Thursday, July 30, 2009

ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ.

ದೇವಕಿ ಪ್ರೀತಿಯಲ್ಲಿ ಹೇಳಿಕೊಂಡಿದ್ದನ್ನ ಮತ್ತು ಹೇಳಿಕೊಳ್ಳಲಾಗದೇ ಇದ್ದಿದ್ದನ್ನ ಒಂದು ತಕ್ಕಡಿಯಲ್ಲಿ ಹಾಕಿ ತೂಗಿದರೆ ಹೇಳಿಕೊಳ್ಳಲಾಗದ್ದೇ ಹೆಚ್ಚು ತೂಗುತ್ತಂತೆ ನಿಜವಾ? ಬಹುಶ ಈ ಪತ್ರವನ್ನ ಓದಿದ ಮೇಲೆ ನಿನಗೆ ನನ್ನ ಮಾತು ನಿಜವನ್ನಿಸಿದರೂ ಅನ್ನಿಸಬಹುದು. ಅಥವ ಇವನೊಬ್ಬ ಸುಳ್ಳ ಅಂತನೂ ಅನ್ನಿಸಿ ಪತ್ರವನ್ನ ಹರಿದೆಸೆದು ನಿರ್ಲಪ್ತತೆಯಿಂದ ಸುಮ್ಮನಿದ್ದುಬಿಡಬಹುದು. ನಿಜ ದೇವಕಿ, ನಿನ್ನ ಮುಂದೆ ಇಲ್ಲಿಯವರೆಗೂ ಹೇಳಲಾರದ ಸಣ್ಣ ಸಣ್ಣ ಸಂಗತಿಗಳು ತುಂಬಾನೆ ಇವೆ. ಸಣ್ಣ ಸಂಗತಿಗಳಾದರೂ ಅದರಲ್ಲಿ ತುಂಬು ಪ್ರೀತಿಯ ಸಾರ್ಥಕತೆ ಇದೆ. ನಿಜವಾದ ಪ್ರೇಮಿಗಳಿಗೆ ಸಣ್ಣ ಸಣ್ಣ ಸಂಗತಿಗಳೂ ಕೂಡ ಬೆಟ್ಟದಷ್ಟು ದೊಡ್ಡದಾದ ನೆಮ್ಮದಿಯನ್ನ ಕೊಡುತ್ತವಂತೆ.



ನಿಜ ಹೇಳ್ತ ಇದ್ದೀನಿ ಕೆಲವೊಮ್ಮೆ ನಿನ್ನ ಹಣೆಗೊಂದು ಮುತ್ತು ಕೊಡಬೇಕೆನ್ನಿಸುತ್ತಿತ್ತು. ಅವಕಾಶ ಸಿಕ್ಕಿದಾಗಲೆಲ್ಲ ನಿನ್ನನ್ನ ಯಾವತ್ತೂ ದೂರಾಗದ ಹಾಗೆ ಗಟ್ಟಿಯಾಗಿ ತಬ್ಬಿಹಿಡಿದು ಕುಳಿತುಬಿಡಬೇಕು ಅನ್ನಿಸುತ್ತಿತ್ತು. ನೂರಾರು ಕಿಲೋಮೀಟರುಗಳ ದೂರವನ್ನ ಒಂದೇ ಒಂದು ಮಾತನಾಡದೆ ನಿನ್ನ ಕಿರುಬೆರಳ ಹಿಡಿದು ನಡೆಯಬೇಕೆನ್ನಿಸುತ್ತಿತ್ತು. ಸುರಿವ ಸ್ವಾತಿ ಮಳೆಯಲ್ಲಿ ನಾನೆ ನಿನ್ನ ಭುಜಕ್ಕೊರಗಿಕೊಂಡು ಪ್ರೇಮಕವಿ ಕೆ.ಎಸ್.ಎನ್ ಅವರ ಒಂದು ಪೂರ್ತಿ ಕವಿತೆಯನ್ನ ನಿನಗೆ ಓದಿಹೇಳಬೇಕೆನ್ನಿಸಿದ್ದು ಸುಳ್ಳಲ್ಲ. ಇದ್ದಕ್ಕಿದ್ದಂತೆ ಕಣ್ಮುಚ್ಚಿ ಉಸಿರು ಕಟ್ಟಿದ ಹಾಗೆ ನಾಟಕವಾಡಿ ನೀನು ಗಾಬರಿ ಬೀಳೋದನ್ನ ಕದ್ದು ನೋಡಿ ನೀನೆಷ್ಟು ಪ್ರೀತಿಸುತ್ತಿಯ ಎಂದು ನಿನ್ನ ಕಿವಿಯಲ್ಲಿ ಹೇಳಿ ಕಣ್ಣು ತುಂಬಿಕೊಳ್ಳಬೇಕೆನ್ನಿಸುತ್ತಿತ್ತು. ದೇವರ ಸನ್ನಿಧಿಯಲ್ಲಿ 3 ಸುತ್ತಿನ ಬದಲು ಮೂವತ್ಮೂರು ಸುತ್ತುಗಳನ್ನ ನಿನ್ನನ್ನ ಹೊತ್ತು ತಿರುಗಿಸಬೇಕೆನ್ನಿಸುತ್ತಿತ್ತು. ಸನಿಹವಿದ್ದಾಗ ನಿನ್ನ ಪ್ರೀತಿಯನ್ನ ದೂರವಿದ್ದಾಗ ನಿನ್ನ ವಿರಹವನ್ನ ಮನಸಾರೆ ಅನುಭವಿಸುವ ಆಸೆಯಾಗುತ್ತಿತ್ತು.



ಹೇಳೋಕೆ ತುಂಬಾನೆ ಇದೆ ದೇವಕಿ. ಕೆಲವು ಕಾರಣಗಳು ನಿನಗೆ ಸಿಲ್ಲಿ ಅನ್ನಿಸಬಹುದು. ಆದರೇ ಕೇವಲ ಭಾವನೆಗಳಲ್ಲೆ ಬದುಕುವ ನನ್ನಂತವರ ಪಾಲಿಗೆ ಈ ಸಣ್ಣ ವಿಷಯಗಳು ಸಣ್ಣ ವಿಷಯಗಳೇನು ಅಲ್ಲ. ಹೀಗೆ ನಿನ್ನ ಬಗ್ಗೆ ಏನೇ ಬರೆದರೂ ಅದು ಯಾಕೋ ಪ್ರೀತಿಯಲ್ಲೇ ಮುಕ್ತಾಯವಾಗುತ್ತದೆ. ಪ್ರತಿ ಪತ್ರಗಳು ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ. ಈ ಅಸಹಾಯಕತೆಗೆ ಏನನ್ನಲಿ?

Wednesday, July 29, 2009

ಈ ಒಂದು ಜನ್ಮದಲ್ಲಾದರೂ ನೀನು ನನ್ನ ಜೊತೆಗಿರಬೇಕು

ಮನುಷ್ಯ ತೀರಾ ಅಸಹಾಯಕನಾದಾಗ ಏನಾಗುತ್ತಾನೆ?

ಪ್ರತಿಯೊಬ್ಬರೂ ಅವರಿಗೆ ತೋಚಿದ ಒಂದೊಂದು ಕಾರಣಗಳನ್ನ ಕೊಟ್ಟುಕೊಳ್ಳಬಹುದು. ಆದರೆ ವಾಸು ಹೇಳೋದು, ಮನುಷ್ಯ ತೀರಾ ಅಸಹಾಯಕನಾದಾಗ ಅವನು ಮಗುವಾಗುತ್ತಾನೆ. ಆ ಸಮಯದಲ್ಲಿ ಈ ಜಗತ್ತಿನ ಯಾವ ಸುಖ ಸಂತೋಷಗಳೂ ಅವನಿಗೆ ಏನೆಂದರೆ ಏನೂ ಅನ್ನಿಸುವುದಿಲ್ಲ. ಅಲ್ಲಿಯವರೆಗೆ ತನ್ನೊಳಗೆ ತಾನೆ ಕಟ್ಟಿಕೊಂಡ ಕೆಲವು ಆಪ್ತ ಸಂಬಂಧಗಳೂ ಅರ್ಥ ಕಳೆದುಕೊಳ್ಳುತ್ತವೆ. ಹೊಸ ಸಂಬಂಧಗಳೆಡೆ ಅಂತಾ ವ್ಯಾಮೋಹವಿರುವುದಿಲ್ಲ. ಜಗತ್ತೇ ಮುಗಿದು ಹೋಯಿತೇ ಅಂದುಕೊಳ್ಳುತ್ತಾನೆ. ಅವತ್ತಿನಿಂದಲೇ ಅವನ ಬದುಕಲ್ಲಿ ಇನ್ನು ಸೂರ್ಯಾಸ್ತ ಮತ್ತು ಸೂರ್ಯೋದಯವಾಗುವುದೇ ಇಲ್ಲವೇನೋ ಅಂದುಕೊಂಡು ಕಣ್ಮುಚ್ಚಿಬಿಡುತ್ತಾನೆ.ಬದುಕ ಕಟ್ಟುವ ಯಾವ ಹಾಡುಗಳೂ ಸುಂದರವಾಗಿ ಕೇಳಿಸುವುದಿಲ್ಲ. ತನ್ನ ಮೇಲಿನ ತನಗಿದ್ದ ನಂಬಿಕೆಯನ್ನೆ ಓರೆಗೆ ಹಚ್ಚಿನೋಡು ಅಂತ ಪ್ರತಿ ಸಲ ಮನಸ್ಸು ಹೇಳುತ್ತಲೇ ಇರುತ್ತೆ. ಮತ್ತೆ ತನ್ನ ಕನಸುಗಳೇ ಚಿಗುರುವುದಿಲ್ಲ ಅಂದುಕೊಂಡವನು ಮತ್ತೆ ಹೊಸ ಕನಸುಗಳೆಡೆ ಕೈಚಾಚುವ ಮಾತು ಇನ್ನು ದೂರವೆ.

ದೇವಕಿ ಅದೇ ಅಸಹಾಯಕತೆಯಲ್ಲಿ ನಾನಿದ್ದೀನಿ. ನನಗೆ ಮೇಲೆ ನಾನು ಹೇಳಿದ ನನ್ನ ಸಾಲುಗಳು ನಿನ್ನಾಣೆ ಅನ್ವಯಿಸುವುದಿಲ್ಲ. ಈ ಅಸಹಾಯಕತೆಯಲ್ಲಿ ನನಗೆ ನೀನು ಬೇಕು ಅನ್ನಿಸುತ್ತಿದೆ. ಬದುಕಿನ ತುತ್ತ ತುದಿಯವರೆಗೂ ನಿನ್ನ ಮುದ್ದಾದ ಕೈಬೆರಳುಗಳನ್ನ ಹಿಡಿದು ಸಾಗಬೇಕೆಂಬ ಆಸೆಯಾಗುತ್ತಿದೆ. ಯಾವತ್ತೂ ಮತ್ತೆ ನನ್ನಿಂದ ಕೈ ಜಾರದೇ ಇರುವ ಹಾಗೆ ಗಟ್ಟಿಯಾಗಿ ಹಿಡಿದುಕೊಂಡು ಹೆಜ್ಜೆಯ ಹಾಕಬೇಕು ಅಂತ ಅನ್ನಿಸುತ್ತಿದೆ. ಪ್ಲೀಸ್ ಈ ವಾಸು ತುಂಬಾ ದೊಡ್ಡದಾದ ಕೋರಿಕೆಯನ್ನೇನು ನಿನ್ನ ಮುಂದೆ ಸಲ್ಲಿಸುತ್ತಿಲ್ಲ. ನನಗೆ ಈ ಹಾಳು ಏಳು ಜನುಮಗಳಲ್ಲಿ ನಂಬಿಕೆಯಿಲ್ಲ ದೇವಕಿ. ಈ ವಾಸು ಬದುಕಿರುವ ಈ ಒಂದು ಜನ್ಮದಲ್ಲಾದರೂ ನೀನು ನನ್ನ ಜೊತೆಗಿರಬೇಕು ಅನ್ನಿಸುತ್ತಿದೆ.

ಹೇಳು ವಾಸು ಪ್ರೀತಿಗೆ ಒಂದು ಜನುಮದ ಭಿಕ್ಷೆಯನ್ನಾದರು ಕೊಡುತ್ತೀಯ ಅಲ್ಲವಾ?

Tuesday, July 28, 2009

ಬಿಕ್ಕುವಿಕೆಯನ್ನ ಮರೆಮಾಚಲು ಆ ಮಳೆಗೂ ಸಾಧ್ಯವಾಗಲಿಲ್ಲ.

ಕಣ್ಮುಚ್ಚಿ ಕುಳಿತಿದ್ದೆ. ಕಣ್ಣುಗಳಲ್ಲಿರುವ ನಿನ್ನ ನೆನಪಾದರೂ ಜೊತೆಗಿರಲಿ ಅನ್ನುವ ಸಣ್ಣ ಆಸೆಯಿಂದ. ಕಣ್ಣೀರಿನೊಂದಿಗೆನಿನ್ನ ನೆನಪುಗಳು ಹೊರಹೆಜ್ಜೆ ಹಾಕದಂತೆ ತುಂಬಾ ಜಾಗ್ರತೆವಹಿಸಿದ್ದೆ. ಆದರೇ ನನ್ನ ಸಣ್ಣ ಆಸೆಯನ್ನೂ ಪಕ್ಕಸರಿಸಿ ಕಣ್ಣುಗಳು ಸೋಲೊಪ್ಪಿಕೊಂಡವು ಗೆಳತಿ. ನನ್ನೆದುರೇ ನೀನು ಹನಿಗಳ ರೂಪದಲ್ಲಿ ನನ್ನಿಂದ ಕೆಳಗಿಳಿಯುತ್ತಿದ್ದೆ. ಒಂದು ಯಾತನಾದಾಯಕವಾದ ಮುಖಭಾವ ಹೊತ್ತುಕೊಂಡು ದಿಗಂತದಾಚೆ ದೃಷ್ಟಿ ಹಾಯಿಸುತ್ತಾ ನಿಂತಿದ್ದೆ. ಅಲ್ಲಾದರೂ ಕಾಣಬಹುದೇ ನೀನೆಂದು. ಅಲ್ಲಿ ಕಂಡಿದ್ದು ಸುಡುವ ಸೂರ್ಯ, ಅಣಕಿಸುವ ವಿಶಾಲ ಆಕಾಶದ ನೀಲಿ ನೀಲಿ. ಕೆಳಗೆ ವಿಶಾಲ ರಂಗಮಂದಿರದಂತಹ ಸುಡುವ ಬಯಲು. ಅಲ್ಲಿ ಜೀವಂತಿಕೆಯ ಯಾವ ಕುರುಹುಗಳು ನನಗೆ ಕಾಣಿಸಲಿಲ್ಲ. ವಿಶಾಲ ಬಯಲು ಸುಡುವ ಬಿಸಿಲು ತಾಳಲಾರದೇ ಹಾಗೆ ಮಲಗಿಕೊಂಡಿತ್ತು.
ಮತ್ತದೇ ನನ್ನಿಷ್ಟದ ಹಾಡುಗಾರನ ಹೇಳಿ ಹೋಗು ಕಾರಣಾ...
ಹೋಗುವಾ ಮೊದಲೂ....ಕಾಡುವುದಕ್ಕೆ ಶುರುವಾಯಿತು ...ಅದು ಆ ಸೂರ್ಯನಿಗೂ ಗೊತ್ತಯಿತು ಅನ್ನಿಸುತ್ತೆ...

ಸುಡುವ ಸೂರ್ಯ ಸರಿಯತೊಡಗಿದ. ತಂಪಾದ ಮೋಡಗಳ ಮೆರವಣಿಗೆ ಆರಂಭವಾಗಿತ್ತು.. ಕೂಡಲೇ ಕೆಲವು ಮಕ್ಕಳೆಲ್ಲ ಹೋ ಎಂದುಕೊಂಡು ಬಂದು ಯಾವುದೋ ಆಟಗಳನ್ನ ಹಚ್ಚಿಕೊಂಡರು. ನನಗೆ ಕೆಳಗಿಳಿದು ಹೋಗಿ ಮಕ್ಕಳಲ್ಲಿ ಮಗುವಾಗಬೇಕೆನ್ನಿಸಿತು. ಕೆಳಗಿಳಿದು ಹೋದೆ. ನಿಧಾನವಾಗಿ ಮಳೆಯ ಹನಿಗಳು ಸುಡುವ ಬಯಲಿಗೆ ಮುತ್ತಿಕ್ಕತೊಡಗಿದ್ದವು. ಮಕ್ಕಳೆಲ್ಲ ಒದ್ದೆಯಾದರು, ಮುದ್ದೆಯಾದರು. ಮಳೆ ಮಕ್ಕಳಿಗೆ ಹಳೆಯ ನೋವುಗಳನ್ನೆಲ್ಲ ಮರೆಸಿ ಒಂದಷ್ಟು ಹೊಸ ನಗುವನ್ನ ಅವರ ಗಲ್ಲಗಳಿಗೆ ತುಂಬಿ ಕಳಿಸಿತ್ತು. ಮರುಭೂಮಿಯಂತ ನೆಲಕ್ಕೆ ಒಂದಿಷ್ಟು ಹಸಿರ ಬಟ್ಟೆಯನ್ನ ತೊಡಿಸಿತ್ತು. ಮಲ್ಲಿಗೆ ಸಂಪಿಗೆ ಬಳ್ಳಿಗಳು ಚಿಗುರೊಡೆಯುತ್ತಿದ್ದವು. ಗುಲಾಬಿ ಗಿಡದ ಸಂಬ್ರಮ ಮಾತಿನಲ್ಲಿ ಹೇಳೋಂತದ್ದಲ್ಲ. ಚಿಟ್ಟೆಗಳೆಲ್ಲ ಶ್ರಿಂಗಾರ ಬಂಗಾರ ಮಾಡಿಕೊಂಡವರತೆ ಮೆರವಣಿಗೆ ಹೊರಟಿದ್ದವು.ಆ ಹೊತ್ತಿಗಾಗಲೇ ಗಂಡ ಹೆಂಡತಿಯರು ಗೂಡು ಸೇರಿ ಚಳಿಗೆ ಜ್ವರ ಬರಿಸುತ್ತಿದ್ದರು. ಗೆಳತಿಯರು ಆ ಚಳಿಗೆ ಗೆಳೆಯರ ಎದೆಯ ಕೂದಲಿನ ಲೆಕ್ಕ ಸಿಗದೆ ಪರಿತಪಿಸುತ್ತಾ ಚಳಿಗೆ ಶಪಿಸುತ್ತ ಮತ್ತು ವಂದಿಸುತ್ತ ಹುಸಿಮುನಿಸು ತೋರಿಸುತ್ತಿದ್ದರು. ಒಂದು ಮಳೆ ಒಂದು ಕ್ಷಣದಲ್ಲಿ ಏನೆಲ್ಲವನ್ನ ಬದಲಿಸಿತ್ತು.

ಆದರೆ ಆದರೆ ವಾಸು ಹಾಗೆ ಮಳೆಯಲ್ಲಿ ನಿಂತೇ ಇದ್ದ. ಮಾಮೂಲಿನಂತೆ ಮಳೆಯಲ್ಲಿ ಅಳುವಾಗ ಕಣ್ಣೀರೇನೋ ಕಾಣಿಸುತ್ತಿರಲಿಲ್ಲ.ಆದರೆ ಹೃದಯದ ಬಿಕ್ಕುವಿಕೆಯನ್ನ ಮರೆಮಾಚಲು ಆ ಮಳೆಗೂ ಸಾಧ್ಯವಾಗಲಿಲ್ಲ.

Monday, July 27, 2009

ದೇವಕಿ ಬದುಕಿನ ಪುಟಗಳಲ್ಲಿ ವಾಸು ಅನ್ನುವ ಹೆಸರಿರುತ್ತಾ?

ಅಲ್ಲಿ ನಾನು ಎಲ್ಲ ಕಳೆದುಕೊಂಡು ನಿಂತಿದ್ದೆ. ಬದುಕಿನ ಪುಟಗಳಿಗೆ ಬಣ್ಣ ತುಂಬುವ ಬದಲು ಕೇವಲ ಮಣ್ಣು ತುಂಬಿದ ನನ್ನ ಅದೃಷ್ಟವನ್ನ ಶಪಿಸುತ್ತ ದಿಗಂತದೆಡೆ ಕಣ್ಣ ಹಾಸಿಕೊಂಡು ಮುಂದೇನು ಅನ್ನುವ ಪ್ರಶ್ನೆಯನ್ನ ನನಗೆ ನಾನೆ ಹಾಕಿಕೊಂಡು ನಿಂತಿದ್ದೆ. ಹೀಗೆ ನನ್ನದಲ್ಲದ ಲೋಕದಲ್ಲಿದ್ದವನನ್ನ ವಾಸ್ತವಕ್ಕೆ ಕರೆದುಕೊಂಡು ಬಂದಿದ್ದು ನನಗೆ ಸ್ವಲ್ಪವೇ ದೂರದಲ್ಲಿ ನಿಂತುಕೊಂಡು ದೇವರು ನಕ್ಕ ಹಾಗೆ ನಗುತ್ತಾ ನಿಂತಿದ್ದ ಒಂದು ಪುಟಾಣಿ ಮುದ್ದು ಮಗು. ಅಲ್ಲಿ ಕುಳಿತು ನನ್ನನ್ನೇ ದಿಟ್ಟಿಸಿ ನೋಡುತ್ತಿತ್ತು. ಹತ್ತಿರ ಹೋದವನಿಗೆ ಕಂಡಿದ್ದು ಆಗಷ್ಟೇ ಅಮ್ಮನ ಅಮೃತವನ್ನ ಕುಡಿದುಕೊಂಡು ಬಂದ ಮಗುವಿನ ಗುಲಾಬಿ ತುಟಿಗಳು. ಆ ಮಗುವಿನ ಮೊಗದಲ್ಲಿದ್ದ ನಗು ಅಮಾಯಕ ಮುಗ್ಧತೆ. ಬೆಟ್ಟದಷ್ಟಿದ್ದ ಎದೆಯ ದುಃಖವನ್ನ ಮಗುವಿನ ಮುಂದೆ ಹೇಳಿ ಹಗುರಾಗಬೇಕೆನ್ನಿಸಿತು. ಭಕ್ತರು ದೇವರ ಮುಂದೆ ಮಂಡಿಯೂರಿ ಹೇಳಿಕೊಳ್ಳುತ್ತಾರಲ್ವ ಹಾಗೆ.

ಆಟವಾಡುತ್ತಿದ್ದ ಮಗುವನ್ನ ನೋಡುತ್ತಾ ಕುಳಿತೆ. ನನ್ನ ಪಕ್ಕ ಕುಳಿತು ಏನು ನಿನ್ನ ದುಃಖವೆಂಬತ್ತೆ ನೋಡಿ ಹುಬ್ಬು ಹಾರಿಸಿತು. ನಾನು ಏನೂ ಹೇಳಲಿಲ್ಲ. ಮುಖ ತಿರುಗಿಸಿಕೊಂಡು ಕುಳಿತೆ. ಮತ್ತೆ ಒಂದು ಸ್ಮೈಲ್ ಮಾಡಿ ಹೇಳು ಏನು ನಿನ್ನ ದುಃಖವೆಂಬತೆ ಸನ್ನೆ ಮಾಡಿ ಹುಬ್ಬು ಹಾರಿಸಿ ನನ್ನ ಕೆಣಕುವ ಹಾಗೆ ನೋಡಿತು. ಭಯಂಕರ ಕೋಪದ ನಟನೆಯನ್ನ ಮಾಡುತ್ತ ಮತ್ತೆ ಮುಖ ತಿರುಗಿಸಿಕೊಂಡು ಕುಳಿತೆ. ಏನು ಮಾಮ ಎಂಬತ್ತೆ ಮತ್ತೆ ಮುಖದ ಬಳಿ ಬಂದು ಹೆಗಲಲ್ಲಿ ಜೋಕಾಲಿಯಾಡಿ ಮುತ್ತನ್ನಿತ್ತು ರಮಿಸಿ ನನ್ನ ಮುಖವನ್ನ ತನ್ನ ಪುಟಾಣಿ ಕೈಗಳಲ್ಲಿ ಬೊಗಸೆ ಮಾಡಿ ಹಿಡಿದುಕೊಂಡು ಒಂದು ಸಲ ನನ್ನ ನೋಡಿತು. ಇನ್ನು ನನಗೆ ತಡೆದುಕೊಳ್ಳಲಾಗಲಿಲ್ಲ. ಮಗುವಿನ ಗುಲಾಬಿ ರಟ್ಟೆಗಳನ್ನ ಸ್ವಲ್ಪ ಬಿಗಿಯಾಗೆ ಹಿಡಿದುಕೊಂಡು..... ನಾನು ದೇವಕಿಯನ್ನ ತುಂಬಾ ಪ್ರೀತಿಸ್ತೀನಿ ಗೊತ್ತಾ.... ಎಂದು ಜೋರಾಗಿ ಕೇಳಿಬಿಟ್ಟೆ.

ಹಿಂದೆ ಹೆಗಲ ಮೇಲೆ ಜೋಕಾಲಿಯಾಡುತ್ತಿದ್ದ ಮಗು ನನ್ನನ್ನ ಸುತ್ತಿಕೊಂಡು ಬಂದು ಪಕ್ಕದಲ್ಲಿ ಕುಳಿತು ನನ್ನ ಮುಖ ನೋಡುತ್ತಿತ್ತು. ಪ್ರೀತಿಯೊಂದೇ ಅಲ್ಲ ಆರಾಧಿಸ್ತೀನಿ ಗೊತ್ತಾ? ಜೀವನಪೂರ್ತಿ ಜೊತೆಗಿರುವ ಕನಸು ಕಟ್ಟಿಕೊಂಡು ಕುಳಿತಿದ್ದೆ. ಆದರೇ ನನ್ನ ಕನಸ್ಸಿಗೆ ಹೆಚ್ಚಿನ ಆಯುಷ್ಯವಿರಲಿಲ್ಲ. ಬದುಕಿನ ಪುಟಗಳಲ್ಲಿ ಕೇವಲ ದೇವಕಿ ಅನ್ನುವ ಅಕ್ಷರವನ್ನ ಬರೆಯಲು ಹೊರಟಿದ್ದೆ. ಆದರೇ ಮೊದಲಕ್ಷರ ಬರೆಯುವಷ್ಟರಲ್ಲಿಯೇ ಪೆನ್ನಿನ ಇಂಕು ಖಾಲಿಯಾಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ...ಹಲೋ.. ಕೇಳಿಸ್ಕೋತಿದ್ದೀಯಾ ತಾನೆ? ಎಂದು ಮಗುವಿನ ರಟ್ಟೆಯನ್ನ ಮತ್ತೆ ಜೋರಾಗಿ ಹಿಡಿದುಕೊಂಡು ಕೇಳಿದೆ. ಪಾಪ ನೋವಾಗಿರಬೇಕು. ಮುಖ ಕಿವಿಚಿದ ಹಾಗೆ ಮಾಡಿಕೊಳ್ಳುತ್ತ ನನ್ನ ಮುಖವನ್ನೇ ನೋಡುತ್ತ ಕುಳಿತು ಬಿಡ್ತು.

ನಿನಗೆ ಕೆಲವು ಪ್ರಶ್ನೆ ಕೇಳ್ತೀನಿ ಪ್ಲೀಸ್ ನನಗೆ ಉತ್ತರಬೇಕು ಅಂದು ಮಗುವಿನ ಮುಖ ನೋಡಿದೆ. ಅದು ನನ್ನ ನೋಡುತ್ತಲೇ ಕುಳಿತಿತ್ತು. " ದೇವಕಿ ಮತ್ತೆ ನನಗೆ ಸಿಕ್ತಾಳ? ದೇವಕಿ ಬದುಕಿನ ಪೂರ್ತಿ ಪುಟಗಳಲ್ಲಿ ವಾಸು ಅನ್ನುವ ಹೆಸರಿರುತ್ತಾ? ಆ ಭಗವಂತ ದೇವಕಿಯ ಕುರಿತು ಬರೆಯಬೇಕಾದ ನನ್ನ ಪೆನ್ನಿಗೆ ಇಂಕು ತುಂಬಿಸುತ್ತಾನಾ? ದೇವಕಿಯ ಕುರಿತಾಗಿ ನಾನು ಕಂಡ ಅಷ್ಟು ಕನಸುಗಳಲ್ಲಿ ಒಂದಾದರೂ ನಿಜವಾಗುತ್ತಾ? .... ಹಲೋ.. ನಾನ್ ಹೇಳೋದು ನಿನಗೆ ಅರ್ಥವಾಗ್ತಿದೆಯಾ? ಏನ್ ನಿನ್ನ ಹೆಸರು? ಸ್ವಲ್ಪ ಮಾತಾಡ್ತೀಯಾ? ಇಷ್ಟು ಹೊತ್ತು ನಾನ್ ಹೇಳಿದ್ದನ್ನೆಲ್ಲ ಕೇಳಿಸಿಕೊಂಡೆ ತಾನೆ?

ಮಗು ಒಂದೊಂದೆ ಹೆಜ್ಜೆ ಮುಂದಿಡುತ್ತಾ ನನ್ನ ಒಂದೇ ಒಂದು ಪ್ರಶ್ನೆಗೂ ಉತ್ತರಿಸದೆ ಮುಂದೆ ಸಾಗುತ್ತಿತ್ತು. ಮಗುವಿನ ಮುಗ್ಧತೆ, ಆ ಕಣ್ಣಲ್ಲಿರುವ ಹೊಳಪು ಅದರ ನಗು ಅದರ ಕಣ್ಣು ಎಲ್ಲವೂ ನಿನ್ನನ್ನ ನೆನಪಿಸುತ್ತಿದ್ದವು. ನನ್ನ ಬದುಕ ಕುರಿತು ಕೇಳಿದ ಕೆಲವೇ ಕೆಲವು ಪ್ರಶ್ನೆಗಲಿಗೆ ಒಂದು ಮಗುವೂ ಉತ್ತರಿಸಲಾರದ್ದನ್ನ ಕಂಡು ನನಗೆ ಎದೆ ತುಂಬಿ ಬಂತು. ಉಕ್ಕಿ ಬಂದ ಬಿಕ್ಕಳಿಕೆಯನ್ನ ಕಷ್ಟಪಟ್ಟು ತಡೆದುಕೊಂಡೆ. ಕೇಳಿದ ಒಂದು ಪ್ರಶ್ನೆಗೂ ಉತ್ತರಿಸದೇ ಹಾಗೆ ಹೋದ ಮಗು ನನಗೆ ನಿನ್ನ ನೆನಪು ಮಾಡುತ್ತಿತ್ತು.

Sunday, July 26, 2009

ಹೃದಯ ತುಂಬಾ ಬೇಗ ಮನಸ್ಸಿಗೆ ಗಾಯ ಮಾಡ್ಕೊಂಡ್ಬಿಡುತ್ತೆ...

ಜೀವನದಲ್ಲಿ ಅತಿಯಾಗಿ ಹಚ್ಕೊಕೊಂಡಿದ್ದನ್ನ ಕಳ್ಕೊಂಡಾಗ ಮನುಷ್ಯ ವೇದಾಂತಿಯಾಗ್ತಾನಾ? ನನಗೆ ಕಾಡುವ ಪ್ರಶ್ನೆಗಳು.. ಈ ಅತೀ ಅನ್ನಿಸುವ ವಿಷಯಗಳೇ ಪ್ರಪಂಚದಲ್ಲಿ ಉಸಿರಾಡ್ಬಾರ್ದು. ಆಗ ಜಗತ್ತು ಹೇಗಿರಬಹುದು?

