Wednesday, August 5, 2009

ನಾನಿಲ್ಲಿ ಕತ್ತಲೆಯಲಿ ; ನಿನಗಲ್ಲಿ ಬೆಳಕು!

"ಐ ಮಿಸ್ ಯೂ"
"ನೀನಿಲ್ಲದೇ ಬದುಕಿರೋಕೆ ಸಾಧ್ಯ ಇಲ್ಲ"
"ನೀ ಬಳಿಯಿರದ ನಿಮಿಷಗಳೆಲ್ಲ ವರುಷಗಳು"


ಇಂಥದ್ದೆಲ್ಲಾ ಸಾಲುಗಳನ್ನು ಸುಮ್ಮನೆ ಹರವಿಕೊಂಡು ಕುಳಿತಿದ್ದೇನೆ. ನನ್ನೆದೆಯ ನೋವಿಗೆ ಅದ್ಯಾವುದೂ ಸರಿಯಾದ ಪದವೆಂದು ಅನ್ನಿಸುತ್ತಿಲ್ಲ. ಚಲನಚಿತ್ರಗಳಲ್ಲಿ ಡೈಲಾಗ್ ಆಗಿ, ಆಕೆಯನ್ನು ಸುಮ್ಮನೆ ಮೆಚ್ಚಿಸಬೇಕೆಂದು ಎಸ್ಸೆಮ್ಮೆಸ್ಸುಗಳಲ್ಲಿ ಕೇವಲ ಬೆರಳುಗಳ ಕ್ರಿಯೆಗಾಗಿಯೇ ಆ ಪದಗಳು ಬಳಸಲ್ಪಟ್ಟಿರುವಾಗ, ವಿರಹದಿಂದ ವಿಲಪಿಸುತ್ತಿರುವ, ನಿನ್ನ ಒಂದು ಭೇಟಿಗಾಗಿ ಪರಿತಪಿಸುತ್ತಿರುವ ಎದೆಯ ಭಾವಕ್ಕೆ ಅದೇ ಪದಗಳನ್ನು ಹೇಗೆ ಬಳಸಲಿ ಹೇಳು? ಯಾವುದಕ್ಕೂ ಎದೆಯ ಬೇಗೆಯನ್ನು ಶಮನ ಮಾಡಲು ತಾಕತ್ತಿಲ್ಲ.


ಇಲ್ಲಿ ಈ ದೂರದೂರಿನಲಿ ನನ್ನ ಪಾಡನ್ನು ಬೇರೆ ಹೇಗೆ ತಿಳಿಸಲಿ ನಿನಗೆ? ನಿನ್ನದೇ ಊರಲ್ಲಿದ್ದಿದ್ದರೆ ಆಕಾಶದಲಿ ಮಲ್ಲಿಗೆಯಂತರಳಿದ ನಕ್ಷತ್ರವೊಂದು ಕಣ್ಣು ಮಿಟುಕಿಸಿ ನೋಡುತಿರುವಾಗ ಅದೇ ಕ್ಷಣ ನೀನೂ ಅದೇ ನಕ್ಷತ್ರವನ್ನೇ ನೋಡುತ್ತಿದ್ದಿರಬಹುದಾ ? ನಮ್ಮಿಬ್ಬರ ವಿರಹವನ್ನು, ಪಡುತಿರುವ ಪಾಡನ್ನು ಕಂಡೇ ಅದು ಪಿಳಿಪಿಳಿಸುತ್ತಿರುವುದಾ ಅಂತೆಲ್ಲಾ ಅಂದುಕೊಳ್ಳಬಹುದಿತ್ತು.


