Friday, September 25, 2009

ಸ್ವಲ್ಪ ಗಟ್ಟಿಯಾಗಿ ಸ್ವಾಮೀ ಅಂದ್ರು

ನಾನು ದೇವಕಿ ಮೇಲೆ ತುಂಬಾ ಸಿಟ್ಟಾಗಿದ್ದೀನಿ ...ಆದರೆ ಅವಳನ್ನು ನೋಯಸೋದಿಲ್ಲ , ಬದಲಾಗಿ ನನ್ನನ್ನು ನಾನು ಫನಿಶ್ ಮಾಡ್ಕೋತೀನಿ.... ಹೇಗೆ ಅಂದ್ರೆ ಹಳೆಯ ನಮ್ಮೊಲವಿನ ಆತ್ಮೀಯ ಕ್ಷ್ಯಣಗಳನ್ನು ನೆನೆಸಿಕೊಳ್ಳುತ್ತ. ಕಳಕೊಂಡ ವ್ಯಕ್ತಿಗೆ ಕಾಡುವ ನೆನಪುಗಳ ಶಿಕ್ಷ್ಯೆಗಿಂತ ಹೆಚ್ಚಿನ ಶಿಕ್ಷ್ಯೆ ಯಾವುದೂ ಇಲ್ಲ ಅನ್ನುವುದು ನನ್ನ ನಂಬಿಕೆ.
ರಘುನಂದನ್ ಮೇಲೆ ಸೇಡು ತೀರಿಸ್ಕೋಬೇಕು ಅಂತ ನನ್ನ ಗೇಳೆಯ ಲೋಕೇಶ್ ನಾಯ್ಡು ಸಲಹೆ ಕೊಟ್ಟ ,ಸಲಹೆಯಲ್ಲಿ ತಪ್ಪಿಲ್ಲ...ಅವನು ಹೇಳಿದ ಲಾಯರನ್ನು ಬೇಟಿಯಾಗಿ ಸಲಹೆ ಕೇಳಿದಾಗ ಕ್ರಿಮಿನಲ್ಸಳ ಒಂದಷ್ಟು ಕಥೆ ಹೇಳಿದ್ರು.... ಎಲ್ಲರೂ ಸಮಾಜಕ್ಕೆ ಗುಮ್ಮಗಳಾಗಿ ಕಾಡೊ ರೂಪದವರೇ... ನಾನು ಅವರ ಹಾಗೆ ಆಗೋ ಯೋಚನೆ ಅಸಹ್ಯ ಅನ್ನಿಸ್ತು.
ಲಾಯರ್ ಹೇಳಿದ ಮಾತುಗಳು ತುಂಬಾನೆ ಸತ್ಯ ಅನ್ನಿಸೋಕೆ ಶುರುವಾಗಿದೆ.
೨೦ರೊಳಗೆ ವಯಸ್ಸಿನ ಹೆಚ್ಚಿನ ಸಂಖ್ಯೆಯ ಪ್ರೆಮಿಗಳಲ್ಲಿರೋದು ಅಟ್ರಾಕ್ಷನ್.ಅದಕ್ಕೊಂದಷ್ಟು ಅಂದ ಚಂದ ಸ್ಟೈಲ್ ಗಳ ಮಸಾಲ ರೊಮ್ಯಾನ್ಸ್ ನ ಚುರುಮುರಿ ಫೀಲ್...ಇವಿಷ್ಟಕ್ಕೆ ಖುಶಿ೯ ಪಟ್ಟು ಜೇವನ ತುಂಬಾ ಚೆನ್ನಾಗಿದೆ... ಎಂಜಾಯ್ ಅನ್ನುವ ಪದದ ಫ್ರೇಮಿನ ಒಳಗೆ ಕಲರ್ಫುಲ್ ಆಗಿರ್ತಾರೆ.
ಆದರೆ ನಂತರದ ವಯಸ್ಸಿನ ಪ್ರೀತಿಯಲ್ಲಿ ಅಥವಾ ಹುಡುಗಿಯ ಬಯಕೆಯಲ್ಲಿ ತನ್ನನ್ನು ಪ್ರೀತಿಸೋ ಹುಡುಗನ ಅಂದ ಚೆಂದದ ಬಗ್ಗೆ ಸ್ಟೈಲ್ ಬಗ್ಗೆ ಅವಳ ಆಸಕ್ತಿ ಕಡಿಮೆ ಪರ್ಸೆಂಟೇಜಿನಲ್ಲಿರುತ್ತದೆ. ಮತ್ತು ಅವಳು ಭವಿಷ್ಯದ ಭದ್ರತೆಗೆ ಹೆಚ್ಚು ಒತ್ತುಕೊಡುತ್ತಾಳೆ.ಹುಡುಗ ತೀರಾ ಚೆನ್ನಾಗಿಲ್ದೇ ಇದ್ರ್ತೂ ಪರ್ವಾಗಿಲ್ಲ ಸ್ವಲ್ಪ ಡೀಸೆಂಟಾಗಿದ್ದು ಆರ್ಥಿಕವಾಗಿ ಸ್ಟ್ರೋಂಗ್ ಇರ್ಬೇಕೂಂತ ಬಯಸ್ತಾಳೆ....ನಿಮ್ಮ ಹುಡುಗಿ ಯಾವರೀತಿಯ ಯೋಚನೆಯವರು ತಿಳ್ಕೊಂಡಿದ್ದೀರಾ ಯೋಚಿಸಿ ನಿರ್ಧಾರ ತಗೊಳ್ಳಿ....ಪ್ರೀತಿಸಿದ ಹುಡುಗಿ ಕೈ ಕೊಟ್ಲು ಅಂದ ಮಾತ್ರಕ್ಕೆ ನಿಮ್ಮಹುಟ್ಟಿನ ಸಾರ್ಥಕತೆಯ ಲೆಕ್ಕ ಚುಕ್ತಾ ಆಯಿತು ಅಂದ್ಕೋಬೇಡಿ...ದುರಂತ ಆಗೋದು ನಿಮ್ಮ ಜೀವನದಲ್ಲಿ ಅವಳು ಅವಳಿಷ್ಟ ಪಟ್ಟ ಬದುಕಲ್ಲಿ ಖುಷಿಯಾಗಿರ್ತಾಳೆ...ಜನ ಮೂರ್ಖ ಅನ್ನೋದು ನಿಮ್ಮನ್ನ...ಸ್ವಲ್ಪ ಗಟ್ಟಿಯಾಗಿ ಸ್ವಾಮೀ ...ಅಂದ್ರು.
ಗಟ್ಟಿಯಾಗೋಕೆ ಪ್ರಯತ್ನ ಪಡ್ತಿದ್ದೀನಿ ಆದ್ರೆ ದೇವಕಿ ತನ್ನ ಬದುಕಲ್ಲಿ ಶ್ರೀಮಂತಿಕೆಯನ್ನ ಒಪ್ಪಿ ಅಪ್ಪಿಕೊಂಡುಬಿಟ್ಳಾ
ಸುನೀತಾ ಹೇಳೋ ಹಾಗೆ ವಾಸು ದೇವಕಿ ಪಾಲಿಗೆ ನಿಜವಾಗ್ಲು ಗೂಸ್ಲು ಅನ್ನಿಸಿಬಿಟ್ನಾ... ಫ್ಯಾನ್ಸಿ ಫ್ಯಾಂಟಸಿ ಅವಳಲ್ಲಿ ಮನೆಮಾಡಿಬಿಡ್ತಾ...ನನ್ಗೆ ಹೋಲಿಸಿದ್ರೆ ಅವೆರಡರಲ್ಲು ರಘುನೆ ವಾಸಿ. ಆದ್ರೆ ಪ್ರೀತಿ ವಿಚಾರ ಬಂದಾಗ ನನ್ನ ಶ್ರೀಮಂತಿಕೆ ಬೇರಾರಲ್ಲು ಅವಳು ನೋಡಲು ಸಾಧ್ಯವಿಲ್ಲ.ಇಷ್ಟರ ಮಟ್ಟಿಗೆ ಒಬ್ರನ್ನ ವಾಸುಗೆ ಪ್ರೀತ್ಸೋದಕ್ಕೆ ಸಾಧ್ಯಇದೆ ಅಂತ ತೋರಿಸಿಕೊಡೋದಕ್ಕೆ ಕಾರಣ ನೀನೇ ದೇವಕಿ....ನೀನೆಲ್ಲಿದ್ರು ವಾಸುವಿನ ಪ್ರೀತಿ ಮತ್ತು ಥ್ಯಾಂಕ್ಸ್ ನಿನ್ನ ನೆರಳಲ್ಲೆ ಸರಿದಾಡುತ್ತದೆ.