ದುಡ್ಡು, ಹಸಿವು, ಪ್ರೀತಿ,ಪ್ರೇಮ, ಪ್ರಣಯ, ಅಂತಸ್ತು ಹೀಗೆ ಯಾವುದೂ ಇಲ್ಲದಿದ್ದಲ್ಲಿ ಮನುಷ್ಯ ಸೋಮಾರಿಯಾಗಿಬಿಡುತ್ತಿದ್ದ. ಮಂಗನಿಂದ ಮಾನವ ಅನ್ನುವ ಸತ್ಯ ಉಲ್ಟ ಹೊಡೆಯುತ್ತಿತ್ತೇನೋ,, ನಗುಬರುತ್ತೆ. ನಾನು ಸ್ವಲ್ಪ ಹಾಗಾಗಿದ್ದಿನಿ. ಮನುಷ್ಯನಾಗಿದ್ದು ಮಂಗ ಆಗಿದ್ದೀನಿ. ( ಮಾಡ್ಬಿಟ್ರೇನೊ). ಹೀಗಾಗೋವರೆಗೆ ನನಗೆ ಬರಿಬೇಕೂ ಅಂತ ಅನ್ನಿಸ್ತಿರಲಿಲ್ಲ. ಓದ್ಬೇಕು ಅಂತ ಅನ್ನಿಸ್ತಿರಲಿಲ್ಲ. ಈಗ ಎರಡೂ ಕಲ್ತಿದ್ದೀನಿ. ನನ್ ಬಗ್ಗೆ ನಿಮಗೆ ಕನಿಕರಬರಬಹುದು, ಜೋಕೂ ಕಟ್ಟಬಹುದು, ಕನಿಕರಕ್ಕೆ ಮರುಗಬೇಡಿ..! ಇನ್ನೊಬ್ಬರಿಗೆ ಹಾಗಾಗದಿರಲಿ ಅಂತ ಬೇಡಿಕೊಳ್ಳಿ. ದೇವರ ಹತ್ರಕ್ಕಿಂತ ನಿಮ್ಮ ಹೃದಯ ದೇಗುಲದ ಆತ್ಮ ಮುಟ್ಟಿಕೊಳ್ಳಿ. ತಪ್ಪು ಮಾಡುವವರು ನಾವೆ ಅಲ್ವಾ ಅದಕ್ಕೆ. ನಮ್ಮೊಳಗಿರುವ ದೇವರು ಸದಾ ತಲೆಗೆ ಮೊಟಕುತ್ತಾ ಇರಲಿ. ರೆಟ್ಟೆಗೆ ಗಿಲ್ತಾ ಇರಲಿ.

ಜೋಕು ಕಟ್ಟಿದರೆ ಜೋರಾಗಿ ನಕ್ಕುಬಿಡಿ ಸಂತೋಷದ ತುದ್ದ ತುದಿಯಲ್ಲಿ ನಿಲ್ಲುವಷ್ಟು. ಆದರೆ ನಗ್ತಾ ನಗ್ತಾನೆ ಅದು ಅಳುವಿನ ರೂಪ ಪಡಿಬಹುದು. ಅದು ಡೇಂಜರಸ್. ಪ್ರಪಾತದ ಅಂಚಿನಲ್ಲಿ ತುದಿಪಾದದಲ್ಲಿ ನಿಂತಷ್ಟು ಡಿಪ್ರೆಸ್ ಗೆ ಹೋಗ್ತೀರ. ಡಿಪ್ರೆಸ್ ಅನ್ನೊದು ಸಾವಿನ ದಾರಿಗೆ ಜಾಸ್ತಿ ಟಾರ್ಚ್ ಹಿಡಿಯುತ್ತೆ. ಕ್ಷಮಿಸಿ ಇದನ್ನೆಲ್ಲ ಹೇಳಬಾರದು. ಆದರೆ ಸಾವಿರ ಸರ್ತಿ ನನಗೆ ಹೀಗಾಗಿದೆ, ಆಗ ಗೆಲ್ಲೋದಕ್ಕೆ ಕನಸು ಕಟ್ಟೊದಕ್ಕೆ ಶುರುಮಾಡ್ತೀನಿ. ದಾರಿ ತಪ್ಪಿಸುವಂತದ್ದಲ್ಲ. ಒಳ್ಳೇಯ ದಾರೀಲಿ ನಡೆಯೋಷ್ಟು ಬೆಳಕು ಚೆಲ್ಲು ಶಕ್ತಿಯೇ ಎಂದು...


ಅದಕ್ಕೆ ವಾಸು ಇನ್ನು ಬದುಕಿದ್ದಾನೆ


ಚಿಂತೆಗೆ ಬಿದ್ದವರು ಊಟ ಬಿಡ್ತಾರೆ. ಗಡ್ಡ ಕೂದಲುಗಳನ್ನ ಉದ್ದುದ್ದ ಬೆಳಿತಾರೆ. ಆದರೆ ನಾನು ಹಾಗೆ ಮಾಡ್ಲೇ ಇಲ್ಲ. ಯಾಕಂದ್ರೆ ನಾಳೆ ನನ್ನ ಕನಸೇ ನಿಜ ರೂಪ ಪಡೆದು ನನ್ನ ಕೈ ಹಿಡಿಯಲು ಬಂದಾಗ ಪರದೇಸಿಯಯ್ಯ ನೀನು ಅನ್ನಬಾರದಲ್ವಾ ಅದ್ಕೆ. ಆದರೂ ಮನಸ್ಸನ್ನೋದು ತುಂಬಾ ಸೂಕ್ಷ್ಮ. ಬಹುಶ ಅದು ಅಂಬೆಗಾಲಿನಿಂದ ಹಿಡಿದು ಬೆನ್ನು ಬಾಗಿ ಊರುಗೋಲು ಹಿಡಿಯುವವರೆಗೂ ಹಸುಳೆಯಾಗೆ ಇರುತ್ತೆ ಅನ್ಸುತ್ತೆ. ತುಂಬಾ ಬೇಗ ಪರಚುಗಾಯ ಮಾಡ್ಕೊಂಡ್ಬಿಡುತ್ತೆ.


ನನ್ನ ಮತ್ತು ದೇವಕಿಯ ಪ್ರೀತಿಯ ಹಾಗೆ...

Saturday, July 25, 2009

ನನಗೆ ನಿನಗಿಂತ ಬೇರೊಂದು ಕನಸು ಬೇಕಿತ್ತಾ ?

ಅದೊಂದು ಏಕಾಂತ ಸ್ಥಳ...

ಆ ಜಾಗದಲ್ಲಿ ಒಂದು ಬತ್ತಿ ಹೋದ ತೊರೆ. ಅಲ್ಲಿ ಕುಳಿತು ನಿನ್ನ ನೆನಪು ಮಾಡಿಕೊಳ್ಳುತ್ತಿದ್ದೆ. ಇದ್ದಕ್ಕಿದ್ದಂತೆ ಬತ್ತಿ ಸತ್ತು ಹೋಗಿದ್ದ ತೊರೆ ಜುಳುಜುಳು ಪಿಸುಧನಿಯೊಂದಿಗೆ ನೀರು ತುಂಬಿ ಚಲಿಸಲಾರಂಬಿಸಿತು.

ಅದರ ದಡದಲ್ಲಿ ನನಗೆ ಹೆಸರು ಹೇಳಲು ಬಾರದ ಕೆಲವು ಹೂವುಗಳು ಬೆಳೆಯಲಾರಂಬಿಸಿದವು. ಹಾಡು ಕಟ್ಟುವ ಹಕ್ಕಿಗಳ ಆಗಮನವಾಯಿತು. ಇದ್ದಕ್ಕಿದ್ದಂತೆ ನನ್ನನ್ನ ನಾನೆ ಮರೆಯುವಷ್ಟು ಅಲ್ಲಿನ ವಾತಾವರಣವೆಲ್ಲ ಬದಲಾಯಿತು...

ಗೆಳತಿ...
ನನಗೆ ನೀನು ತುಂಬಾ ನೆನಪಾದೆ. ಜೊತೆಗೆ ನೀನಿದ್ದಿದ್ದರೆ ಹೆಸರೇ ಗೊತ್ತಿಲ್ಲದ ಹೂವನ್ನ ತೆಗೆದು ನಿನ್ನ ಮುಡಿಗಿಡುತ್ತಿದ್ದೆ. ಹಾಡು ಹೇಳುವ ಅನಾಮಿಕ ಹಕ್ಕಿಗೆ ನಿನ್ನ ಪರಿಚಯಿಸುತ್ತಿದ್ದೆ. ನಿನ್ನ ಕೈ ಹಿಡಿದು ಸುಮ್ಮನೆ ನದಿತೀರದಲ್ಲಿ ಮಾತೆ ಆಡದಂತೆ ಒಂದು ಸುತ್ತು ಹಾಕುತ್ತಿದ್ದೆ. ಆದರೇ ಅದನ್ನೆಲ್ಲ ನಾನು ಹಣೆಯಲ್ಲಿ ಬರೆದುಕೊಂಡು ಬಂದಿಲ್ಲ ನೋಡು.


ಆ ತೊರೆಯ ಪಕ್ಕ ಕುಳಿತವನಿಗೆ ಯಾವ್ಬುದೋ ಅನಾಮಿಕರ ಗುಂಪೊಂದು ರಾಶಿ ರಾಶಿ ಕಾಗದಗಳನ್ನ ತಂದುಕೊಟ್ಟು ಮರೆಯಾಯಿತು. ಹಾಗೆ ರಾಶಿ ರಾಶಿ ಕಾಗದಗಳನ್ನ ತೊರೆಯ ಪಕ್ಕ ಸುರಿದುಕೊಂಡು ಒಂದೊಂದನ್ನೂ ದೋಣಿಗಳನ್ನ ಮಾಡುತ್ತ ಒಂದೊಂದರಲ್ಲೂ ಅದೆಷ್ಟೊ ತೂಕದ ಕನಸುಗಳನ್ನ ತೇಲಿಬಿಡುತ್ತೇನೆ. ನಿನ್ನ ನೆನಪಿನ ಮಧುರ ಹೆಸರಿನ ಅಚ್ಚೊತ್ತುತ್ತಾ....

ಆ ದೋಣಿಗಳು ನೀರ ಸ್ಪರ್ಶಕ್ಕೆ ತೇವವಾಗಿ ತನ್ನ ಸ್ವಂತಿಕೆಯನ್ನ ಕಳೆದುಕೊಳ್ಳುವ ಭೀತಿಯನ್ನ ವ್ಯಕ್ತಪಡಿಸದೇ ಪುಳಕಿತವಾಗುತ್ತಾ ಸಾಗುತ್ತವೆ. ಅವುಗಳಿಗೆ ನನ್ನ ನೆನಪಿನ... ಅವಳ ಸ್ಪರ್ಶದ ಖುಷಿ ಇರಬೇಕೇನೊ. ವಾರೆಕೋರೆಯಾಗಿ ನೇರವಾಗಿ ಮನಸ್ಸಿಗೆ ಬಂದಂತೆ ದೂರದಿಂದ ದೂರಕ್ಕೆ ಸಾಗುತ್ತಿವೆ. ಎಲ್ಲಾ ದೋಣಿಗಳಿಗು ನೆನಪಿನ ಹೆಸರೆ ಯಾಕೆ?????

ಒಂದರಲ್ಲಿ ಅವಳನ್ನೆ ಕೂರಿಸಿದರೆ ಹೇಗೆ ಎಂದು ಅವಳ ಹೆಸರೆ ಇಟ್ಟೆ......ದೇವಕಿ

ದೀರ್ಘ ಮುತ್ತಿಕ್ಕಿ .... ಉಸಿರೆಳೆದು.... ಉಸಿರು ಕೊಟ್ಟು....ತೇಲಿಬಿಟ್ಟೆನಲ್ಲ.

ಎಲ್ಲ ನೆನಪಿನ ದೋಣಿಗಳು ತೇಲಿ ತೇಲಿ ಕಣ್ಣೋಟದ ದೂರದ ತೀರದಂಚಿಗೆ ಸರಿದರೂ ದೇವಕಿ ದೋಣಿ ಒಂದು ದಡ ಸೇರಿತ್ತು. ಮತ್ತೆ ಅದನ್ನ ಚಲಿಸಲು ಹತ್ತಿರ ಹೋದವನಿಗೆ ದಡದ ಪಕ್ಕದಲ್ಲಿನ ವಿಶಾಲ ಖಾಲಿಜಾಗ ಆಕರ್ಷಿಸಿತು . ಗುಂಯ್ ಗುಡುವ ನೀರವ ಮೌನದಲ್ಲೂ ಮಧುರ ಧ್ವನಿಯ ಆಲಾಪ ನನ್ನ ಕಿವಿ ತಾಕಲು ಯತ್ನಿಸುತ್ತಿದೆ ಅನ್ನಿಸುವಂತಹ ವಾತಾವರಣ. ವ್ಯಾಮೋಹದ ಉಸಿರಿನ ಉದ್ವೇಗವೋ ಏನೋ ಆ ಖಾಲಿ ಜಾಗಕ್ಕೆ ಕಾಲಿರಿಸಿದೆ. ಕಾಲಿನ ಸ್ಪರ್ಶಕ್ಕೆ ಅಷ್ಟಗಲ ಭೂಮಿ ಹಸಿರಾಯ್ತು. ಇನ್ನೊಂದು ಹೆಜ್ಜೆಗೆ ಹಸಿರುಕ್ಕುವ ಗಿಡಗಳಲ್ಲಿ ಕಂದು ಕೆಂಪಗಿನ ಚಿಗುರೊಡೆದವು. ಒಂದೊಂದು ಹೆಜ್ಜೆಗೂ ಬದಲಾದ ಆ ಜಾಗದಲ್ಲಿ ಕ್ಷಣಕ್ಕೊಂದು ಗಿಡ ಹೆಸರುಗೊತ್ತಿರದ ಹೂವು ಬಿಡುತ್ತ ಪನ್ನೀರ ಕಂಪನ್ನ ತುಂಬಿ ಬಿಡ್ತು. ಅಲ್ಲಿಯವರೆಗೂ ನೋಡಿರದ ಹಕ್ಕಿ ಸುಶ್ರಾವ್ಯವಾಗಿ ಹಾಡುತ್ತಿತ್ತು. ನೀನು ನನ್ನ ಜೊತೆಗಿದ್ದಿದ್ದರೆ ನಿನ್ನ ಹೆಸರನ್ನ ಆ ಹಕ್ಕಿಗೋ ಅಥವ ಆ ಹಕ್ಕಿಯ ಹೆಸರನ್ನ ನಿನಗೋ ಇಟ್ಟು ಇಷ್ಟಗಲ ಕಣ್ಣು ಬಿಟ್ಟು ನಿನ್ನ ನೋಡುತ್ತಿದ್ದೆ.

ಗೆಳತೀ....

ಹಾಗೆ ನಿನ್ನ ನೋಡುತ್ತಾ ನೋಡುತ್ತ ಇರುವಾಗಲೇ ದೊಡ್ಡದಾದ ಹಳೆಯ ಬಂಗಲೆ ಸೃಷ್ಟಿಯಾಯ್ತು. ಸ್ವಯಂ ಹವಾನಿಯಂತ್ರಿತ ಮನೆ ಅಲ್ಲಿ ಎಲ್ಲವೂ ಅದ್ಭುತ ದೃಶ್ಯ ವೈಭವಗಳೆ.

ದೂರದ ಕೋಣೆಯ ಬಾಗಿಲಿನ ಅಂಚಿನಿಂದ ಸೆರಗೊಂದು ಹಾರುತ್ತಿತ್ತು.

ಮುಂಗುರುಳು ಚೆಲ್ಲಾಡುತ್ತಿತ್ತು. ಬಳೆಯ ಸದ್ದಿನ ಸಂಗೀತ ಓ ಇನಿಯಾ ಅನ್ನುತ್ತಿತ್ತು.

ನಾನೂ ಬದಲಾಗುತ್ತಾ ಹೊದೆ. ನೋಡುನೋಡುತ್ತಿರುವಂತೆಯೇ ನಾನು ಮತ್ತೆ ಅವಳು ದರ್ಬಾರು ನಡೆಸುತ್ತಿದ್ದೆವು.

ಪ್ರಜೆಗಳೆದುರಲ್ಲ!!!!

ಪ್ರೇಮ ಸಾಮ್ರಾಜ್ಯದ ಪ್ರೇಮಿಗಳೆದುರು....

ಆ ರಾಜ್ಯದಲ್ಲಿ ಬದುಕಬೇಕಾದ ನಿಯಮಗಳನ್ನ ಹೇಳಿಕೊಡುತ್ತಿದ್ದೆವು ಎಲ್ಲರೂ ನಮಗೆ ಜೈಕಾರ ಹಾಕುವವರೆ ಜೈಕಾರದ ನಡುವೆ ನನ್ನನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದ ದೋಣಿಯ ನೆನಪಾಯ್ತು ತೊರೆಯ ದಡದತ್ತ ಓಡಿ ಬಂದೆ ಹಿಂತಿರುಗಿ ನೋಡುತ್ತಾ... ನೋಡುತ್ತ್ತಾ.... ಆ ವೈಭವದ ಒಂದೊಂದೇ ಮಹಲುಗಳು ಕುಸಿದು ಬೀಳುತ್ತಿವೆ ಹೆಸರೇ ಗೊತ್ತಿರದ ಹೂಗಳ ಪಕಳೆಗಳು ಉದುರಿ ಬೀಳುತ್ತಿವೆ ಗಿಡಗಳು ಬುಡದಿಂದಲೇ ಬಾಡಿ ಹೋಗುತ್ತಿವೆ ಪರಿಚಯವಿರದ ಹಕ್ಕಿಯ ರಾಗ ಗದ್ಗಧಿತವಾಗುತ್ತಿದೆ, ಕರ್ಕಶವಾಗುತ್ತಿದೆ ನೋಡು ನೋಡುತ್ತಲೇ ಎಲ್ಲವೂ ಮಾಯವಾಗಿ ಮಾಮೂಲಿನಂತೆಯೇ ಹಿಂದಿನ ಖಾಲಿ ಜಾಗವಾಗುತ್ತೆ ನಾನು ನನ್ನವಳ ಹೆಸರು ಬರೆದ ದೋಣಿಯನ್ನ ನೋಡುತ್ತಿದ್ದೇನೆ ತೇವವಾಗಿ ತಳ ಒಡೆದಿದೆ ಅರ್ದ ನೀರು ತುಂಬಿಕೊಂಡಿದೆ।
.....
.....

ಕ್ಷಮಿಸು ದೇವಕಿ ಆಫೀಸಿನ ಕಟ್ಟಡದ ತುತ್ತ ತುದಿಯಲ್ಲಿ ಕುಳಿತು ಒಬ್ಬಂಟಿಗನಾಗಿ ಈಗ ನಾನು ತುಂಬಾ ಧೈನ್ಯತೆಯ ಸ್ಥಿತಿಯಲ್ಲಿ ನನ್ನ ನಾನೇ ಕೇಳಿಕೊಳ್ಳುತ್ತಿದ್ದೇನೆ।


ನನಗೆ ನಿನಗಿಂತ ಬೇರೊಂದು ಕನಸು ಬೇಕಿತ್ತಾ?

Friday, July 24, 2009

ನನ್ನ ಮನೆಯ ಹೊಸ್ತಿಲಿನ ಮುಂದೆ ನಿನ್ನ ಹೆಜ್ಜೆ ಗುರುತುಗಳಿದ್ದವು

ದೇವಕಿ, ನಿನಗೊಂದು ತುಂಬು ಹೃದಯದ ತುಂಬಾ ಚಿಕ್ಕ ಪತ್ರ. ಒಂದೆರೆಡು ನಿಮಿಷಗಳಲ್ಲಿ ಬರೆದು ಮುಗಿಸಿದ ಸಾಲುಗಳಾದರೂ ನಿನ್ನನ್ನ ನಾನು ಅದೆಷ್ಟು ಪ್ರೀತಿಸುತ್ತೀನಿ, ಅಂತ ಈ ಕೆಳಗಿನ ಸಾಲುಗಳನ್ನೇ ನೋಡು. ಒಂದು ಕ್ಷಣಕ್ಕಾದರೂ ನನ್ನ ನೆನಪು ನಿನ್ನ ಮುಂದೆ ಹಾಗೆ ಸುಮ್ಮನೆ ಅನ್ನುವುದಕ್ಕಾದರೂ ಬಂದು ಹೋಗದೇ ಇದ್ದೀತು.


ನನ್ನ ಮನೆಯ ಹೊಸ್ತಿಲಿನ ಮುಂದೆ......!

ಪ್ರಪಂಚದಲ್ಲಿರುವ ಎಲ್ಲ ಸುಖ ಸಂತೋಷಗಳು ಕಾಲು ಮುರಿದುಕೊಂಡು ಬಿದ್ದಿದ್ದವು. ಅಲ್ಲಿ ಕೇವಲ ಸಿಹಿಗನಸುಗಳು ಅರಳೋ ಸೂಚನೆಗಳು ನನಗೆ ಕಾಣಿಸುತ್ತಿದ್ದವು. ಅಲ್ಲಿ ನೆಮ್ಮದಿಯ ಬದುಕು ಅನ್ನೋದನ್ನ ಯಾರೋ ನೊಂದವರಿಗೆ ಮಾರಾಟ ಮಾಡುತ್ತಿದ್ದರು. ಬಾರ ಹೃದಯಗಳನ್ನ ಹೊತ್ತು ತಂದ ಕೆಲವರು ಅಲ್ಲಿ ಬಾರವಿಳಿಸಿಕೊಂಡು ಹಗುರಾಗಿ ಹೋಗುತ್ತಿದ್ದರು. ದುಃಖಗಳೆಲ್ಲ ಇನ್ನು ನಮಗಿಲ್ಲಿ ಜಾಗವಿಲ್ಲ ಅನ್ನುತ್ತ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಹೊರಟು ಹೋಗುವ ಮಾತನಾಡುತ್ತಿದ್ದವು. ಜಗತ್ತಿನ ಪ್ರೇಮಕಥೆ ಕಾವ್ಯಗಳ ಮೊದಲ ಸಾಲುಗಳೆಲ್ಲ ಇಲ್ಲಿಂದಲೇ ಉದಯವಾದವೇನೋ ಅನ್ನುವ ಹಾಗೆ ನನಗೆ ಭಾಸವಾಗಿತ್ತಿತ್ತು.ಕೆಲವು ಅನಾಥ ಮಕ್ಕಳು, ತಾಯಂದಿರ ಜೋಗುಳ ಕೇಳಿಸಿಕೊಂಡು ನಿದ್ದೆ ಹೋಗಿದ್ದಾರೇನೋ ಅನ್ನಿಸುತ್ತಿತ್ತು. ಅಲ್ಲಿ ಕೆಲವು ಹೂಗಳ ಗಿಡ ಮತ್ತು ಬಳ್ಳಿಗಳು ತಮ್ಮ ಬೇರೂರಲು ಆಸೆಗಣ್ಣಿನಿಂದ ನೋಡುತ್ತಿದ್ದವು. ಭೂಮಿಗಿಳಿಯುವ ಮೊದಲ ಮಳೆಯ ಮೊದಲ ಹನಿ ಆ ಜಾಗದಲ್ಲೆ ಪ್ರತಿ ಸಾರಿಯೂ ಬೀಳುತ್ತಿತ್ತು. ಕೆಲವೊಮ್ಮೆ ಸೂರ್ಯನ ಸುಡುವ ಕಿರಣಗಳು ಚಂದ್ರನ ತಂಪನ್ನ ಆ ಜಾಗಕ್ಕೆ ರವಾನೆ ಮಾಡುತ್ತಿದ್ದವು. ಮರೆತ ಹಾಡುಗಳು ನೆನಪಾಗುತ್ತಿದ್ದವು. ಕತ್ತಲೇ ಆವರಿಸಿಕೊಂಡಿದ್ದ ನನಗೆ ಅಲ್ಲಿ ಒಂದಿಷ್ಟು ಬೆಳಕು ಕಾಣಿಸುತ್ತಿತ್ತು. ಯಾವ ಶಾಪಗಳು ತಟ್ಟದಂತ ಸುಂದರ ತಾಣವೆಂದೆ ನಾನುಂದುಕೊಂಡಿದ್ದೇನೆ. ಅಲ್ಲಿ ದೇವರು ಇದ್ದಿರೂ ಇರಬಹುದೇ? ಅಂದುಕೊಂಡು ಹುಡುಕಿದ್ದೂ ಇದೆ. ಅಲ್ಲಿ ಒಂದಿಷ್ಟು ಕನಸುಗಳಿವೆ. ಒಂದಿಷ್ಟು ಬಯಕೆಗಳಿವೆ, ಬದುಕಿನ ನಾಳೆಗಳಿಗೆ ಬೇಕಾದ ಭರವಸೆಗಳ mooಟೆಗಳಿವೆ. ಹಾಗೆ ಅಲ್ಲಿ ನನ್ನ ಪೂರ್ತಿ ಬದುಕಿದೆ.

ನನ್ನ ಮನೆಯ ಹೊಸ್ತಿಲಿನ ಮುಂದೆ ಕುಕ್ಕರುಗಾಲಿನಲ್ಲಿ ಕೂತಿದ್ದೆ. ನನ್ನ ಮುಂದೆ...ಮುಂದೆ ಮುಂದೆ ಸಾಗಿದ ನಿನ್ನ ಹೆಜ್ಜೆ ಗುರುತುಗಳಿದ್ದವು.

Thursday, July 23, 2009

ರಾಜನ ಪ್ರಾಣ ಹಿಮದಲ್ಲೆ ಲೀನವಾಗಿತ್ತು ಹಿಮವಾಗಿ

ದೇವಕೀ...... ಜೋರಾಗಿ ನಾನು ಕೂಗೋ ಸದ್ದು ನನಗೇ ಕೇಳಿಸುತ್ತಿಲ್ಲ...

ಇಲ್ಲಿ ಏನಿದ್ದರೂ ನಾನೆ ...ನಿಮ್ಮ ಸತ್ತ ಪ್ರೀತಿಯ ಜೀವಂತಿಕೆಗೂ ...ಪ್ರೀತಿಯ ಗಂಧ ಗೊತ್ತಿರದ ಸನ್ಯಾಸಿಗೂ ಅದರ ಪಾಟ ಹೇಳಿಕೊಡುವವನೂ ನಾನೆ ಅನ್ನುತ್ತಾ ಭೂಮಿಯನ್ನೆ ನೊರೆ ಹಾಲಲ್ಲಿ ಮೀಯಿಸುವಂತೆ ಕಾಣುವ ನಯಾಗರ ಜಲಪಾತದ ಅಂಚಲ್ಲಿ ನಾನು ನಿಂತಿದ್ದೇನೆ ನಿನ್ನ ನೆನಪಲ್ಲೆ ಬಿಳಿನೊರೆಗಳಿಗೆ ಧುಮುಕಿದರೆ ಹೇಗೆ ಅನ್ನುವ ಯೋಚನೆಯೊಂದಿಗೆ... ಅದು ನನ್ನನ್ನು ತಟ್ಟಿ ಸಂತೈಸಬಹುದಾ ಚಿರನಿದ್ದೆಯ ಅಪ್ಪುಗೆ ಕೊಟ್ಟು...ಅಥವಾ ಹೇಗಾದರು ಮಾಡಿ ನಿನ್ನನ್ನೊಮ್ಮೆ ಇಲ್ಲಿಗೆ ಕರೆದುಕೊಂಡು ಬಂದು ತೋರಿಸಲಾ ...ಮತ್ತೆ ನಮ್ಮ ಪ್ರೀತಿಯ ಮರುಹುಟ್ಟಿಗಾಗಿ...ಆಸೆ ಎನೋ ಕಾಡುತ್ತಿದೆ ಆದರೆ ಅದೆಷ್ಟು ನಿಷ್ಪ್ರಯೊಜಕ ಎಂಬುದೂ ಕಾಡುತ್ತಿದೆ ನಾನು ನಿನ್ನ ನೆನಪಿಗೂ ನಿನ್ನವನಾಗಿ ಉಳಿದಿಲ್ಲವಲ್ಲ ನಿನ್ನೊಳಗೆ.ಅದ್ಯಾರೊ ನೆಟ್ಟು ಹೋಗಿದ್ದಾರಲ್ಲಾ ನಿನ್ನ ಮಡಿಲೊಳಗೆ ಅವರ ಇರುವನ್ನ...

ಹೀಗೆಲ್ಲ ಕಲ್ಪಿಸಿಕೊಂಡೇ ನಿನ್ನ ನೆನಪಿನ ಕೈಯ್ಯನ್ನು ನನ್ನ ಹೆಗಲ ಮೇಲೇರಿಸಿಕೊಂಡು ಸಾವಿರಾರು ಜನಗಳ ಮಧ್ಯೆ ನಾನು ಸಾಗುತ್ತಿದ್ದೇನೆ ನಾನೂ ಒಂಟಿಯಾಗಿರಲಿಲ್ಲ ಇವಳು ದೂರಾಗುವವರೆಗೂ ಎಂದು ಹೇಳಿಕೊಂಡು...ನೀನು ಹಿಂದೆಲ್ಲ ನನ್ನ ಜೊತೆ ಹಾಕಿದ ಹೆಜ್ಜೆಗಳು ಇಂದೂ ಜೊತೆಬಿಡುತ್ತಿಲ್ಲ ಅವಳಿಲ್ಲದಿದ್ದರೇನು ಜೊತೆಯಾಗಲು ನಾವಾದರು ಇದ್ದೇವಲ್ಲ ಅವಳಿರುವನ್ನು ನಿನ್ನೆದೆಯಲ್ಲಿ ಸದಾ ಅಚ್ಚೊತ್ತಲು ....

ಅದೆಷ್ಟು ಹಿತಹಿಂಸೆ ಗೊತ್ತಾ ದೇವಕಿ...ನೀನಾದರು ಸುಸ್ತಾಗಿ ನನ್ನ ಭುಜಕ್ಕೊರಗಿ ನಿದ್ದೆ ಹೋಗಬಹುದೇನೋ ...ಇದು ಸದಾ ಎಚ್ಚರವಾಗೇ ಇರುತ್ತದೆ ನಾನೂ ನಿದ್ದೆ ಹೋಗದಂತೆ ತಟ್ಟೆಬ್ಬಿಸುತ್ತಾ...

ಈ ಜಲಪಾತದ ಸದ್ದೇ ಅಲ್ಲಿ ಬರುವವರ ಚರಿತ್ರೆಯ ನೆನಪುಗಳ ಸದ್ದಡಗಿಸಲು ಅಂತನ್ನಿಸುತ್ತಿದೆ...ಹಳೆಯ ಬೇಡವಾದ ನೆನಪುಗಳನ್ನು ತಂದು ನನ್ನನ್ನೂ ಯಾಕೆ ಭಾರತದ ಗಂಗೆಯಂತೆ ಮಲಿನ ಮಾಡುತ್ತೀರಿ ಎಂದು ಕೇಳುತ್ತದೆ.

ಆದರು ಕೆಲವು ಸರ್ತಿಅಂತರ್ಶತ್ರು ಆಗುವ ಮನಸ್ಸು ಯಾವುದನ್ನೂ ಲೆಕ್ಕಿಸದೆ ಏನೇನುಗಳನ್ನೋ ನೆನಪಿಗೆ ತರಿಸುತ್ತದೆ...ನನಗೂ ಕಥೆಯೊಂದು ನೆನಪಿನ ಕದ ತಟ್ಟುತ್ತಿದೆ.

