Thursday, August 26, 2010

ಪ್ರೀತಿ ನರಳಿದರೆ ಹೋವು ಅರಳೊಲ್ಲ ವಾಸು..

ವಾಸು ನೀನು ಬದುಕಿನ ಮುಖ್ಯ ತಿರುವಿನಲ್ಲಿ ಸಂಭ್ರಮದ ಭಾವಗೀತೆ ಪಲ್ಲವಿಸುವಾಗ ಅಪಸ್ವರದ ಉನ್ಮಾದ ಹೊರಡಿಸುವವನು, ವಾಸು ನೀನು ಬದುಕಿನ ಮುಖ್ಯ ತಿರುವಿನಲ್ಲಿ ನನ್ನ ಕೈ ಹಿಡಿಯದೇ ಹೋದವನು, ವಾಸು ನೀನು ಪ್ರೀತಿಯ ಹೆಸರಲ್ಲಿ ಕೈಗೆ ಮೋಸದ ಸರಕು ತುಂಬಿಸಲು ಬಂದವನು ಕಣೋ. ವಾಸು ಕಣ್ಣು ಪ್ರೀತಿಯ ದಾರಿ, ಹೃದಯ ಪ್ರೀತಿಯ ಸ್ವರ್ಗ, ಕನಸು ಪ್ರೀತಿಯ ಹೊರಪ್ರಪಂಚ, ಅಲ್ಲಿ ಮಿಡಿಯುವ ಭಾವನೆಗಳೇ ಬದುಕಿನ ಸಂಗೀತ ಅಂತಾರೆ, ಆದರೆ ಈ ಕಣ್ಣೀರಿದೆಯಲ್ಲ ವಾಸು, ಅದು ನಿಜವಾದ ಪ್ರೀತಿಯ ಉಡುಗೊರೆಯಂತೆ ಕಣೊ, ಅಂತಹ ಕಣ್ಣ ಹನಿಗಳನ್ನ ದುಃಖದ ಸಂಕೇತವನ್ನ ಮಾಡಿದವ ನೀನು. ಈಗ ನನ್ನಿಂದ ಜಾರುವ ನಾಲ್ಕು ಹನಿಗಳು ಯಾಕೋ ಅರ್ಥ ಕಳೆದುಕೊಳ್ಳುತ್ತಿವೆ ವಾಸು, ಈ ಬದುಕಿಗೆ ಒಂದು ಅರ್ಥ ತಂದವನೂ ನೀನೆ, ಅದಕ್ಕೊಂದು ಅರ್ಥವಿಲ್ಲದಂತೆ ಮಾಡಿದವನೂ ನೀನೆ ವಾಸು. ಪ್ರತಿ ಕ್ಷಣಗಳೂ ನಗುವಿನ ಕುರಿತೇ ಮಾತನಾಡುತ್ತಿದ್ದ ನೀನು ಇಂದ್ಯಾಕೊ ಕಣ್ಣೀರ ಕಡಲಿಗೆ ನೂಕಿಬಿಟ್ಟೆ?

