟು ನೋವಿನ ಭಿಕ್ಷೆಯನ್ನ ತುಂಬಿಸಿದ್ದೀಯ. ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರ ಆಗೋದಿಲ್ಲ ದೇವಕಿ.

ನನ್ನಿಷ್ಟದ ಹಾಡುಗಾರ ಅಶ್ವಥ್ ಹಾಡಿರುವ ಹೇಳಿಹೋಗು ಕಾರಣ ಹಾಡು ವಿರಹದ ನಿಶೆಯಂತೆ ಮತ್ತಷ್ಟು ಕಾಡುತ್ತಿದೆ. ಬೇಡವೆನ್ನಲು ಮನಸ್ಸು ಒಪ್ಪುತ್ತಿಲ್ಲ. ನೋವು ಕೊಟ್ಟರೂ ಆ ಹಾಡು ನಿನ್ನನ್ನ ಮತ್ತೆ ಮತ್ತೆ ನೆನಪಿಸುತ್ತಿದೆ...

ಹೇಳಿಹೋಗು ಕಾರಣ
ಹೋಗುವಾ ಮೊದಲು...
ನನ್ನ ಬಾಳಿನಿಂದ ದೂರಾಗುವ ಮೊದಲು...
ಹೇಳಿಹೋಗು ಕಾರಣ
ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾಗಿ ಬಂದೆ ಬಾಳಿಗೆ
ಇಂದೇಕೆ ಹೀಗೆ
ಬೆಳಕನ್ನು ತೊರೆದು ನೀಸರಿದೆ ನೆರಳಿಗೆ
.......
.......
.......