ಒಂದೂರಿನಲ್ಲಿ ಒಬ್ಬ ರಾಜನಿದ್ದಂತೆ...ಅವನಿರುವ ಅರಮನೆಗೆ ಕಾಣುವ ಹಾಗೆ ಬೀದಿಯ ತುದಿಯಲ್ಲಿ ಒಂದು ಮನೆ ಇತ್ತಂತೆ.ಆಮನೆಯಲ್ಲಿ ಒಬ್ಬಳು ಸುಂದರಿಗಿಂತ ಸುಂದರಿ ಅನ್ನುವ ಹಾಗಿರುವ ಸುಂದರಿ ಇದ್ದಳಂತೆ.ಒಂದುದಿನ ಆ ಸುಂದರಿಯನ್ನು ರಾಜ ಕಿಟಕಿಯಿಂದ ನೋಡುತ್ತಾನೆ ಅವಳ ಮೇಲೆ ಆಸೆಯಾಗುತ್ತದೆ...ಅವಳಿಗೆ ತಿಳಿಸುತ್ತಾನೆ.ಆ ಸುಂದರಿ ಒಂದು ಶರತ್ತು ಹಾಕುತ್ತಾಳೆ.

ರಾತ್ರಿ ಸತತವಾಗಿ ಬೀಳುತ್ತಿರುವ ಮಂಜಲ್ಲಿ ಹತ್ತುದಿನಗಳ ಕಾಲ ಕೋಟು ಹ್ಯಾಟುಗಳಿಲ್ಲದೆ ನನ್ನ ಮೆನೆಯ ಕಿಟಕಿಗೆ ಕಾಣಿಸುವ ಹಾಗೆ ಇಡೀ ರಾತ್ರಿ ಬೀದಿಯಲ್ಲಿ ನಿಲ್ಲಬೇಕು ಹತ್ತನೇ ದಿನ ನಾನು ನಿನಗೆ ಹಾರಹಾಕುತ್ತೇನೆ....

ತಾನು ರಾಜ ಅನ್ನುವುದನ್ನೂ ಮರೆತ ರಾಜ ಅವಳಿಗಾಗಿ ದಿನಾ ರಾತ್ರಿ ಹಿಮಸ್ನಾನ ಮಾಡುತ್ತಾ ರೆಪ್ಪೆಯಲುಗಿಸದೆ ಕಿಟಕಿಯನ್ನೆ ನೋಡುತ್ತಾ ನಿಲ್ಲುತ್ತಾನೆ ...ಆ ಸುಂದರಿ ಅದ್ಯಾವ ಚಿಂತೆ ಇಲ್ಲದೆ ಕಿಟಕಿಯಿಂದ ಬರುವ ಚಳಿಯಪ್ಪುಗೆಗೆ ರಗ್ಗಿನ ಹೊದಿಕೆ ಹೊದ್ದು ನಿರಾಳ ನಿದ್ದೆಯ ಮೊರೆ ಹೋಗುತ್ತಾಳೆ.

ಹತ್ತನೆಯ ದಿನ ರಾಜ ಅದುಮಿಟ್ಟ ಗೆಲ್ಲುವಿಕೆಯ ನಗುವೊಂದಿಗೆ ಬೀದಿಯಲ್ಲಿ ಹಿಮಕ್ಕೊಡ್ಡಿ ತನ್ನನ್ನು ನಿಲ್ಲಿಸಿಕೋತಾನೆ ಕಾತುರದ ನಾಳೆಯ ಮುಂಜಾವಿಗಾಗಿ...ಅವಳು ಆ ರಾತ್ರಿಯೂ ಸವಿನಿದ್ದೆಯ ಆಲಿಂಗನದ ಮುಗುಳು ನಗುವಲ್ಲಿ ರಾತ್ರಿ ಕಳೆದೆದ್ದು ಕಿಟಕಿಯಲ್ಲಿ ಬೀದಿಯತ್ತ ನೋಡುತ್ತಾಳೆ...ರಾಜ ಅದೇ ಖುಶಿಯಲ್ಲಿ ತನ್ನತ್ತಲೆ ಕಣ್ಣು ಮಿಟುಕಿಸದೆ ನೋಡುತ್ತಿದ್ದಾನೆ .ಕೊಟ್ಟ ಮಾತಿನಂತೆ ಆ ಸುಂದರಿ ಬೀದಿಗಿಳಿದು ರಾಜನತ್ತ ಸಾಗಿ ಹಿಂಬದಿಯಿಂದ ಮನಸಾರೆ ತಬ್ಬಿ ಎದುರಿಗೆ ಬಂದು ಅವನಿಗೆ ಹಾರ ಹಾಕುತ್ತಾಳೆ ಅವನ ಕಣ್ಣು ಆಸೆಯಿಂದ ಹಾಗೇ ನೋಡುತ್ತಿದೆ ಇದು ಯಾವತ್ತೂ ಬತ್ತದ ಪ್ರೀತಿ ಎಂದು...ರಾಜನ ಕೊರಳಿಗೆ ಆ ಹಾರ ಭಾರವಾಯಿತು ಅನ್ನಿಸುತ್ತಿದೆ ಅವಳಿಗೆ ಸೋತ ಪ್ರೀತಿಯ ದೇಹದ ಬಾರ ನಿಧಾನಕ್ಕೆ ಅವಳನ್ನು ಆಶ್ರಯಿಸುತ್ತದೆ ನಿಧಾನಕ್ಕೆ ಇಂಚಿಂಚೆ ಕುಸಿಯುತ್ತಾ...ಅವಳ ಪಾದಕ್ಕೆ ತನ್ನ ಜೀವವನ್ನೇ ಅರ್ಪಿಸುತ್ತಾ...ರಾಜನ ಪ್ರಾಣ ರಾತ್ರಿಯಹಿಮದಲ್ಲೆ ಲೀನವಾಗಿತ್ತು ಹಿಮವಾಗಿ, ಆದರೂ ದೇಹ ನಿಂತೇ ಇತ್ತು ಆ ಸುಂದರಿಯ ಕೊನೆ ಸ್ಪರ್ಶಕ್ಕೆ...ನೆನಪಿನ ಮುತ್ತಿಡಲು.

ದೇವಕಿ ನನ್ನ ಉಸಿರು ಆ ರಾಜನಂತೆ ಬಸಿದು ಹೋಗುವುದಿಲ್ಲ ಹತ್ತಲ್ಲ ನೂರುದಿನ ನಿಂತರೂ ದೇಹ ಬಿಟ್ಟು. ಆದರೂ ನನ್ನನ್ನೂ ಆ ರಾಜನಂತೆ ಮಾಡು ಎಂದು ರಾತ್ರಿ ಕೊರೆವ ಹಿಮಕ್ಕೆ ಮೈಯ್ಯೊಡ್ದುತ್ತೇನೆ...ಹಿಮವನ್ನು ಸೂಜಿಯಂತೆ ಚುಚ್ಚಲು ಬೇಡಿಕೊಳ್ಳುತ್ತೇನೆ...ಒಂದೊಂದು ನರಳುವಿಕೆಗಳು ನಿನ್ನ ನೆನಪಿನ ಉಸಿರಾಗಲಿ... ದೇವಕಿ ನೀನೆಲ್ಲಿದ್ದೀಯೊ ಗೊತ್ತಿಲ್ಲ ಆದರೂ ನಿನ್ನ ಮನಸ್ಸಿಗೆ ರಾತ್ರಿ ಕಿಟಕಿಯ ಬಳಿ ನಿಲ್ಲುವ ಮನಸ್ಸಾಗಲಿ ಎದುರಿಗೆ ಬೀದಿ ಇದ್ದಲ್ಲಿ ವಾಸುವಿನ ಇರುವಿಕೆಯ ನೆನಪು ಸರಿದಾಡಲಿ...ನಸುನಕ್ಕು ಮತ್ತೆ ಸವಿನಿದ್ದೆಯ ತಬ್ಬಿಕೋ...ಹಳೆಯ ನೆನಪುಗಳೆಲ್ಲವನ್ನೂ ಬಾಗಿಲಾಚೆ ಹಾಕಿ...ಬೀದಿಯಲ್ಲಿ ನಿಂತ ವಾಸುಗಾಗಿ...

Wednesday, July 22, 2009

ಆ ಬಿಕ್ಕಳಿಕೆಯ ಸದ್ಧು ನಿನಗೆ ಕೇಳಿಸುವುದೇ ಇಲ್ಲ.

ಇದ್ದಕ್ಕಿದ್ದಂತೆ ಮನಸ್ಸಿಗೆ ಕತ್ತಲು ಆವರಿಸಿ ಬಿಡುತ್ತೆ. ಅತಂತ್ರ ಅನ್ನುವಂತ ಸ್ಥಿತಿ. . ಹಾಡುಗಾರನಿಗೆ ಹಾಡುತ್ತಿರುವಾಗಲೇ ಒಂದೆರೆಡು ಸಾಲುಗಳು ಮರೆತಂತೆ . ಆ ಸಾಲುಗಳನ್ನ ನೆನಪಿಸಲು ಪ್ರಯತ್ನಿಸುತ್ತೇನೆ ಪರದೆಯ ಬದಿಗೆ ಸರಿದು.ನಿನ್ನ ಬಗೆಗಿನ ಪ್ರೀತಿ ಪ್ರೇಮ ವಿರಹ ಸಿಟ್ಟು ಪ್ರತಿಯೊಂದನ್ನೂ ಬಚ್ಚಿಟ್ಟ ಕಡೆ ಆ ಸಾಲುಗಳನ್ನ ಹುಡುಕುತ್ತೇನೆ .ಒಂದೇ ಒಂದು ಸಲ ನಿನ್ನನ್ನ ನೋಡಿಬಿಡಬೇಕೆಂಬ ಹಂಬಲ ಜಾಸ್ತಿಯಾಗುತ್ತಾ ಹೋಗುತ್ತೆ. ನಿನ್ನ ನೋಡಿದರೇನೆ ನಿನ್ನ ಕಣ್ಣಿಂದ ಹುಟ್ಟುವ ಆ ಸಾಲುಗಳು ನನ್ನ ನಾಲಿಗೆ ಸವರುವುದಂತೆ. ಏನು ಮಾಡಲಿ ಪ್ರೀತಿ ಎಂಬ ಮೊದಲ ನಿಲ್ದಾಣದಿಂದ ಅವಮಾನಕರವಾದ ನೋವಿನ ಕಣ್ಣೀರನ್ನ ಒರೆಸುವ ನೆಪದಲ್ಲಿ ಮುಖವನ್ನೆ ಕರವಸ್ತ್ರದಲ್ಲಿ ಮುಚ್ಚಿಕೊಂಡು ಇನ್ನೊಂದು ನಿಲ್ದಾಣಕ್ಕೆ ಬಂದು ಕುತಿದ್ದೇನೆ. ಅದೆಷ್ಟು ಹೊತ್ತು ಕೂತಿದ್ನೋ ಗೊತ್ತಿಲ್ಲ. ತಲೆಯೆತ್ತಿ ನೋಡಿದಾಗ ಆ ನಿಲ್ದಾಣದಲ್ಲಿ ವಾಹನಗಳು ಇರಲಿಲ್ಲ ಓಡಾಡೋದು ಯಾವತ್ತೋ ನಿಲ್ಲಿಸಿಬಿಟ್ಟಿದ್ದವು. ಇವತ್ತು ನನ್ನ ಒಬ್ಬೊಂಟಿತನಕ್ಕೆ ಸಂಗಾತಿಯಾಗಲು . ಆ ನಿಲ್ದಾಣ ನನ್ನನ್ನ ಸಂತೈಸುತ್ತಿದೆ. ನಿನ್ನನ್ನ ನೆನಪಿಸುತ್ತಿದೆ. ಸಧ್ಯಕ್ಕೆ ನನ್ನಲ್ಲಿ ನಿನ್ನೆಡೆಗೆ ಪ್ರೀತಿ ಪ್ರೇಮ ವಿರಹ ಕೋಪ ಸಿಟ್ಟು ಇದ್ಯಾವುದೂ ಇಲ್ಲ ದೇವಕಿ. ಈ ನಿಲ್ದಾಣ ಅವೆಲ್ಲವನ್ನೂ ತಣ್ಣಗೆ ಮಾಡಿ ನನಗೋಸ್ಕರ ಒಂದು ಬಸ್ಸನ್ನ ಕರೆಸಿ ಕೈ ಹಿಡಿದು ಕೂರಿಸಿ ಬಿಟ್ಟಿದೆ.

ಬಸ್ಸನ್ನೇರಿ ಕುಳಿತವನಿಗೆ ಎಲ್ಲಿಗೆ ಹೋಗಬೇಕು ಅಂತ ತಿಳಿಯದೇ ದೇವಕಿಯ ಊರು ಅಂದು ಕಂಡಕ್ಟರ್ ಹತ್ತಿರ ಬೈಸಿಕೊಂಡೆ. ಅಕ್ಕಪಕ್ಕದವರೆಲ್ಲ ಕಿಸಕ್ಕಂತೆ ನಕ್ಕರಾದರೂ ನನ್ನ ಮುಖದಲ್ಲಿದ್ದ ನೋವು ಅವರಿಗೂ ತಿಳಿಯುತು ಅನ್ನಿಸುತ್ತೆ ಸುಮ್ಮನಾದರು.
ಅಲ್ಲಿದ್ದವರೆಲ್ಲ ತುಂಬಾ ನಗುತ್ತಿದ್ದರು. ನನಗೆ ಈಗೀಗ ನಗು ಅಂದ್ರೆ ಏನು ಅನ್ನೋದು ಮರೆತು ಹೋಗಿದೆ ಆದ್ದರಿಂದ ಅದ್ಯಾವುದಕ್ಕೂ
ಪ್ರತಿಕ್ರಯಿಸದೆ ಸುಮ್ಮನೆ ನಿನ್ನ ನೋಡುವ ಹಂಬಲದಿಂದ ಹಾದಿಯುದ್ದಕ್ಕೂ ನಿನ್ನನ್ನ ಧ್ಯಾನಿಸುತ್ತ ಮುಂದೆ ಸಾಗುತ್ತಿದ್ದೇನೆ. ಬಸ್ಸು ನಿಧಾನವಾಗಿ ಚಲಿಸುತ್ತಿದೆ. ಆದರೆ ನಿನ್ನನ್ನ ನೋಡುವ ನನ್ನ ಹಪಹಪಿಯ ವೇಗಕ್ಕೆ ಬಸ್ಸು ತನ್ನ ವೇಗವನ್ನ ಇನ್ನಷ್ಟು ತಗ್ಗಿಸುತ್ತ ಒಳಗೊಳಗೆ ಕಿರುನಗುವೊಂದಿಗೆ ಅಣಕಿಸುತ್ತಿದೆ . ಈಗ ಇನ್ನೊಂದು ನಿಲ್ದಾಣದಲ್ಲಿದ್ದೇನೆ ಬಸ್ಸು ನಿಂತಿದೆ. ಎಲ್ಲರಿಗಿಂತ ಮೊದಲಿಗನಾಗಿ ಇಳಿಯೋಕೆ ಹೋದ ನನಗೆ ಕೆಟ್ಟದಾಗಿ ಕಂಡಕ್ಟರ್ ಬೈದು ಬಿಟ್ಟ. ಇನ್ನೂ ಮೂರು ಸ್ಟಾಪಿದೆ ಕುಳಿತುಕೊಳ್ರಿ ಅಂದು ಗದರಿಬಿಟ್ಟ. ಬಸ್ಸು ನಿಧಾನಕ್ಕೆ ಚಲಿಸಲಾರಂಬಿಸಿದೆ.

ಪಕ್ಕದಲ್ಲಿಯೇ ನನ್ನಮ್ಮನ ಹಾಗಿದ್ದ ಯಾರದೋ ತಾಯಿ ಕುಳಿತು ನನ್ನನ್ನೇ ನೋಡುತ್ತಿದ್ದಾಳೆ. ತಾನು ಮಕ್ಕಳನ್ನ ಪ್ರೀತಿಸಿದ ಬಗೆಯನ್ನ ಮಕ್ಕಳು ತಾಯಿಗೆ ಬಗೆದ ದ್ರೋಹವನ್ನ ಬಿಡಿಬಿಡಿಯಾಗಿ ಹೇಳುತ್ತಿದ್ದರೂ ನನಗೆ ತಾಯಿಯ ಪ್ರೀತಿ ಅರ್ಥವಾಯಿತಾದರೂ ಕೊನೆಗೆ ಆ ತಾಯಿ ಬಳಸಿದ ದ್ರೋಹ ಅನ್ನುವ ಶಬ್ಧ ನನಗೆ ಅರ್ಥವಾಗಲಿಲ್ಲ. ನಿನ್ನ ಪ್ರೀತಿಸಿದ ನನಗೆ ಪ್ರಪಂಚದ ಯಾವ ಕೆಟ್ಟ ಸಮಾಚಾರಗಳೂ ಕೆಟ್ಟ ಶಬ್ಧಗಳು ಅರ್ಥವಾಗುವುದಿಲ್ಲ. ನೀನು ನನ್ನ ಮಗನ ಹಾಗೆ ಇದ್ದೀಯಪ್ಪ ಅಂದಳು. ಆ ಕ್ಷಣಕ್ಕೆ ತುಂಬಾ ಹಿತವೆನಿಸಿತಾದರೂ ಮುಂದಿನ ನಿಲ್ದಾಣದಲ್ಲಿ ಆ ತಾಯಿ ಇಳಿಯಬೇಕಾದ್ದರಿಂದ ಮುಂದೆ ಕಾಡುವ ಒಂಟಿತನದ ಭಯದಿಂದ ಆ ತಾಯಿಗೆ ಯಾವ ಪ್ರತಿಕ್ರಿಯೆಯನ್ನೂ ತೋರಿಸದೇ ಕಿಟಕಿಯಾಚೆ ತಲೆ ಹಾಕಿ ಕುಳಿತುಬಿಟ್ಟೆ. ತಾಯಿ ಹೃದಯ ಅದೆಷ್ಟು ನೊಂದುಕೊಂಡಿತೋ. ಅಷ್ಟರಲ್ಲಿಯೇ ಮತ್ತೊಂದು ನಿಲ್ದಾಣದಲ್ಲಿ ಕೆಲವು ಯಾತ್ರಿಗಳು ಇಳಿದರು. ಯಾರೋ ಬಂದು ಇಳಿದವರನ್ನ ತಬ್ಬಿಕೊಂಡರು, ಸಂತೈಸಿದರು ನಕ್ಕರು ಅದೆಲ್ಲವನ್ನ ನೋಡಿ ಈ ಪ್ರಪಂಚದಲ್ಲಿ ನಾನೊಬ್ಬನೇನ ಒಂಟಿ ಅನ್ನಿಸಿದ್ದು ಸುಳ್ಳಲ್ಲ .. ನಿನ್ನೂರಿನ ನಿಲ್ದಾಣಕ್ಕೆ ಇನ್ನೂ ಎರಡು ಸ್ಟಾಪಿದೆ ಅಂತೆ.

ಬಸ್ಸೊಳಗೆ ಕೆಲವೇ ಕೆಲವು ಜನಗಳಿದ್ದಾರೆ. ಯಾಕೋ ಎಲ್ಲರೂ ತುಂಬ ನೊಂದುಕೊಂಡವರಂತೆ ಕಾಣಿಸುತ್ತಿದ್ದಾರೆ. ಪಾಪ ಎಲ್ಲರೂ ಪ್ರೀತಿ ಕಳೆದುಕೊಂಡವರಿರಬೇಕು. ಅವರಿಗೆ ಯಾರು ಇಲ್ಲವೆಂದೆನಿಸುತ್ತಿದೆ. ಇನ್ನೇನು ನಿನ್ನೂರು ಕೇವಲ ಎರಡು ನಿಲ್ದಾಣದಾಚೆ ಅಂದುಕೊಂಡ ಈ ಹೃದಯ ಬಲವಂತದ ನಗುಮುಖ ಹೊತ್ತು ನಗುತ್ತಿದೆ. ಅಲ್ಲಿರುವ ಎಲ್ಲಿರಿಗಿಂತಲೂ ನಾನೆ ಸುಖಿ ಅಂದುಕೊಂಡು ಎಲ್ಲರನ್ನೂ ನೋಡುತ್ತೇನೆ ಒಂತರ ಹೆಮ್ಮೆಯೆನಿಸುತ್ತಿದೆ. ನಿನ್ನೂರು ಹತ್ತಿರವಾಗುತ್ತಿದೆ. ಒಳಗೊಳಗೆ ನನಗೇ ಅಂತ ಒಂದು ಜೀವ ಇದೆ ಅನ್ನುವ ಶಬ್ಧ ನನಗೇ ಕೇಳಿಸುತ್ತಿದೆ. ಬಸ್ಸು ನಿಲ್ಲುತ್ತದೆ. ಬಸ್ಸಿನ ಒಳಗಿದ್ದವರ ಮುಖಗಳೆಲ್ಲ ಅರಳುತ್ತವೆ. ಅಲ್ಲಿ ಇಳಿದವರನ್ನೆಲ್ಲ ಯಾರೊ ಬಂದು ತಬ್ಬಿಕೊಳ್ಳುತ್ತಿದ್ದಾರೆ. ನಾವಿದ್ದೀವಿ ಅನ್ನುವ ಮಾತುಗಳನ್ನಾಡುತ್ತಿದ್ದಾರೆ. ಅದೆಲ್ಲವೂ ನನಗೆ ಕೇಳಿಸುತ್ತಿದೆ.
ನಿನ್ನೂರಿನ ನಿಲ್ದಾಣ ಇನ್ನೊಂದು ಸ್ಟಾಪಿದೆ...

ತುಂಬಾ ಕುಷಿಯಾಗಿದ್ದೀನಿ. ತುಂಬಾ ದಿನಗಳ ನಂತರ ನಿನ್ನ ಎದೆ ಬಡಿತವನ್ನ ಕಿವಿಯಾರೆ ಕೇಳುವ ಅಪೂರ್ವ ಅವಕಾಶ ನನ್ನದಾಗಲಿದೆ. ನನ್ನೆಲ್ಲ ನೋವುಗಳು ಕರಗುವ ಸಮಯ ಕೇವಲ ಕೆಲವೇ ನಿಮಿಷಗಳ ದೂರದಲ್ಲಿದೆ. ಇನ್ಯಾವತ್ತೂ ನಾನು ಅಳಬಾರದು ನೋಯಬಾರದು. ಜಗತ್ತಿನಲ್ಲಿರುವ ಅತ್ಯಂತ ಸಂತೋಷದಿಂದಿರುವ ವ್ಯಕ್ತಿ ಈ ವಾಸು ಆಗಬೇಕು ಅಂದುಕೊಂಡು ಮುಂದೆ ಮುಂದೆ ನೊಡುತ್ತಾ ಹೋಗುತ್ತಿದ್ದೇನೆ. ನಿನ್ನ ನೆನಪು ಮಂಪರಾಗಿ ನನ್ನ ಆವರಿಸ್ಕೊಂಡುಬಿಡ್ತು.. ಆ ಮಂಪರಿನಲ್ಲಿ ಬರೀ ನಿನ್ನುಸಿರ ಗಝಲುಗಳೇ .

ಬಸ್ಸು ನಿಂತಿದೆ ನಿನ್ನೂರು ಸ್ಟಾಪು ಅಂದುಕೊಂಡೆ. ಕಂಡಕ್ಟರ್ ಕೆಟ್ಟದಾಗಿ ಕಿರಿಚಾಡಿದ. ಅದೆಷ್ಟೊ ಸರ್ತಿ ಕೂಗಿದ್ನಂತೆ, ತಟ್ಟಿದ್ನಂತೆ ಹೆಸರು ಗೊತ್ತಿಲ್ಲದೆ ಒಹೋಯ್ ಅಂದ್ನಂತೆ, ಕಿವಿಯ ಹತ್ತಿರ ಕೂ.. ಅಂದ್ನಂತೆ. ಕ್ಷಮಿಸು ನಿನ್ ಮೇಲೆ ಆರೋಪ ಮಾಡ್ತಿಲ್ಲ. ಅಷ್ಟು ಆವರಿಸಿಕೊಂಡಿದ್ದೆ ನೀನು. ಬಸ್ಸು ಇನ್ನೂ ನಿಂತಿತ್ತು. ದೇವಕಿ ಊರು ಇದೇನಾ ಅಂತ ಕೇಳಿದೆ. ಬಸ್ಸಿನ ಎದುರುಗನ್ನಡಿಗೆ ರಭಸವಾಗಿ ನೀರು ಬಿತ್ತು. ಎದುರುಗಡೆಯಿಂದ ಕ್ಲೀನರ್ ದೊಡ್ಡ ಡಬ್ಬದಿಂದ ನೀರೆರೆಚುತ್ತಿದ್ದ. ಬಸ್ಸು ಒಂದು ನದಿಗೆ ಅರ್ದ ಇಳಿದು ನಿಂತಿತ್ತು. ಡ್ರೈವರ್ ಕಂಡಕ್ಟರ್ ಕ್ಲೀನರ್ ನಾಳೆಗೆ ಬಸ್ಸನ್ನ ಸಿದ್ಧಮಾಡುತ್ತಿದ್ದರು. ಆ ನದಿಯಾಚೆ ಯಾವ ಮಾರ್ಗಗಳೂ ಇರಲಿಲ್ಲ. ನನ್ನಾಸೆಯ ನಿನ್ನೂರಿಗೂ ಕೂಡ.

ಹರಿಯುತ್ತಿರುವ ನೀರ ಮದ್ಯೆ ನಿಂತ ಬಂಡೆಗಲ್ಲು ಆತ್ಮೀಯವಾಗಿ ಕೈಬೀಸಿದ ಹಾಗಾಯ್ತು.

ಬೆಳದಿಂಗಳು ನಿಧಾನಕ್ಕೆ ವಿರಹದ ಗೀತೆಯನ್ನ ಹಾಡುತ್ತಾ ಹೆಜ್ಜೆ ಹಾಕುತ್ತಿರುವಾಗಲೇ
ಎಲ್ಲಿ ಜಾರಿತೋ ಮನವೂ ಎಲ್ಲೆ ಮೀರಿತೋ
.....
....
ಬಾನಿನಲ್ಲಿ ಒಂಟಿತಾರೆ ಸೋನೆ ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳುಯಾರೋ ನೀರೆ
.....
ಪ್ರೀತಿಯ ಕವಿ ಭಟ್ಟರು ಬರೆದ ಬಿಕ್ಕಳಿಕೆಯ ಈ ಸಾಲುಗಳಲ್ಲಿ ಬಿಕ್ಕುತಿರುವಳು ಆ ನೀರೆ ಮಾತ್ರವಲ್ಲ.. ನಿನ್ನೂರಿನ ದಾರಿ ತಲುಪಲಾರದೇ ಈ ವಾಸು ಕೂಡ ಬಿಕ್ಕುತ್ತಿದ್ದಾನೆ. ಆದರೂ ಆ ಬಿಕ್ಕಳಿಕೆಯ ಸದ್ಧು ನಿನಗೆ ಕೇಳಿಸುವುದೇ ಇಲ್ಲ.
ಹಾಡುಗಾರ ಮರೆತು ಹೋದ ಹಾಡಿನ ಸಾಲುಗಳು ನೆನಪಿಗೆ ಬರುತ್ತಲೇ ಇಲ್ಲ.
ನೀನು ನನ್ನ ಮರೆತಂತೆ.

Monday, July 20, 2009

ನನ್ನ ಬಳಿಯೀಗ ನಿನ್ನದೂ ಅಂತ ಒಂದಕ್ಷರವೂ ಇಲ್ಲ..!

ಸಂಪಿಗೆ ಮೂಗಿನ ಹಸಿರು ದಾವಣಿಯ ನನ್ನ ಅಂತರಂಗದ ಗೆಳತಿಗೆ ನಿನ್ನ ಪ್ರೇಮದ ಗೆಳೆಯ ಕೊಡುವ ಮತ್ತು ಬೇಡುವ ಸಿಹಿ ಸಿಹಿ ಮುತ್ತುಗಳು.
ನಾನು ಕ್ಷೇಮ ನೀನು ಕ್ಷೇಮವೆಂದು ನಿನ್ನ ಪತ್ರದಿಂದ ತಿಳಿಯಿತು, ತಿಳಿಸುವುದೇನೆಂದರೆ,
ನಾನು ನಿನ್ನಂತರಂಗದ ಒಲವಿನ ನೆನಪುಗಳಲ್ಲಿ ಸದಾ ಖುಷಿಯಾಗಿದ್ದೆ, ಖುಷಿಯಾಗಿದ್ದೇನೆ ಮತ್ತು ಖುಷಿಯಾಗಿರುತ್ತೇನೆ. ಮತ್ತೆ ನೀನು ಹೇಗಿದ್ದೀಯಾ? mooಗಿನ ತುದಿಯಲ್ಲಿ ಮೊದಲಿನಂತೆ ಕೊಪದ ಜ್ವಾಲಾಮುಖಿ ಆಗಾಗ ಚಿಮ್ಮುತ್ತಿದೆಯೇ? ನಿನ್ನ ಮಲ್ಲಿಗೆ ಜಡೆ ಈಗಲೂ ನಿನ್ನ ಮನೆಯ ಅಂಗಳದ ಅಂಚನ್ನು ಇಷ್ಟಿಷ್ಟೇ ತಾಕುತ್ತಿದೆಯೇ? ನಿನ್ನ ತುಟಿಗಳಲ್ಲಿರುವ ನನ್ನ ನಗು ಸ್ವಲ್ಪವೂ ಮಾಸಿಲ್ಲ ತಾನೆ? ನನ್ನ ಹೆಸರಿನ ನಿನ್ನ ಕೊಟ್ಟಿಗೆಯ ಕರುವನ್ನ ದಿನಕ್ಕೆಷ್ಟು ಬಾರಿ ಮುದ್ದಾಡಿ ಬರುತ್ತೀ ಮುದ್ದುಗಿಣಿ? ನೀನು ರಾತ್ರಿಪುರ ತಬ್ಬಿ ಮಲಗುವ ಬೆಕ್ಕಿನ ಮುದ್ದುಮರಿಗೆ ನನ್ನ ಹೆಸರಿಟ್ಟ ಔಚಿತ್ಯವೇನೆಂದು ಪ್ರಶ್ನಿಸಬಹುದೇ? ಪಿತೃ ಸಮಾನರಾದ ನಿಮ್ಮ ತಂದೆಯವರಿಗೆ ವಾಸುವಿನ ಒಲವನ್ನ ತಿಳಿಸುವ ಘಳಿಗೆಯನ್ನ ಪಕ್ಕದ ಮನೆಯ ಸುಬ್ರಾಯ ಭಟ್ಟರನ್ನ ಕೇಳಿ ಆಯಿತೆ? ಮನೆ ಮುಂದಿನ ಗೋರಂಟೀ ಗಿಡಕ್ಕೆ ನನ್ನ ನಮಸ್ಕಾರವನ್ನ ಹಿಂದಿನ ಪತ್ರದಲ್ಲೆ ತಿಳಿಸಿದ್ದೆ ಅದಕ್ಕೆ ತಲುಪಿಸಿದೆಯಾ? ನನ್ನ ಕೈಗಳಿಂದ ನಿನ್ನ ಮುದ್ದಾದ ಕೈಗೆ ಬಣ್ಣ ತುಂಬಿದ ಮುದ್ದಾದ ಗಿಡ ಅದು. ಅದಕ್ಕೆ ನನ್ನ ನಮಸ್ಕಾರಗಳು ಸಂದಾಯವಾಗಲೇ ಬೇಕು ಅದಕ್ಕಾಗಿ ಮತ್ತೊಮ್ಮೆ ನೆನಪಿಸುತ್ತಿದ್ದೇನೆ.