Tuesday, September 22, 2009

ಅವಳಿಲ್ಲದಿದ್ದರೂ ಕರೆದು ಕೂರಿಸುವೆ

ನಿನ್ನೆಯೂ ನನಗೆ ಕಾಫೀಡೇಗೆ ಹೋಗೋ ಮನಸ್ಸಾಯ್ತು. ಅಲ್ಲಿ ಬೇರೆಬೇರೆ ಪ್ಲೇವರ್ ಕಾಫಿ ಸಿಗುತ್ತೆ ಅನ್ನೋದಕ್ಕಿಂತ ಬೇರೆಬೇರೆ ಪ್ರೀತಿಯ ಪ್ಲೇವರ್ ಗಮನ ಸೆಳೆಯುತ್ತದೆ.ಅಲ್ಲಿ ಯಾರತಂಟೆಯೂ ಇಲ್ಲ.ಇನ್ನೊಬ್ಬರು ನೋಡುತ್ತಾರೆಂಬ ಅಳುಕೂ ಇಲ್ಲದ ಬ್ಯಾಚುಲರ್ಸ್ ಗೆ...ಕಾಲೇಜು ಹುಡುಗ ಹುಡುಗಿಯರಿಗೆ ಹೇಳಿಮಾಡಿಸಿದ ಜಾಗ...ಯಾರಿಗಾದ್ರು ಅರ್ಜೆಂಟಾಗಿ ಮೀಟಿಂಗ್ ನಡೆಸೋಕೆ ಜಾಗ ಸಿಕ್ಕಿಲ್ಲಾಂದ್ರೆ ಒಂದೊಂದು ಕಾಫಿ ಆರ್ಡರ್ ಮಾಡಿ ಒಂದೆರಡು ಗಂಟೆ ಕುಳಿತ್ರೂ ಯಾರೂ ಬೇಡ ಅನ್ನೊದಿಲ್ಲ.
a lot can happen over a coffee-ಈ ರೀತಿಯ ವಾಕ್ಯ ಕಾಫೀ ಶಾಪ್ ನಲ್ಲಿರೋದು ತುಂಬಾ ಅರ್ಥಗರ್ಭಿತ ಆನಿಸುತ್ತೆ.

ಇಲ್ಲಿ ಹಲವಾರು ಪ್ರೀತಿ ಹುಟ್ಟುತ್ತೆ ಪ್ರೇಮದ ರೆಕ್ಕೆ ಕಟ್ಟುತ್ತೆ,ಹಾಗೆ ಹಾರಾಡ್ತಾ ಹಾರಾಡ್ತಾ ಕಳಚಿ ಬಿದ್ದ ರೆಕ್ಕೆ ಅವರನ್ನ ಮತ್ತದೆ ಜಾಗದಲ್ಲಿ ಕೂರುವಂತೆ ಮಾಡುತ್ತೆ.ಟಿಶ್ಯೂ ಪೇಪರ್ ನಲ್ಲಿ ಕಣ್ಣೀರೊರೆಸುತ್ತಾ.

ನಿನ್ನೆ ಒಂದು ಈ ರೀತಿಯ ಜೋಡಿಯನ್ನ ನೋಡಿದೆ,ಕಾಲೇಜು ಹುಡುಗ ಹುಡುಗಿಯರ ಗುಂಪೇ ಸೇರಿತ್ತು.ದೂರದಲ್ಲಿ ಕಾಲಿ ಇದ್ದ ಜಾಗದಲ್ಲಿ ಕುತೂಹಲದ ವೀಕ್ಶ್ಯಕನಾಗಿ ನಾನು ಅವರನ್ನೆಲ್ಲ ಗಮನಿಸುತ್ತಿದ್ದೆ.

ಒಂದು ಬದಿಯಲ್ಲಿ ಹುಡುಗಿಯರು ಸೇರಿದ್ದರೆ ಅವಳಲ್ಲಿ ಒಬ್ಬಳು ಕಣ್ಣತುದಿಯಲ್ಲಿ ಕಾಡಿಗೆ ಜಾರದಂತೆ ನೀರುತುಂಬಿಸಿಕೊಂಡಿದ್ದಳು.ಇನ್ನೊಂದು ಬದಿಯಲ್ಲಿ ಹುಡುಗರು ಸೇರಿದ್ದರೆ ಒಬ್ಬಾತ ನಾಳೆಯಿಂದ ಪ್ರಪಂಚದಲ್ಲಿ ಊಟಕ್ಕೆ ಏನೂ ಸಿಗೋದೇ ಇಲ್ವಲ್ಲಾ ಅನ್ನೋತರದಲ್ಲಿ ಸ್ವರ್ಗಸ್ತನಾದಂತೆ ಕುಳಿತಿದ್ದ.ಇದ್ದಕ್ಕಿದ್ದಂತೆ ಅವನು ತನ್ನ ಮೊಬೈಲನ್ನು ನೆಲಕ್ಕೆ ಜೋರಾಗಿ ಜಾಡಿಸಿಬಿಟ್ಟ ...ಬೇರೆಯವರು ಅದನ್ನು ಆಯತೊಡಗಿದರು...ಕೆಲವರು ಅವನಿಗೆ ಗದರತೊಡಗಿದರು...ಹುಡುಗಿಯರು ಅವನ ಸ್ಟಂಟ್ ಅಂದರು...ಕೆಲಹೊತ್ತಿನ ಮೌನದ ನಂತರ ಆ ಇಬ್ಬರು ಹುಡುಗ ಹುಡುಗಿಯನ್ನ ಅಲ್ಲೇ ಬಿಟ್ಟ ಮಿಕ್ಕವರು ದೂರದ ಟೇಬಲ್ಲಿನತ್ತ ಸರಿದರು.ಅವನು ಅವಳತ್ತ ಅವಳು ಅವನತ್ತ ಸರಿಯಲಿಲ್ಲ ಒಂದಷ್ಟು ಹೊತ್ತಿನ ನಂತರ ಇಬ್ಬರಿಗೂ ಮಧ್ಯೆ ಇದ್ದ ಟೆಬಲ್ಲಿನತ್ತ ತಮ್ಮನ್ನು ಕುಳ್ಳಿರಿಸಿಕೊಂಡರು...ಹಾಗೇ ಕೂತಿದ್ದ ಅವರ ಕುರ್ಚಿ ಬಿಸಿ ಆಯಿತೇ ಹೊರತು ಮಾತುಗಳು ಹೊರಡಲೇ ಇಲ್ಲ.