ವಿಪರ್ಯಾಸ ನೋಡು; ಈಗ ನಾನಿಲ್ಲಿ ಕತ್ತಲೆಯಲಿ; ನಿನಗಲ್ಲಿ ಬೆಳಕು! ಒಂಟಿಸೂರ್ಯನೊಬ್ಬ ಹಗಲ ಕ್ಷಣಗಳನ್ನು ಹೇರಿಹೋದ ನೋವಲ್ಲಿ ಒದ್ದಾಡಿದಕ್ಕಾಗಿ ನನಗಿಲ್ಲಿ ಸಾವಿರ ಸಾವಿರ ನಕ್ಷತ್ರಗಳ ಸಮಾಧಾನ. ಕಲೆಗೊಂಡ ಮೊಗದಲ್ಲೂ ಚಂದಿರನ ಸಾಂತ್ವನ ನೀಡುವ ನಗು. ಈ ದಿವ್ಯ ಮೌನದ ರಾತ್ರಿ, ಬೆಳದಿಂಗಳು, ಚುಕ್ಕಿಗಳು ಎಲ್ಲಾ ಒಟ್ಟಾಗಿ ಒಳಹರಿವಿನಲ್ಲಿ, ದೇವಕಿ ನಿನ್ನವಳೇ ಅಂತ ನನಗೆ ಸಮಾಧಾನ ನೀಡದೇ ಹೋಗಿದ್ದರೆ ರಾತ್ರಿಗಳು ಉರುಳುವುದಾದರೂ ಹೇಗಿತ್ತು?


ನಾನು ಉಳಿಯುವುದಾದರೂ ಹೇಗಾಗುತ್ತಿತ್ತು?!

5 comments:

  1. This comment has been removed by the author.

    ReplyDelete
  2. ವಾಸು ನೀನೀಗ ಕತ್ತಲಲ್ಲಿದ್ದೀಯ ನಿಜ. ಆದರೆ ನೀನಂದುಕೊಂಡ ಹಾಗೆ ನಿನ್ನಿಂದ ದೂರದಲ್ಲಿರೋ ದೇವಕಿ ಬೆಳಕಲ್ಲಿ ಇಲ್ಲ. ಅವಳೂ ಸಹಾ ಕತ್ತಲಲ್ಲೇ ಜೀವನ ನಡೆಸುತ್ತಿದ್ದಾಳೆ. ಅವಳು ಪಡುತ್ತಿರುವ ವ್ಯೆಥೆ, ಸಂಕಟ ಕೇಳಿದರೇನೆ ಮನಸ್ಸಿಗೆ ಹಿಂಸೆಯಾಗುತ್ತದೆ. ದಯವಿಟ್ಟು ಸಮಾಧಾನ ಮಾಡಿಕೊ. ದುಡುಕಬೇಡ.

    ReplyDelete
  3. ಟೈಟಲ್ ಅರ್ಥಗರ್ಭಿತವಾಗಿದೆ. ಅವನು ಕತ್ತಲಲ್ಲಿ ಅವಳು ಬೆಳಕಲ್ಲಿ ಅಂದರೆ ಅಮೇರಿಕಾದಲ್ಲಿ ಕತ್ತಲಾದರೆ ಅದೇ ಸಮಯದಲ್ಲಿ ಇಲ್ಲಿ ಬೆಳಗಾಗಿರುತ್ತದೆ.

    ಅಲ್ಲದೇ ಅವನ ಪಾಯಿಂಟ್ ಆಫ್ ವ್ಯೂ ನಲ್ಲಿ ಅವಳು ಖುಷಿಯಾಗೇ ಇದ್ದಾಳೆ!

    ಈ ಎರಡೂ ಅರ್ಥ ಕೊಟ್ಟಿದೆ ಆ ಸಾಲುಗಳು.

    ReplyDelete
  4. Really its vry nice words...... i like this .... its vry intresting Devaki --- vasu i love u both

    ReplyDelete
  5. ಅದೇನು ಸರ್, ಡೈಲಿ ಅದೇಗೆ ಬರಿತಿರಾ, ಚಾಚೂ ತಪ್ಪದೆ ಬರೆಯೋ ಪತ್ರಕ್ಕೆ ಒಂದು ಭಾವನೆಗಳ ಬುತ್ತಿಯಿದೆ.
    ಬರಿತ ಇರಿ

    ReplyDelete