ನೀನಡವೆ ಹಾದಿಯಲ್ಲಿ ನಗೆ ಹೂವು ಬಾಡದಿರಲಿ ಹಾಡಿನ ಸಾಲುಗಳು ಈ ದೇವಕಿಯ ಗುಂಡಿಗೆಯ ಜೀವವಾಹಿನಿಯಾಗಿ ಹರಿದಿದ್ದವು, ಆದರೆ ಈಗ? ಪಾಪ ಯಾರದೋ ಪರಿತಾಪ ಯಾರದೋ ಎಂಬಂತೆ ಕಂಡ ನನ್ನ ಕನಸುಗಳನ್ನೆಲ್ಲ ಕರುಣೆಯಿಲ್ಲದೇ ಹೊಸಕಿ ಹಾಕಲು ಮನಸ್ಸಾದರೂ ಹೇಗೆ ಬಂತು ? ಬೆಟ್ಟದಂತಾ ಅಪರಾಧವನ್ನೂ ನಮ್ಮ ಪ್ರೀತಿಯ ನದಿಯ ಮಧ್ಯೆ ಅಣೆಕಟ್ಟೆಯಂತೆ ಕಟ್ಟಿಬಿಟ್ಟೆ, ಇಂಥ ಕಲ್ಲು ಮನಸ್ಸು ನಿನಗೆ ಬೇಕಿತ್ತ ವಾಸು? ನಮ್ಮ ಪ್ರೀತಿಗೆ ಮಮತೆಯ ಜೋಗುಳದ ಹಾಡು ಬೇಕಿತ್ತೇ ವಿನಹ ಪಲ್ಲವಿ ಚರಣಗಳಿಲ್ಲದ ಹಾಡಲ್ಲ, ಇಲ್ಲಿಗೆ ಎಲ್ಲದಕ್ಕೂ ಫುಲ್ ಸ್ಟಾಪ್ ಹಾಕ್ತ ಇದ್ದೀನಿ ವಾಸು . ನಾನಂದುಕೊಂಡ ಹಾಗೆ ಏನೂ ನಡೆಯಲಿಲ್ಲ. ಹಾಗಂತ ತುಂಬ ದೊಡ್ಡದನ್ನೇನು ಬಯಸಿರಲಿಲ್ಲ. ಇಲ್ಲಿಯವರೆಗೆ ಪ್ರೀತಿಪೂರ್ವಕವಾಗಿಯೇ ಕೆಲವು ನೋವುಗಳನ್ನ ಅಪ್ಪಿಕೊಂಡು ಬದುಕಿದೆ ಅದೆಲ್ಲವೂ ನಿನಗಾಗಿ ಅಂತ ನಿನಗೇ ಗೊತ್ತಿದೆ.

ಜಗತ್ತಲ್ಲಿ ಯಾವ ನೋವನ್ನಾದರೂ ಅನುಭವಿಸಬಹುದೇನೋ.. ಆದರೇ ಪ್ರೀತಿಸಿದವರ ನಂಬಿಕೆ ದ್ರೋಹ ? ಬೇಡ ಬಿಡು ಹೆಚ್ಚಿನದೇನನ್ನೂ ಬರೆಯಲಾಗುತ್ತಿಲ್ಲ. ದಿನಕ್ಕೊಂದು ಪತ್ರವನ್ನ ದೇವಕಿಯ ಮಡಿಲಿಗೆ ಹಾಕುತ್ತಿದ್ದ ನನ್ನ ವಾಸು, ಕೇವಲ ಒಂದೇ ಒಂದು ಸಾಲು ಬರೆಯಲಾಗದೇ ಖಾಲಿಯಾಗಿದ್ದಾನೆ ಅನ್ನುವುದು ಈ ದೇವಕಿಗೆ ಗೊತ್ತಾಗಿದೆ. .ಇಲ್ಲಿ ದೇವರ ಕ್ರೂರ ದೃಷ್ಟಿ ಇರಬಹುದು, ಪ್ರೀತಿಯ ನಿರ್ಧಯಿ ಹಂತಕನಾದ ನಿನ್ನ ಪ್ರೀತಿಯ ಮುಖವಾಡವಿರಲೂಬಹುದು, ಅಥವ ಈ ಜಗತ್ತಿನಲ್ಲಿ ಒಂದು ಸಣ್ಣ ಖುಷಿಯನ್ನೂ ಅನುಭವಿಸಲಾರದ ಈ ಖೊಟ್ಟಿ ನಸೀಬು ಇದ್ದರೂ ಇರಬಹುದು, ದೇವರೇ ಇಂತ ಯಾತನಮಯ ಸಮಯ ಜಗತ್ತಿನ ಯಾವ ಜೀವಕ್ಕೂ ಬೇಡ. ನಿಂಗೆ ಒಂದ್ ಮಾತು ಹೇಳ್ಬೇಕು ನಾನು... ಏನ್ ಗೊತ್ತ ವಾಸು, ನಿರ್ಮಲವಾದ ಪ್ರೀತಿ ನರಳಿದರೆ ಈ ಬದುಕಿನಲ್ಲಿ ಯಾವ ಹೂವುಗಳು ಅರಳೋದಿಲ್ಲ ವಾಸು.

ಇಂತಿ ನಿನ್ನ (?) ದೇವಕಿ