ನನ್ನ ಟ್ರಂಕ್ ಕಾಲ್ ಗೆ ನೀನು ತೋಟದ ಮನೆಯ ಮಾರಪ್ಪಣ್ಣನ ಮನೆಗೆ ರಾತ್ರಿ ಓಡಿ ಬರುವಾಗ ಜಾರಿ ಬಿದ್ದು ಮಂಡಿ ತರಚಿಸಿಕೊಂಡಿರುವುದು ತಿಳಿಸಿದ್ದೆ ವಿಷಯ ತಿಳಿದು ನನಗೇ ನೋವಾದಷ್ಟು ನೋವಾಯಿತು. ಈಗ ಆ ಪೋನು ಹಾಳಾಗಿದೆ ಎಂದು ತಿಳಿದು ತುಂಬಾ ಕುಷಿಯಾಯಿತು. ಮಂಡಿ ತರಚಿಕೊಂಡಾಗ ತ್ಯಾಂಪಣ್ಣನ ನೋವಿನೆಣ್ಣೆಯನ್ನು ಹಚ್ಚಿ ಬಿಸಿ ನೀರು ಹಾಕುತ್ತಿದ್ದೆ ಹಾಗೆ ಕದ್ದು ಒಂದು ಮುತ್ತು ಕೂಡ(ಮುಖ ತಿರುಗಿಸ ಬಾರದು)

ದೇವಕಿ ನನಗೀಗಲು ರತ್ನಮ್ಮನ ಹೋಟೇಲಿನ ಪಡ್ಡು ತಿನ್ನುವ ಆಸೆಯಾಗುತ್ತಿದೆ ಖಾರದ್ದು ಮತ್ತು ಸಿಹಿಯದ್ದು, ಸಿಹಿನೇ ಇಷ್ಟ ನೀನು ಕಚ್ಚಿ ಕೊಡ್ತಿದ್ಯಲ್ಲ ಅದು ಇನ್ನು ಇಷ್ಟ...... ಏನು ಮಾಡಲಿ? ಸೊಂಪಾಗಿ ಬೆಳೆದ ಜಾರಿಗೆ ಮರದಲ್ಲಿ ಇಬ್ಬರು ಹತ್ತಿ ಕುಳಿತು ಅರ್ಧ ದಿನ ಕಳೆದದ್ದು ಈಗಲು ನಗು ತರಿಸುತ್ತಿದೆ

ನೀನು ಬರೆಯುವ ಮುಂದಿನ ಪತ್ರದಲ್ಲಿ ಉತ್ತರದ ಸಮೇತ ನಿನ್ನ ಮಲ್ಲಿಗೆಯ ನಗುವನ್ನ ರವಾನೆ ಮಾಡತಕ್ಕದ್ದು, ನೀನು ಇಷ್ಯೀ ಥೂ ಕೊಳಕಾ...ಅಂದರೂ ಚಿಂತೆಯಿಲ್ಲ ಪತ್ರದ ಜೊತೆ ಒಂದೆರೆಡು ಮುತ್ತುಗಳಿರಲಿ, ಎರಡು ಬೇಕು, ಮೂರು ಸಾಕು ಅನ್ನುವ ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಹಾಗೂ ನಮಗೆ ಗಂಡು ಮಗುವಾದರೇ ಭೀಮಸೇನ ಅಂತಲೂ ಹೆಣ್ಣುಮಗುವಾದರೇ ಹೇಮಾವತಿ ಅಂತಲೂ ಹೆಸರಿಡುವ ನಿನ್ನ ಜೊತೆಗಿನ ನನ್ನ ಜನ್ಮ ಸಿದ್ಧ ಹೋರಾಟದಂತಹ ಮಾತಿನಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಹಾಗು ನಿಮ್ಮ ತಂದೆಯವರು ನಮ್ಮ ಮದುವೆಗೆ ಒಪ್ಪಿಗೆ ಸೂಚಿಸಲಿ ಎಂದು ಹನುಮಂತ ದೇವರ ಗುಡಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರತಕ್ಕದ್ದು, ಪೂಜೆ ಮಾಡಿಸಿಕೊಂಡು ಬಂದ ಕುಂಕುಮ, ವಿಬೂತಿ, ಮತ್ತು ಸ್ವಲ್ಪ ಅಕ್ಕಿಕಾಳುಗಳನ್ನ ಪತ್ರದ ಜೊತೆ ಕಳುಹಿಸತಕ್ಕದ್ದು. ಮತ್ತು ಪತ್ರದ ಮೊದಲಿಗೆ ಪ್ರೀತಿಯ ಪತಿದೇವರಿಗೆ ಪ್ರೀತಿಯ ಸವಿಮುತ್ತುಗಳು ಎಂಬ ಒಕ್ಕಣೆಯನ್ನ ಕಡ್ಡಾಯವಾಗಿ ನಮೂದಿಸತಕ್ಕದ್ದು.

ಆದಷ್ಟು ಬೇಗ ನಿನ್ನನ್ನು ಬಂದು ಸೇರಿಕೊಳ್ಳುತ್ತೇನೆ. ಗೋರಂಟೀ ಗಿಡದ ಹಳೆಯ ಬಾಕಿಗಳನ್ನೆಲ್ಲ ತೀರಿಸಿಬಿಡುತ್ತೇನೆ . ಕೊಳಕ ಇಷ್ಯೀ.. ಅನ್ನುತ್ತ ನೀನು ಮಾರುದ್ದ ದೂರ ಹೋಗಿ ಮಲ್ಲಿಗೆ ಗಿಡದ ಬಳಿ ನಿಲ್ಲುವುದನ್ನು ಇಲ್ಲಿಯೇ ಕುಳಿತು ಕಲ್ಪಿಸಿಕೊಂಡು ಮತ್ತಷ್ಟು ನಿನ್ನನ್ನ ಕಾಡಬೇಕೆಂದು ಮನಸ್ಸಿನಲ್ಲೆ ಅಂದುಕೊಳ್ಳುತ್ತಿದ್ದೇನೆ. ಕೇವಲ ನಿನ್ನ ಪಡೆಯೋದಕ್ಕೋಸ್ಕರ ಈ ಡಾಲರುಗಳ ಊರಿನಲ್ಲಿ ಬಂದು ಕೆಲವೊಮ್ಮೆ ನಿನ್ನ ನೆನಪಾಗಿ ಬಿಕ್ಕಳಿಸುತ್ತೇನೆ..ಆದಷ್ಟು ಬೇಗ ನಿನ್ನನ್ನ ಸೇರುತ್ತೇನೆಂಬ ವಿಶ್ವಾಸ ಎಲ್ಲಾ ವಿರಹಗಳನ್ನೆಲ್ಲ ದೂರ ಮಾಡುತ್ತಿದೆ. ಬರಿಯೊದಕ್ಕೆ ತುಂಬಾ ಇದೆ . ಈಗಾಗಲೆ ಮನಸ್ಸು ನಿನ್ನ ಪತ್ರದ ನಿರಿಕ್ಷೆಯ ಬೆನ್ನು ಹತ್ತಿ ಕುಳಿತಿದೆ. ಸದ್ಯಕ್ಕೆ ಪತ್ರ ಮುಗಿಸುತ್ತಿದ್ದೇನೆ.. ಆದಷ್ಟು ಬೇಗನೇ ಪತ್ರ ಬರೆಯತಕ್ಕದ್ದು.
ಬೇರೇನು ವಿಶೇಷವಿಲ್ಲ ಇದ್ದರೆ ನಿನ್ನ ಪತ್ರ ನೋಡಿ ಬರೆಯುತ್ತೆನೆ.

ಇಂತಿ ನಿನ್ನವನೆ ಆದ

ವಾಸು

I Love You


ದೇವಕಿ ಇದ್ದಕ್ಕಿದ್ದಂತೆ ಯಾಕೋ ತುಂಬಾ ನೆನಪಾಗಿ ಬಿಟ್ಟೆ. ನಿನ್ನ ನೆನಪುಗಳ ದಾಳಿಯಿಂದ ನಾನು ತಪ್ಪಿಸಿಕೊಳ್ಳಲಾರದೆ ಕೆಲವು ಕ್ಷಣ ಅಸಹಾಯಕನಂತೆ ಪರಿತಪಿಸಿಬಿಟ್ಟೆ. ಮನಸ್ಸು ಹಾಗೆ ಇಪ್ಪತ್ತು ವರ್ಷಗಳ ಹಿಂದೆ ನಾವಿಬ್ಬರೂ ,ಪ್ರೇಮಿಗಳಾಗಿದ್ದರೇ ನಾನು ನಾಲ್ಕು ಕಾಸು ಸಂಪಾದನೆ ಮಾಡಿ ನಿನ್ನನ್ನ ಚನ್ನಾಗಿ ನೋಡಿಕೊಳ್ಳೋಕೆ ಬಂದಿದ್ದಿದ್ದರೆ, ಈ ಡಾಲರುಗಳ ಊರಿನಲ್ಲಿ ಕುಳಿತು ವಿರಹ ಪತ್ರದ ಬದಲು ಪ್ರೇಮ ಪತ್ರವನ್ನ ಬರೆದಿದ್ದರೇ ಹೇಗಿರುತ್ತಿತ್ತು ಅನ್ನುವ ಕಲ್ಪನೆ ಬಂದ ಕೂಡಲೇ ನನ್ನ ಚಿತ್ತದಲ್ಲಿ ಹರಿದು ಬಂದ ಕೆಲವು ಸಾಲುಗಳಿವು. ಬರೆದುಕೊಂಡ ನಾನೆ ಒಂದೆರೆಡು ಸಲ ಓದಿಕೊಂಡು ಸುಮ್ಮನಾಗಿ ಬಿಟ್ಟೆ ದೇವಕಿ.

ಇಷ್ಟೆಲ್ಲ ಬರೆದವನ ಬಳಿಯೀಗ ನಿನ್ನದೂ ಅಂತ ಒಂದೇ ಒಂದು ಅಕ್ಷರವಿಲ್ಲ. ನಿನ್ನ ಕುರಿತಾಗಿ ಒಂದು ಚಂದದ ಕವಿತೆ ಹೇಗೆ ಬರೆಯಲಿ ಹೇಳು?

Sunday, July 19, 2009

ಆ ಪುಟ್ಟ ಕಂದ ಕೈಗಳನ್ನು ಮೇಲೆತ್ತಿ ಮತ್ತೆ ಮತ್ತೆ ಅರಚುತ್ತಿದೆ

ನಮ್ಮ ಮನೆಯಲೊಂದು ಸಣ್ಣ ಪಾಪ ಇರುವುದು ಎತ್ತಿಕೊಳಲು ಹೋದರದಕೆ ಕೋಪ ಬರುವುದೂ...

ಎಲಿಮೆಂಟರಿಯಲ್ಲಿ ಓದಿದ ಪದ್ಯ ಇದು.ಮೇಷ್ಟ್ರ ಅಂದಿನ ರಾಗ ಇಂದು ಹಾಗೇ ಮತ್ತೆ ಮನೆ ಮಾಡಿದೆ...

ಆ ಪಾಪದ ಹೆಸರು ಪ್ರೀತಿ

ಕೆಲದಿನಗಳಿಂದ ಈ ಪದ್ಯದ ಸಾಲುಗಳು ತುಂಬಾನೆ ನೆನಪಿಗೆ ಬರುತ್ತಿದೆ.ನನ್ನ ಪ್ರೀತಿ ಪರಚಿಕೊಂಡ ಮೇಲೆ ರಚ್ಚೆ ಹಿಡಿದಿದೆ ಮತ್ತೆ ಮತ್ತೆ ಪರಚಿಕೊಂಡ ಗಾಯವನ್ನೆ ಇನ್ನಷ್ಟು ಪರಚಿಕೊಳ್ಳುತ್ತಾ...ಆದರೂ ಆ ಪ್ರೀತಿಯ ಮೇಲೆ ಒಂದಿಷ್ಟೂ ಸಿಟ್ಟಿಲ್ಲ... ಮತ್ತೆ ಮತ್ತೆ ಸಮಾಧಾನಿಸಿ ಮುದ್ದಿಸಬೇಕೆಂಬ ಆಸೆಯಾಗುತ್ತಿದೆ. ಆದರೆ ಮಗು ಕೈಗೆ ಸಿಗುತ್ತಿಲ್ಲ...ಯಾಕ್ ಪುಟ್ಟ ಹೀಗೆ ಅಂತ ಕೇಳಿದ್ರೆ ಮತ್ತೆ ಮತ್ತೆ ಅಳುತ್ತೆ...ಅರ್ಥವಾಗದ ತೊದಲುನುಡಿಯಾಡುತ್ತೆ.ಆ ತೊದಲು ನುಡಿಯೇ ನನ್ನೆದೆಯ ಭಾವಗೀತೆಗಳ ಸಾಲುಗಳಾಗುತ್ವೆ...ಆ ಸಾಲುಗಳನ್ನು ಹಿಂದೆಯೇ ಕವಿಗಳು ಬರೆದಿಟ್ಟಿದ್ದಾರೆ...ಇಂದು ಆ ಹಾಡಿಗೆ ನನ್ನ ಮುಖ ಸರಿಯಾಗಿ ಹೊಂದುತ್ತಿದೆ...

ನಾನು ಅಪ್ಪ ಆಗದೆ ರಚ್ಚೆ ಹಿಡಿವ ಮಗುವಿನ ಅಪ್ಪನ ಭಾವನೆಯನ್ನು ಮೈತುಂಬಾ ತುಂಬಿಕೊಂಡಿದ್ದೇನೆ.

ದೇವಕಿ...

ಆ ಮಗುವನ್ನು ಬೆದರಿಸಿ ತೋಳಿಗೆ ತೆಗೆದುಕೊಳ್ಳಲಾಗುತ್ತಿಲ್ಲ...ಮತ್ತಷ್ಟು ಅಳುತ್ತೆ...ದೂರ ಸರಿಯುತ್ತೆ...ದೂರ ಸರಿವ ಆ ಮುಗುವಿನಿಂದ ನಾ ದೂರಾಗಲು ಸಾಧ್ಯವೇ ಇಲ್ಲ ...ಅಷ್ಟು ಹಚ್ಚಿಕೊಂಡಿದ್ದೇನೆ.

ಆ ಮಗುವಿಗೆ ನೀನು ಅಮ್ಮ ಆಗಲು ಯಾಕೆ ಹಿಂದೇಟು ಹಾಕಿದ್ಯೋ ಗೊತ್ತಿಲ್ಲ... ಬಹುಶಃ ಆ ಮಗೂಗೆ ಅಪ್ಪನ ತೋಳಿಗಿಂತ ಅಮ್ಮನ ತೋಳೇ ಬಲು ಇಷ್ಟ ಅಂತ ಕಾಣುತ್ತೆ...ಆ ಪುಟ್ಟ ಕಂದ ಎರಡೂ ಕೈಗಳನ್ನು ಮೇಲೆತ್ತಿ ಮತ್ತೆ ಮತ್ತೆ ಅರಚುತ್ತಿದೆ...

ನಿನ್ನ ಬೆಚ್ಚಗಿನ ಮಡಿಲಲ್ಲಿ ಮುದುರಿ ನನ್ನ ನೋಡಿ ನಗುವಾಸೆ ಇರಬೇಕು ಅದಕ್ಕೆ.

ಆ ಮಗು ಯಾರೋ ಬೀದಿಲಿ ಬಿಟ್ಟ ಹಸುಳೆಯಂತಾಗಿದೆ...ದಿಕ್ಕೆಟ್ಟ ಜಗತ್ತಲ್ಲಿ ಮತಿಗೆಟ್ಟ ಮನಸ್ಸಲ್ಲಿ

ಅನಾಥವಾಗಿ...

ನಮ್ಮಿಬ್ಬರ ಪಾಪವಾಗಿ.

Saturday, July 18, 2009

ಈ ಹಣೆಯಲ್ಲಿ ನಿನ್ನ ಒಲವ ಗೀಚಿಲ್ಲ ಬ್ರಹ್ಮ...

ಬೇಡಿಕೆ ಇದ್ದಿದ್ದು ಒಂದು ಮುಷ್ಟಿಯ ಪ್ರೀತಿ...ಆದರೆ ಈ ವಾಸು ದಕ್ಕಿಸಿಕೊಂಡಿದ್ದು ಮಾತ್ರ ತಬ್ಬಿಕೊಳ್ಳುವಷ್ಟು ನೋವು. ಕೊಟ್ಟಿದ್ದು ನೀನಾ? ಅಥವ ಆ ದೇವರಾ? ದೇವರೆ ಅನ್ನೋದು ನಿಜವಾದರೆ ಇಲ್ಲಿಂದಲೇ ಈ ಮುರಿದ ಹೃದಯದಿಂದ ಅವನಿಗೆ ಶಪಿಸಿಬಿಡುತ್ತೇನೆ. ನೀನಾದರೇ ಆ ದೇವರು ನಿನಗೆ ಶಪಿಸದಿರಲೆಂದು ತುಂಬು ಹೃದಯದಿಂದ ಕೇಳಿಕೊಳ್ಳುತ್ತೇನೆ. ನಿನ್ನ ಕುರಿತಾಗಿ ಕಂಡ ಬಂಗಾರದಂತಹ ಕನಸುಗಳೆಲ್ಲ ಹಗಲುಗನಸುಗಳಾಗುತ್ತವೆ ಅಂತ ಅಂದುಕೊಂಡಿರಲಿಲ್ಲ. ಈ ಹಣೆಯಲ್ಲಿ ನಿನ್ನ ಒಲವ ಗೀಚಿಲ್ಲ ಬ್ರಹ್ಮ ಅನ್ನುವ ಹಾಡಿನ ಸಾಲುಗಳನ್ನ ನನ್ನ ನೆನಪು ಮಾಡಿಕೊಂಡೇ ಯಾರೋ ಪುಣ್ಯಾತ್ಮ ಬರೆದಿರಬೇಕು.. ಅಥವಾ ಈ ಎದೆಯ ಮೇಲೆ ನಿನ್ನ ಹೆಸರು ಬರೆಯುವಷ್ಟು ಪವಿತ್ರ ಹೃದಯದವನು ಈ ವಾಸು ಆಗಿರಲಿಲ್ಲ ಅಲ್ಲವಾ?.


ನಿನಗೆ ನಾನು ಇಲ್ಲಿಯವರೆಗೂ ಬರೆದ ಎಲ್ಲ ಪತ್ರಗಳಲ್ಲೂ " ದೇವಕೀ...ನೀನು ತುಂಬಾ ತುಂಬಾ ಕೆಟ್ಟವಳು " ಎಂದು ಜೋರಾಗಿ ಕೂಗಬೇಕು ಅನ್ನಿಸುತ್ತೆ. ಆದರೆ ನಿಜ ಹೇಳ್ತೀನಿ ದೇವಕಿ, ನನಗೆ ಪತ್ರ ಬರೆಯಲು ಪೆನ್ನು ಹಿಡಿದಿರುವ ಈ ಕೈ ನಡುಗುತ್ತೆ, ಹೃದಯ ಒಂದೇ ಸಮನೆ ಹೊಡೆದುಕೊಳ್ಳಲಾರಂಬಿಸುತ್ತದೆ.. ಬಲವಂತದಿಂದ ಆದರೂ ನೀನು ಕೆಟ್ಟವಳು ಅಂದು ಹೇಳಿಬಿಡಬೇಕು ಅನ್ನುವಷ್ಟರಲ್ಲಿ ಹೆಗಲೇರಿ ಬಿಡುತ್ತವಲ್ಲ ನಿನ್ನ ಬಂಗಾರದ ನೆನಪುಗಳು...! ಎಲ್ಲವನ್ನು ಎಲ್ಲದನ್ನು ಮರೆಸಿಬಿಡುತ್ತವೆ. ಆ ಕ್ಷಣಕ್ಕೆ ಈ ವಾಸು ನಿನ್ನ ವಶವಾಗುತ್ತಾನೆ. ನನ್ನ ಅಲ್ಲಿಯವರೆಗಿನ ವಿರಹಗಳೆಲ್ಲ ಕ್ಷಣಮಾತ್ರದಲ್ಲಿ ಅಸುನೀಗುತ್ತವೆ. ಮತ್ತೆ ನಿನ್ನ ಅಮಾಯಕ ಕಂಗಳಲ್ಲಿ ನನ್ನ ಎಲ್ಲ ಪ್ರೀತಿಯನ್ನ ಹುಡುಕುತ್ತ "" ದೇವಕೀ ನೀನು ಕೆಟ್ಟವಳಲ್ಲ..ಯಾವತ್ತೂ "" ನನ್ನವಳು ಎಂದು ಆಕಾಶದಾಚೆ ನೋಡುತ್ತೇನೆ..


ತಥಾಸ್ತು ಅನ್ನಲು ಅಲ್ಲಿ ಯಾವ ದೇವತೆಗಳು ಇಲ್ಲ...


ಎಲ್ಲವನ್ನೂ ಮರೆತು ಬಿಡುವವನ ಡಾಲರುಗಳ ಊರಲ್ಲಿ ಬಂದು ಕುತಿದ್ದೇನೆ.. ಒಂದು ತಮಾಷೆ ಗೊತ್ತ ದೇವಕಿ.. ಬರುವ ದಾರಿಯಲ್ಲಿ ನನಗಾದ ಬೇಸರಕ್ಕೆ ಖಿನ್ನತೆಗೆ ಒಂಟಿತನಕ್ಕೆ Once Again ಜೊತೆಯಾದದ್ದು ನಿನ್ನ ನೆನಪುಗಳೆ.. ನಿನ್ನ ಬಿಟ್ಟು ಬದುಕಿ ಬಿಡುತ್ತೇನೆ ಅಂದುಕೊಂಡು ಬಂದೆನಲ್ಲಾ.. ನೀನಲ್ಲದೇ ಏನನ್ನಾದರೂ ಸಾಧಿಸುತ್ತೇನೆ ಅನ್ನುವ ಹುರುಪಿನಿಂದ ಬಂದೆ ಅಲ್ವಾ.. ಆ ಕ್ಷಣದ ಹುರುಪಿಗೂ ಕಾರಣ ನೀನೇ ದೇವಕಿ.. ನಿನ್ನನ್ನ ಮರೆಯೊದಕ್ಕೋಸ್ಕರ ಮತ್ತೆ ಮತ್ತೆ ನಿನ್ನನ್ನ ನೆನಪು ಮಾಡಿಕೊಳ್ಳುತ್ತಿರುವ ನನ್ನ ಅಸಹಾಯಕತೆಗೆ ಯಾವ ಹೆಸರು ಇಡುತ್ತೀ? ಕೆಲವೊಮ್ಮೆ ಹುಚ್ಚುತನಗಳು ಪ್ರೀತಿ ಅನ್ನಿಸಿಕೊಳ್ಳುತ್ತವೆ ಅಂತಾರಲ್ಲ್ಲಾ ಇದಕ್ಕೇನಾ? ನಾನಂದುಕೊಂಡಿದ್ದು ಇದನ್ನ ಆರಾಧನೆ ಅಂತ .. ಬದುಕು ಅಂತ..


ನೀನೇನಂದುಕೊಂಡು ಹೊದೆಯೋ....ಉತ್ತರಿಸದೇ ಹೋದವಳು ನೀನು..ಉತ್ತರಕ್ಕಾಗಿ ಕಾಯುತ್ತಿರುವವನು ವಾಸು.

Friday, July 17, 2009

ತಣ್ಣಗಿನ ಸಾವಲ್ಲು ಅಪ್ಪಿಕೊಳ್ಳುವ ಬೆಚ್ಚಗಿನ ಒಪ್ಪಿಕೊಂಡ ಪ್ರೀತಿ ಜೀವಂತವಾಗೇ ಇರುತ್ತದೆ

ಎಲ್ಲ ಕಡೆ ವಿಪರೀತ ಮಳೆ.ಪ್ರವಾಹ... ಕೆಂಪನೆಯ ರಭಸದ ನೀರು....
ಪ್ರೀತಿಹೂಬನವನ್ನು ಯಾವ ಕನಿಕರವೂ ಇಲ್ಲದೆ ಮುಳುಗಿಸೇ ಬಿಟ್ಟಿತ್ತು....ಮಕರಂದ ರಾಜಮಾರ್ಗದ ಕುರುಹೇ ಕಾಣಿಸುತ್ತಿಲ್ಲ.ಒಂದುಸತ್ತ ಮರ ಮಾತ್ರ ಎದ್ದು ನಿಂತಿತ್ತು....ಯಾರೋ ಪ್ರೇಮಿಯೊಬ್ಬ ನೆಟ್ಟಿದ್ದನಂತೆ...ಅವನು ತೀರಿಕೊಂಡ ವರ್ಷವೇ ಇದಕ್ಕೂ ಸಿಡಿಲುಹೊಡೆಯಿತಂತೆ...ಆ ಬೋಳುಮರದ ತುದಿಏರಿ ನಿಂತಿದ್ದೇನೆ...ಸುತ್ತ ಕಣ್ಣಾಡಿಸುತ್ತೇನೆ ನನ್ನ ದೇವಕಿ ಎಲ್ಲಿಯು ಕಾಣಿಸುತ್ತಿಲ್ಲ...ಇಷ್ಟು ವರುಷದಿಂದ ಕಾಪಾಡಿಕೊಂಡು ಬಂದ ನಮ್ಮ ಪ್ರೀತಿಯನ್ನು ರಭಸದ ನೀರು ಕೊಚ್ಚಿಕೊಂಡು ಹೋಯಿತೇ...
ನೀರು ನನ್ನನ್ನು ಸೋಲಿಸ್ತಾ...?ಅವಳನ್ನು ಗೆಲ್ಲಿಸ್ತಾ...?ಅಥವಾ ಬೇಕೆಂದೇ ಅವಳು ಪ್ರವಾಹದಲ್ಲಿ ಬೆರೆತು ದೂರಾದಳಾ...?ದೂರದ ದಡ ಸೇರಿದಳಾ...?
ಮಳೆ ಮತ್ತಷ್ಟು ರಭಸಗೊಳ್ಳುತ್ತಿದೆ.ವಾಸು ಬೋಳು ಮರದ ತುದಿಬಿಟ್ಟು ಕದಲಲು ಸಾಧ್ಯವಿಲ್ಲ ಅನ್ನುತ್ತಿದೆ ನನಗೆ...ದುಮುಕಬಹುದು...ಈಜುವ ಶಕ್ತಿಯೆ ಕುಂದಿದಲ್ಲಿ...ನನ್ನ ಅಣು ಅಣುವಿನಲ್ಲೂ ಉಸಿರಾದ ದೇವಕಿಯು ಕೂಡ ಉಸಿರುಕಟ್ಟುವಳಲ್ಲ.... ಆ ನೆನಪುಗಳನ್ನು ಬದುಕಿಸಬೇಕೆಂದಾದರೆ ನಾನು ಬದುಕಬೇಕು...
ಏರಿದ ನೀರು ತಗ್ಗಿದ ಮೇಲೂ ಹೂಬನದಲ್ಲಿ ಬಿಟ್ಟುಹೋಗುವ ಮಣ್ಣು ಮರಳು ಕಲ್ಲು ಕಸ ಕಡ್ಡಿಗಳನ್ನು ತೆಗೆಯಬೇಕು...ತೋಟ ರಿಪೇರಿಯಾಗಬೇಕು....ಕಿತ್ತುಹೋಗಿರುವ ಸವಿನೆನಪುಗಳ ಗಿಡವನ್ನು ಮರೆತು ಮತ್ತೆ ಸಿಹಿ ಕೊಡೊ ನೆನಪುಗಳನ್ನು ಪಾತಿಕಟ್ಟಬೇಕು...ನಾನೊಬ್ಬನೇಅಲ್ಲ,
ದೇವಕಿ ಕೂಡ ಮತ್ತೆ ಹೂಬನಕ್ಕೆ ಮರಳಬೇಕು... ವಾಸುಗೋಸ್ಕರ ಅಲ್ಲದೇ ಇದ್ದರು ಹೂಬನಕ್ಕೆ ಅಪಚಾರವಾಗಬಾರದಲ್ಲ...ಅದಕ್ಕಾದರು.ನಾವಿಬ್ಬರೂ ಹೂಬನದಲ್ಲಿ ಸರಿದಾಡಬೇಕು...ವರ್ಷದ ಎಲ್ಲ ಋತುಗಳಿಗೂ ಖುಷಿಯಾಗುವಂತೆ ...ಆ ಖುಷಿಗೆ ಬೆಳೆಸಿದ ಗಿಡಕ್ಕೆ ರಾತ್ರಿಯಲ್ಲಿ ಇಬ್ಬನಿ ಕೂರಬೇಕು... ಆ ಇಬ್ಬನಿ ನಮ್ಮಿಬ್ಬರ ಕವಿತೆಯಾಗಬೇಕು...ಕವಿತೆ ಕಟ್ಟುತ್ತಾನೆ ಇಷ್ಟದ ಹೂವೂ ಅರಳಬೇಕು.
ಹೀಗಂದುಕೊಂಡೇ...
ಇವತ್ತು ಮಧ್ಯರಾತ್ರಿ ಅಮೇರಿಕಾ ತಲುಪುತ್ತೇನೆ...
ದಡ್ಡನನ್ನು ಕತ್ತೆ ಅನ್ನೋದು ವಾಡಿಕೆ.ಈ ದಡ್ಡ ವಾಸು ಅಮೇರಿಕಾದಲ್ಲಿ ನೀಟಾಗಿ ಡ್ರೆಸ್ಸು ಮಾಡಿಕೊಂಡುಕೋಟುಸೂಟುಗಳೊಂದಿಗೆ ದುಡೀತಾನೆ...ಬೀದಿಗಳಲ್ಲಿ ಕಂಡ ನೂರಾರು ಕತ್ತೆಗಳು ಒಮ್ಮೆಲೆ ಕಣ್ಣೆದುರು ಬಂದು ಜೋರಾಗಿ ಕೇಕೆ ಹಾಕಿದಂತೆ ಭಾಸವಾಗುತ್ತಿದೆ...ಆ ಭಾಸದಲ್ಲೇ ಈ ವಾಸು ಸೂಟುಬೂಟಿನ ಮಾಡರ್ನ್ ಕತ್ತೆಯಾಗಿ ಆ ಗುಂಪಿನಲ್ಲಿ ಸೇರಿಕೊಂಡು ದುಡಿಯೋದೇ ನಮ್ಮತಾಕತ್ತೂ... ಅನ್ನೋ ರಾಗ ತೆಗೆದ ಹಾಗೆ ಆಗುತ್ತಿದೆ...ನಮ್ಮ ಆಫೀಸಿನ ಬಾಸ್ಗಳಿಗೆ ಗೊತ್ತಿಲ್ಲ... ಈ ಸೂಟುಬೂಟಿನ ಒಳಗೆ ಒಂದು ನೋವಿನ ಪ್ರೀತಿ ಇದೆ ಎಂದು...ಅವರಿಗೆ ಗೊತ್ತಿರೋದು ಒಂದೇ ಟಾರ್ಗೆಟ್ ವರ್ಕ್.
ಆ ಟಾರ್ಗೆಟ್ ವರ್ಕಿನಡಿಗೆ ಸಿಗುವ ವಾಸುವಿನ ಪ್ರೀತಿಗೆ ಅಲ್ಲಿ ಯೋಚಿಸಲೂ ಜಾಗವಿರದೆ...ಸಮಯವಿರದೆ...ಕೊಳೆಯುತ್ತದೆ.
ಯಾವತ್ತೂ ಹೀಗಾಗೋದಕ್ಕೆ ಸಾಧ್ಯವೇ ಇಲ್ಲ ಎಂದು ಹಿಂದೆಯೇ ಮಾತುಕೊಟ್ಟಿದ್ದೆ ದೇವಕಿಗೆ ನನ್ನವಳಾಗಿರುವಾಗ...ಕೊಟ್ಟ ಮಾತಿಗೆ ತಪ್ಪಲಾರದ ಪುಣ್ಯಕೋಟಿ ವಾಸು ಆಗಬೇಕೆಂದೇನೂ ಇಲ್ಲ...
ಆದರೂ ಪುಣ್ಯಾತಗಿತ್ತಿ ದೇವಕಿಗೋಸ್ಕರ ಪುಣ್ಯಕೋಟಿ ಆಗಲೆಬೇಕು.
ಇಲ್ಲಿದ್ದಷ್ಟು ದಿನ ಅವಳನ್ನು ಕಳಕೊಂಡ ಚಿಂತೆ...ಕಳಕೊಂಡ ಚಿಂತೆಯಲ್ಲೇ ಚಿತೆಯಾದ ನೋವು...
ಚಿತೆಯಾದ ನೋವಲ್ಲೆ ಉರಿದು ಕೆಂಡಗಟ್ಟಿದ ದುಃಖ....ಕೆಂಡಗಟ್ಟಿದ ದುಃಖದಲ್ಲಿ ಮಡುಗಟ್ಟಿದ ದೇವಕಿ ಪ್ರೀತಿ
ದೇವಕಿ ಪ್ರೀತಿಯಲ್ಲಿ ಉಸಿರುಗಟ್ಟಿದ ವಾಸು...
ಉಸಿರುಗಟ್ಟಿದ ತಣ್ಣಗಿನ ಸಾವಲ್ಲು ಬೆಚ್ಚಗೆ ಅಪ್ಪಿಕೊಳ್ಳುವ ಒಪ್ಪಿಕೊಂಡ ಪ್ರೀತಿ...ಸ್ವರ್ಗದ ನಿಲ್ದಾಣ ಇರಬಹುದು.
ಮತ್ತೆ ಹುಟ್ಟೋ ಯೋಗ ಇದ್ದರೆ...ಆ ಪುನರ್ಜನ್ಮ ನಿನಗೆ ಸನ್ಮಾನ....
ದೇವಕಿ...
ಆ ಸನ್ಮಾನದುಡುಗೊರೆಯನ್ನ ಸ್ವೀಕರಿಸೋ...ತಿರಸ್ಕರಿಸೋ...ಹಕ್ಕನ್ನ ನೀನೆ ಕಾಯ್ದಿರಿಸಿಕೋ....
ಹೀಗೆ ಎಷ್ಟೇ ಜನ್ಮ ತಳೆದರೂ ನಾನು -ನೀನು ಹೀಗೆಯೇ ಎಂದಾದಲ್ಲಿ ...ಹೂಬನದಲ್ಲಿ ಕಲ್ಲಾಗುವ ಶಾಪ ಸಿಗಲಿ...
ಪ್ರೇಮಿಗಳು ಕುಳಿತುಕೊಳ್ಳುವ ಬಂಡೆಯಾಗುತ್ತೇನೆ.
ನೊಂದ ಪ್ರೀತಿಗೆ ಸಾಂತ್ವನ ಹೇಳುತ್ತಾ... ಹೇಳುತ್ತಾ...
ನಿನ್ನವನಾಗೇ ಇರುತ್ತೇನೆ.

