Tuesday, October 27, 2009

ನನ್ನ ಜಗತ್ತು ಅಂದರೆ "ನಾನು ಮತ್ತು ನೀನು", ಅಷ್ಟೇ!

ದೇವಕೀ, ನಮಗಿದ್ದ ಕನಸು ಒಂದೇ..
ಆ ಕನಸಿನ ಹೆಸರು "ನಾವಿಬ್ಬರು!"
ಕಟ್ಟೋ ಕನಸಾಗಲಿ ಹುಟ್ಟೋ ಹಾಡಾಗಲಿ ಇಬ್ಬರೇ ಮೂಡಿಸಬೇಕು. ಬದುಕಿನ ದಾರಿ ಅದೆಷ್ಟು ದೂರವಿದ್ದರೂ ನಾವಿಬ್ಬರೇ ಕಿರುಬೆರಳ ಜೊತೆಗೂಡಿಸಿ ಸವೆಸಬೇಕು. ಅಂಗಳದಲಿ ನಿನ್ನ ಅವಿಷ್ಟೂ ಹೆಜ್ಜೆಗುರುತುಗಳಿಗೆ ನನ್ನ ಪಾದಗುರುತೇ ಸಾಥ್ ನೀಡಬೇಕು. ಒಂದಿಷ್ಟು ದುಃಖವಾಗಿ ಒಂದೆರಡು ಹನಿ ಜಾರಿದರೂ ನನ್ನ ಕಂಗಳ ಮೇಲೆ ನಿನ್ನ, ನಿನ್ನ ಕಂಗಳ ಮೇಲೆ ನನ್ನ ಬೆರಳುಗಳು ಮಾತ್ರ ಮೂಡಬೇಕು. ನಮ್ಮಿಬ್ಬರ ಕಷ್ಟಗಳಿಗೆ ನಾವಿಬ್ಬರೇ ತಾಗಿಕೊಳ್ಳಬೇಕು. ಬದುಕಿನ ಬವಣೆಗಳಿಗೆ ನಾವಿಬ್ಬರೆ ನಮ್ಮನ್ನ ಭಾಗಿಸಿಕೊಳ್ಳಬೇಕು ; ಗುಣಿಸಿಕೊಳ್ಳಬೇಕು.

ಇದಿಷ್ಟೇ ಈ ವಾಸು ದೇವರ ಮುಂದಿಟ್ಟಿದ್ದ ಬೇಡಿಕೆ!

ದೇವರಿಗೆ ನನ್ನ ಮೇಲೆ ಕೋಪ ಬಂದಿರಬೇಕು. ನಾನು ಕಂಡ ಯಾವ ಕನಸುಗಳನ್ನು ನನ್ನ ಎದೆಯ ಮೇಲೆ ಮೂಡಲು ಬಿಡುತ್ತಿಲ್ಲ. ಕೈಯ್ಯ ಯಾವ ಗೆರೆಯೂ ಬದುಕನ್ನು ದೇವಕಿಯತ್ತ ಕರೆದೊಯ್ಯುತ್ತಿಲ್ಲ. ಹಣೆಯಬರಹದ ಒಂದು ಅಕ್ಷರವೂ ನಿನ್ನತ್ತ ವಾಲುತ್ತಿಲ್ಲ. ನಿಜವಾಗಿಯೂ ನನಗೆ ಬೇಕಿರುವ ಒಪ್ಪಿಗೆ ಖಂಡಿತಾ ಆ ದೇವರದ್ದಲ್ಲ. ನನ್ನ ದೇವಕಿಯದು. ಕೇವಲ ನಿನ್ನದು. ನಿನ್ನ ಒಂದು ಚಿಕ್ಕ ಕಣ್ಣಿನ ಇಷಾರೆ ನನ್ನ ಜೀವನಪೂರ್ತಿ ನಡೆಸಬಲ್ಲುದು, ಇಡೀ ಬಾಳನ್ನು ಹಸನಾಗಿಸಬಲ್ಲದು. ಪುಟ್ಟ ಕಿರುನಗೆ ನನ್ನ ಇಡೀ ದಿನವನ್ನು ಹೂವಿನಂತೆ ಅರಳಿಸಬಲ್ಲುದು. ಹೀಗಿರುವಾಗ ನಾನ್ಯಾಕೆ ದೇವರ ಮುಂದೆ ನನ್ನ ಜೋಳಿಗೆ ಇಟ್ಟು ಬೇಡಿತ್ತಿದ್ದೇನೆ?