ನನಗೆ ಕುತೂಹಲ ಅವರಾಡುವ ಮಾತು ಎಂತದ್ದಿರಬಹುದೆಂದು.ನೋಡುತ್ತಲೇ ಇದ್ದೆ ಅಲ್ಲಿ ದುರುಗುಟ್ಟುವಿಕೆ...ಅಯ್ಯೋ ಅನ್ನಿಸಿಕೊಳ್ಳುವಿಕೆ...ಸ್ವಲ್ಪ ನಸುನಗಿಸಿಕೊಳ್ಳುವಿಕೆ...ಮತ್ತದೇ ಗಾಂಭೀರ್ಯ...ಯಾವ ಕರ್ಮಕ್ಕೆ ಹೀಗೆ ಎಷ್ಟು ಹೊತ್ತು ಕೂತಿರಬೇಕು ಎಂಬ ಚಡಪಡುವಿಕೆ...ಇಬ್ಬರಲ್ಲೂ ನಾನು ಮೊದಲು ಸೋಲಬಾರದೆಂಬ ಅಹಮಿಕೆ ಯಥೇಚ್ಚವಾಗಿ ನಡೀತ್ತಿತ್ತು.ಗುಂಪು ದೂರದಲ್ಲಿದ್ದುಕೊಂಡು ನಗುತ್ತಾ ಅವರಿಬ್ಬರನ್ನು ಕಿಚಾಯಿಸುತ್ತಾ ತಮಗೆ ಬೇಕಾದ್ದನ್ನ ಆರ್ಡರ್ ಮಾಡುತ್ತಾ ಅವರಿಬ್ಬರಿದ್ದ ಟೇಬಲ್ಲಿಗು ಪೇಷ್ಟ್ರಿ ಚಾಕೋಲೇಟ್ ಆರ್ಡರ್ ಮಾಡಿದ್ರು.
ಒಬ್ಬ ಹುಡುಗ ನನ್ನತ್ತ ಮುಖ ಮಾಡಿ ನಕ್ಕ ನನ್ನೆದುರು ಇದ್ದ ಒಂದು ಖಾಲಿ ಸೀಟಿನಲ್ಲಿ ಕೂರಬಹುದಾ ಎಂದು... ನೋಪ್ರಾಬ್ಲೆಮ್ ಅನ್ನೋಹಾಅಗೆ ನಾನೂ ಮಾಡಿದೆ, ಕೇಳೋಣ ಅನ್ನಿಸ್ತು... ನನ್ನಿಂದ ದೇಶಾವರಿ ನಗು ತನ್ನಿಂದ ತಾನೇ ಬಂತು ....ಮಾತು ಶುರು ಆಯಿತು.
.......
......
..........
....
..........ಇಷ್ಟೇ ವಿಷಯ.
ಅವನು ಕಷ್ಟ ಪಟ್ಟು ಸಂಪಾದಿಸಿದ ಅವಳ ಪ್ರೀತಿ....ಅವನು ಸ್ವಲ್ಪ ಫ್ಲರ್ಟ್ ಅಂತೆ....ಅಂತೂ ಎಲ್ಲ ಗೆಳೆಯರ ಒತ್ತಡಕ್ಕೆ ಸೋತು ಅವನ ಪ್ರೀತಿಯನ್ನು ವರಿಸಿದ್ದಾಳೆ ಅದಕ್ಕೆ ಇವತ್ತು ಟ್ರೀಟ್.... ಕಾಲೇಜಿಂದ ಬರ್ತಾ ಇವನಿಗೆ ಅದ್ಯಾವುದೋ ಕಾಲ್ ಬಂತಂತೆ.... ಹುಡುಗಿ ಧ್ವನಿಯದ್ದು....ಕಾಲೇಜಿಂದ ಇಲ್ಲಿವರೆಗೂ ಮಾತಾಡ್ತಿದ್ನಂತೆ ಇವಳ ಬಗ್ಗೆ ಗೊಡವೆಯೇ ಇರಲಿಲ್ವಂತೆ.....
ಇವಿಷ್ಟು ತಿಳಿದ ನಂತರ ನನ್ನಿಂದ ಒಂದು ಮಾತು ಹೊರಬಿತ್ತು ಎದುರಿದ್ದ ಹುಡುಗನಿಗೆ
ಇವರಿಬ್ಬರು ಮದುವೆ ಆಗ್ತಾರಾ?
ಮದ್ವೆಗೋಸ್ಕರನೇ ಪ್ರೀತಿ ಅಂದ್ರೆ ಎಷ್ಟು ಸರಿ ಸಾರ್
ಮೋಸ ,ಕೈಕೊಟ್ಟ ಹಾಗಾಗುತ್ತಲ್ಲ...?
ಇದ್ದಷ್ಟು ದಿನ ಜಾಲಿಯಾಗಿರೋದು ಮುಖ್ಯ ಸಾರ್... ಕಟ್ಕೊಳ್ಳೊವಷ್ಟರಲ್ಲಿ ಏನೇನಾಗುತ್ತೆ ಯಾರಿಗೊತ್ತು?
ಮಾತು ಕೇಳುತ್ತಿದ್ದ ಹಾಗೆ ಯೋಚನೆ ದೇವಕಿಯತ್ತ ಹೊರಳುತ್ತದೆ....ನಾನೂ ಹೀಗೆ ಯೋಚನೆ ಮಾಡಿದ್ದರೆ ಇಂದು ಇಷ್ಟು ಚಿಂತೆ ಆಗ್ತಿತ್ತಾ...ಮುಂದೆ ನೀನು ಹೇಗಾದ್ರು ಆಗು ನಾನು ಹೇಗಾದ್ರು ಇರ್ತೀನಿ ಅನ್ನೋ ಪಾಲಿಸಿ ಎಷ್ಟು ಸರಿ... ಒಟ್ಟಾರೆ ಪ್ರೀತಿಯೇ ಗೊಂದಲದ ಪದ ಅನ್ನಿಸ್ತು.ಎದುರಿಗಿದ್ದ ಹುಡುಗನಿಗೆ ಪ್ರೀತಿ ಅಂದ್ರೇನು ನಿಮ್ಮರ್ಥದಲ್ಲಿ ಅಂದೆ .ಆತ ಲವ್ ಲೆಸ್ ಲೈಫ್ ಈಸ್ ಗ್ಯಾಸ್ ಲೆಸ್ ಸೋಡಾ ಅಂದ.
ಕಮಿಟ್ಮೆಂಟ್ ಅಂದ್ರೆ ಮತ್ತೊಂದು ನನ್ನ ಪ್ರಶ್ನೆ ಅವನಿಗೆ ಬೇಡವಾಗಿತ್ತು ...ಕಮಿಟ್ಮೆಂಟ್ ಅರ್ಥ ಇಲ್ಲದ್ದು ನಮ್ಮನ್ನು ಕಿಲ್ಲ್ ಮಾಡುತ್ತೆ ಅಂದು ಆ ಇಬ್ಬರನ್ನು ತೋರಿಸಿದ ಅವರಿಬ್ಬರು ಈ ಹಿಂದೆ ನಮ್ಮಲ್ಲೇನೂ ನಡೆದೇ ಇಲ್ಲ ಎಂಬಂತೆ ಒಬ್ಬರ ಬಾಯಿಗೆ ಮತ್ತೊಬ್ಬರು ಪೇಷ್ಟ್ರಿ ತಿನ್ನಿಸಿಕೊಳ್ಳುತ್ತಿದ್ದರು ಇರೋವಷ್ಟು ಹೊತ್ತು,ದಿನ ಮಜವಾಗಿರೋದು ಪ್ರಾಕ್ಟಿಕಲ್ ಲೈಫ್ ಅಂದವನೆ ಹುಡುಗ ಎದ್ದು ಹೋದ.
ದೇವಕಿನೂ ಈ ಪಾಲಿಸಿ ಅಳವಡಿಸಿಕೊಂಡ್ಲಾ ...?ಹುಡುಗನ ಮಾತಲ್ಲೂ ನಿಜದ ಖನಿಜಾಂಶ ಗೋಚರಿಸುತ್ತಿತ್ತು...ಕಮಿಟ್ಮೆಂಟ್ ಸತ್ವ ಇಲ್ಲದ ವಿಷಕಾರಿ ಪ್ರೀತಿ ಅಂತಲೂ ಅನ್ನಿಸತೊಡಗಿತು.
ಹಾಗಿರುವಾಗಲೇ...
ನನ್ನೆದುರು ಖಾಲಿ ಇದ್ದ ಸೀಟಲ್ಲಿ ದೇವಕಿ ಬಂದು ಕೂತಂತೆ ಬಾಸವಾಯಿತು ನಾನೂ ನನಗೊತ್ತಿಲ್ಲದೆ ಪೇಷ್ಟ್ರಿ ಆರ್ಡರ್ ಮಾಡಿದೆ...
ಇವತ್ತಿಗೂ ನಾನು ನನ್ನ ದೇವಕಿ ಏನು ಇಷ್ಟ ಪಡುತ್ತಾಳೋ ಅದನ್ನು ತಿನ್ನುವಾಗ ಇಲ್ಲವೇ ಅವ್ಳಿಷ್ಟ ಪಡುವ ವಿಚಾರ ಯೋಚಿಸುವಾಗ ನನ್ನ ಜೊತೆಗೀಗ ಅವಳಿಲ್ಲದಿದ್ದರು ನನ್ನೆದುರು ಬಂದು ಕೂರುತ್ತಾಳೆ ...ಬಂದಿಲ್ಲ ಅಂದ್ರೆ ನಾನೆ ಕರೆದು ಕೂರಿಸುತ್ತೇನೆ ಮನಪ್ರೀತಿಯಿಂದ.