Thursday, July 16, 2009

ಅರ್ಥವತ್ತಾದ ಪ್ರೀತಿಯಲ್ಲಿ ಇಂಥ ದುರಂತ ಯಾಕಾಗಿ ಉಸಿರಾಡಿತು ದೇವಕಿ..

ಅವರವರ ಯೋಗ್ಯತೆಗೆ ತಕ್ಕಂತೆ ಫಲಾಫಲಗಳು ...

ಇದು ಹಿರಿಯರ ಮಾತು.
ಯಾವುದೇ ವಿಚಾರದಲ್ಲಿ ಫಲ ಸಿಗ್ಬೇಕು ಅಂದ್ರೆ ಶ್ರಮ ಶ್ರದ್ಧೆ ಬೇಕು. ಈ ಮಾತನ್ನ ನಾನು ಹೇಗೆ ನಂಬಲಿ? ವಾಸುಗೆ ದೇವಕಿಯನ್ನ ಪ್ರೀತಿಸೋ ಯೋಗ್ಯತೆ ಮಾತ್ರ ಇತ್ತು, ಅವಳನ್ನ ಪಡೆಯೋ ಯೋಗ್ಯತೆಯ ಫಲ ಇಲ್ಲ ಅಂತಾನಾ?
ಪ್ರೀತಿ ಇರೋದೆ ಪಡ್ಕೊಳ್ಳೋದಕ್ಕೇ ಅಲ್ವಾ? ಅದನ್ನ ಸ್ವೀಕರಿಸಿದ್ರೆ ಮುಗೀತು ಮನಸ್ಸು ಒಲಿದ ಹಾಗೆ ಅಲ್ವಾ?
ಮನಸ್ಸು ಒಲೀತು, ವ್ಯಕ್ತಿ ಒಲಿಯಲ್ಲಿಲ್ಲ ಅಂದ್ರೆ?
ಗೊತ್ತಾಯ್ತು ಬಿಡಿ..ಈ ವಾಸು ಅರೆ ಯೋಗ್ಯ... ಈ ಅರೆಯೋಗ್ಯ ವಾಸುಗೆ ಯಾವಾಗ ದೇವಕಿಯ ದಾಸಯೋಗ ಸಿಕ್ತೋ ಫಲಾಫಲಗಳ ಅಪೇಕ್ಷೇ ಇಲ್ಲದೆ ದಾಸತ್ವ ಸ್ವೀಕಾರ ಮಾಡಿದ. ದೇವಕಿನೂ ದಾಸತ್ವ ಸ್ವೀಕಾರ ಮಾಡಿದ್ಲು. ಆಗಲೇ ನಮ್ಮಿಬ್ಬರ ಪ್ರೀತಿ ಓಂಕಾರ ರೂಪ ತಳೆದಿದ್ದು.


ನಂತರ ನಮ್ಮಲ್ಲಿದ್ದಿದ್ದು ಒಬ್ಬರಿಗೊಬ್ಬರ ಹಿತೋಪದೇಶ, ಹಿತಬಯಕೆ.ಯಾವ ಅಪ್ಪ ಅಮ್ಮನೂ ಈ ಥರದ ಪ್ರೀತಿ ಯಾಕಾಗಿ ಎಂದು ಯಾವ ಮಕ್ಕಳಿಗೂ ಪ್ರಶ್ನೆ ಮಾಡಲಾಗದಂಥ ಪ್ರೀತಿ.. ಅಳುಕು ಕೊಳಕುಗಳಿರಲಿಲ್ಲ. ವಂಚನೆ ಇರಲಿಲ್ಲ.. ಹೇಗೆಂದರೆ ಹಾಗೆ ಅನ್ನುವ ಸ್ವೇಚ್ಚಾಚಾರವಿರಲಿಲ್ಲ.. ಪ್ರೀತಿ ಅಂದರೆ ಪವಿತ್ರ ಪೂಜೆ ಅನ್ನುವ ಹಾಗೆ ನಮ್ಮಿಬ್ಬರಲ್ಲಿದ್ದುದು ಪ್ರೀತಿಯ ಜಪ..ಇನ್ನೊಬ್ಬರಿಗೆ ಅದರ್ಶರಾಗೋವಷ್ಟು ಅರ್ಹ ಅರ್ಥವಿತ್ತು. ಅಂಥ ಅರ್ಥವತ್ತಾದ ಪ್ರೀತಿಯಲ್ಲಿ ಇಂಥ ದುರಂತ ಯಾಕಾಗಿ ಉಸಿರಾಡ್ತೋ ದೇವಕಿ...

ಇದು ಕೇವಲ ಸ್ವಗತ.. ಇದರಲ್ಲಿ ನಿನ್ನ ದೂಷಣೆ ಇಲ್ಲ..

ಅದೊಂದು ದಿನ ಇನ್ನು ಮುಸುಕು ಮುಸುಕು ಮುಸ್ಸಂಜೆಯ ಸಮಯ.. ಹನಿ ಹನಿ ಮಳೆ. ಆ ಹನಿಮಳೆಗೆ ಗೂಡು ತಪ್ಪಿದ ಕಾಗೆ ಮರಿ ಅಳುತ್ತ ರೆಂಬೆಕೊಂಬೆಗಳನ್ನ ದಾಟುತ್ತ ಒಂದು ಕೊಂಬೆಯ ತುದಿಗೆ ಬಂದಿತ್ತು. ಅದರ ಅಮ್ಮ ತನ್ನ ಸಹಚರರೊಂದಿಗೆ ಕೂಗುತ್ತ ಮತ್ತು ಸುತ್ತು ಹಾಕುತ್ತ ಮತ್ತೆ ಗೂಡು ಸೇರಿಸುವ ಪ್ರಯತ್ನ ಮಾಡುತ್ತಲೇ ಇತ್ತು ಕತ್ತಲಲ್ಲಿ ಮರಿಗೆ ಗೂಡು ಕಾಣಲೇ ಇಲ್ಲ. ಮಿಕ್ಕವರ ಕೂಗು ನಿಲ್ಲಲೇ ಇಲ್ಲ..


ಫಟ್....

ಅದಾಗಲೇ ಬೆಳಕುಹರಿಸಿ ಓಡುತ್ತಿದ್ದ ವಾಹನಗಳ ಮದ್ಯೆ ಆ ಮರಿ ಬಿತ್ತು.. ಯಾರು ಹತ್ತಿರ ಹೋಗುವ ಗೋಜಿಗೆ ಹೋಗಲಿಲ್ಲ.. ಸುಮ್ಮನೆ ನೋಡುತ್ತಾ ನಿಂತರು. ಮಳೆಗೆ ತೋಯಿಸಿಕೊಂಡು ಆ ಮರಿಯ ಜೀವ ಉಳಿಸುವ ಯೋಚನೆ ಯಾರಿಗೂ ಬರಲಿಲ್ಲ. ಒಂದಿಬ್ಬರು ಪ್ರಯತ್ನಿಸಿದರೂ ಮೇಲೆ ಕುಕ್ಕುವ ಮಿಕ್ಕ ಕಾಗೆಗಳ ಸಹವಾಸ ಬೇಡವೆಂದು ಸುಮ್ಮನಾದರು.
ಮರಿ ವಾಹನಗಳನ್ನ ತಪ್ಪಿಸಿಕೊಳ್ಳುತ್ತ ತಪ್ಪಿಸಿಕೊಳ್ಳುತ್ತ ಅಲ್ಲಿ ಇಲ್ಲಿ ಶಕ್ತಿಮೀರಿ ಹಾರುತ್ತಿರುವಂತೆ ಅದರ ಒಂದು ರೆಕ್ಕೆಯ ಮೇಲೆ ಚಕ್ರವೊಂದು ಹರಿದೇಬಿಡ್ತು..

ಫಲಾಫಲ...?

ಆ ಮರಿಯ ಗೆಳತಿ ಮರಿಕಾಗೆ ಇನ್ನೊಂದು ಗೂಡಲ್ಲಿ ಕೂತಿದ್ದಳು. ಅವಳಿಗೆ ಕಿವಿ ಕೇಳಿಸಲಿಲ್ಲ. ಕಣ್ಣೂ ಕಾಣಿಸಲಿಲ್ಲ. ರೆಕ್ಕೆ ಮುರಿದಿದ್ದು ತಿಳಿಯಲೇ ಇಲ್ಲ... ರಕ್ತ ಹರಿದಿದ್ದೂ ಕಾಣಲಿಲ್ಲ...ಗೆಳತಿಯ ನೋಟದ,ತೊದಲು ಸಾಂತ್ವನದ ಯೋಗವೇ ಇರಲಿಲ್ಲ ಈ ಗ್ರಹಚಾರಿಗೆ.

ಕೆಳಗೆ ಬಿದ್ದ ಮರಿಗೆ ಮೇಲಿಂದ ಮಿಕ್ಕವರ ಚೀರುವ ಕೂಗು ಕೇಳಿಸುತ್ತಲೇ ಇತ್ತು . ಹಾಗಾಗಿ ಇದರ ಕ್ಷೀಣ ಸದ್ಧು ಅವರಿಗೆ ಕೇಳಿಸಲೇ ಇಲ್ಲ.ಕತ್ತಲಲ್ಲಿ ತೋರಿಕೆಗೂ ಸಾಧ್ಯವಾಗಲಿಲ್ಲ ರಾತ್ರಿಗೆ ಅದರ ಬಣ್ಣವೂ ಫಲಾಫಲ ಆಯಿತೇ...? ನನ್ನ ಯೋಗವೇ ಹೀಗಾ ಎಂದು ಆ ಮರಿಗೆ ಬೇಸರವಾಯ್ತು..ಈ ಊರೇ ಬೇಡ ಈ ಊರಿನ ಮರಗಳೇ ಬೇಡ ಎಂದು ತೆವಳುತ್ತ ತೆವಳುತ್ತ ಒಂದು ಗಿಡದಲ್ಲಿ ಸೇರಿಕೊಂಡುಬಿಡ್ತು. ಆಗಿಡ ನಿಧಾನಕ್ಕೆ ಚಲಿಸಲಾರಂಬಿಸಿತು ...ಅದನ್ನು ಹೊತ್ತಿದ್ದ ವಾಹನದ ಚಕ್ರ ತಿರುಗುತ್ತಿತ್ತು ನನ್ನ ಕರ್ಮಫಲ ಹೀಗೇನೆ ಅಂದುಕೊಂಡು.
ಆ ಮರಿಗೆ ತನ್ನನ್ನು ಹೊತ್ತೊಯ್ಯುವುದು ಗಿಡವೋ ಮತ್ತಿನ್ಯಾವುದೋ ಬೇಕಿರಲಿಲ್ಲ ಹಿಂಸೆಗೊಳಗಾದ ಜಾಗದಿಂದ ದೂರವಿರುವುದು ಬೇಕಿತ್ತು.ಕನಸಿನ ತೋಟಕ್ಕೆ ಹಾರುವ ರೆಕ್ಕೆ ಮುರಿದಿತ್ತು ಅಲ್ಲಿ
ತೊಟ್ಟಿಕ್ಕಿದ ರಕ್ತ ಹೆಪ್ಪುಗಟ್ಟಿತ್ತು...

ವಾಸುವಿನ ಹೆಪ್ಪುಗಟ್ಟಿದ ಭಾವನೆಗಳಂತೆ....



ಕ್ಷಮಿಸಿ ..ನಾನೂ ನಿಮ್ಮಿಂದ ದೂರ ಸರಿಯುತ್ತಿದ್ದೇನೆ..ಬರೆಯುವ ಶಕ್ತಿಯಿದ್ದರೆ ನಿಮಗೆ ಬರೆಯುತ್ತ ಬರೆಯುತ್ತ..ಶಕ್ತಿಯನ್ನು ಕಳೆಯುತ್ತ ನೋವನ್ನು ಮರೆಯುತ್ತ ...ದುಃಖವನ್ನು ಮರೆಯುವತ್ತ ಮುಖ ಮಾಡುತ್ತೇನೆ..ನನ್ನನ್ನು ಹೊತ್ತೊಯ್ಯುವ ಅಮೇರಿಕಾದ ವಿಮಾನಕ್ಕೆ ನನ್ನ ನೋವಿನ ಭಾರ ಹೊರುವ ಶಕ್ತಿ ಇದೆಯೋ ಇಲ್ವೋ ಗೊತ್ತಿಲ್ಲ.

ಹೋಗುವ ನಿರ್ಧಾರಕ್ಕೆ...? ದೇವಕಿ ಧ್ವನಿಯಲ್ಲಿ ಹಾಡು ಕೇಳುತ್ತಿದೆ
ಹೇಳಿ ಹೋಗು ಕಾರಣಾ...
ಹೋಗುವಾ ಮೊದಲು...

Wednesday, July 15, 2009

ಆ ನಗುವಿನಲ್ಲಿ ನೀನು ನನಗೆ ಮಗುವಾಗಿ ಕಾಣುತ್ತಿದ್ದೆ.

ಆ ಊರಿನ ಹೆಸರು ಪ್ರೀತಿ ಹೂಬನ.ಅಲ್ಲಿರುವ ರಾಜಮಾರ್ಗದ ಹೆಸರು ಮಕರಂದ. ಇಲ್ಲಿ ನಡೆದಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ವಿಶ್ವಾಸ,ಸಹನೆ ಮತ್ತು ಪರಸ್ಪರ ಗೌರವದ ಪ್ರಮಾಣ ಪತ್ರ ಬೇಕು. ಇತಿಮಿತಿಯ ಚೌಕಟ್ಟಿನೊಳಗೆ ಬದುಕುವವರಿಗೆ ಇದು ದೂರತೀರ...ಸೇತುವೆಯೂ ಇಲ್ಲದ ಕಲ್ಪನಾ ತೋಟ. ಈ ಹೂಬನದಲ್ಲಿ ಯಾರಿಗೂ ಯಾರ ತಂಟೆಯೂ ಇಲ್ಲ .. ಅಲ್ಲಿರುವಾಗ ಬೇರೆಯವರು ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ. ಹೂಬನ ತನ್ನ ಜಾಲದೊಳಗೆ ಸೆಳೆದುಕೊಂಡು ಮೆಚ್ಚಿದ ಎರಡು ಹೃದಯಗಳಿಗೆ ಇಂಪು ಕಂಪಿನ ಲಾಲಿ ಹಾಡುತ್ತದೆ.

ದೇವಕೀ....ನಾವೂ ಈ ಹೂಬನದಲ್ಲಿ ಕೊನೆಯ ತನಕ ಉಸಿರಾಡೋ ಉಸಿರನ್ನ ಕಳೆಯಬೇಕೆಂದುಕೊಂಡಿದ್ವಿ ಅಲ್ವಾ...? ಹೂಬನಕ್ಕೂ ಗೊತ್ತಾಗದೆ...ಆದರೆ ದುತ್ತನೆ ಎದುರಾಗಿದ್ದು ಆಷಾಡ.ಆಷಾಡದ ಮುಗಿಲು, ಆಷಾಡದ ಗಲುಗತ್ತಲು ...ಲವಲವಿಕೆಯನ್ನೇ ಹೆಪ್ಪುಗಟ್ಟಿಸುತ್ತದೆ. ಈ ತಿಂಗಳಿಗೆ ಅದ್ಯಾಕೋ ಒಳ್ಳೆಯದನ್ನು ಅರಗಿಸಿಕೊಳ್ಳೋ ಉಧಾರತೆಯೇ ಇಲ್ಲವೇನೋ ಅನ್ನುವ ಹಾಗೆ ವರ್ತಿಸುತ್ತದೆ. ನನ್ನ ಮತ್ತು ದೇವಕಿಯ ಮದ್ಯೆ ಲಕ್ಷಣ ರೇಖೆಯನ್ನು ಎಳೆದುಬಿಡ್ತು... ಇಲ್ಲ ಅದು ನನಗೆ ಗೊತ್ತಾಗಲು ಆಷಾಡವೇ ಬೇಕಾಯ್ತೋ ಏನೋ.. ನಾನು ಈ ಹೂಬನದಿಂದ ಚದುರೋದಿಲ್ಲ ಅಂತ ಮಂಡಿಯೂರಿ ಕಾಯ್ತ ಕೂತಿರ್ತೀನಿ.ನನ್ನ ಎದೆಗಂಟಿದ ನೋವಿಗೆ ಹಸಿರಿಂದ ಮುಕ್ತವಾದ ಕೆಂಪೆಲೆಗಳು ತಿರುತಿರುಗಿ ಉದುರುತ್ತಿವೆ ನಿನಗೆ ನಾವು ಸಂಗಾತಿಯಾಗಲೇ ಎಂದು . ಆ ಎಲೆ ಉದುರಿದ ಮರಗಳಲ್ಲಿ ಚಿಗುರು ಮೂಡೋವರೆಗೂ ನಾನು ಕದಲಲ್ಲ...
ನಾನು ಅಮೇರಿಕಾಗೆ ಹೊರಟು ನಿಂತಾಗ ಇನ್ನೂ ನೆನಪಿದೆ ದೇವಕೀ...

ಪಯಣಿಸುವ ವೇಳೆಯಲಿ
ಬಂದು ಅಡಿಗೆರಗಿಮುಂದೆ
ನಿಂದಳು ನನ್ನ ಕೈಹಿಡಿದ ಹುಡುಗಿ.
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು.

ಅದೆಷ್ಟು ಹೊತ್ತು ಮೌನವಾಗಿ ನಿಂತಿದ್ವೊ.. ದೂರಕ್ಕೆ ದೃಷ್ಟಿ ಹರಿಸಿ ಅಲ್ಲೇ ಕರಗಿ ಹೋದ್ವೇನೋ ಅನ್ನುತ್ತಿರುವಾಗಲೇ ಎಚ್ಚರಿಸುವ ಸುನೀತಾಳ ಮಾತುಗಳಿಂದ ಮತ್ತೆ ಮತ್ತೆ ನಮ್ಮನ್ನ ನಾವೆಷ್ಟು ಸರ್ತಿ ನೋಡ್ಕೊಂಡ್ವೋ.. ಅಂಗೈ ಅಂಗೈ ಬಿಗಿದು.. ಸವರಿ.. ಕೊಟ್ಟುಕೊಂಡ ಭಾಷೆಗಳೆಷ್ಟೋ.. ಅಷ್ಟು ಹೊತ್ತಿನ ಮೌನದಲ್ಲಿ ಬರೆದುಕೊಂಡ ಭವಿಷ್ಯಗಳೆಷ್ಟೋ..ಅದೆಷ್ಟು ಸರ್ತಿ ಹೆಜ್ಜೆ ಮುಂದೆ ಇಟ್ಟು ನಿನ್ನ ಮತ್ತೆ ಮತ್ತೆ ಹಿಂತಿರುಗಿ ನೋಡಿದಾಗ ತುಂಬಿದ ಕಣ್ಣಿನ ಆ ನಿನ್ನ ಪ್ರೀತಿಯನ್ನ ಬಿಟ್ಟು ಹೊರಡಲು ನನ್ನ ಕಾಲಿಗೆಷ್ಟು ಬಲವಂತ ಮಾಡಿದೆನೋ.. ನಾನು ಹಾಗೆ ಮಾಡಿದಾಗಲೆಲ್ಲ ನೀನು ಬಲವಂತಕ್ಕೆ ನಗುತ್ತಿದ್ದೆ.. ಆ ನಗುವಿನಲ್ಲಿ ನೀನು ನನಗೆ ಮಗುವಾಗಿ ಕಾಣುತ್ತಿದ್ದೆ.

ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ,
ಕಣ್ಣಿರಲು ತಿಳಿಬಾನ ಕಿರುತಾರೆಯಂತೆ,
ವೇಣಿಯಿರಲು ವಸಂತ ಪುಷ್ಪವನದಂತೆ,
ಮನಸು ಬಾರದು ಎನಗೆ ಅಡಿಯನಿಡೆ ಮುಂದೆ

ದೇವಕಿ ನೀನು ನನ್ನನ್ನು ಅಂದು ಕಳಿಸಿಕೊಡುವಾಗಿನ ಕಣ್ಣೀರಿನ ಅರ್ಥ ಇಂದಿನ ನಿನ್ನ ಈ ಸ್ಥಿತಿಯೇ? ನಾನು ಹೋಗುವಾಗ ಬಲವಂತವಾಗಿ ತಡೆದುಕೊಂಡ ದುಃಖದ ನಿಟ್ಟುಸಿರಿನ ಕೊನೆ ಇವತ್ತಿನ ನನ್ನ ಈ ಸ್ಥಿತಿಯೇ? ಅಂದು ಬಿಗಿದಪ್ಪಿದ ನಮ್ಮ ಅಂಗೈಗಳು ಕೊಟ್ಟ ಭಾಷೆಗಳಿಗೆ ಈ ತೀರ್ಮಾನ ನ್ಯಾಯ ಸಮ್ಮತವೇ.. ಈ ಪ್ರೀತಿ ಹೂಬನದ ದಾರಿ ತೋರಿಸಿದವಳು ನೀನೆ ಅಲ್ವಾ..
ನೀನು ಇವತ್ತು ಇಲ್ಲಿರದೇ ಇರಬಹುದು.. ಹಾಗಂತ ನಾನು ಇಲ್ಲಿಂದ ಕದಲುವುದು ಸಾಧ್ಯವಿಲ್ಲ ರಚ್ಚೆ ಹಿಡಿವ ಕಾಲುಗಳು ನೀನಿಲ್ಲದೆ ಹೆಜ್ಜೆ ಇಡಲೂ ಸಹಕರಿಸುತ್ತಿಲ್ಲ... ಇಲ್ಲಿಂದಾಚೆಗಿನ ಜಗತ್ತು ಕತ್ತಲಾಗಿ ಕಾಣಿಸಿಕೊಳ್ಳುತ್ತಿದೆ. ಹೂಬನವೂ ಬರಿದಾಗೆ ಕಾಣಿಸುತ್ತಿದೆ. ಬ್ರಹ್ಮ ಕಮಲದ ಗಿಡ ಒಂದನ್ನು ಬಿಟ್ಟು. ಅದು ಯಾವತ್ತು ಅರಳುವುದೋ........ಕಾಯುತ್ತೇನೆ.


ಬ್ರಹ್ಮ ಕಮಲ ಅರಳುವಾಗ ಎಲ್ಲಾ ದೇವತೆಗಳು ಅಲ್ಲಿ ಸೇರುವರಂತೆ, ಆಗಲಾದರೂ ವರಸಿಕ್ಕಿ ಈ ವಾಸು ಶಾಪಮುಕ್ತನಾಗುವನೋ ನೋಡೋಣ..... ತೋಚಿದ್ದನ್ನ ಹೇಳಿಕೊಂಡಿದ್ದೇನೆ.. ಮತ್ತೆ ಪ್ರಶ್ನೆಯೊಂದು ಕಾಡುತ್ತಿದೆ . ಕತ್ತಲನ್ನು ಸತ್ಯಕ್ಕೂ ರಾತ್ರಿಯನ್ನ ಮಿಥ್ಯಕ್ಕೂ ಹೋಲಿಸುತ್ತಾರೆ..ಆದರೇ ನೀನು ಅರಳುವುದೇ ರಾತ್ರಿ ಅಂದರೆ ವಾಸು ಕಡೆಗಿದ್ದ ನಿನ್ನ ಪ್ರೀತಿ ಪ್ರಶ್ನೆ ಮಾಡುವಂತದ್ದಾ.....? ಪ್ರಶ್ನೆ ಮಾಡ್ಲಾ.....?
ಆದ್ರೆ ನಿನ್ನ ಮುಗ್ಧ ಮುಖ ಕಾಣಿಸುತ್ತೆ ...


ಅಳು ಬರುತ್ತೆ.

Tuesday, July 14, 2009

ಪ್ರೀತಿ ಕೆಲವೊಮ್ಮೆ ಭ್ರಮೆ ಕೆಲವೊಮ್ಮೆ ಕ್ಷಮೆ.

ನಿಮ್ಮಲ್ಲರ ಮುಂದೆ ಪ್ರೀತಿ ಅಂದರೇನು ಎಂಬ ಪ್ರಶ್ನೆಯನ್ನಿಟ್ಟರೆ ನೀವು ಹೀಗೇ ಉತ್ತರಿಸಬಹುದಲ್ಲವೇ?



ಪ್ರೀತಿಯೆಂದರೆ ಎರಡು ತೀರಗಳ ಮೌನವನ್ನು ಕದಡಿ ಹೋಗುವ ಅಲೆ,

ಎಲ್ಲವನ್ನೂ ಕಳೆದುಕೊಂಡವರಿಗೊಂದು ನೆಲೆ.

ಬದುಕಿನುದ್ದಕ್ಕೂ ಜೊತೆಗಿರುವ ಸೆಲೆ,

ಬದುಕಿಗೊಂದು ಅರ್ಥ ನೀಡುವ ಕಲೆ.

ಪ್ರೀತಿ ಸಂತೋಷದ ಮಳೆ.,

ಪ್ರೀತಿ ನಾವು ಬದುಕಿನಲ್ಲಿ ಬೆಳೆವೆ ಬೆಳೆ.

ಪ್ರೀತಿಯೆಂದರೆ ಬದುಕಿನ ಬಣ್ಣದ ಬುಗುರಿ,

ಪ್ರೀತಿ ಬದುಕಬೇಕಾದ ಗುರಿ.

ಪ್ರೀತಿಯೆಂದರೆ ಧನ್ಯಾತಾಭಾವ,

ಪ್ರೀತಿಯೆಂದರೆ ಅರ್ಪಣ ಮನೋಭಾವ.

ಪ್ರೀತಿ ಮೌನರಾಗ ಪ್ರೀತಿ ಬದುಕಿನ ಯೋಗ,

ಪ್ರೀತಿ ಅನ್ನೋದು ಕನಸುಗಳಿಗೆ ಕಾರಣ.

ಮತ್ತೆ ಪ್ರೀತಿ ಅನ್ನೋದು ನೋವುಗಳಿಗೆ ಪ್ರೇರಣ,

ಪ್ರೀತಿ ಕಣ್ಣ ಒಳಗಿನ ಹನಿ.

ಪ್ರೀತಿ ಅವಳ ಕೊರಳಿನ ಮಣಿ,

ಪ್ರೀತೆಯೆಂದರೆ ನಾವು.

ಮತ್ತು ಪ್ರೀತಿಯೆಂದರೆ ಕೆಲವೊಮ್ಮೆ ಸಾವು..



ಪ್ರೀತಿಯೆಂದರೆ ಸೋತ ಹೆಜ್ಜೆಗಳಿಗೆ ಸಾಂತ್ವಾನ, ಪ್ರೀತಿ ಹೊಸಕನಸುಗಳಿಗೆ ಆಹ್ವಾನ. ಪ್ರೀತಿ ಎರಡುಮೊಳ ಮಲ್ಲಿಗೆ ಹೂವು, ಪ್ರೀತಿ ಎರಡು ಹೃದಯಗಳ ಸ್ವಲ್ಪ ನೋವು. ಪ್ರೀತಿ ಚುಚ್ಚುವ ಮುಳ್ಳು, ಮತ್ತೆ ಕೆಲವೊಮ್ಮೆ ಪ್ರೀತಿ ಅನ್ನೋದು ಸುಂದರ ಸುಳ್ಳು. ಪ್ರೀತಿ ಅನ್ನೋದು ತಿರಸ್ಕಾರ, ಮತ್ತೆ ಪ್ರೀತಿ ನಮಸ್ಕಾರ. ಪ್ರೀತಿ ಎರಡು ಕಣ್ಣ ಹನಿ, ಪ್ರೀತಿ ಇನ್ನೆರೆಡು ಒರೆಸುವ ಕೈ.. ಪ್ರೀತಿ ಮೈಮುರಿಯುವ ಬೆವರು, ಪ್ರೀತಿ ನವಿಲುಗರಿಯಷ್ಟೇ ನವಿರು. ಪ್ರೀತಿ ಕೆಲವೊಮ್ಮೆ ಭ್ರಮೆ, ಪ್ರೀತಿ ಮತ್ತೊಮ್ಮೆ ಕ್ಷಮೆ.