ದೇವಕೀ, ನನ್ನ ಇಡೀ ಬದುಕನ್ನು ಬರೀ ನಿನ್ನ ಜತೆ ಕಳೆಯಬೇಕಿದೆ. ನನ್ನ ಖುಷಿಯ ಕಣಕಣವನ್ನೂ ನಿನ್ನ ಬದುಕಿಗೆ ಸುರಿಯಬೇಕಿದೆ, ದುಃಖ ಮಾತ್ರ ಇರುವೆಯ ಪಾದದಷ್ಟೂ ನಿನಗೆ ಸೋಕಿಸದಂತೆ ಬಾಳಬೇಕಿದೆ. ಅದಕ್ಕಾಗಿ ನನ್ನ ಬದುಕನ್ನು ಕೇವಲ ನಿನ್ನ ಜತೆಯಷ್ಟೇ ಹಂಚಿಕೊಳ್ಳಬೇಕಿದೆ. ದೇವರು ಒಪ್ಪದಿದ್ದರೇ ಭಾರವಾದ ಎದೆಯಿಂದ ಒಂದಿಷ್ಟು ಶಪಿಸಬೇಕಿದೆ. ಒಪ್ಪಿದರೆ ನಿನ್ನ ಜೊತೆಗೂಡಿ ಒಂದಿಷ್ಟು ಸುತ್ತುಗಳ ಸುತ್ತಬೇಕಿದೆ. ಮತ್ತಷ್ಟು ಕನಸುಗಳನ್ನು ಬಿತ್ತಬೇಕಿದೆ.

ಇದಕ್ಕೆ ನಿನ್ನ ಸಹಾಯ ಅಗತ್ಯ. ನಿನ್ನ ಸಾಥ್ ಅಮೂಲ್ಯ.
ಪ್ಲೀಸ್, ನನಗೆ ಸಹಾಯ ಮಾಡ್ತೀಯಾ ಅಲ್ಚಾ

Sunday, October 4, 2009

ಚೂರೇ ಚೂರು ಪ್ರೀತಿ ಸಿಕ್ಕರೂ ಸಾಕು...!

ನನ್ನ ಪ್ರಪಂಚ ತುಂಬ ಚಿಕ್ಕದು.

ಇಲ್ಲಿ ದೇವಕಿ ಎಂಬ ಮೂರಕ್ಷರದ ಅಸ್ತಿತ್ವ ಬಿಟ್ಟರೆ ಬೇರೆ ಅಂಥಾ ವಿಶೇಷಗಳಿಲ್ಲ. ಅಲ್ಲಲ್ಲ, ಬೇರೆ ವಿಶೇಷಗಳೇ ಇಲ್ಲ. ಯಾರ ಕಾಲ್ ಬಂದರೂ ನಿನ್ನದಿರಬಹುದೆಂಬ ನಿರೀಕ್ಷೆಯಿಂದಲೇ ಫೋನ್ ಎತ್ತಲ್ಪಡುತ್ತದೆ. ನನ್ನೊಳಗಿನ ಸಿಕ್ತ್ ಸೆನ್ಸ್ ದಿನಾ ನೀನು ಬರಬಹುದೆಂಬ ಸೂಚನೆ ನೀಡುತ್ತಿರುತ್ತದೆ. ನನ್ನೆಡೆಗೆ ಬರುವ ಎಲ್ಲಾ ದಾರಿಯ ತಿರುವಲ್ಲಿ ಸದಾ ನಿನ್ನ ಬಿಂಬ. ದಿನವಿಡೀ ಕಾದ ಮನವು ಸಂಜೆ ನೀ ಬಾರದೇ ಇರಬಹುದಾದ ಭಯದಿಂದ ಬಂಜೆಯಾಗುತ್ತದೆ. ರಾತ್ರಿಯೆಂದರೆ ಬಾನು ಚುಕ್ಕಿ ಜೋಡಿಸುವ ಹುಡುಗಿಗೆ ಕಾದ ಅಂಗಳ. ಅಲ್ಲೂ ಕಾಯುವಿಕೆಯೇ ಕಣ್ಕುಕ್ಕುತ್ತದೆ.