Tuesday, September 15, 2009

ಪ್ರೀತಿ ಅಂದ್ರೆ ಋಣವಾ?

ಇಷ್ಟಕ್ಕೂ ಪ್ರೀತಿ ಅಂದ್ರೆ ಏನು?


ಹೀಗೆ ನಾನು ಯೋಚಿಸುತ್ತಾ ಕುಳಿತಿದ್ದಾಗ ಅದು ಅರ್ಧ ಬೆಂದ ಸಂಜೆ. ಎಪ್ಫೆಮ್ಮಿನಲ್ಲಿ ಎದೆ ಚಿವುಟುವ ಹಾಡು. "ಅನುರಾಗ ರಾಗ ಶುಭಯೋಗ ಯೋಗ ನಮಗೆ\ ನರನಾಡಿ ನಾಡಿ ಸ್ವರ ಹಾಡಿ ಹಾಡಿ ಕೊನೆಗೆ\ ಹಸಿವಾಗದು, ಬಾಯಾರದು, ನಿದಿರೇನೇ ಯಾಕೋ ಬರದು... ಇದೇನಾ ಪ್ರೇಮ.. ಇದೇನಾ?!" ಹರಿಹರನ್ ಕಂಠದಲ್ಲಿ ಹಾಡು ಕೇಳುತ್ತಿದ್ದರೆ ಅದೊಂಥರಾ ಅಮಲು. ಹೌದಾ? ಅದೇನಾ ಪ್ರೇಮ? ಹೀಗೆ ಕಣ್ತುಂಬಾ ಪ್ರಶ್ನೆಗಳನ್ನಿಟ್ಟು ಕುಳಿತುಕೊಂಡಿದ್ದರೆ ಸೂರ್ಯನೂ ಉತ್ತರಿಸದೇ ತೆಪ್ಪಗೇ ಮುಳುಗಿಹೋದ. ಆಗಸದ ತೋಟದ ತುಂಬಾ ನಿದ್ದೆಯಿಂದ್ದೆಂತಹ ನಕ್ಷತ್ರಗಳು ಅರೆಕಂಗಳಲ್ಲೇ ನೋಡುತಿವೆ, ಇವ ಏನಾದರೂ ತನಗೆ ಆ ಪ್ರಶ್ನೆ ಕೇಳಿಬಿಟ್ಟರೆ ಅಂತ ಭಯವಿರಬೇಕು!


ಯಾವುದೋ ಪುಸ್ತಕ ತೆಗೆದು ಕಣ್ಣಾಡಿಸಿದರೆ " ಪ್ರೀತಿಯೆಂದರೆ ಅಮೃತ" ಅಂತಿತ್ತು. ಹಾಗಾದರೆ ಕೆಲವರು ಯಾಕೆ ವಿಷ ತಗೊಳ್ಳುತ್ತಾರೆ? ಪ್ರೀತಿಯೆಂದರೆ ಬದುಕು ಅಂತಿತ್ತು, ಹಾಗಿದ್ದರೆ ಪ್ರೀತಿಯಲ್ಲಿ ಬಿದ್ದು ಸಾಯೋದೇಕೆ? "ಪ್ರೀತಿಯೆಂದರೆ ಗೆಲುವು?" ಮತ್ತ್ಯಾಕೆ ಕೆಲವರು ಸೋಲನುಭವಿಸುತ್ತಾರೆ? ಪ್ರೀತಿ ಸೋಲೇ ಆದರೆ ಮತ್ತ್ಯಾಕೆ ಕೆಲವರು ಮಾತ್ರ ಗೆಲ್ಲುತ್ತಾರೆ? "ಪ್ರೀತಿಯೆಂದರೆ ದೇವರು", ಹಾಗಾದರೆ ಕೈಕೊಟ್ಟ ಹುಡುಗ ಹುಡುಗಿಯರಿಂದಾಗಿ ಪರಿತಪಿಸುವ ಜೀವಗಳಿಗೆ ಆ ಅಪರಿಮಿತ ವಿರಹದ, ನೋವಿನ ಶಿಕ್ಷೆ ಯಾಕೆ ನೀಡುತ್ತಾನೆ?


ಪ್ರೀತಿಯೆಂದರೆ ಕಾಮವೇ ಅಂದುಕೊಂಡರೆ ಆಗಲೇ ವಾಕಿಂಗ್ ಮುಗಿಸಿ ವೃದ್ಧ ದಂಪತಿಗಳು ಒಬ್ಬರ ಕೈ ಇನ್ನೊಬ್ಬರು ಅಗಲಲಾಗದಂತೆ ಹಿಡಿದುಕೊಂಡು ನಗುತ್ತಾ ಹೋಗುತ್ತಿದ್ದುದು ಕಣ್ಣಿಗೆ ಬಿತ್ತು. ಪ್ರೀತಿಯನ್ನು ಅವಶ್ಯಕತೆ ಅಂದುಕೊಂಡರೆ ಅವಶ್ಯಕತೆಯೆಲ್ಲವನ್ನೂ ಮೀರಿದ್ದ ಎಷ್ಟೋ ಸಂಬಂಧಗಳು ಮನಪಟಲದಲ್ಲಿ ಹಾದುಹೋದವು.


ನಿಜಕ್ಕೂ ಈ ಪ್ರೀತಿ ಎಂದರೇನು?


ಒಂದು ಪ್ರಶ್ನೆ ಮಾತ್ರ ಭೂತವಾಗಿ ನನ್ನೆದುರು ನಿಂತಿದೆ, ಕಾಡುತಿದೆ


ಪ್ರೀತಿ ಅಂದರೆ ಋಣವಾ?


ನಾನು ನೀನಿತ್ತ ಸಾಲ ವಾಪಸ್ಸು ನೀಡಿದ ಬಳಿಕ ಪ್ರೀತಿ ಇರುವುದಿಲ್ಲವಾ? ಪ್ರೀತಿ ಮುಗಿದುಹೋಗುತ್ತಾ?


ಈ ಕ್ಷಣ ಯಾಕೋ ನಕ್ಷತ್ರಗಳು, ಚಂದಿರ ಮೋಡದಲ್ಲಿ ಮುಖಮರೆಸಿಕೊಂಡಿದೆ. ಈ ಪ್ರಶ್ನೆಯ ಈಟಿ ಎದೆಯ ಮೂಲೆಯೊಂದರಲ್ಲಿ ಬಲವಾಗಿ ನಾಟಿದೆ. ಯಾಕೋ ಬೆನ್ನಹಿಂದೆ ಪುಟ್ಟ ಭಯ ಶುರುವಾಗಿದೆ ದೇವಕೀ.

Friday, September 11, 2009

ಕ್ಷಮಿಸಿ,ಮುಂದುವರೆಸಲು ಕಷ್ಟ ಆಗ್ತಿದೆ...