ಪ್ರೀತಿಯೆಂದರೆ ಮೊದಲ ಮಾತು,

ಮತ್ತು ಮೊದಲ ಮೌನ.

ಪ್ರೀತಿಯೆಂದರೆ ಒಂದು ಕವಿತೆ.

ಪ್ರೀತಿ ಸಾವಿರ ಕನಸುಗಳ ಒರತೆ.

ಪ್ರೀತಿಯೆಂದರೆ ಹಸಿರು ಬಳೆ,

ಪ್ರೀತಿಯೆಂದರೆ ಭೂಮಿಗಿಳಿದ ಮೊದಲ ಮಳೆ.

ಪ್ರೀತಿ ಕಾಣುವ ಕನಸು,

ಪ್ರೀತಿ ಸುಂದರ ಮನಸ್ಸು.

ಪ್ರೀತಿ ಗೆಳೆಯನ ಸೊಗಸು,

ಮತ್ತು ಮತ್ತು ಗೆಳತಿಯ ಮುನಿಸು.

ಪ್ರೀತಿಯೆಂದರೆ ಅವಳ ಸನಿಹ,

ಪ್ರೀತಿಯೆಂದರೆ ಅವನ ವಿರಹ.

ಪ್ರೀತಿಯೆಂದರೆ ಅಪ್ಪನ ಗದರಿಕೆ,

ಪ್ರೀತಿಯಂದರೆ ಅಮ್ಮನ ಸೂಕ್ಷ್ಮತೆ.

ಪ್ರೀತಿಯೆಂದರೆ ಹಾಸಿಗೆ,

ಪ್ರೀತಿಯೆಂದರೆ ಹೊಸಬಗೆ,

ಮತ್ತು ಪ್ರೀತಿಯೆಂದರೆ ಸುಂದರ ನಗೆ.

ಪ್ರೀತಿಯೆಂದರೆ ಆಸೆಗಳ ಹೊದಿಕೆ,

ಮತ್ತು ಪ್ರೀತಿಯೆಂದರೆ ಮನಮೋಹಕ ಬಿಕ್ಕಳಿಕೆ.

ಪ್ರೀತಿಎಂದರೆ ಹೊಸ ಅಕ್ಷರ,

ಮತ್ತು ಪ್ರೀತಿಯೆಂದರೆ ಸಾಕ್ಷಾತ್ಕಾರ.

ಪ್ರೀತಿಯೆಂದರೆ ಬೆಳಕು, ಪ್ರೀತಿಯೆಂದರೆ ಹುಡುಕು, ಮತ್ತು ಪ್ರೀತಿಯೆಂದರೆ ಬದುಕು...



ಹೀಗೆ ನನ್ನ ಪ್ರಶ್ನೆಗೆ ನಿಮ್ಮಿಂದ ಇಂತಹ ಕೋಟಿ ಕೋಟಿ ಉತ್ತರಗಳು ಸಿಕ್ಕರೂ ಸಿಕ್ಕಾವು.. ಆದರೆ ಈ ವಾಸುವಿನ ಕಣ್ಣುಗಳನ್ನೊಮ್ಮೆ ದಿಟ್ಟಿಸಿ ಪ್ರೀತಿಯೆಂದರೇನು ಅನ್ನುವ ಪ್ರಶ್ನೆ ಕೇಳಿನೋಡಿ.. ನಿಮಗೆ ಇರುವ ಮತ್ತೆ ನನಗೆ ಇಲ್ಲದಿರುವ ದೇವರಾಣೆ...



ಒಂದೇ ಉತ್ತರ........



ಪ್ರೀತಿಯೆಂದರೇ ದೇವಕಿ

Monday, July 13, 2009

ನನ್ನ ದೇವಕಿಯ ಧಮನಿಗಳಿಗೂ ಈ ಸಾಲುಗಳು ಹರಿಯಲಿ...

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸೂ...

ಬೇಡ ಬೇಡ ಅಂದ್ರು ಮುಚ್ಚಿದ ರೆಪ್ಪೆಯೊಳಗೂ ತೂರಿ ಒಂದೇ ಒಂದು ಸರ್ತಿ ಕಣ್ಣು ಬಿಟ್ಟು ನೋಡೋ ಅಂತೀಯ .....ಕಣ್ಣಿಟ್ಟು ನಿನ್ನ ನೋಡಲು ಆಸೆ ಇದೆ ಆದರೆ ಕಣ್ಬಿಟ್ಟರೆ ಕಾಣೋದು ನೀನಿಲ್ಲದ ಜಗತ್ತು.ಅದಕ್ಕೆ ಮತ್ತಷ್ಟು ಗಟ್ಟಿಯಾಗಿ ರೆಪ್ಪೆ ಮುಚ್ಚಿಕೊಳ್ಳುತ್ತೇನೆ...ಸ್ವಲ್ಪವು ಮಿಸುಕಾಡದಂತೆ...
ಅದೆಷ್ಟು ಹೊತ್ತಿನವರೆಗೂ ನೀನಾಗೆ ರೆಪ್ಪೆಯೊಳಗಿನ ಸಿಂಹಾಸನದಲ್ಲಿರ್ತೀಯೋ ಅಲ್ಲಿಯವರೆಗೂ...
ಅದೇನು ಸರಸ ಅದೇನು ಸಲ್ಲಾಪ ಅದೇನು ಸೆಳೆತ....

ಇಬ್ಬರೂ ಬ್ಯಾಲೆಯಾಡುತ್ತೇವೆ...ಅದು ನಲಿವ ಖುಷಿಗಿಂತ ಒಲಿದ ಜೀವಗಳ ಸ್ವರ್ಗಸುಖ ಅಂತಾರಲ್ಲ ಅದು...

ಹೀಗಿರುವಾಗಲೇ....

ನನ್ನ ಕಣ್ತುಂಬಿ ಬರುತ್ತದೆ...ನಿನ್ನನ್ನು ಜೋಪಾನವಾಗಿ ಹಿಡಿದಿಟ್ಟ ರೆಪ್ಪೆಗೆ ಕಣ್ಣೀರಿನ ಒದೆತ ತಾಳಲಾರದೆ ತನ್ನಂತಾನೆ ತೆರೆದುಕೊಳ್ಳುತ್ತದೆ. ಹನಿ ಜಾರುತ್ತದೆ. ಆ ಹನಿಯಲ್ಲಿ ನೀನು ಕರಗಿ ಹೊರಟು ಹೋಗುತ್ತೀಯಾ..ಮತ್ತೆ ಬಾಗಿಲು ಮುಚ್ಚಿ.

ಕಣ್ಬಿಡುತ್ತೇನೆ...

ಹುಣ್ಣಿಮೆಯ ರಾತ್ರಿಯಲ್ಲೂ ವಿಷಾದದ ನೀರವ..ಮಹಡಿ ಹತ್ತಿ ಯಾರಾದರೂ ಬೆಳದಿಂಗಳ ಆನಂದದ ಸವಿ ಸವಿಯುತ್ತಾರ ಎಂದು ನೋಡುತ್ತೇನೆ ಕಣ್ಣೋಟ ಹರಿಯುವವರೆಗೂ ಮತ್ತೆ ಮತ್ತೆ ಕಣ್ಣನ್ನ ಅಗಲಿಸಿ ನೋಡುತ್ತೇನೆ.. ಯಾರೂ ಕಾಣಿಸುತ್ತಿಲ್ಲ. ಆದರೆ ಕಿಲಕಿಲ ಸದ್ಧು ಕೇಳಿಸುತ್ತದೆ..ಪಿಸುಗುಟ್ಟುವಿಕೆ ಕೇಳಿಸುತ್ತದೆ..ಖಾಲಿ ಪರದೆಯ ಮೇಲೆ ಹಿನ್ನೆಲೆ ಸಂಗೀತ ಹರಿ ಬಿಟ್ಟಂತೆ.

ಕೊನೆಗೆ ಗೊತ್ತಾಗಿದ್ದಿಷ್ಟೆ..ನನ್ನ ಕಣ್ಣುಗಳು ನನ್ನನ್ನೇ ವಂಚಿಸಿದ್ದವು ಉದ್ಧೇಶಪೂರ್ವಕವಾಗಿ.ತುಂಬ ಜೋಡಿಗಳು ಬೆಳದಿಂಗಳ ಗಾಡ ಸ್ನಾನದಲ್ಲಿದ್ದರು .

ನೀನೂ.... ದೆವಕಿ ಎಲ್ಲ ಪ್ರೇಮಿಗಳಂತೆ ಹೀಗೆ ಇರಬೇಕಿತ್ತು. ಇಲ್ಲದಿದ್ದುದಕ್ಕೆ ನಾನವರನ್ನ ನಿನಗೆ ತೋರಿಸಲಿಲ್ಲ ಅಂತ ಹೇಳ್ತು. ಆದರೆ ಕಿವಿಗೆ ಮುಚ್ಚುಮರೆ ಸಾಧ್ಯವಾಗಲಿಲ್ಲ. ಮುಚ್ಚುಮರೆ ಬೇಡ ಅಂತು.ಪ್ರೇಮಿಗಳ ಪಿಸುಗುಟ್ಟುವಿಕೆ ...ಕಿಲಕಿಲ ನಗು ಕೇಳಿಸ್ತು.


ಯಾವತ್ತು ದೇವಕಿಯ ನೆನಪು ಹಸಿರಾಗಿರಲಿ ಎಂದು...
ನಿನಗೂ ಹೀಗನ್ನಿಸುತ್ತಿದೆಯಾ?

ನಾನು ಮತ್ತೆ ನನ್ನ ಪಾಲಿನ ಹುಣ್ಣಿಮೆಯಲ್ಲಿ ದೂರಾ ತೀರದ ಕಡಲಂಚನ್ನು ಮತ್ತು ಬೆಳ್ಳಿತೆರೆಗಳನ್ನು ದಿಟ್ಟಿಸುತ್ತಿದ್ದೇನೆ..ನೀನೊಬ್ಬಳೆ ಕೈ ಹಿಂದೆ ಕಟ್ಟಿಕೊಂಡು ನಡೆದಾಡುತ್ತಿದ್ದೀಯಾ...ಮತ್ತೊಮ್ಮೆ ಹೊಟ್ಟೆಯನ್ನು ಆಗೊಮ್ಮೆ ಈಗೊಮ್ಮೆ ಮುಟ್ಟಿಕೊಂಡು...

ನಿನ್ನ ಹೆಗಲ ಶಾಲಿನ ತುದಿಮಾತ್ರ ನಿನ್ನನ್ನು ಆಶ್ರಯಿಸಿ ಎಷ್ಟುದ್ದ ಹಾರುವುದಕ್ಕಾಗುತ್ತದೋ ಅಷ್ಟುದ್ದ ಹಾರುತ್ತಿದೆ..ಶೀತಗಾಳಿಗೆ, ಭಾರದ ಹೆಜ್ಜೆಗಳಿಗೆ ಇನ್ನಷ್ಟು ಭಾರವೆನ್ನುವಂತೆ...ಇನ್ನೆಷ್ಟು ದೂರ ಎನ್ನುವಂತೆ.

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸುಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿನಿನ್ನೊಲುಮೆ ನನ್ನ ಕಂಡು,
ನಿನ್ನೊಳಿದೆ ನನ್ನ ಮನಸು..
ಸಾಗರನ ಹೃದಯದಲಿ ರತ್ನಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ
ಅಲೆಬಂದು ಕರೆಯುವುದು ನಿನ್ನೊಲುಮೆ
ಅರಮನೆಗೆಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ ಕಾಣುವುದು
ನಿನ್ನೊಲುಮೆಒಳಗುಡಿಯ ಮೂರ್ತಿಮಹಿಮೆ..




ಸಾರ್...
ನನ್ನಂತವರಿಗಾಗಿ ಸಾಂತ್ವಾನಕ್ಕಾಗಿ ಈ ಸಾಲುಗಳನ್ನ ನೀವು ಬರೆದ್ರೋ? ಇಲ್ಲಾ ಸತ್ತ ಕನಸುಗಳನ್ನ ಚಿಗುರೊಡೆಸಲು ಬರೆದ್ರೋ..ಗೊತ್ತಿಲ್ಲ.. ಮುತ್ತಿಕೊಳ್ಳುವ ದೇವಕಿ ನೆನಪುಗಳಿಗೆ ಜೀವ ತಂದಿದ್ದಕ್ಕೆ ಋಣಿ ನಾನು. ನನ್ನ ದೇವಕಿಯ ಧಮನಿಗಳಿಗೂ ಈ ಸಾಲುಗಳು ಹರಿಯಲಿ...

Sunday, July 12, 2009

ಸಂಕಟದ ಗುದ್ದು ಎದೆಗೆ ಬೀಳದಿರಲಿ ...

ಹಲೋ
ಹೇಗಿದ್ದೀಯ
ನೀವು
ನಿನ್ನ ಗುಂಗಲ್ಲಿ ಸೂಪರ್
ನಾನೂ ನಿಮ್ಮ ನೆನಪಲ್ಲಿ ಕಲರ್ ಕಲರ್...
ನೆನಪು ಬಾರದೇ ಇದ್ದರೆ
ಅದು ಬದುಕೋಕು ಸಾಧ್ಯವಾಗದ ದಿನ
ಆ ದಿನ ಬರೋದಕ್ಕೆ ಮುಂಚೆ ನಮ್ಮ ಮದುವೆ ಆದ್ರೆ ಸಾಕು
ಈಗ್ಲೆ ನಾನು ರೆಡಿ
ನಾನು ಅಮೇರಿಕಾಗೆ ಹೋಗ್ಬೇಕಲ್ಲ
ಗುಡ್ ಲಕ್...ಅಲ್ಲಿಂದ ನೀನು ಬರೋಕ್ ಮುಂಚೆನೆ ನಾನು ಹೊಗ್ಬಿಟ್ರೆ....
ನೀನು ಹೀಗಂದ್ರೆ ಹೋಗೋದೆ ಇಲ್ಲ ಉಪ್ಪುಗಂಜಿಯಾದ್ರು ಪರವಾಗಿಲ್ಲ ಇಲ್ಲೆ ಇದ್ಬಿಡ್ತೀನಿ...
ತಮಾಷೆಗಂದೆ... ಯಾಕಷ್ಟು ಅಪ್ಸೆಟ್ ಆಗ್ತೀಯ
ಅಪ್ಸೆಟ್ ಅಲ್ಲ ನನ್ನ ನಿಜದ ಮಾತು
ಇನ್ಮುಂದೆ ನಿನ್ನ ನೋಯಿಸಲ್ಲ
ನಂಗೆ ನೋವಾದ್ರು ಪರ್ವಾಗಿಲ್ಲ ನಿಂಗಾಗ್ಬಾರ್ದು....ನಂಗಭ್ಯಾಸ ಇದೆ...ನೋವನ್ನೆ ಹಾಸಿಗೆಯನ್ನ ಹಾಸ್ಕೋತೀನಿ ಮೈಗೆ ಗಂಟು ಗಂಟಾಗಿ ಸಿಕ್ಕಿ ನೋವಾಗಬಹುದು ...ನಿನ್ನ ನೆನಪಲ್ವಾ ಸಹಿಸ್ಕೊತೀನಿ...ಯಾಕ್ ಹೇಳು ನೋವಾಯ್ತ ಚಿನ್ನಾ ಅಂದು ನೀನು ನನ್ನ ಕೆನ್ನೆಗೆ ಮುತ್ತಿಕ್ಕುವೆಯಲ್ಲಾ...ಆ ಅಚ್ಚೊತ್ತುವಿಕೆಗೆ...

ಬೆಡ ಬೇಡ ಅಂದ್ರು ...
ಹಿಂದಿನ ನೆನಪುಗಳು ಬಿಕ್ಷುಕನ ರೂಪದಲ್ಲಿ ವಾಸುವಿನ ಮುಂದೆ ಬರ್ತಾನೆ ಇವೆ...ಅವು ನಿಧಾನಕ್ಕೆ ಆ ರೂಪವನ್ನ ನನಗೆ ತೊಡಿಸುತ್ತಾ ಇದೆ...
ನಿನ್ನನ್ನು ನಾನು ನಿನ್ನ ರೂಪಾಂತರದ ನಂತರ ನೋಡಿದಾಗ... ನೀನು ಬೆನ್ನು ಹಾಕಿ ಓಡಿದಾಗ...ನನ್ನ ಗಂಟಲಲ್ಲಿ ಅದೆಷ್ಟು ಗುಟುಕು ವಿಷ ಒಟ್ಟಿಗೆ ಇಳಿದ ಹಾಗಾಯ್ತು...
ಕಲ್ಪನೆಗಾದ್ರು ನಿನಗೆ ಆ ಅನುಭವ ಬೇಡ ...ನಿನಗೋಸ್ಕರ ಎಲ್ಲವನ್ನು ನುಂಗಿ ಸಾಯೋದಕ್ಕೆ ವಾಸು ಇದ್ದಾನೆ...ನನ್ನ ಪ್ರೀತಿಯ ದೇವಕಿಗಾಗಿ.
ಆ ದಿನ ನಾನು ಹೇಗಾಗಿದ್ದೆ...ಎವರೆಸ್ಟ್ ಹತ್ತಿ ಇನ್ನೇನು ಬಾವುಟ ಹಾರಿಸಬೇಕೆಂದವನ ಕಾಲನ್ನು ಮಂಜು ಕಚ್ಚಿ ಎಳೆದು ಹಾಕಿದಂತೆ...
ಆವತ್ತು ನಾನು ಅದೆಷ್ಟು ಬೇಡಿಲ್ಲ...ಒಂದು ನೋಟಕ್ಕಾಗಿ...
ಸಿಗ್ನಲ್ಲಿನಲ್ಲಿ ಬೇಡುವವರ ಹಾಗೆ...ಕಾರಿನ ಗ್ಲಾಸನ್ನ ಎತ್ತಿದರೂ ಹಾಗೇ ನಿಂತವರ ಹಾಗೆ...ಬಿಕ್ಷೆ ಬೇಡ ...ಒಂದು ನೋಟದ ... ಛೆ...ಈಡಿಯೆಟ್ ವಾಸು...
ಪರ್ದೇಸಿ ಅಂದ್ರೆ ನಂಗೊತ್ತಾಗಿದ್ದೆ ಆವಾಗ...
ಹೀಗೆಲ್ಲ ...
ಆಗಿದ್ರು...
ವಾಸು ಏನು ಮಾಡಿದ್ದಾನೆ ಗೊತ್ತಾ...? ದೇವಕಿ
ಯಾಕಾದ್ರು ಹೀಗಾದ್ಲೋ ಯಾರಿಗೊಸ್ಕರ ಹೀಗಾದ್ಲೋ....
ಅದ್ಯಾವುದು ನನ್ನ ಕಣ್ಣ ಮುಂದೆ ಬರ್ತಿಲ್ಲ... ನೀನು ಈಗಿರೋ ಸ್ಥಿತಿ ಹೆಣ್ಮಕ್ಕಳಿಗೆ ಪುನರ್ಜನ್ಮ ಅಂತಾರೆ...
ನನ್ನ ಉಸಿರಲ್ಲಿ ಏರುಪೆರಾಗುತ್ತಿದೆ... ಹೇಳಲಾಗದ ಸಂಕಟದ ಗುದ್ದು ಎದೆಗೆ ಬೀಳ್ತಾನೆ ಇದೆ...
ನನ್ನ ದೇವಕಿಗೆ ಸಂತಸದ ಪುನರ್ಜನ್ಮ ನೀಡಪ್ಪ ಅಂತ ಮನಸ್ಸಿಗೆಷ್ಟು ದೇವರುಗಳು ನೆನಪಿಗೆ ಬರುತ್ತಾರೊ ಎಲ್ಲರ ಹತ್ತಿರ ಬೇಡಿಕೊಂಡಿದ್ದೇನೆ ಈಗ್ಲೂ ಬೇಡ್ಕೋತಿದ್ದೀನಿ....
ಆ ಪುನರ್ಜನ್ಮದಲ್ಲಿ ...
ನನ್ನ ದೇವಕಿಗೆ... ಹಿಂದಿನ ನೋವೆಲ್ಲ ಮರೆಯುವಂತ ವರಕೊಡಪ್ಪ...
ನನ್ನ ದೇವಕಿಯ ತುಟಿಯಲ್ಲಿ ಅರಳುವ ಹೂನಗು...ಬಾಡದಿರಲಿ
ಅವಳು ನಡೆಯುವ ದಾರಿಯಲ್ಲಿ ಸಾಲುಮರದ ನೆರಳಾಗು
.................ಪ್ಲೀಸ್

Saturday, July 11, 2009

. . . ಮರೆತಳೋ ಎಂದು

ಬೆಳ್ಳಿ ಮೋಡವೇ
ಎಲ್ಲಿ ಓಡುವೇ
ನನ್ನ ಬಳಿಗೆ ಒಲಿದು ಬಾ
ನನ್ನ ನಲ್ಲನ ಕಂಡು ಈ ಕ್ಶ್ಯಣ
ನನ್ನ ಒಲವ ತಿಳಿಸು ಬಾ...
ಎಂಥಾ ಅದ್ಭುತ ಹಗಲುಗಳನ್ನ ರಾತ್ರಿಗಳನ್ನ ಮಧುರ ಗೀತೆಗಳಾಗಿ ಕಳೆದಿದ್ವಲ್ಲ...
ಆ ದಿನಗಳಿಗೆ ಇವತ್ತು ನಾವು ಏನೆನ್ನೋಣ ದೇವಕಿ...?
ಆವತ್ತಿಗೆ ಹಾಗಿದ್ವು ಆ ದಿನಗಳು ಅಂತ ಹೇಳ್ಕೊಂಡು ಇವತ್ತಿಗೆ ನಿಟ್ಟುಸಿರು ಬಿಡೋಣ್ವಾ...
ನೆನಪುಗಳ ಮಾತು ಮಧುರಾ....
ಆ ನೆನಪುಗಳ ಸುಗಂಧ ಅಂಟಿಸಿಕೊಂಡು ಮಲಗಿ ನಮ್ಮನ್ನು ನಾವೇ ತಟ್ಟಿಕೊಂಡು ಅಂದಿನ ಖುಶಿಗೆ ಇಂದಿನ ಕಹಿಯನ್ನು ಮಿಶ್ರಣ ಮಾಡಿ ಭಾವಗೀತೆಗಳನ್ನಾಗಿ ಕಟ್ಟೋಣವಾ...
ನಿನಗೆ ಹೀಗೆ ಅನ್ನಿಸುತ್ತದಾ ಇಲ್ವಾ ಗೊತ್ತಿಲ್ಲ ...ನನ್ನನ್ನು ಪ್ರತಿಕ್ಷ್ಯಣವೂ ಈ ತರದ ಮಧುರ ವಿರಹಗಳೇ ಮುತ್ತಿಕೊಳ್ಳುತ್ತವೆ...ಪಾತರಗಿತ್ತಿ ಆಟವಾಡುತ್ತಾ ಬಿಡಿಸುವ ರಂಗೋಲಿಯಂತೆ. . .
ಆಯಸ್ಸು ಇಲ್ಲದ ಹುಮ್ಮಸ್ಸು....
ರಾತ್ರಿ ಡ್ಯೂಟಿಗೆ ಮತ್ತೆ ಮರಳುವಾಗ ನೀನು ಆಕಾಶ ನೋಡುತ್ತ ನಮ್ಮ ಜೊತೆಗೆ ಓಡುತ್ತಿರುವ ದಾರಿದೀಪಗಳ ಮಧ್ಯೆ ಸ್ಪರ್ಧೆಗಿಳಿದ ಚಂದಿರನನ್ನು ತೋರಿಸುತ್ತಿದ್ದೆ...
ನನ್ನ ಪಕ್ಕದಲ್ಲಿ ನೀನಿರುತ್ತಿದ್ದುದನ್ನು ನೋಡಿ ಆ ಕ್ಷಣಕ್ಕೆ ಚಂದಿರ ಮೋಡಗಳ ಮಧ್ಯೆ ಅಡಗಿ... ನನಗೆ ಹೇಳುತ್ತಿದ್ದ... ಅವಳಿರುವಾಗ ನಾನ್ಯಾಕೆ ನೀನು ನೋಡಬೇಡ ಅವಳು ಕಟ್ಟೋ ಸಾಲುಗಳಾಗು. . .
ನೋಡಲೇ ಬೇಕೆನಿಸಿದರೆ ನಿನ್ನಿರುವನ್ನೇ ಬಯಸುವ ನಿನ್ನವಳ ಕೆನ್ನೆ ನೋಡು ಕದ್ದು ಬಂದು ಕೂತಿರುವೆ ಅಲ್ಲಿ... ನಿನ್ನ ಮುತ್ತ ಪಿಸುಮಾತ ವಿವರಿಸಿ ಪುಳಕ ಮಾಡುವೆನು....

ಹೀಗೆಲ್ಲ ....
ನೀನು ಹೇಳಿಕೊಳ್ಳುತ್ತಿದ್ದೆ ನಾನೂ ಹೇಳಿಕೊಳ್ಳುತ್ತಿದ್ದೆ....
ಈಗ
ಚಂದ್ರ ನನ್ನ ಜೊತೆಗೆ ಇದ್ದಾನೆ .ವಿರಹಗೀತೆಗೆ ಅವನೂ ಶೋಕ ರಾಗ ಜೋಡಿಸುತ್ತಿದ್ದಾನೆ.... ನಾನೇ ಹೇಳಿ ಕೊಟ್ಟ ಮಧುರ ಪ್ರೇಮ ಗೀತೆಗಳ ಸಾಲುಗಳನ್ನು....
ಯಾಕೆ ಮರೆತಳೋ ಆ ಹುಡುಗಿ ಎಂದು...

Friday, July 10, 2009

ಆದರೂ ನನ್ನ ತುಟಿಯ ಕಿರುನಗು ಸತ್ತಿಲ್ಲ..

ಅದೊಂದು ಕನಸು ನನಗ್ಯಾಕೆ ಬಿತ್ತೋ...

ಕಾಶ್ಮೀರದ ದಾಲ್ ಸರೋವರದಲ್ಲಿ ನಾನು ನೀನು ಬೋಟ್ ಹೌಸ್ ನಲ್ಲಿ ತಂಗಿದ್ವಿ....ಅದು ಬೋಟು ಅನ್ನೋದಕ್ಕೇ ಸಾಧ್ಯವಿಲ್ಲ ಅನ್ನೋತರದಲ್ಲಿ ಅರಮನೆ ರೀತಿಯಲ್ಲಿ ಸಿಂಗರಿಸಿದ್ದರು ನಮಗಾಗಿ.ಅದಕ್ಕೆ ತಕ್ಕುದಾದ ಉಡುಗೆಯಲ್ಲಿ ನಾವೂ ಇದ್ವಿ.ದೂರದಲ್ಲಿ ಮ್ಯೂಸಿಕ್ ಟೀಮ್ ಒಂದು ಮೇಡ್ ಫಾರ್ ಈಚ್ ಅದರ್ ವಾಕ್ಯಕ್ಕೆ ಅದ್ಭುತವಾದ ರಾಗ ಸಂಯೋಜನೆ ಮಾಡಿ ಹಾಡುತ್ತಿದ್ದರು,ಅದೂ ನಮಗಾಗಿ...ನೀರಲ್ಲಿ, ನೀರೂ ಕಾಣಿಸದ ಹಾಗೆ ದುಂಡು ಮಲ್ಲಿಗೆಯನ್ನ ಚೆಲ್ಲಿದ್ದರು...ಮಧ್ಯದ ಅಮಲಿನಲ್ಲಿರುವವರನ್ನು ವಿವಿಧ ರೂಪದಲ್ಲಿ ನೋಡಿದ್ದೇನೆ...ನಕ್ಕಿದ್ದೇನೆ...ಹೀಗೂ ಉಂಟಾ ಅಂದುಕೊಂಡಿದ್ದೇನೆ...ಆದರೆ ಆ ಬೋಟ್ ಹೌಸಿನಲ್ಲಿ ನಮ್ಮನ್ನು ನೋಡಿದವರು ಪ್ರೇಮಿಗಳು ಹೀಗೂ ಇದ್ದಾರಾ ಅನ್ನುವ ಹಾಗಿದ್ವಿ . ಯಾವ ಸಿನಿಮಾದಲ್ಲು ನೃತ್ಯ ನಿರ್ದೇಶಕರ ಕಲ್ಪನೆಗೂ ಸಿಗದವರ ಹಾಗೆ ಅಷ್ಟು ಅದ್ಭುತವಾಗಿ, ಶ್ರೀಮಂತವಾಗಿ. ಮಲ್ಲಿಗೆ ಸುವಾಸನೆ ನಮ್ಮನ್ನ ಅಮಲಿನ ಕಡಲಿಗೆ ನೂಕಿತ್ತು. ನಿನ್ನ ನೆನಪಲ್ಲದೆ ಬೇರೆ ಯಾವುದು ಕ್ಷಣದ ನೆನಪಿಗೂ ಬಾರದ ಹಾಗೆ ಇಂದ್ರಿಯಗಳ ಎಲ್ಲ ಬಾಗಿಲುಗಳನ್ನು ಮುಚ್ಚಿತ್ತು. ದೊಡ್ಡದಾದ ಹಾಲು, ಚಂದ್ರಾಕೃತಿಯ ಸ್ಟೇಜು, ನೀನು ಕುಣಿದಾಗ ನಾನು ಅಭಿಮಾನಿಯಾಗುತ್ತಿದ್ದೆ. ನಾನು ಕುಣಿಯುವಾಗ ನೀನು ಅಭಿಮಾನಿಯಾಗುತ್ತಿದ್ದೆ ಇನ್ನೇನು ಇಬ್ಬರೂ ಸುಸ್ತಾಗಿ ವಿರಮಿಸುತ್ತೇವೋ ಅನ್ನುವಾಗ ಇಬ್ಬರೂ ಆವೇಶಭರಿತವಾಗಿ ಮತ್ತಷ್ಟು ಕುಣಿಯುತಿದ್ವಿ.


ಅದ್ಯಾವ ನೃತ್ಯವೋ ಗೊತ್ತಿಲ್ಲ... ದೇಹದಪ್ಪುಗೆ ಇರಲಿಲ್ಲ. ಆದರೆ ಭಾವೊದ್ವೆಗದ ಸಮ್ಮಿಲನ ಇತ್ತು. ಸಂಗೀತ ಇರಲಿಲ್ಲ ನಮ್ಮಿಬ್ಬರ ಹೆಸರು ಮಾತ್ರ ಅಮಲು ಧ್ವನಿಯಲ್ಲಿ ಹೊರಡುವ ಮಾಧಕತೆಯ ರಾಗದಂತಿತ್ತು . ಅದೆಷ್ಟು ಹೊತ್ತು ಕುಣಿದಿದ್ದೆವೋ ಗೊತ್ತಿಲ್ಲ, ಹೊತ್ತಿಗೆ ಮತ್ತೇರುತ್ತ ದೋಣಿ ಮುಳುಗುತ್ತಿರುವುದೂ ಗೊತ್ತಾಗಲಿಲ್ಲ. ನಮ್ಮನ್ನ ವಂಚಿಸಿ ಮುಳುಗಿಸುವುದು ಚೆಲ್ಲಿರುವ ಮಲ್ಲಿಗೆಯ ಉನ್ಮಾದ ಪರಿಮಳದ ಉದ್ಧೇಶವಿತ್ತೋ ಏನೋ..

ಪಾತಾಳಕ್ಕೆಳೆದುಕೊಂಡೇ ಬಿಡ್ತು.