ನಿಜ, ಈ ಜಗತ್ತಿನಲ್ಲಿ ಎಲ್ಲಾ ಕಾಯುತ್ತಿದ್ದಾರೆ, ಏನೋ ಒಂದಕ್ಕೆ. ವೈಟಿಂಗ್ ಫಾರ್ ಗೋಡೋ ನಾಟಕದಲ್ಲಿ ಗೋಡೋ ಗೆ ಕಾಯ್ವಂತೆ. ಸುಖಕ್ಕೆ, ಪ್ರಮೋಶನ್ ಗೆ, ರೇಶನ್ ಗೆ, ಬೆಲೆ ಇಳಿಕೆಗೆ, ಇನ್ನೊಂದು ಇಲೆಕ್ಷನ್ ಗೆ, ಪ್ರೀತಿಗೆ, ನೋವಿನ ನಿವಾರಣೆಗೆ, ಒಳ್ಳೆಯ ಕನಸಿಗೆ, ಕನಸು ನನಸಾಗುವ ಘಳಿಗೆಗೆ, ಗೆಲುವಿಗೆ..

ಕೊನೆಗೆ ಕೆಲವರು ಸಾವಿಗೂ!

ನೀರೊಳಗೆ ಮುಳುಗಿರುವವನು ಉಸಿರು ಬಯಸುವಷ್ಟು ನಿನ್ನ ಇಷ್ಟಪಡ್ತಿದೀನಿ ಅನ್ನಿಸ್ತಿದೆ. ನಿನ್ನ ಇಷ್ಟಪಡುವುದು ನನ್ನ ಕನಸು ಅಲ್ಲ, ಬದುಕು! ಕಾಲ ನನ್ನನು ಕರೆದೊಯ್ಯುವ ಕೊನೆಘಳಿಗೆಯ ಕೊನೆಯ ತಿರುವಿನಲ್ಲೂ ನಿನ್ನ ಒಂದು ನಗುವಿಗೆ, ನಿನ್ನ ಬರುವಿಕೆಗೆ ಕಾಯ್ತೀನಿ.

ಒಂದು ಮಿಸ್ಡ್ ಕಾಲ್ ಸಾಕು. ಒಂದು ಪುಟ್ಟ ಗೆಳೆತನ ಸಾಕು. ನನ್ನೆಡೆಗಿನ ಒಂದಿಷ್ಟು ಕಾಳಜಿ, ಚೂರೇ ಚೂರು ಪ್ರೀತಿ ಸಿಕ್ಕರೂ ಸಾಕು,

ದೇವರು ನನಗಿತ್ತ ಬದುಕನ್ನು ಸಾರ್ಥಕಗೊಳಿಸಿದ್ದೇನೆಂದು ಅವನಿಗೆ ತಿಳಿಸೋಕೆ ಏನಾದರೂ ಒಂದು ಮಾಡು ಸಾಕು ದೇವಕಿ. ಮುಂದಿನ ಅದಷ್ಟೂ ಜನ್ಮಕ್ಕೆ ನಿನ್ನ ಋಣದಲ್ಲಿರ್ತೀನಿ.

ಇದೊಂದು ಸಹಾಯ ಮಾಡ್ತೀಯಾ ಅಲ್ವ?