ಕುಗ್ರಾಮ,ಸರಕಾರವೇ ಸಾರಿಬಿಟ್ಟಿದೆ.ಕುಗ್ರಾಮದಲ್ಲಿ ಇರುವ ಕೆಲವು ಮನೆಗಳಲ್ಲೂ ಹಲವರ ಗಮನಕ್ಕೆ ಕಣ್ಣಿಗೆ ಬೀಳದ ಮಳೆಗಾಲದಲ್ಲಿ ಬೊಬ್ಬಿಟ್ಟು ಹರಿಯುವ ತೊರೆ ಬೇಸಿಗೆಯಲ್ಲಿ ತನ್ನಿರುವಿಗಷ್ಟೇ ಬಾಯಾರಿಕೆಯ ನೀರಿಟ್ಟುಕೊಳ್ಳುತ್ತದೆ.ಅದರ ಅಂಕುಡೊಂಕಿನ ಸಂದಲ್ಲಿ ಅಡಿಕೆಮರದ ಸೋಗೆಯ ಗುಡಿಸಲು,ಒಬ್ಬನೇ ವಾಸ ಇರುವ ಗುಡಿಸಲು.ಯಾರ ತಂಟೆಗೂ ಹೋಗದ ಯಾರ ಮುಖವನ್ನೂ ನೋಡಲಿಚ್ಚಿಸದ ಅರೆಗೂನುಬೆನ್ನಿನ ಮಧ್ಯವಯಸ್ಕ ಅದರೊಡೆಯ.ಗೆಣಸು ಬೆಳೆಸಿ ತಿನ್ನುತ್ತನೆ ಕೆಲಸೇರಷ್ಟೇ ಬೆಳೆಸುವ ಬತ್ತವನ್ನು ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡಿ ಉಣ್ಣುತ್ತಾನೆ.ಅದರ ತವುಡನ್ನೂ ಬಿಡದೆ ಕುದಿಸಿ ಕುಡಿಯುತ್ತಾನೆ ಇಷ್ಟಕ್ಕೋ ಬಡತನಕ್ಕೋ ಅಥವಾ ಆಹಾರಕ್ಕೂ ಬೇರೆಕಡೆ ಹೋಗೋದು ಬೇಡ ಎಂದೋ...ಮೀನುತಿನ್ನುವ ಬಾಯಿಚಪಲಕ್ಕೆ ಮಳೆಗಾಲದಲ್ಲಿ ಮೈಗೆ ಪ್ಲಾಸ್ಟಿಕ್ ಸುತ್ತಿಕೊಂಡು ಗಾಳ ಹಾಕುತ್ತಾನೆ,ಬೇಸಿಗೆಯಲ್ಲಿ ಅದೇಬತ್ತಿಹೋಗುವ ತೊರೆಯಲ್ಲಿ ಕಾಲ್ಲುಗಳ್ನ್ನು ಸರಿಸಿಯೋ ಇಲ್ಲ ಚಿಕ್ಕ ಚಿಕ್ಕ ಬಿಲಗಳಿಗೆ ಕೈ ಹಾಕಿಯೋ ಏಡಿ ಹಿಡಿಯುಇತ್ತಾನೆ.ಆಗಲೂ ಜನರ ಕಣ್ಣಿಗೆ ಜಾಸ್ತಿಯಾಗಿ ಬಿದ್ದವನಲ್ಲಹೀಗಿರುವ ಆಅರೆಬೆನ್ನಿನವನ ಬಗ್ಗೆ ಕಳ್ಳು ಕುಡಿದು ಬೀಡಿಸೇದುವವರ ಬಾಯಲ್ಲಿ ಮಾತಲ್ಲಿ ತೇಲಿಹೋಗಿದ್ದನಷ್ಟೆ.ಯಾವುದೇ ಸರಕಾರಿ ಧಾಖಲೆಗಳಿಲ್ಲದ ಜೀವನ ಅವನದಾಗಿತ್ತು.

ಅದೊಂದುವರುಷದ ಜಡಿಮಳೆಯ ದಿನ ಬರುವವರೆಗೂ ಆ ಪುಟ್ಟ ಸೋಗೆ ಮನೆಯ ಬೆತ್ತಲಸತ್ಯ ಬೆತ್ತಲಾಗಲೇ ಇಲ್ಲ.ಜೋರಾದ ಗಾಳಿಗೆ ತೆಂಗಿನ ಮರ ಇನ್ನು ಬಗ್ಗಿದರೆ ಸಾವೇ ಅನ್ನುವಷ್ಟು ವಾಲುತ್ತಿದೆ,ಈ ಹಿಂಸೆ ಇನ್ನುಬೇಡ ಅಂದುಕೊಂಡ ಕೆಲ ಅಡಿಕೆಮರಗಳು ತುಂಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವು...ಗೊನೆಹೊತ್ತು ಭಾರವಾಗಿದ್ದ ಬ್ಬಳೀಎ ತಾಯ್ತನವೆಸಾಕೆಂದು ನೆಲದಪ್ಪುಗೆಗೆ ಮಲಗೇ ಬಿಟ್ಟವು...ತೊರೆಯಲ್ಲಿಕೆಂಪುನೀರು ಹಲಸು ತೆಂಗಿನಕಾಯಿಗಳನ್ನು ತೇಲಿಸುತ್ತ ಕುದುರೆಜಿಗಿತದೊಂದಿಗೆಆಚೀಚೆಯ ತೋಟಗದ್ದೆಗಳನ್ನು ಸವರುತ್ತಾ...ಒಂದಷ್ಟು ಹೊತ್ತಿಗೆ ಇಡಿಯಾಗಿ ನುಂಗಿಬಿಟ್ಟಿತ್ತು.ಮನಸ್ಸಿಗೆ ಮಂಪರು ಕವಿದಂತೆ ಆದಿನದ ವಾತಾವರಣಕ್ಕೂ ರಭಸದ ಮಳೆಯ ಮಂಪರು ಕವಿದಿತ್ತು,ಅಸ್ಪಸ್ಟ ಚಿತ್ರಣದಲ್ಲೂ ಮಿಂಚಿನ ಸ್ಪಸ್ಟತೆಯಗೆರೆಗಳು ಜೋರಾಗೇ ತನ್ನತನವನ್ನು ಮೂಡಿಸಿಹೋಗುತ್ತಿತ್ತು.ಹಗಲಲ್ಲೂ ಕತ್ತಲು ಬೆಳಕಿನಾಟದಲ್ಲಿ ಅಂಕುಡೊಂಕಿನ ಸಂದಿನಲ್ಲಿದ್ದ ಸೋಗೆ ಮನೆ...ಶಿಥಿಲವಾಗುತ್ತಾ ಹೋಗುತ್ತಿತ್ತು...ಆಮನೆಯ ಗೋಡೆಗೆ ಹಿಂಸೆಯ ಹೆರಿಗೆನೋವು ಕಾಡುತ್ತಿತ್ತು....ತನ್ನನ್ನು ಬಗಿದುಕೊಳ್ಳಲೆಂದೇ ಈ ಪರಿಯ ಮಳೆಯನ್ನು ಅದುಬೇಡಿಕೊಂಡಿತ್ತೋ ಏನೋ...ಮಳೆಗೆ ಇನ್ನಷ್ಟು ಮತ್ತಷ್ಟುತನ್ನನ್ನು ತೋಯಿಸಿಕ್ಪೊಳ್ಳುತ್ತಾ ಇಂಚಿಂಚಾಗಿ ಬಾಯಿತೆರೆಯತೊಡಗಿತು.