ಆದರೂ ನಾವು ಸಾಯಲಿಲ್ಲ.. ಯಾಕೆ ಗೊತ್ತಾ..ಅಲ್ಲಿ ನಮ್ಮ ಬಿಗಿದ ಅಪ್ಪುಗೆ ಇತ್ತು. ಸತ್ತರೂ ಒಟ್ಟಿಗೆ ಎಂಬ ಉಸಿರು ಇನ್ನು ಬೆಚ್ಚಗಿನ ಗೂಡು ಕಟ್ಟಿಕೊಂಡಿತ್ತು .ಆ ಉಸಿರನ್ನ ಬಿಡಬೇಡ ಎಂದು ನನಗೆ ನೀನು ನಿನಗೆ ನಾನು ಹೇಳಿಕೊಂಡೇ ಇದ್ವಿ. ನಮ್ಮನ್ನ ಪಾತಾಳಕ್ಕೆಳೆದುಕೊಂಡ ನೀರಿಗೆ ಅವಮಾನ ಆಯ್ತು ಅನ್ನಿಸುತ್ತೆ. ಅದರ ಆಳದೊಡಲು .ನಮ್ಮನ್ನ ಬೇರೆ ಮಾಡಲು ಸಾಧ್ಯವಿಲ್ಲ ಅಂದುಕೊಂಡು ಬಿಡ್ತು. ಅದಕ್ಕೆ ನೀರವ ಮೌನದಲ್ಲೊಂದು ಕುಹುಕತೆಯ ಸುಳಿಯನ್ನು ಹುಟ್ಟಿಸಿ ಛೂ ಬಿಡ್ತು.


ನಮ್ಮನ್ನಾವರಿಸುತ್ತಾ ನಮ್ಮನ್ನ ತಬ್ಬಿಕೊಳ್ಳುತ್ತಾ ಪ್ರಜ್ನೆ ತಪ್ಪುವ ಹಾಗೆ ತಿರುಗಿಸಿಕೊಂಡು ಬಿಡ್ತು.

ಎಚ್ಚರವಾಗಿದೆ..

ನೀನು ಟೈಟಾನಿಕ್ ನಾಯಕಿಯಂತೆ ಹಲಗೆ ಮೇಲಿದ್ದೀಯಾ.. ನಾನು ದುರಂತ ನಾಯಕನಂತೆ ಅಲ್ಲಲ್ಲಿ ಹೆಪ್ಪುಗಟ್ಟಿದ ನೀರ ಕೊರೆತಕ್ಕೆ ಮರಗಟ್ಟಿ ಕಿರು ಬೆರಳನ್ನ ನಿನ್ನ ನೆನಪಿನ ಉಂಗುರಕ್ಕೆ ಸಿಕ್ಕಿಸಿಕೊಂಡಿದ್ದೇನೆ....


ಅದೆಲ್ಲಿಂದಲೋ ಬಂದ ನಾವಿಕರು ನಿನ್ನನ್ನ ಇನ್ನೊಂದು ದೋಣಿಯಲ್ಲಿ ಮಲಗಿಸಿ ಆರೈಕೆ ಮಾಡುತ್ತ ದೂರ ಸಾಗಿಸುತ್ತಾರೆ.. ನಾನು ಹೆಪ್ಪುಗಟ್ಟಿದ ನೀರಲ್ಲಿ ಮತ್ತಷ್ಟು ಹೆಪ್ಪುಗಟ್ಟುತ್ತಾ ನಿನ್ನ ನೆನಪನ್ನು ಇನ್ನಷ್ಟು ಹೆಪ್ಪುಗಟ್ಟಿಸುತ್ತ ಮುಳುಗುತ್ತಿದ್ದೇನೆ.....

ಆದರೂ ನನ್ನ ತುಟಿಯ ಕಿರುನಗು ಸತ್ತಿಲ್ಲ..
ನಿನ್ನ ನೆನಪಿಗಾಗಿ

Wednesday, July 8, 2009

ಹೆಜ್ಜೆಗಳು ಕೇಳಿದ ಪ್ರಶ್ನೆಗೆ ಉತ್ತರಿಸದವನು !

ಈ ಎದೆಯೊಳಗಿನಿಂದ
ಜಾರಿ ಬೀಳುತ್ತಿರುವ
ಒಂದೊಂದು ನೆನಪುಗಳಿಗೂ
ಕಾಲಿಗೆ ಬಿದ್ದವನು..!

ಆತ್ಮಸಾಕ್ಷಿಗೆ ಪೆಟ್ಟಾಯಿತೆಂದು
ಮತ್ತೆ ಎದ್ದು ನಿಂತು
ಬಲವಂತದ ನಗು ಮೊಗ ಹೊತ್ತವನು..!

ಮತ್ತೆ ಉತ್ತರಿಸಿಕೊಂಡು
ಬಂದ ನಿನ್ನ ನೆನಪುಗಳಿಗೆ
ಶರಣಾಗಿ ಸೋತೆನೆಂದವನು..!

ನೀನು ಮಾಡಿದ ಎಲ್ಲಾ
ಗಾಯಗಳಿಗೂ ನಿನ್ನ ಪ್ರೀತಿಯ
ಮುಲಾಮು ಹಚ್ಚಿದವನು,
ಮತ್ತೆ ಎಲ್ಲ ಗಾಯಗಳಿಗೂ
ನನ್ನ ಗೆಳತಿಯ ಮಚ್ಚೆಗಳೆಂದು
ಹೊಸ ಹೆಸರನಿಟ್ಟವನು..!

ಜೊತೆ ನಡೆದ ೩
ಹೆಜ್ಜೆಗಳನ್ನೆ ೩
ಜನ್ಮಗಳು ಅಂದುಕೊಂಡವನು.
ನೀನಿಲ್ಲದೇ ಒಂಟಿಯಾದ
ಈ ಹೆಜ್ಜೆಗಳು ನಿನ್ನ ಕುರಿತಾಗಿ
ಕೇಳಿದ ಪ್ರಶ್ನೆಗಳಿಗೆ
ಉತ್ತರಿಸಲಾಗದೇ ಸೋತವನು !

ನಿನ್ನ ಕೈಲಿ ಗುಲಾಬಿ ಗಿಡ ಕಾಣಿಸುತ್ತಿದೆ...

ಮೇಲೆ ಆಗಸದ ಕಟ್ಟೆಯೊಡೆದಿದೆಯೋ ಎನ್ನುವಂತೆ ಮಳೆ ಸುರಿಯುತ್ತಿದೆ. ಮನೆಯೊಳಗೆ ಬೀದಿ ದೀಪದ ಬೆಳಕಷ್ಟೇ ಸಾಕು ಎಂದು ಕೂತವನಿಗೆ ಹಳೆಯದೆಲ್ಲ ನೆನಪಾಗುತ್ತಿದೆ. ಬಂಗಾರದ ತೇರಲ್ಲಿ ಮಳೆಯ ಪರದೆಯನ್ನು ಸರಿಸುತ್ತ ನೆನಪಿನ ಮೂಟೆಗಳನ್ನ ಹೇರಿಕೊಂಡು ಬರುತ್ತಿದ್ದೀಯ ಗೆಳತಿ.

ನಿನ್ನ ಕೈಲಿ ಗುಲಾಬಿ ಗಿಡ ಕಾಣಿಸುತ್ತಿದೆ...

ಎದೆಯ ಎಲ್ಲ ಕನಸುಗಳಿಗೆ ಘೋರಿ ಕಟ್ಟಿ ಅದ್ಯಾವ ಮರುಭೂಮಿಯಲ್ಲಿ ಗುಲಾಬಿ ಬೆಳೆಯಲು ಹೊರಟಿದ್ದೀಯ ಗೆಳತಿ? ವಾಸುವಿನ ಜೊತೆಯಿಲ್ಲದೆ ನೀನು ನೆಟ್ಟ ಯಾವ ಗಿಡದಿಂದಲೂ ಹೂವುಗಳು ಅರಳುವುದಿಲ್ಲ. ಪ್ರಕೃತಿಗೂ ಕೆಲವು ಹೃದಯಗಳ ನೋವು ಅರ್ಥವಾಗುತ್ತೆ ಗೆಳತಿ. ಪ್ರೀತಿಯಿಲ್ಲದ ಯಾರ, ಯಾವ, ಕೆಲಸಗಳಿಗೂ ಅದು ಆಶೀರ್ವದಿಸುವುದಿಲ್ಲ, ಬದಲಾಗಿ ಶಪಿಸುತದೆ. ಆದರೆ ಆ ಶಾಪ ನಿನಗೆ ತಟ್ಟದಿರಲಿ ಎಂದು ನನ್ನ ಕಣ್ಣೀರನ್ನ ಭೂಮಿಗೆ ಹರಕೆಯಾಗಿ ಅರ್ಪಿಸ್ತಿದ್ದೀನಿ.

ನೂರೊಂದು ನೆನಪು ಎದೆಯಾಳದಿಂದ...

ಮೊದಲ ಮಳೆಗೆ ನೀನು ನೆನಪಾಗುತ್ತೀಯಾ..
ಕಾಲನ ಹೊಡೆತಕ್ಕೆ ಸಿಕ್ಕು ಸುಕ್ಕುಗಟ್ಟಿದ ವೃದ್ದ ಜೋಡಿಗಳು ತಬ್ಬಿ ಕುಳಿತ ಅಪ್ಪುಗೆಯಲ್ಲಿ ನೀನು ನೆನಪಾಗುತ್ತೀಯಾ.. ಯಾವತ್ತೂ ನಿನ್ನವನು/ಳು ಎಂದು ಪ್ರೇಮಿಗಳಿಬ್ಬರೂ ಕಿವಿಯಲ್ಲೇ ಉಸುರಿಕೊಂಡ ಅಪ್ಪಟ ಪ್ರೀತಿಯಲ್ಲಿ ನೀನು ವಾಸುವಿನ ಎದೆಯಂಗಳದ ರಂಗೋಲಿಯಾಗುತ್ತೀಯ. ನನ್ನ ಬದುಕಿನ ಪ್ರತಿ ತಿರುವುಗಳ ಮೊದಲು ಮತ್ತು ಕೊನೆಯಲ್ಲಿ ಹೆಗಲಿಗೆ ಕೈ ಹಾಕಿ ಸಾಗುವ ಮೌನರಾಗದ ಸಂಗಾತಿಯಾಗ್ತೀಯ.

ಎಲ್ಲೇ ಇರು ನೀ...
ನೆನೆಯುವೆನು ಚಿನ್ನ
ನೀ ಮರೆತರೂ ಹೇಗೆ
ನಾ ಮರೆಯಲಿ ನಿನ್ನ...

ನನ್ನ ಕಣ್ಣಿಂದ ಜಾರುವ ಹನಿಗಳು ಇಂಗುವ ಮುನ್ನ ಅವು ನಿನಗರ್ಪಿಸುವ ಸಾವಿರ ಕವನಗಳ ಸಾಲುಗಳು. ಈಗ ಹೇಳು,ಕೊನೆಯ ಪಕ್ಷ ನಿನ್ನ ಎರಡು ಹನಿ ಕಣ್ಣ ಬಿಂದುಗಳು ಭೂಮಿಗೆ ಜಾರುವಾಗಲೊಮ್ಮೆಯಾದರೂ ನಾನು ನೆನಪಾಗುತ್ತೀನಾ...
ಸತ್ತ ಪ್ರೀತಿಗೆ ಕಟ್ಟುವ ಘೋರಿಯ ಮುತ್ತಿಕ್ಕುವ ಬೆಳದಿಂಗಳು ನೀನೇನಾ...ಹಾಗಿದ್ದರೂ ಸರಿ ಬರಸೆಳೆವೆ ನಿನ್ನ.

ಬೆಳದಿಂಗಳಾಗಿ ಬಾ...

Tuesday, July 7, 2009

ನನ್ನ ಬದುಕಿನಲ್ಲಿ ಸಾವಿಲ್ಲದ ಪಾತ್ರ ನೀನು

ಭಾವನೆಗಳಿಗೆ ಕಿಚ್ಚಿಟ್ಟು ಉರಿದು ಬೂದಿಯಾಗುವುದನ್ನು ನೋಡಿಯೂ ನೀನೇಕೆ ಮೌನಿಯಾದೆ ಹುಡುಗಿ??? ಮಳೆ ಹೊತ್ತು ತರುವ ಮೋಡಗಳು ಕೂಡ ನಿನ್ನ ಹೆಸರನ್ನೇ ನನ್ನದೆಯಲ್ಲಿ ಬಿತ್ತುತ್ತಿವೆ. ಕನಸಿನ ಬೀಜ ಮೊಳಕೆಯೊಡೆದು ಬೆಳೆಯುವ ಪರಿಯೆಂತು ಹುಡುಗಿ!! ಈಗೀಗ ಕಣ್ಣೀರು ಹಾಕಲು ಭಯವಾಗುತ್ತಿದೆ. ಕಂಗಳಲ್ಲಿ ನಿನ್ನ ಬಿಂಬವೇ ತುಂಬಿಕೊಂಡಿದೆ. ಕಣ್ಣೀರಿನಿಂದಾಗಿ ಅದೂ ಕರಗಿ ಹೋದರೆ ನನ್ನ ರಾತ್ರಿಯ ಕನಸುಗಳಿಗೆ ಜೊತೆಯಾರು?!!! ಬದುಕಬೇಕೆಂಬ ಛಲಕ್ಕೆ ಸ್ಫೂರ್ತಿಯಾರು? ಕಾಗದ ಹಾಳೆಯಲ್ಲಿ ರಂಗಾಗಿ ಕುಳಿತಿರುವ ನೂರಾರು ಶಾಯರಿಗಳು ನಿನ್ನದೇ ಹಾದಿ ನಿರುಕಿಸುತ್ತಿವೆ. ಮುಂದೊಂದು ರಾತ್ರಿಯಲ್ಲಿ ನನ್ನ ಮಡಿಲಲ್ಲಿ ಮಗುವಾಗುವ ನಿನಗೆ ಅದನ್ನು ಪ್ರಸ್ತುತ ಪಡಿಸುವ ಆಸೆಯನ್ನು ಕನಸಲ್ಲೇ ನನಸುಮಾಡಿಕೊಳ್ಳುತ್ತಿದ್ದೇನೆ.

ಮಳೆಗಾಲ ನೋಡು.. ನಿನ್ನ ನೆನಪನ್ನೇ ಬೆಚ್ಚಗೆ ಹೊದ್ದುಕೊಂಡು ನಿನ್ನ ಮಡಿಲಲ್ಲೇ ಮಲಗಿದಂತೆ ಮಲಗಿದವನು ಬೆಳಗಿನ ಚುಮು ಚುಮು ಚಳಿಗೆ ಎಚ್ಚರಾಗುತ್ತೇನೆ.. ಕಿಟಕಿಯ ಹೊರಗೆ ಕಣ್ಣುಹಾಯಿಸಿದಷ್ಟು ದೂರವೂ ಮಳೆಯ ಸಿಂಚನ, ನನ್ನೆದೆಯಂತೆ ತೋಯ್ದು ತೊಪ್ಪೆಯಾದ ಮೇಧಿನಿ. ಸ್ವರ್ಗವೇ ಭೂಮಿಯ ಮೇಲಿದ್ದರೂ ಅನುಭವಿಸುವ ಪುಣ್ಯ ಮಾತ್ರ ಹಣೆಬರಹದಲ್ಲಿಲ್ಲ ಹುಡುಗಿ.. ಕಾರಣ ಹೇಳದೆ ಬೆನ್ನಕ್ಕಿ ಹೋಗುವಾಗ, ಪುನಹ ಮರಳಿ ನಿನ್ನ ಗೂಡಿಗೆ ಬರುವವರೆಗೂ ನನ್ನದೆ ಕನವರಿಕೆಯಲ್ಲಿ ಪ್ರತಿಕ್ಷಣವೂ ಹಂಬಲಿಸು ಎಂದು ಶಾಪವಿಟ್ಟೆ ಹೋಗಿದ್ದೆ ನೀನು!!! ನೀನಿಟ್ಟ ಶಾಪ ಅಣು ಅಣುವನ್ನೂ ದಹಿಸುತ್ತಿದೆ. ಅದನ್ನು ತಡೆದುಕೊಳ್ಳಲಾರದ ನಿಶ್ಯಕ್ತ ನಾನು. ಅದರಿಂದ ವಿಮೋಚನೆಗೊಳಿಸಿ ನನ್ನನ್ನು ಉದ್ದರಿಸು ಹುಡುಗಿ...

ಎದೆಯ ಜೋಪಡಿಯೊಳಗೆ ನಾನಿಲ್ಲದೆ ಅವನು ಬದುಕು ನಡೆಸಬಲ್ಲ ಎಂದು ತಮಾಷೆಗೂ ಕಲ್ಪಿಸಿಕೊಳ್ಳಬೇಡ ಹುಡುಗಿ. ನನ್ನ ಬದುಕಿನಲ್ಲಿ ಸಾವಿಲ್ಲದ ಪಾತ್ರ ನೀನು. ಕಾಡಲ್ಲಿ ಅರಳಿದ ಕಮಲದ ಹೂವಂತ ನನ್ನ ಬಾಳನ್ನು ಚುಂಬಿಸಿ ದೇವರ ಮುಡಿ ಸೇರಿಸುವ ಹಂಬಲವಿದ್ದವಳು, ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿ ಹೊಸಕಿಬಿಟ್ಟೆಯಲ್ಲೇ!!! ಬದುಕಿನ ವಿಲಕ್ಷಣ ತಿರುವಿನಲ್ಲಿ ನನ್ನ ಮಹಲಿನಲ್ಲಿ ಇರಬೇಕಾದ ನೀನೇ ಇಲ್ಲ... ನಾನೇ ನೆಟ್ಟು ಬೆಳೆಸಿದ ಮರದಡಿಯಲ್ಲಿ ನನಗೇ ನೆರಳಿಲ್ಲ. ನಿನ್ನ ನೆನಪು ನನಗೆ ಯಾವತ್ತಿಗೂ ಭಾರವಲ್ಲ ಹುಡುಗಿ ಅದನ್ನು ಎದೆಗವಚಿಕೊಂಡೆ ಬದುಕುತ್ತಿದ್ದೇನೆ. !!!

Monday, July 6, 2009

ನಿನ್ನ ಹೆಸರಿಟ್ಟು ಕರೆಯುತ್ತಿದ್ದ ಅಷ್ಟು ಚುಕ್ಕಿಗಳೆಲ್ಲಿಗೆ ಹೊರಟು ಹೋದವು ಗೆಳತಿ?

ಎದೆಯ ಮಹಲೊಳಗೆ ಮೂಡಿದ ನಿನ್ನ ಪ್ರೀತಿಯ ಗಜಲ್ಲುಗಳಲ್ಲಿ ಎದೆ ಬಿರಿಯೆ ನೋವು, ಸುಮ್ಮನೆ ನಿನ್ನ ಹೆಸರು ಹೇಳಿ ಆಕಾಶದ ಅಂಗಳದಲ್ಲಿ ಕಣ್ಣಾಡಿಸಿದರೆ ಅಲ್ಲಿ ಚಂದ್ರ್ರಮನಿಲ್ಲ, ನಿನ್ನ ಹೆಸರಿಟ್ಟು ಕರೆಯುತ್ತಿದ್ದ ಅಷ್ಟು ಚುಕ್ಕಿಗಳೆಲ್ಲಿಗೆ ಹೊರಟು ಹೋದವು ಗೆಳತಿ? ಈಗಂತು ಕಣ್ಣುಗಳಲ್ಲಿ ಬರಿ ಕತ್ತಲೆಯ ರಾತ್ರಿಗಳ ಮೆರವಣಿಗೆ. ಅಮವಾಸ್ಯೆಯ ಕತ್ತಲು ನನ್ನ ಕಣ್ಣುಗಳ ಬಾಡಿಗೆ ಹಿಡಿದು ಕುಳಿತಿದೆ. ಹುಣ್ಣಿಮೆ ಬೆಳದಿಂಗಳೆನಿಸಿಕೊಂಡ ನೀನು ಸದ್ಯ ನನ್ನ ಜೊತೆಗಿಲ್ಲ ಮತ್ತೆ ಬೆಳಕು ಮೂಡುವ ಬರವಸೆ ಯಾಕೋ ಮನಸ್ಸಿನಿಂದ ಬಹುದೂರ ಸಾಗಿದಂತೆ ಭಾಸವಾಗುತ್ತಿದೆ. ಕಳೆದು ಹೋದ ನೆನಪುಗಳ ಮನನ ಮಾಡಿಕೊಂಡು ಕಾಲ ತಳ್ಳುವ ಸಣ್ಣ ಚೈತನ್ಯವು ಉಳಿದಿಲ್ಲ ಗೆಳತಿ. ನನ್ನ ಬದುಕು ಮತ್ತು ನಿನ್ನೆಡೆಗಿರುವ ನನ್ನ ಪ್ರೀತಿಯನ್ನ ಯಾವತ್ತೂ ಸಮನಾರ್ಥಕ ಪದಗಳೆಂದೇ ತಿಳಿದಿದ್ದ ಜೀವ ನನ್ನದು. ಅಲ್ಲಿ ನಿನ್ನ ವಿದಾಯವೆಂಬ ಅಧ್ಯಾವ ಬಂದು ಬದುಕಿನ ಅರ್ಥವನ್ನ ಮತ್ತು ನನ್ನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತದೆ ಎಂಬ ಚಿಕ್ಕ ಕಲ್ಪನೆ ಕೂಡ ನನಗಿರಲಿಲ್ಲ.....................!!

ಕೊನೆಗೂ ಆ ದೇವರು ಅನ್ನಿಸಿಕೊಂಡವನು ದೇವಕಿಯಿಲ್ಲದ ಬದುಕು ನಿನ್ನದು ಎನ್ನುವ ಬರಹವನ್ನ ಈ ಹಣೆಯಲ್ಲಿ ಕೆತ್ತಿದ್ದಾನೆ. ಕೆಲವೊಮ್ಮೆ ನಿನ್ನ ವಿರಹದ ನೋವುಗಳು ಮತ್ತು ವಿದಾಯದ ಕೆಲವು ಅಧ್ಯಾಯಗಳೂ ಕೂಡ ನನ್ನ ತುಂಬಾ ಕಾಡುತ್ತಿವೆ. ಪ್ರತಿ ದಿನದ ಪ್ರತಿ ಕ್ಷಣದಲ್ಲಿ ಕೂಡ ನಿನ್ನ ನೆನಪುಗಳು ಈ ಎದೆಯ ಭಿತ್ತಿಯಲ್ಲಿ ಸರಿದಾಡುತ್ತಿರುತ್ತವೆ. ನಿನ್ನನ್ನ ನನ್ನ ಕಲ್ಪನಾಲೋಕದೊಳಗೊಂದಿಷ್ಟು ಹೊತ್ತು ಬಿಟ್ಟುಕೊಂಡು ನನ್ನ ದೇವಕೀ ಅನ್ನುತ್ತ ಖುಷಿಯಿಂದ ಕೂಗುತ್ತ ಪರಿತಪಿಸಿಬಿಡುತ್ತೇನೆ. ಹಾಗೆ ಸುತ್ತಲು ಹುಡುಕುತ್ತೇನೆ. ಸುತ್ತಲೂ ನಿನ್ನ ವಿದಾಯದ ಹೆಜ್ಜೆಗುರುತುಗಳು ಕಾಣಿಸುತ್ತವೆಯೇ ಹೊರತು ನಿನ್ನ ಪ್ರೀತಿಯ ಒಂದಕ್ಷರಗಳು ಕಾಣಿಸುವುದಿಲ್ಲ. ನಿನ್ನ ಕುರಿತಾಗಿ ಒಂದಿಷ್ಟು ಕನಸುಗಳು ಕನಸ ರಾತ್ರಿಯ ಬುಟ್ಟಿಗೆ ಬಂದು ಬೀಳುತ್ತವಾದರೂ ಅಲ್ಲಿ ಯಾವುದೇ ಜೀವಂತಿಕೆಯ ಹೂವುಗಳಿರುವುದಿಲ್ಲ. ಬದಲಾಗಿ ಚುಚ್ಚುವ ಮುಳ್ಳುಗಳಿರುತ್ತೆ ಗೆಳತಿ.......................!!

ಹಿಂದೆ ನಿನಗೊಂದು ಸಾಲು ಬರೆದಿದ್ದೆ ನೆನಪಿದೆಯಾ? ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರವಲ್ಲ ದೇವಕಿ ಅಂತ. ಮತ್ತೆ ಮತ್ತೆ ಆ ಮಾತನ್ನ ಹೇಳಬೇಕು ಅನ್ನಿಸುತ್ತಿದೆ ನಿನಗೆ. ಪ್ರದಿದಿನ ನನ್ನ ಜೋಳಿಗೆಗೆ ನಿನ್ನ ನೆನಪುಗಳು ಸುರಿಯುತ್ತಲೇ ಇದೆ. ಕೊನೆಯ ಪಕ್ಷ ನಿನ್ನ ನೆನಪಾದರೂ ನನ್ನ ಜೊತೆಗೆದೆಯಲ್ಲವ ಅಂದುಕೊಂಡ ವಾಸು ಅನ್ನುವ ಜಗತ್ತಿನ ಅತ್ಯಂತ ನತದೃಷ್ಟ ಹುಡುಗನ ಎದೆ, ತನಗೆ ನೋವಾದರೂ ತನ್ನ ಪಾಡಿಗೆ ತಾನು ನಿರಂತರ ನಿತ್ಯ ನದಿಯ ಹಾಗೆ ಹರಿಯುತ್ತ ಹಾಡುತ್ತಾ ಇದೆ. ಈ ಹಾಡಿನ ಸಂತೆ ಯಾವತ್ತೂ ಮುಗಿಯುವುದಿಲ್ಲ ಅಂತ ಇಲ್ಲಿಂದಲೇ ನಿನ್ನ ನೆತ್ತಿಯನ್ನ ಮುಟ್ಟಿ ಒಂದು ದೊಡ್ಡ ಪ್ರಾಮಿಸ್ ಮಾಡಿಬಿಡ್ತೀನಿ.

ಅಂತೂ ಪ್ರೀತಿ ಎಂಬ ಈಟಿಯಿಂದ ದಿನನಿತ್ಯ ಇರಿಯುತ್ತಿದ್ದೀಯ ಮನಸ್ಸಾದ್ರು ಹೇಗೆ ಬರುತ್ತೆ ದೇವಕಿ .ದೇವರು ಶಾಪಕೊಟ್ರು ಭಕ್ತನಿಗೆ ಅದು ವರವೇ ಅಲ್ವಾ.ಸ್ವೀಕರಿಸುತ್ತೇನೆ ನಿನಗದು ಖುಶಿಯಾದರೆ ನನಗೂ ಕಹಿಯಾಗಲ್ಲ .ಮತ್ತಷ್ಟು ಘಾಸಿಗೊಳ್ಳುತ್ತೇನೆ ನಿನಗೋಸ್ಕರ ನಿನ್ನ ಪ್ರೀತಿಗೋಸ್ಕರ.

ಸರಿ ನಿನ್ನ ನೆನಪೊಳಗೆ ಕೆಲವು ಹಾಡುಗಳನ್ನ ಕಟ್ಟುತ್ತಲೇ ಇರುತ್ತೇನೆ. ನೀನು ನಂಬುವ ಮತ್ತೆ ನಾನು ನಂಬದಿರುವ ದೇವರು ನನ್ನ ಹಾಡುಗಳಿಗೆ ನೋವಿನ ಅಥವ ಖುಷಿಯ ರಾಗವನ್ನ ಹಾಕಲಿ ಗೆಳತಿ. ಖುಷಿಯ ರಾಗವಾದರೇ ಜಗತ್ತಿನ ಪ್ರೇಮಿಗಳೆಲ್ಲರೂ ಎದೆಯೊಳಗೆ ಒತ್ತಿಕೊಂಡು ಕಣ್ಮುಚ್ಚಿ ಕೇಳಿಕೊಳ್ಳಲಿ. ನೋವಿನ ರಾಗವಾದರೇ ವಾಸು ತರದ ಕೆಲವು ನತದೃಷ್ಟರು ತಮ್ಮಷ್ಟಕ್ಕೇ ತಾವೆ ಹಾಡಿಕೊಳ್ಳಲಿ. .