ಆಮನೆಯಾಲ್ಲ್ಲಿ ಅಲ್ಲಿಯವರೆಗೂ ಇರದ ಹೊರಜಗತ್ತಿಗೆ ಕಾಣದ ಜೀವವೊಂದು ಸುರಿಯುವ ಆ ಮಳೆಗೆ ತೆವಲುತ್ತ ಸೇರಿಸಿಕೊಂಡಿತು.ಅರೆಪ್ರಾಯದ ಹೆಣ್ನುಮಗಳು...ಕೈ ಕಾಲು ಬಾಯಿಗೆ ಬಟ್ಟೆಬಿಗಿದ ಸ್ಥಿತಿಯಲ್ಲಿ..ಅದೆಷ್ಟೋವರ್ಷಗಳಿಂದ ಜಗತ್ತಿನ ಬೆಳಕನ್ನು ನೋಡದ ಜೀವ...ಬಿರುಸು ಮಳೆಯಲ್ಲೂಪ್ರಪಂಚದ ಕಣ್ಣಿಗೆಬಿದ್ದಳು.ಪುಟ್ಟ ಕಂದನಂತೆ ತೆವೆಳುತ್ತ ತೆವಳುತ್ತಾ ರೋದಿಸುತ್ತ.ಅವಳ ಹಿಂದೆ ಅರೆಗೂನುಬೆನ್ನಿನ ಮನುಷ್ಯ ಕರಿನೆರಳಿನಂತೆ ಅವನೂ ನೆನೆಯುತ್ತ ಸ್ಪಷ್ಟವಾಗತೊಡಗಿದ ತುಕ್ಕುಹಿಡಿದಕತ್ತಿಯನ್ನು ಗಟ್ಟಿಯಾಗಿ ಹಿಡಿದಿದ್ದ.ಮೇಲಿನ ಮನೆಯ ರಾಮಣ್ಣ ರೈ ಗಳ ನಾತಿ ನೀರಲ್ಲಿ ಕೊಚ್ಚಿಹೋಗುತ್ತಿತ್ತು ಕೆಲಸದಾಳುಗಳು ಅದನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊರೆಯ ಆಚೀಚೆ ನುಗ್ಗಿದ ನೀರಲ್ಲಿ ನೆಗೆಯುತ್ತ ಬರುತ್ತಿದ್ದವರಿಗೆ ಆ ಸೋಗೆಮನೆಯ ಇಬ್ಬರು ಕಾಣಿಸುತ್ತಾರೆ.ಅವರನ್ನು ಕಂಡ ಕೆಲಸದಾಳುಗಳು ಜೋರಾದ ದ್ವನಿಯಲ್ಲಿ ಹೋಯ್ ಹೋಯ್ ಎಂದು ಕಿರುಚಾಡುತ್ತಾರೆ. ಅನಿರೀಕ್ಷಿತವಾದ ಈ ಘಟನೆಯಿಂದ ಗಾಭರಿಯಾದ ಅರೆಗೂನುಬೆನ್ನಿನವ ಹಿಂದೆಸರಿಯುತ್ತಾನೆ ಅವಳನ್ನು ಕಡಿಯಬೇಕಿದ್ದ ಕೈಯಿಂದ ಕತ್ತಿ ಕೆಳ ಬೀಳುತ್ತದೆ.ರೈಗಳ ನಾಯಿ ಕುಯ್ ಕುಯ್ ಅಂದುಕೊಂಡೇ ನೋಟದಿಂದಾಚೆ ಸರಿಯುತ್ತದೆ.ಅರೆಗೂನುಬೆನ್ನಿನವ ಕೆಲಸದಾಳುಗಳಿಂದ ತಪ್ಪಿಸಿಕೊಳ್ಲುವ ಪ್ರಯತ್ನದಲ್ಲಿ ರಭಸವಾಗಿ ತೊರೆಯಾಚೆ ಜಿಗಿಯುತ್ತಾನೆ...ಲೆಕ್ಕಾಚಾರ ತಪ್ಪಿಹೋಯ್ತು,ಮಳೆಯ ಚಳಿ ಕಾಲುಗಳಿಗೆ ನಡುಕ ಹತ್ತಿಸುತ್ತವೆ ತೊರೆಅವನ ಕಾಲುಗಳನ್ನುಹಿಡಿದೆಳೆಯುತ್ತದೆ...ಆಳಕ್ಕೆ...ಅವಳ ಕಟ್ಟು ಬಿಡಿಸಲಾಯಿತು,ರೈಗಳ ನಾಯಿ ಹೇಗೋ ದಡ ಸೇರಿ ಕೆಲಸದವರನ್ನು ಸೇರಿಕೊಂಡಿತು...ಅವರು ಅರ್ಧದಲ್ಲೆ ನಿಂತಿದ್ದಕ್ಕೆ ಅದಕ್ಕೆ ಬೇಜಾರಿಗೋ ಅಥವಾ ಒಳ್ಳೆಯದೇ ಆಯಿತೆಂದೋ ಕುಯ್ ಕುಯ್ ಅನ್ನತೊಡಗಿ ಮೈಕೈ ನೆಕ್ಕತೊಡಗಿತು.ಋತುಮಾನಗಳು ಬದಲಾಗಿದೆಆ ನಾಯಿಯನ್ನು ಕಾಡಿಬೇಡಿ ರಾಮಣ್ಣರೈಯವರಿಂದ ಪಡೆದು ಅವಳು ಜೀವದ ಹಾಗೆ ನೋಡಿಕೊಳ್ಳುತ್ತಿದ್ದಾಳೆ,ಅವಳ ಮನೆ ತೊರೆಯಿಂದ ಸ್ವಲ್ಪಮೇಲೆ ಊರವರಿಂದ ಹೆಂಚುಹಾಕಿಸಿಕೊಂಡು ನಿಂತಿದೆ...ಬೆತ್ತಲೆ ಸತ್ಯ ಇನ್ನೂ ಕತ್ತಲೆಯಲ್ಲಿ ಅಡಗಿದೆ... ಕಷ್ಟ ಆಗ್ತಿದೆ ಆದ್ರು ಪ್ರಯತ್ನ ಮಾಡ್ತೀನಿ... ಅಮ್ಮ ಸತ್ತ ಆ ಮಗಳನ್ನು ಋತುಮತಿಯಾದ ನಂತರ ಬಂದಿಸಲಾಗಿತ್ತು...ಕೈ ಕಾಲು ಬಾಯಿ ಕಟ್ಟಲಾಗಿತ್ತುಹುಟ್ಟುರೂಪದಲ್ಲೆ...ನಂತರ ಕಳೆದದ್ದು ಹಲವು ಮಳೆ ಬಿಸಿಲು ಚಳಿಗಳ ವರ್ಷಗಳು.... ಅವಳದೇ ಅಪ್ಪ...

ಕ್ಷಮಿಸಿ,ಮುಂದುವರೆಸಲು ಕಷ್ಟ ಆಗ್ತಿದೆ....