Sunday, July 5, 2009

ಬೆಳ್ಳಿ ಮೋಡಗಳಿಗೆ ಭಾಷೆಯ ಹಂಗಿಲ್ಲ



ಬೆಳ್ಳಿಮೋಡ ಬೆನ್ನಟ್ಟುತಾವ
ಬೆಟ್ಟಗಳ ತಬ್ಬುತಾವ ಅದಕೆ ಭಾಷೆಯ ಹಂಗಿಲ್ಲ
ಮೋಡಗಳು ಓಡೋಡಿ ಬಂದು ಬೆಟ್ಟಗಳನ್ನ ಅಪ್ಪಿಕೊಳುತ್ತೆ, ಆದ್ರೆ ಅದಕ್ಕೆ ಯಾವುದೆ ಹಂಗಿಲ್ಲ. ನಮ್ಮ ಬದುಕು ಕೂಡ ಹಾಗೆ ಯಾವುದೆ ಯಾರದೆ ಹಂಗಲ್ಲದೆ ಬದುಕ ಬೇಕು ವಾಸು, ಆದ್ರೆ ನಮಗೆ ಅ ರೀತಿ ಆಗೋಲ್ಲ ಅಲ್ವ ಅಂದ್ದಿದ್ದೆ ನೀನು ಮರೆತಿರಬೇಕು, ನೆನಪಿದೆ ನನಗೆ, ಸಂಬಂಧಗಳನ್ನು ಕಟ್ಟಿಕೊಂಡು ಬದುಕನ್ನ ಹಸನು ಮಾಡುವವರು ನಾವು ನಮಗೆ ಎಲ್ಲರ ಎಲ್ಲದರ ಹಂಗು ಬೇಕು. ಹೀಗೆ ಬದುಕಲು ಹೇಳಿ ನೀನು ಈಗ ಯಾರಿಗು ಸಿಗದೆ, ಹೀಗೆ ಬದುಕಲು ಹೇಗೆ ನಿರ್ಧರಿಸಿದೆ... ಪ್ರೀತಿ ಎಂದರೆ smsನಲ್ಲಿ ಕಳುಹಿಸುವ quotationಗಳಂತೆ ಅಲ್ಲ, ಅದು ಬದುಕಾಗಬೇಕು ಆಗ ಆ ಪದಗಳು ಅರ್ಥ ಪಡೆಯುತ್ತವೆ... ನಾವಿಬ್ಬರು ಒಂದು ಕನಸು ಕಂಡಿದ್ವಿ ಎಲ್ಲರಂತೆ ನಾವು ಮದುವೆಯಗಿ ನಮಗೆ ಮಕ್ಕಳಾಗಿ, ಆ ಮಕ್ಕಳಿಗೆ ಇಟ್ಟ ಹೆಸರನ್ನ ಕರೆಯದೆ ಪುಟ್ಟಾ ಪುಟ್ಟಿ ಎಂದು ಕರೆಯುತ್ತಾ ಎಲ್ಲಾ ಅಪ್ಪಂದಿರಂತೆ ನಾನು ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವುದು ನೀನು ಪುಟ್ಟಾ ಪುಟ್ಟಿಯನ್ನ ಡ್ರೆಸ್ಸ್ ಮಾಡ್ಸಿ school ಗೆ ಕರ್ಕೊಂಡ್ ಹೋಗಿ ಬಿಟ್ಟು ಬರುವುದು ನನಗೆ ಕೆಲಸದ ನಡುವೆ ಬಿಡುವು ಮಾಡಿಕೊಂಡು ನಿನ್ನೊಡನೆ phoneನಲ್ಲಿ ಮಾತನಾಡುವುದು ಸಂಜೆ ಬೇಗ ಮನೆಗೆ ಬಾ ಅಂತ ನೀನು ಕರೆಯುವುದು ನಾನು ಆದ್ರೆ ಬರ್ತೀನಿ ಅಂತ ಹೇಳಿ ಬರೋಕಾಗ್ದೆ late ಆಗಿ ಬಂದು ನಿನ್ನ mood ಸರಿ ಮಾಡೊಕೆ
ಆ ಅರ್ಥವಾಗ್ದೆ ಇರೋ pop musicನ ಜೋರಾಗಿ ಹಾಕ್ಕೊಂಡು ನಿನ್ನ ಮುಂದೆ dance ಮಾಡ್ತಾ ಇರೋವಾಗ ಪುಟ್ಟಾ ಪುಟ್ಟೀನ ಕರ್ಕೊಂಡ್ ಬಂದ ಪಕ್ಕದ ಮನೆ ಶಾಂತಕ್ಕ ಇದನ್ನ ನೋಡಿ ಅಯ್ಯಯ್ಯೋ ಅಂತ ಕಿರುಚಿಕೋಡು ಓಡ್ದಾಗ ನಿನಗೆ ಜೋರಾಗಿ ನಗು ಬಂದು ನನ್ನ ಮುಖ ನೋಡಿ ಬಿದ್ದು ಬಿದ್ದು ನಕ್ಕು ಮತ್ತೆ ನನ್ನ ಕಡೆ ನೋಡಿ ವಾಸು ನಿನ್ನ ಈ expression ನ ನೋಡೆ ಇಲ್ಲ ಕಣೊಅಂತ ಅಂದಾಗ ನನಗು ನಗು ಬಂದು ನಿನ್ನ ಕಡೆ ನೋಡಿ ನಾನು ನಕ್ಕೆ ಆಹಾ!!! ಎಂತಹ ಪುಟ್ಟ ಕನಸು ಆದರೆ ಯಾಕೆ ದೇವಕಿ? ಯಾಕೆ ಹೀಗೆ ಮಾಡ್ದೆ? ಪುಟ್ಟ ಪುಟ್ಟಿಯರ sslc exam result ನೋಡಿ ಯಾವ ಕಾಲೇಜಿನ ಸೀಟೂ ಅಂತ ನಾವು ಅಳೆದು ಸುರಿದು ಹುಡುಕಿ puc ಗೆ scienceಅ Artsಆ commerceಅ ಅಂತ ಪ್ರಶ್ನೆ ಬಂದಾಗ science ತಗೊಂಡು mbbs ಮಾಡ್ರೋ ಅಂತ ನೀನು ಹೇಳೋದು, ನಾನು ಕೆಲ್ಸ ಸಿಗಲ್ಲ ಬೇರೆ ಯಾವುದಾದ್ರು ತಗೊಳ್ರೊ ಅಂತ ನಾನು ನೀನು ಯೋಚ್ನೆ ಮಾಡ್ತಿರ್ಬೇಕಾದ್ರೆ ನಮ್ಮಿಬ್ಬರ ಆಸೆಗು ಮೀರಿ ಅವರು ಬೇರ್ಯಾವುದೊ ದಾರಿ ಆರಿಸಿಕೊಂಡಾಗ ರೇಗ ಬೇಕೆಂದುಕೊಂಡಿದ್ದ ನನಗೆ ಸಮಾಧಾನ ಹೇಳಿ ಹಕ್ಕಿಗಳಿಗೆ ಸ್ವತಂತ್ರಕೊಟ್ರೇನೆ ಆಕಾಶದ ಅಳತೆ ಗೊತ್ತಾಗೋದು ಅಲ್ವ ವಾಸು ಅಂತ ಅಂದಾಗ ಅವ್ರು ಯಾರ್ನಾದ್ರು ಪ್ರೀತ್ಸಿದ್ರೆ ಬೇಗ ಮದ್ವೆ ಮಾಡ್ಬಿಡೋಣ ಅಂದು ನಾಚಿದ್ದೆ ನೀನು
ಯಾಕ್ ಹೀಗ್ ಮಾಡ್ದೆ?
ಹಳೆಬೀಡಿನ ಸಂತೆ ನೆನಪಿಸ್ದೆ,ಜಾತ್ರೆ ನೆನಪಿಸ್ದೆ ಜಾತ್ರೆ ಯಲ್ಲಿ ಬರುವ ಥೇರನ್ನ ಎಳೆಯಲು ಆ ತುಂಬಿದ ಜನರ ನಡುವೆ ನುಗ್ಗಿ ಅದನ್ನ ನನ್ನ ಜೊತೆಯಲ್ಲೆ ಎಳೆಯಬೇಕು ಅಂದಾಗ...
ಸಂಜೆವರ್ಗು ಸಂತೆ ಸುತ್ತಿ ಬಳೆ ಬೊಟ್ಟೂ ಬಾಚಣಿಗೆ ಕವಡೆ ಮಣಿಸರ, ಎಲ್ಲ ತಗೊಂಡು ಕಾಡು ಹರಟೆ ಹೊಡ್ದು, ರಾತ್ರಿ ಅಮ್ಮ ಮಾಡಿದ ಬಿಸಿ ಬಿಸಿ ಸಿಹಿ ಪೊಂಗಲ್ ತಿಂದು ನನಗೂ ತಿನಿಸಿ ನಿನ್ನ ಎದೆಯ ಗೋಡಲ್ಲಿ ಬೆಚ್ಚನೆ ಅಪ್ಪುಗೆಯ ಆ ಸಿಹಿ ನೆದ್ರೆಯ ಕನಸು!!! ದೇವಕಿ please ನಾನು ಅತ್ತು ಅತ್ತು ಕಣ್ಣೀರೇ ಮುಗಿಸಿದ್ದೇನೆ ನೀನು ನನಗೆ ಕನಸುಗಳನ್ನ ಕೊಡಬಾರದಿತ್ತು ಯಾಕೆ ದೇವಕಿ ನಮ್ಮ ಕನಸುಗಳನ್ನ ಮರೀಚಿಕೆ ಮಾಡ್ಬಿಟ್ಟೆ... ಜೀವ ಚಿಲುಮೆ ನೀನು... ಯಾಕೆ ಹೀಗೆ...? ದುಃಖ ಉಮ್ಮಳಿಸಿ ಬರುತ್ತಿದ್ದೆ ನಿನ್ನ ಕನಸುಗಳೊಟ್ಟಿಗೆ ನನ್ನನ್ನ track suit ಹಾಕಿ competetion ಗೆ ನಿಲ್ಲಿಸಿಬಿಟ್ಟೆ, ಮುಕ್ತಾಯದ ಗೆರೆಯಲ್ಲಿ ನೀನು ನಿಂತ್ತಿದ್ದೆ ನಿನ್ನ ತಲುಪಲು ಓಡಿದ್ದೆ ಓಡಿದ್ದು ,ಓಡಿದ್ದೆ ಓಡಿದ್ದು, ಓಡಿದ್ದೆ ಓಡಿದ್ದು ಎಗರಿ ಬಿದ್ದು ಗಾಯ ಮಾಡ್ಕೊಂಡು, ಕಣ್ಣೀರು ತೊಟ್ಟಿಕ್ಕೊ ತನಕ ಆ ನೋವಿನ ಎಚ್ಚರದಲ್ಲಿ ತಿರುಗಿ ನೋಡಿದಾಗ ನೀನು ಆರಂಬದ ಗೆರೆಯಲ್ಲು ಇರಲಿಲ್ಲ, ಅಂತ್ಯದಲ್ಲು ಇಲ್ಲ ಎಲ್ಲೋ ದೂರದಲ್ಲಿ ಯಾರದೋ ಜೊತೆ ಐಸ್ ಕ್ಯಾಂಡಿ ತಿನ್ನುತ್ತಿದ್ದೆ ನಿನ್ನ ಆ ಬೆಚ್ಚನೆಯ ಮುಖವನ್ನ ನನ್ನ ಗೂಡಿನಿಂದ ಯಾಕೆ ದೂರ ಮಾಡ್ದೆ????!!!!! ನನಗು ಅಮೇರಿಕ ಬೇಕಿರಲಿಲ್ಲ ನಮ್ಮ ಕನಸಿಗೆ ಒತ್ತಾಗ್ಲೀಂತ ಬೇಗ ನನಸಾಗ್ಲೀಂತ ಹೋಗಿದ್ದು ಇದು ತಪ್ಪೊಪ್ಪಿಗೆ ಅಲ್ಲ ಕನಸುಗಳ ಬಾಗಿನ ನನಗು ಸೇರಿದಲ್ಲವ ಅದಕ್ಕೆ ನನ್ನದು ಒಂದು ಹಣ್ಣು ಎಲೆ ಅಡಿಕೆ ಅಕ್ಕಿ ಬೇಕಲ್ವ ನಿಂಗೊತ್ತಾ ಜೋರಾಗಿ ಬಂದು ನಿಂತ ಮಳೆಯನ್ನ ಕುಡಿದ ಮಣ್ಣಿನ ವಾಸನೆಯ ಜೊತೆಗೆ ನಿನ್ನೊಟ್ಟಿಗೆ ಕೂತು ಬಾಳೆಕಾಯಿ ಬಜ್ಜಿ ತಿನ್ನುತ್ತಾ ಕಾಫಿ ಕುಡಿಯುವ ಆ ಕನಸನ್ನ ಏನು ಮಾಡಲಿ ಹೇಳು please please

Friday, July 3, 2009

ಸಮುದ್ರದಲೆಯಂತೆ ಬೋರ್ಗರೆಯುತ್ತಾ ಅತ್ತಿದ್ದು ಎಷ್ಟು ಸಲವೋ!

ಮಗುವಿನ ರಚ್ಚೆಯ ಅಳುವಿನಂತಿತ್ತಲ್ಲವೇ ನನ್ನದು ಮೋಹವೆಂಬ ಸಾಗರಿಯನ್ನು ಮೀರಿದ ನಿಷ್ಕಲ್ಮಷ ಪ್ರೇಮ. ತುಟಿಯಂಚಲ್ಲಿ ಮಿನುಗುವ ನಗುವಿನ ಪುಟಿತಕ್ಕೆ ಪ್ರೇರಣೆಯಾಗಿದ್ದವಳೆ ನೀನು. ಸುನಾಮಿಯಂತಹ ಪ್ರಚಂಡ ಶಹರದಲ್ಲಿ ಬದುಕುತ್ತಿರುವ ಶಾಂತ ಶರಧಿಯ ಮನೋಭೂಮಿಕೆಯವರು ನಾವಿಬ್ಬರು ಎಂದು ತುಂಬಾ ಹೆಮ್ಮೆ ಪಡುತ್ತಿದ್ದೆ. ಈಗ ಅದು ಕನಸುಗಳ ಭಯಂಕರ ಕಥಾನಕ ಎಂದೆನಿಸುತ್ತದೆ. ಮನದಲ್ಲಿ ಅಂಕುರಿಸಿದ ನಿಷ್ಕಲ್ಮಷ ಪ್ರೀತಿ ಸಣ್ಣ-ಸಣ್ಣ ಹಂಬಲಗಳಿಗೆ ಕಮರಿಹೋಗುತ್ತಾ ಹುಡುಗಿ? ಮನಸ್ಸನ್ನು ಒಂದೇ ಒಂದು ಮಾತಿಲ್ಲದೆ ಮುರಿಯುವುದು ಅಷ್ಟು ಸುಲಭನಾ??

ನಿನ್ನ ಇರುವಿಕೆಯಲ್ಲಿ ಉಸಿರಾಡುತ್ತಿದ್ದವನು ನಾನು. ತುಂಬಿ ಹರಿಯುತ್ತಿದ್ದ ಅಂತಹ ಪ್ರೀತಿ ಈಗ ಬತ್ತಿ ಬರಡಾಗಿದೆ. ಹಣ ಮನುಷ್ಯನನ್ನು ಆಳುತ್ತದೆ ಎಂಬುದು ಗೊತ್ತು. ಆದರೆ ಅದು ತನ್ನ ಕಪಟವನ್ನು ಪ್ರೀತಿಯ ಮೇಲೂ ಬೀರುತ್ತಿರುವುದು ಖೇದವೇ ಸೈ. ಆದರೂ ಕೆಲವೊಮ್ಮೆ ಸಮಾಧಾನಿಯಾಗುತ್ತೇನೆ. ಜಗತ್ತನ್ನೇ ಆಳುವ ಸೂರ್ಯ, ಚಂದ್ರರಿಗೂ ಗ್ರಹಣ ಹಿಡಿಯುತ್ತದಲ್ಲ. ಹಾಗೇಯೇ ನನ್ನ ಪ್ರೀತಿಗೆ ಹಿಡಿದ ಗ್ರಹಣ ಸಹ ಸರಿದು ಹೋಗುತ್ತದೆ ಎಂಬ ಸುಳ್ಳೆ ಭರವಸೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀನಿ. ಬೆಂಕಿಗೆ ಹವಿಸ್ಸಾದ ಚಿನ್ನ ಅಪರಂಜಿಯಾದಂತೆ ಬರಡಾದ ನನ್ನ ಪ್ರೀತಿ ಚಿಗುರೊಡೆಯುತ್ತದೆ ಎಂಬ ಹುಸಿ ನಂಬುಗೆ ಇಂದ ಬದುಕ್ತಾ ಇದ್ದೀನಿ.

ನಿನ್ನಿಂದಾಗಿ ಹೃದಯ ವೀಣೆಯ ಮೃದುಲ ತಂತಿಯು ಮುರಿದು ಬಿದ್ದಿದೆ. ಬೀಳುಬಿದ್ದ ರಾತ್ರಿಯಲ್ಲೂ ಕನಸಿನ ಮಿಂಚುಹುಳುಗಳು ಮಾಯವಾಗಿ ಬಿಟ್ಟಿವೆ. ಹುಡುಗಿ ರಾತ್ರಿಯ ಕನಸಲ್ಲೂ ಬಿಕ್ಕಳಿಸಿದ್ದು ನಿನ್ನ ನೆನಪಾಗಿಯೇ. ನಿನಗಾಗಿ ಹೊತ್ತಲ್ಲದ ಹೊತ್ತಲ್ಲಿ ಹಂಬಲಿಸಿ ಸಮುದ್ರದಲೆಯಂತೆ ಬೋರ್ಗರೆಯುತ್ತಾ ಅತ್ತಿದ್ದು ಎಷ್ಟು ಸಲವೋ!! ಒಂದೊಂದು ಕಣ್ಣ ಬಿಂದುವಿನಲ್ಲೂ ನಿನ್ನದೇ ಮಿಡಿತವನ್ನೂ ಗುರುತಿಸದೇ ಹೋದೆಯಾ? ತುಟಿಯಂಚಿನ ನಗು ಮರೆತುಹೋಗಿದೆ. ಇಷ್ಟೆಲ್ಲಾ ನೋವು ನನಗೊಬ್ಬನಿಗೆ ಯಾವ ಅಪರಾಧಕ್ಕಾಗಿ ಬರುತ್ತದೆ. ನೀನೇ ಸರ್ವಸ್ವ ಎಂಬಂತೆ ನಿನ್ನೊಬ್ಬಳನ್ನೇ ಪ್ರೀತಿಸಿದ್ದಕ್ಕಾ? ಸಾಕೇ ಇನ್ನು ಮುಂದೆ ನನ್ನಿಂದ ಸಹಿಸೋಕೇ ಆಗಲ್ಲ. ಅರಳುವ ಹೂವನ್ನು ಕಮರುವಂತೆ ಮಾಡಬೇಡ. ಬೆಂಬಿಡದ ನೆನಪುಗಳಿಗೆ ಮುಸುಕು ಎಳೆಯಲು ಸಾಧ್ಯವಾಗುತ್ತಿಲ್ಲ. ನಿನ್ನ ಇರುವಿಕೆಯಿಲ್ಲದೆ ಒಂದು ಕ್ಷಣವೂ ಕಲ್ಪಿಸಿಕೊಳ್ಳೋಕೇ ಆಗ್ತಿಲ್ಲ.

Thursday, July 2, 2009

ಇಂದ್ಯಾವ ಅಳಲು ಸೆರೆಯುಬ್ಬಿ ಕೊರಳು...

ದೇ...
ವ...
ಕಿ...
ಬದುಕಿನ ಯಾವುದೋ ಒಂದು ತಿರುವಿನಲ್ಲಿ ಸುಮ್ಮನೆ ನೆನಪಾದ ಹಾಡಿನಂತವಳು.

ನೀನಡೆವ ಹಾದಿಯಲ್ಲಿ
ನೆಗೆಹೂವು ಬಾಡದಿರಲಿ
ಬಾಳೆಂಬ ಬುತ್ತಿಯಲಿ ಸಿಹಿಪಾಲು ನಿನಗಿರಲಿ...

ಎಷ್ಟೇ ನೊಂದುಕೊಂಡರೂ ವಾಸುವಿನ ಎದೆಬಡಿತದ ಹಾಡು ಇದೇ ಆಗಿರುತ್ತೆ.
ನೀನು ನಡೆದ ಹಾದಿಯುದ್ದಕ್ಕೂ ನನ್ನ ನೆನಪಿನ ದೂಳಿರಲೇ ಇಲ್ವಾ?. ಅಥವಾ ಅದನ್ನು ನೆನಪನ್ನು ಕೆದಕೋಕೆ ಪ್ರಯತ್ನ ಪಟ್ಟಿಲ್ವಾ? ನಿನ್ನ ಕಾಲಡಿಯಲ್ಲೇ ನನ್ನ ಜೀವನ ನನಗೆ ಅರಿವಿಲ್ಲದಂತೆ ದೂಳಿಪಟವಾಗಿತ್ತು. ಈ ನೋವಿಗೆ ಕೊನೆಯೆಲ್ಲಿ...

ದೇವಕಿ...

ಆಗು ನೀನು ಇಬ್ಬನಿ ನೆಲೆಸುವ ಹೂ
ದುಂಬಿಮೊರೆವ ಮಹಲು
ಬರಲಿ ಅಲ್ಲಿ ಗಿಳಿ ಕೋಗಿಲೆ ಕಾಗೆ
ಮೊರೆಯಲೆಲ್ಲ ಅಹವಾಲು...
ಇವರುಗಳ ಮಧ್ಯೆ ನಾನು ಒಬ್ಬನಾಗಿ ಸೇರಿರ್ತೀನಿ .ನಿನಗೆ ಕೇಳುವ ಸಹನೆ ಇದ್ದರೆ ನನ್ನ ಅಹವಾಲು
ಹೇಳ್ಕೋತೀನಿ.

ಮಾತು ತಪ್ಪಿ ಹೋದೆಯಾ ದೇವಕಿ. ಕಂಡ ಕನಸುಗಳ ಕಥೆ ಏನಾಯ್ತು! ಇಬ್ಬರೂ ಸೇರಿ ಕೇಳಬೇಕಾಗಿದ್ದ ಹಾಡುಗಳೆಷ್ಟು? ಕಟ್ಟಬೇಕಾಗಿದ್ದ ಹಾಡುಗಳೆಷ್ಟು? ನಡೆಯಬೇಕಾಗಿದ್ದ ದೂರವೆಷ್ಟು? ನಿಜ ಹೇಳ್ತೀನಿ ದೇವಕಿ ಇದೆಲ್ಲವು ನೆನಪಾದರೇ ಮಗುವಿನಂತೆ ಸುಮ್ಮನೆ ಅಳುತ್ತಾ ಕುಳಿತುಬಿಡುತ್ತೇನೆ. ಸಮಾಧಾನ ಮಾಡಲು ನಿನ್ನ ನೆರಳು ಸಹ ಸಂಗಾತಿ ಆಗಲು ಬಯಸುತ್ತಿಲ್ಲವಲ್ಲ?. ನೀನೇ ಹಚ್ಚಿಟ್ಟ ಪ್ರಣತಿ ಆರುವ ಸ್ಥಿತಿಯಲ್ಲಿದೆ. ಪುನಹ ಬಂದು ಬೆಳಗಲ್ವಾ ದೇವಕಿ?? ಕತ್ತಲು ಕವಿದಿರೋ ಈ ಬಾಳದಾರಿಯನ್ನ ಒಬ್ಬನೇ ದಾಟುತ್ತೇನಾ? ಮದ್ಯೆ ಮದ್ಯೆ ನಿನ್ನ ನೆನಪುಗಳು ಕಾಡಿ ಕುಸಿದು ಬೀಳೋದಿಲ್ವಾ? ಬಿದ್ದವನು ಮತ್ತೆ ಎದ್ದು ಪಯಣ ಮುಂದುವರಿಸುತ್ತೇನಾ? ಹೀಗೆ ಸಾವಿರ ಸಾವಿರ ಪ್ರಶ್ನೆಗಳ ಮೂಟೆ ಹೊತ್ತುಒಂಟಿಕಾಲಲ್ಲಿ ಉತ್ತರಕ್ಕಾಗಿ ಹಪಹಪಿಸುತ್ತಿರೋನು ನಾನು ಉತ್ತರಿಸಬೇಕಾದವಳು ನೀನು.

ಸವಿ ಭಾವಗಳಿಗೆ ನೀನಾದ ನೀಡಿ
ಜೊತೆಗೂಡಿ ಹಾಡಿದೆ
ಇಂದ್ಯಾವ ಅಳಲು ಸೆರೆಯುಬ್ಬಿ ಕೊರಳು
ಈ ಮೌನ ತಾಳಿದೆ
ನೀನೆಟ್ಟು ಬೆಳೆಸಿದ ಈಮರ ಫಲತೊಟ್ಟ ವೇಳೆಗೆ
ಹೀಗೆಕೆ ಮುರಿದು ಉರುಳಿದೆ
ಯಾವ ಧಾಳಿಗೆ...
ಯಾವುದೂ ಅರಿಯದ ಮನಸ್ಸು ಕತ್ತಲಲ್ಲಿ ಏನೂ ತೋಚದೆ ಮೌನವಾಗಿ ರೋದಿಸುತ್ತಿದೆ.


ಮತ್ತೆ ಯಾವತ್ತಾದರೂ ಪ್ರೀತಿಯಿಂದ ವಾಸೂ ಅಂದು ತಲೆಯನ್ನ ಮೊಟಕುವುದೇ ಇಲ್ಲವಾ?
ವಾಸು ನಿನಗೆ ದೇವಕಿ ಅನ್ನುವ ಒಂದು ಕನಸಿದೆ, ವಾಸು ನಿನಗೆ ಅಂತ ಒಂದು ಒಳ್ಳೆಯ ಹಾಡಿದೆ ಕಣೊ, ನಿನ್ನ ನೋವಿನ ಜೋಳಿಗೆಗೆ ಸದ್ಯದಲ್ಲೇ ಬರಿದಾಗಲಿದೆ ಇನ್ನೇನಿದ್ದರು ನಿನ್ನ ಜೋಳಿಗೆಯ ತುಂಬ ಸಂತೋಷದ ಹಾಡುಗಳು ಕಣೊ,” ಅಂತ ಸುಮ್ಮನೆ ಅಂದುಬಿಡು ದೇವಕಿ ಕುಷಿಯಿಂದ ಸತ್ತೇ ಹೋಗುತ್ತೇನೆ.

Wednesday, July 1, 2009

ತನುವು ನಿನ್ನದು ಮನವು ನಿನ್ನದು

ಕೊನೆಗೂ ದೇವರು ಅನ್ನುವ ನಾಜೂಕಯ್ಯ ನಿನ್ನ ವಿಷಯದಲ್ಲಿ ನನ್ನ ಪ್ರೀತಿ ತುಂಬಿದ ನಂಬಿಕೆಗಳನ್ನ ಹುಸಿಮಾಡಿಬಿಟ್ಟ ದೇವಕಿ. ನನ್ನ ಬದುಕಿನ ಪ್ರತಿ ದಿನದ ಪ್ರತಿ ಕ್ಷಣಗಳಲ್ಲಿ ಕೂಡ ನಾನು ನಿನ್ನ ಕುರಿತಾಗಿ ಒಂದೊಂದು ಕನಸು ಕಟ್ಟುತ್ತಿದ್ದೆ. ಆದರೇ ಅದಷ್ಟೂ ಕನಸುಗಳಿಗೆ ಮಣ್ಣಿನ ಹೊದಿಕೆಯ ಹೊದ್ದಿಸಿ ಮಲಗಿಸಿಬಿಟ್ಟೆ ದೇವಕಿ ನೀನು. ನಿನ್ನ ಮೇಲಿನ ಮೊದಲ ಪ್ರೀತಿಯಿಂದಾನೆ ಕೇಳ್ತಾ ಇದ್ದೀನಿ ಜಗತ್ತಿನಲ್ಲಿರುವ ಎಲ್ಲಾ ನೋವುಗಳೂ ನನಗೊಬ್ಬನಿಗೇ ಯಾಕೆ ದೇವಕಿ? ಬದುಕಿನ ಕಡೆಯ ಕ್ಷಣಗಳವರೆಗೂ ಈ ನಿನ್ನ ವಾಸು ನೋವಿನ ಅರಮನೆಯ ರಾಜಕುಮಾರನಾಗಿಯೇ ಇರಬೇಕಾ?

ಎದೆಯ ಎಲ್ಲ ತರಂಗಗಳಲ್ಲಿಯೂ ಬದುಕಿನ ಚಿತ್ತಾರ ಮೂಡಿಸಿದವಳು ನೀನು. ಅದೇ ತರಂಗಗಳಿಗೆ ವಿದಾಯದ ಕಹಿಯನ್ನೇಕೆ ತುಂಬಿದೆ ದೇವಕಿ? ಎದೆಯೊಳಗಿನ ಆಪ್ತ ಗೀತೆಯಂತಿದ್ದೆ ಅಲ್ಲವೇ ನೀನು, ಕೊನೆಗೂ ನನ್ನ ಪಾಲಿನ ಕಾಮನಬಿಲ್ಲಾಗಿಬಿಟ್ಟೆಯಲ್ಲ ನೀನಿರುವ ದೂರವೆಷ್ಟು ದೇವಕಿ? ನೀನು ಘೋರಿ ಕಟ್ಟಿದ ಪ್ರತಿ ಕನಸಿಗೂ ಗೂಡು ಕಟ್ಟೋದು ಬಲ್ಲೆ ದೇವಕಿ ಅದು ನೀನೆ ನನಗೆ ಪ್ರೀತಿಯಿಂದ ಕಲಿಸಿದ ಪಾಠ. ಆದರೆ ನೀನಿಲ್ಲದೆ ನಾನು ಕಟ್ಟುವ ಗೂಡಿಗೆ ಹೆಚ್ಚಿನ ಆಯುಷ್ಯವಿಲ್ಲವೆಂದು ಮಾತ್ರ ಬಲ್ಲೆ ದೇವಕಿ.
ಬದುಕಿನ ಗೀತೆಯನ್ನ ನಿನ್ನ ಜೊತೆಯೇ ಹಾಡಬೇಕೆಂದು ಬೆಟ್ಟದಷ್ಟು ಕನಸ ಎದೆಯೊಳಗಿಟ್ಟುಕೊಂಡು ಕುಳಿತಿದ್ದ ಹುಡುಗ ನಾನು. ಗೀತೆಯ ಮೊದಲ ಸಾಲಿನಲ್ಲೇ ನಿನ್ನ ಜೊತೆಯಿಲ್ಲ..ಹಾಡುವುದಾದರೂ ಹೇಗೆ ದೇವಕಿ? ನಾನು ಹೋಗುವ ದಾರಿಯಲ್ಲಿ ನಿನ್ನ ಪುಟ್ಟ ಹೆಜ್ಜೆ ಜೊತೆಗಿರುತ್ತೆ ಅನ್ನುವ ನಂಬಿಕೆಯಲ್ಲಿ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದೆ..ಮೊದಲೆರೆಡು ಹೆಜ್ಜೆಯೇ ಮುಗಿದಿಲ್ಲ ಅದೆಲ್ಲಿಗೆ ನಿನ್ನ ಪಯಣ? ನನ್ನ ಹೆಜ್ಜೆಗಳೀಗ ಅನುಭವಿಸುತ್ತಿರುವ ತಬ್ಬಲಿತನಕ್ಕೆ ಹಾಡುವವರು ಯಾರು ದೇವಕಿ?

ಈ ಬದುಕಿನಲ್ಲಿರುವ ಎಲ್ಲಾ ನೋವುಗಳ ತೂಕ ಒಂದಾದರೆ ಕಾರಣವೇ ಇಲ್ಲದೆ ಮುನಿದು ಹೋದ ನೀನು ಮತ್ತೆ ನಿನ್ನ ತಿರಸ್ಕಾರದ ತೂಕವೇ ಇನ್ನೊಂದು. ಇಲ್ಲಿ ಬರೆದಿದ್ದೆಲ್ಲ ನಿನ್ನ ಮೇಲಿನ ಕೋಪದಿಂದಾಗಲೀ ನೋವಿನಿಂದಾಗಲಿ ಅಲ್ಲ ದೇವಕಿ. ಕೆಲವೊಂದು ಸಲ ಮುಂದಿರುವ ಬದುಕನ್ನ ನೆನೆಸಿಕೊಂಡರೇ ದಿಗಿಲುಗೊಳ್ಳುತ್ತೇನೆ. ತುಂಬಾ ಮನುಷ್ಯನಿಗೆ ತುಂಬಾ ನೋವಾದಾಗ, ಕಷ್ಟಗಳು ಬಂದಾಗ, ಇನ್ನು ಬದುಕು ಸಾಧ್ಯವೇ ಇಲ್ಲ ಅನ್ನುವಾಗ ಯಾವ ದೇವರು ನೆನಪಾಗೋದಿಲ್ಲ. ಯಾವುದಾರೊಂದು ಹೆಗಲು ನೆನಪಾಗುತ್ತೆ, ಬೆಚ್ಚನೆಯ ಎದೆ ಬೇಕು ಅನ್ನಿಸುತ್ತೆ, ಕಣ್ಣೊರೆಸುವ ಒಂದು ಕೈಯ್ಯನ್ನ ಜೀವ ಬೇಡುತ್ತೆ. ತುಂಬಾ ನೋವಿನಲ್ಲಿದ್ದೀನಿ, ನೋವಾಗುತ್ತಿದೆ. ದೇವರಂತೂ ನನ್ನ ಬದುಕಿನಲ್ಲಿ ಮುನಿದು ಹೋಗಾಗಿದೆ ಮತ್ತು ದೇವರಂತಿದ್ದ ನೀನು. ಇಬ್ಬರೂ ಕಾರಣ ಹೇಳದೇ ಹೋಗಿದ್ದೀರಿ. ಆದರೂ ಮನಸ್ಸು ಯಾವುದೇ ಪ್ರತಿಫ಼ಲಪೇಕ್ಷೆಯಿಲ್ಲದೆ ಸುಮ್ಮನೆ ನೆಚ್ಚಿನ ಕವಿ ಕುವೆಂಪು ಅವರ

ತನುವು ನಿನ್ನದು ಮನವು ನಿನ್ನದು
ನನ್ನ ಜೀವಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವು ನನ್ನದು...
ಮನಸ್ಸು ಮುದುರಿಕೊಂಡು ತನ್ನಷ್ಟಕ್ಕೆ ತಾನೆ ಹಾಡಿಕೊಳ್ಳುತ್ತಿದೆ..