Saturday, September 5, 2009

ಹೀಗೊಂದು ಜೋಗುಳ

ಅಮ್ಮಾ ...ಕಣ್ಮುಚ್ಚಿ... ಮನಬಿಚ್ಚಿ...ದೀರ್ಘ ಉಸಿರು ತೆಗೆದು ಆ ಉಸಿರಿಗೆ ಮೆಲುಧ್ವನಿ ಸೇರಿಸಿ ನಿಧಾನಕ್ಕೆ ಅಮ್ಮಾ ಎಂದು ಹೇಳಿಕೊಂಡಾಗ...ಅದೆಷ್ಟು ಫ್ಲಾಷ್ ಬ್ಯಾಕ್ ದ್ರಷ್ಯಗಳು ಹಾದು ಹೋಗುತ್ವೋ...ಅವೆಷ್ಟು ಸರ್ತಿ ಅಮ್ಮ ನಕ್ಕಿದ್ದು ಅತ್ತಿದ್ದು ಗದರಿದ ಮುಖಭಾವದ ಫೋಟೊಗಳು ಕ್ಲಿಕ್ಕಿಸಿಕೊಂಡಂತಾಗುವುದೋ... ನಾವು ಹೀಗೆ ಪ್ರಯತ್ನಿಸಿದರೆ ಅಮ್ಮನ ಬಗ್ಗೆ ಸುಂದರವಾದ ಭಾವಗೀತೆಗಳನ್ನ ಬರೆಯಬೇಕೆಂದಿದ್ದರೆ ಬರೆಯಬಹುದು, ಆ ಭಾವಗೀತೆಗೆ ಪದಗಳ ಸಾಲು ಸಿಗದೇ ಇದ್ದರೆ ಇದಿಷ್ಟು ಮಾಡಿದರೆ.... ಭಾವಗೀತೆಯ ಚಿತ್ರಣವಾದರೂ ಸಿಗುತ್ತದೆ. ಕೋಟಿ ಕೋಟಿ ಅಮ್ಮಂದಿರಲ್ಲಿ ಒಬ್ಬಾಕೆ ಅಮ್ಮನ ಗುಡಿಸಲ ಬಾಗಿಲಿಗೆ ಹೋಗೋಣ್ವ.ಮುದರು...ಹೆಸರು ಕೇಳುವುದಕ್ಕೆ ವಿಚಿತ್ರ ಅನ್ನಿಸುತ್ತೆ, ಹೆಸರಲ್ಲೇನಿದೆ...ಮುದರು ಸ್ವಲ್ಪ ಎಡವಟ್ಟಾದರು ಈ ಹೆಸರು ಮುದುರು ಆಗಬಹುದು.ಮುದರುವಿನ ಬದುಕೇ ಕಾಡುಗಳ ಮಧ್ಯೆ ಐದು ಗುಡಿಸಲುಗಳಲ್ಲಿ ಒಂದರಲ್ಲಿ ಮುದುರಿಕೊಂಡಿತ್ತು.ತಾಯಿ ಪ್ರೀತಿಯ ಅದಷ್ಟೂ ಮಮಕಾರಗಳನ್ನು ತಬ್ಬಿಕೊಂಡು.ಈ ಗುಡಿಸಲುಗಳಿಗೆ ಪರ್ಲಾಂಗಿನಷ್ಟು ದೂರದಲ್ಲಿ ಬಚ್ಚಿರೆ ಭಟ್ಟರ ತೋಟದ ಮನೆ ಅಲ್ಲಿ ಮುದರು ಮತ್ತು ಅವಳ ಗಂಡ ಮೋಂಟನಿಗೆ ದಿನಕೆಲಸ.ಮುದರುವಿನ ಮನೆಯಲ್ಲಿ ಎರಡುಮೂರು ಬೊಗ್ಗಿಗಳು (ಬೊಗ್ಗಿ-ಹೆಣ್ಣು ನಾಯಿ)ಪ್ರತಿವರ್ಷದಂತೆ ಮರಿಹಾಕಿದಾಗ ಗಂಡುಮರಿಗಳನ್ನು ಭಟ್ಟರ ಮನೆಗೆ ಕೊಡಬೇಕು ಹೇಣ್ಣಾದರೆ ತಾನೇ ಸಾಕಬೇಕು.ಮುದರುವಿನ ಮನೆಯ ಬೊಗ್ಗಿಗೆ ಒಳ್ಳೆಯ ಹೆಸರು ಇದ್ದಿದ್ದರಿಂದಾಗಿ ಹೆಣ್ಣುಮರಿಗಳಿಗೂ ಬೇರೆಯವರಿಂದ ಬೇಡಿಕೆ ಇತ್ತು.ಯಾರೇ ಮರಿಕೇಳುವುದಕ್ಕೆ ಬಂದರೂ ಅನ್ನ ಹಾಕುವುದು ಕಮ್ಮಿಯಾದರೂ ಪರವಾಗಿಲ್ಲ ಪ್ರೀತಿ ಕಮ್ಮಿ ಮಾಡಬೇಡಿಪಾಪ ಮಾತು ಬರದವು ಅಂತಾಳೆ ಮುದರು.ಮರಿಗಳನ್ನು ನಿಮಗೆ ಕೊಡುತ್ತಿಲ್ಲ ನನ್ನ ಮಕ್ಕಳನ್ನ ಕೋಡುತ್ತಿದ್ದೇನೆ ಎಂದು ಹೇಳುತ್ತಲೇ ನಾನು ಒಂದು ರೀತಿ ನಿಮ್ಮ ಮ್ಮನೆಗೆ ಬೀಗತಿ ಇದ್ದ ಹಾಗೆ ಅಂದು ಬಾಯಿತುಂಬ ನಗುತ್ತಾಳೆ.ಮುದರುವಿಗೆ ಇಬ್ಬರು ಮಕ್ಕಳು ದೊಡ್ಡವನಿಗೆ ಎರಡೂವರೆ ವರ್ಷ ಚಿಕ್ಕವಳಿಗೆ ಹನ್ನೊಂದು ತಿಂಗಳು .ತಾವಿಬ್ಬರು ದುಡಿಯುವುದರಲ್ಲಿ ಸಂಸಾರ ಮತ್ತು ನಾಯಿ ಸಂಸಾರನೂ ಸಾಗಿಸಬೇಕಿತ್ತು ಗಂಡ ಮೋಂಟನಿಗೂ ಇದು ಬೇಸರ ತರುವ ವಿಚಾರ ಆಗಿರಲಿಲ್ಲ, ಬದಲಾಗಿ ಸಂಜೆ ಹೊತ್ತಲ್ಲಿ ಕಳ್ಳು ಕುಡಿದು ರಾತ್ರಿ ಮನೆಗೆ ಬಂದ ನಂತರ ನೀನು ನನ್ನಯಾಕೆ ಮದುವೆ ಆದೆ ಒಂದು ಒಳ್ಳೆ ನಾಯಿನೆ ನೋಡಿ ಆಗಬಹುದಿತ್ತಲ್ಲ ಅಂದಾಗ ಮುದರು ಇದ್ದಿದ್ದರಲ್ಲಿ ದಪ್ಪಗಿರುವ ನಾಯಿಯ ಬೆನ್ನು ಚಪ್ಪರಿಸುತ್ತ ಮದುವೆಯ ಸಂದರ್ಭ ನೀನೂ ಹೀಗೇ ಇದ್ದೆ ಎಂದು ರೇಗಿಸುವಳು ಆಗ ಮೋಂಟ ಅವಳಿಗಾಗಿ ಕುಪ್ಪಿಯಲ್ಲಿ ತಂದ ಕಳ್ಳನ್ನು ತಾನೇ ಕುಡಿಯುತ್ತ ಜೋರಾಗಿ ಸಂದಿ ಹಾಡುತ್ತ ಗಂಜಿಯ ಬಟ್ಟಲಿನ ಮುಂದೆ ಕೂರುತ್ತಿದ್ದನು.ಒಂದು ದಿನ...ಮುದರುವಿನ ಮನೆಯಲ್ಲಿ ರಾತ್ರಿಯವರೆಗೂ ಆರೋಗ್ಯವಾಗೇ ಇದ್ದ ಬೊಗ್ಗಿ ಮಿಣ್ಕು ಅಸುನೀಗುತ್ತದೆ ಮೋಂಟ ಇದು ಭೂತದ ಪೆಟ್ಟು ಅಂತಾನೆ.ಮುದರು ಅಳುತ್ತಾಳೆ ಮೋಂಟ ಸಮಾಧನಿಸುತ್ತಾನೆ.ಮಿಣ್ಕು ಮೂರುಮರಿಗಳನ್ನ ಅನಾಥವನ್ನಾಗಿಸಿ ಹೆಣವಾಗಿದ್ದಾಳೆ.ಆ ನಂತರ ಗೊತ್ತಗಿದ್ದು ಮಿಣ್ಕು ಸತ್ತಿದ್ದು ಬೊಮ್ಮಣ ಪೊಜಾರಿಯವರು ಇಟ್ಟ ವಿಷಕ್ಕೆ.ಇದಾದನಂತರ ಒಂದೆರಡು ದಿನ ಮುದರುವಿಗೆ ಕೆಲಸಕ್ಕೆ ಹೋಗಲಾಗಲಿಲ್ಲ ಮರಿಗಳು ಅಳುತ್ತಿದ್ದವು...ಭಟ್ಟರ ಕೊಟ್ಟಿಗೆ ಸೊಪ್ಪು ಹಾಕದೆ ಹಸುಗಳು ಹಾಲು ಕೊಡುತ್ತಿರಲಿಲ್ಲ.ಮಾರನೆಯ ದಿನ ಬೆಳ್ಳಂಬೆಳಗ್ಗೆ ಭಟ್ಟರು ದೂರದಿಂದ ಕೂಗುತ್ತಾ ಬಂದರು ಅವರುಗೂ ಸತ್ತ ನಾಯಿ ಭಯ ಇತ್ತು.ಭಟ್ಟರ ಕೂಗಿಗೆ ಮೋಂಟ ಇನ್ನೋಂದು ಬದಿಯಿಂದ ಓಡಿಹೋಗಿ ಅವರ ಹಿಂದೆಯೇ ನಿಂತು ಅವನೂ ಕೂ ಹಾಕಿ ಏನೆಂದು ಕೇಳುತ್ತಾನೆ .ನೀನೆಲ್ಲಿದ್ದೆ ಅಂದಾಗ ತೋಟದಲ್ಲಿದ್ದೆ ನಿಮ್ಮ ಕೂ ಕೇಳಿ ಹೀಂದೆನೇ ಒಡಿಬಂದೆ ಅನ್ನುವುದು ಮುದರುವಿಗೆ ಕೇಳಿ ನಿನ್ನೆ ರಾತ್ರಿ ತೋಟದಲ್ಲೇ ಮಲಗಿದ್ದ ಎಂದು ನಗುತ್ತಾಳೆ ಮೋಂಟ ಹೌದು ಅಡಿಕೆ ಕಾಯುತ್ತಿದ್ದೆ ಅಂದಾಗ ಭಟ್ಟರಿಗೆ ಸಂಬಳ ಕೊಡುವು ಸಾರ್ಥಕ ಅನ್ನಿಸುತ್ತದೆ.ಎರಡುದಿನದಿಂದ ಕೆಲಸಕ್ಕೆ ಬಾರದ ಮುದರುವಿಗೆ ಗದರದಿದ್ದರೆ ಸರಿ ಇಲ್ಲ ಅಂದವರೇ ಭಟ್ಟರು ಎರಡು ಹೆಜ್ಜೆ ಮುಂದೆ ಹೋಗಿ ಎಲೆಯಡಿಕೆ ಹಾಕಿದ ಅಗಲಬಾಯಿ ತೆರೆದವರೆ ಸುಮ್ಮನಾಗುತ್ತರೆ ಮಾತೇ ಹೊರಡುವುದಿಲ್ಲ.ಮುದರುವಿನ ಎತ್ತರದೆದೆ ಅವರ ಕಣ್ನು ಸೆಳೆಯುತ್ತದೆ ದೂರದಲ್ಲಿರುವ ಅವಳ ಅರೆನಗ್ನ ಮಗನೂ ನಗ್ನ ಮಗಳು ಕಾಣಿಸುತ್ತಾಳೆ...ಆದರೂ ಭಟ್ತರಿಗೆ ಅಲ್ಲಿಂದ ಕಣ್ಣು ಕದಲಿಸಲಾಗುವುದಿಲ್ಲ ಮೋಂಟ ಅವರ ಹತ್ತಿರ ಬರುತ್ತಾನೆ ಅವರನ್ನೂ ಹೆಂಡತಿಯನ್ನೂ ನೋಡುತ್ತಾನೆ ,ಹೆಂಡತಿಗೆ ಆಚೆ ಹೋಗುವಂತೆ ಕೈಸನ್ನೆ ಮಾಡುತ್ತಾನೆ ಅವಳು ನೋಡಲೇ ಇಲ್ಲ,ಭಟ್ಟರ ತೆರೆದ ಬಾಯಿ ಕಣ್ಣುಗಳು ಹಾಗೇ ಇದ್ದವು.ಮುದರುವಿನ ಉಬ್ಬಿದ ಸೆರಗಡಿಯಿಂದ ಒಂದು ನಾಯಿಮರಿ ಜಾರಿ ಕೆಳಗೆ ಬೀಳುತ್ತದೆ.ಅದರ ಬಾಯ ಕೊನೆಯಲ್ಲಿರುವ ಹಾಲಿನ ಹಸಿ ಹಸಿ ಹನಿಯನ್ನು ನಾಲಿಗೆಯಿಂದ ಸವರಿಕೊಳ್ಳುತ್ತದೆ.ಸೆರಗೊಳಗೆ ಇನ್ನೂ ಎರಡು ಮರಿಗಳಿರುವುದು ಭಟ್ಟರಿಗೆ ಅರಿವಿಗೆ ಬಂತು. ಮೋಂಟ ಮೆತ್ತಗೆ ಅವರ ಕಿವಿಗುಸಿರಿದ ಮೊನ್ನೆ ಮಿಣ್ಕು ತೀರ್ಕೊಂಡ್ಲು ಈಗ ಇವಳೇ ಮರಿಗಳಿಗೆ... ಇದ್ಯಾವುದರ ಪರಿವೆಯೇ ಇಲ್ಲ ಅನ್ನುವಂತೆ ಮುದರು ಜಾರಿ ಬಿದ್ದ ಮರಿಯನ್ನು ಮತ್ತೆ ಸೆರಗೊಳಗೆ ಸೇರಿಸುತ್ತಾ ಮೆತ್ತಗೆ ಆ ಮರಿಗಳಿಗೆ ಗದರತೊಡಗಿದಳು .ಯಾಕೆ ಅವಸರ ಪಟ್ಕೋತಿದ್ದೀರಾ...ಅವಳ ಮುಂದೆ ಕುಳಿತು ತಾಯಿಯನ್ನೇ ನೋಡುತ್ತಿದ್ದ ಮಕ್ಕಳ ಮುಖದಲ್ಲಿ ಗೊತ್ತಿರದ ಕಿರುನಗು ಆಗಾಗ ಬಂದು ಹೋಗುತ್ತಿತ್ತು.ಮೋಂಟನಿಗೆ ಭಟ್ಟರು ಮುದರು ಹತ್ತು ದಿನ ಕೆಲಸಕ್ಕೆ ಬರುವುದು ಬೇಡ ಸಂಬಳ ಕಟ್ಟು ಮಾಡುವುದಿಲ್ಲ ಅಂದು ತುಂಬಿಕೊಂಡ ಕಣ್ಣೀರು ಒರಸುತ್ತಾ ಹಿಂತಿರುಗಿದರು.ಅಮ್ಮಾ ನಿನಗೆಷ್ಟು ರೂಪ...?

ಒಂದು ಕ್ರಿಯಾತ್ಮಕ ಸ್ಪೂರ್ತಿಗಾಗಿ ...

ಎಲ್ಲರಿಗೂ ಆತ್ಮೀಯ ನಮಸ್ಕಾರಗಳು.

ಕಾಡುವ ಬೆಳದಿಂಗಳು ಬ್ಲಾಗ್ ಬರೆಯುವುದಕ್ಕೆಶುರು ಮಾಡಿದಾಗ ಇಷ್ಟೊಂದು ಪ್ರತಿಕ್ರಿಯೆ ಬರಬಹುದು ಅಂದುಕೊಂಡಿರಲಿಲ್ಲ.

ನಿಮ್ಮೆಲ್ಲರ ಪ್ರತಿಕ್ರಿಯೆಯಿಂದಲೇ ಬ್ಲಾಗಿನ ಬರಹಗಳು ೨೦೦ರ ಸಂಚಿಕೆಯ ನೆನಪಿಗಾಗಿ ಪುಸ್ತಕದ ರೂಪ ಪಡೆದಿದೆ.

ಪ್ರತಿಕ್ರಿಯೆಗಳನ್ನು ಕೂಡಾ ...ಹೊಗಳಿಕೆ ತೆಗಳಿಕೆ ಸೇರಿ ಅಚ್ಚೊತ್ತಬೇಕೆನ್ನುವ ಆಸೆ ಕಾರಣಾಂತರಗಳಿಂದ ಈಡೇರಲಿಲ್ಲ.ಜೋಗುಳದ ಬಗ್ಗೆ ನಿಮ್ಮ ಬಿಚ್ಚುಮಾತಿನ ಅನಿಸಿಕೆಗಳಿಗೆ ಸದಾ ಸ್ವಾಗತ ಇರುತ್ತದೆ.ಆದರೆ ಒಂದು ವಿನಂತಿ ಹೆಸರಿಲ್ಲದೆ ಪ್ರತಿಕ್ರಿಯೆ ಕೊಡುವ ಬದಲಾಗಿ ನಿಜ ಹೆಸರಿನೊಂದಿಗೆ ನಿಮ್ಮ ಮನಸ್ಸಿನ ಮಾತನ್ನು ನೇರ ನುಡಿಯೊಂದಿಗೆ ಹಂಚಿಕೊಂಡರೆ ನಿಜವಾಗ್ಲೂ ಸಂತೋಷ.
ಮುಂದೊಂದು ದಿನ ಎಲ್ಲರ ಅನಿಸಿಕೆಗಳೂ ಜೋಗುಳದ ನೆನಪಿನ ಪುಸ್ತಕದ ಬರಹಗಳಾಗಬೇಕೆಂಬುದು ನಮ್ಮಾಸೆ.
ಒಂದಷ್ಟು ದಿನದಿಂದ ಬ್ಲಾಗು ಮೌನತಾಳಿದೆ,ಮತ್ತೆ ಉಸಿರಾಡುತ್ತದೆ.ಧಾರಾವಾಹಿ ಮತ್ತು ಅದಕ್ಕೆ ಹೊರತಾದ ಕೆಲವು ಭಾವನಾತ್ಮಕ ಲೇಖನಗಳೊಂದಿಗೆ...
ಮತ್ತೊಮ್ಮೆ ನಿಮಗೆ ಮನಪೂರ್ವಕ ನಮನಗಳು.
ವಿನು ಬಳಂಜ
ಮತ್ತು ಜೋಗುಳ ತಂಡ