Tuesday, July 28, 2009

ಬಿಕ್ಕುವಿಕೆಯನ್ನ ಮರೆಮಾಚಲು ಆ ಮಳೆಗೂ ಸಾಧ್ಯವಾಗಲಿಲ್ಲ.

ಕಣ್ಮುಚ್ಚಿ ಕುಳಿತಿದ್ದೆ. ಕಣ್ಣುಗಳಲ್ಲಿರುವ ನಿನ್ನ ನೆನಪಾದರೂ ಜೊತೆಗಿರಲಿ ಅನ್ನುವ ಸಣ್ಣ ಆಸೆಯಿಂದ. ಕಣ್ಣೀರಿನೊಂದಿಗೆನಿನ್ನ ನೆನಪುಗಳು ಹೊರಹೆಜ್ಜೆ ಹಾಕದಂತೆ ತುಂಬಾ ಜಾಗ್ರತೆವಹಿಸಿದ್ದೆ. ಆದರೇ ನನ್ನ ಸಣ್ಣ ಆಸೆಯನ್ನೂ ಪಕ್ಕಸರಿಸಿ ಕಣ್ಣುಗಳು ಸೋಲೊಪ್ಪಿಕೊಂಡವು ಗೆಳತಿ. ನನ್ನೆದುರೇ ನೀನು ಹನಿಗಳ ರೂಪದಲ್ಲಿ ನನ್ನಿಂದ ಕೆಳಗಿಳಿಯುತ್ತಿದ್ದೆ. ಒಂದು ಯಾತನಾದಾಯಕವಾದ ಮುಖಭಾವ ಹೊತ್ತುಕೊಂಡು ದಿಗಂತದಾಚೆ ದೃಷ್ಟಿ ಹಾಯಿಸುತ್ತಾ ನಿಂತಿದ್ದೆ. ಅಲ್ಲಾದರೂ ಕಾಣಬಹುದೇ ನೀನೆಂದು. ಅಲ್ಲಿ ಕಂಡಿದ್ದು ಸುಡುವ ಸೂರ್ಯ, ಅಣಕಿಸುವ ವಿಶಾಲ ಆಕಾಶದ ನೀಲಿ ನೀಲಿ. ಕೆಳಗೆ ವಿಶಾಲ ರಂಗಮಂದಿರದಂತಹ ಸುಡುವ ಬಯಲು. ಅಲ್ಲಿ ಜೀವಂತಿಕೆಯ ಯಾವ ಕುರುಹುಗಳು ನನಗೆ ಕಾಣಿಸಲಿಲ್ಲ. ವಿಶಾಲ ಬಯಲು ಸುಡುವ ಬಿಸಿಲು ತಾಳಲಾರದೇ ಹಾಗೆ ಮಲಗಿಕೊಂಡಿತ್ತು.
ಮತ್ತದೇ ನನ್ನಿಷ್ಟದ ಹಾಡುಗಾರನ ಹೇಳಿ ಹೋಗು ಕಾರಣಾ...
ಹೋಗುವಾ ಮೊದಲೂ....ಕಾಡುವುದಕ್ಕೆ ಶುರುವಾಯಿತು ...ಅದು ಆ ಸೂರ್ಯನಿಗೂ ಗೊತ್ತಯಿತು ಅನ್ನಿಸುತ್ತೆ...

ಸುಡುವ ಸೂರ್ಯ ಸರಿಯತೊಡಗಿದ. ತಂಪಾದ ಮೋಡಗಳ ಮೆರವಣಿಗೆ ಆರಂಭವಾಗಿತ್ತು.. ಕೂಡಲೇ ಕೆಲವು ಮಕ್ಕಳೆಲ್ಲ ಹೋ ಎಂದುಕೊಂಡು ಬಂದು ಯಾವುದೋ ಆಟಗಳನ್ನ ಹಚ್ಚಿಕೊಂಡರು. ನನಗೆ ಕೆಳಗಿಳಿದು ಹೋಗಿ ಮಕ್ಕಳಲ್ಲಿ ಮಗುವಾಗಬೇಕೆನ್ನಿಸಿತು. ಕೆಳಗಿಳಿದು ಹೋದೆ. ನಿಧಾನವಾಗಿ ಮಳೆಯ ಹನಿಗಳು ಸುಡುವ ಬಯಲಿಗೆ ಮುತ್ತಿಕ್ಕತೊಡಗಿದ್ದವು. ಮಕ್ಕಳೆಲ್ಲ ಒದ್ದೆಯಾದರು, ಮುದ್ದೆಯಾದರು. ಮಳೆ ಮಕ್ಕಳಿಗೆ ಹಳೆಯ ನೋವುಗಳನ್ನೆಲ್ಲ ಮರೆಸಿ ಒಂದಷ್ಟು ಹೊಸ ನಗುವನ್ನ ಅವರ ಗಲ್ಲಗಳಿಗೆ ತುಂಬಿ ಕಳಿಸಿತ್ತು. ಮರುಭೂಮಿಯಂತ ನೆಲಕ್ಕೆ ಒಂದಿಷ್ಟು ಹಸಿರ ಬಟ್ಟೆಯನ್ನ ತೊಡಿಸಿತ್ತು. ಮಲ್ಲಿಗೆ ಸಂಪಿಗೆ ಬಳ್ಳಿಗಳು ಚಿಗುರೊಡೆಯುತ್ತಿದ್ದವು. ಗುಲಾಬಿ ಗಿಡದ ಸಂಬ್ರಮ ಮಾತಿನಲ್ಲಿ ಹೇಳೋಂತದ್ದಲ್ಲ. ಚಿಟ್ಟೆಗಳೆಲ್ಲ ಶ್ರಿಂಗಾರ ಬಂಗಾರ ಮಾಡಿಕೊಂಡವರತೆ ಮೆರವಣಿಗೆ ಹೊರಟಿದ್ದವು.ಆ ಹೊತ್ತಿಗಾಗಲೇ ಗಂಡ ಹೆಂಡತಿಯರು ಗೂಡು ಸೇರಿ ಚಳಿಗೆ ಜ್ವರ ಬರಿಸುತ್ತಿದ್ದರು. ಗೆಳತಿಯರು ಆ ಚಳಿಗೆ ಗೆಳೆಯರ ಎದೆಯ ಕೂದಲಿನ ಲೆಕ್ಕ ಸಿಗದೆ ಪರಿತಪಿಸುತ್ತಾ ಚಳಿಗೆ ಶಪಿಸುತ್ತ ಮತ್ತು ವಂದಿಸುತ್ತ ಹುಸಿಮುನಿಸು ತೋರಿಸುತ್ತಿದ್ದರು. ಒಂದು ಮಳೆ ಒಂದು ಕ್ಷಣದಲ್ಲಿ ಏನೆಲ್ಲವನ್ನ ಬದಲಿಸಿತ್ತು.

ಆದರೆ ಆದರೆ ವಾಸು ಹಾಗೆ ಮಳೆಯಲ್ಲಿ ನಿಂತೇ ಇದ್ದ. ಮಾಮೂಲಿನಂತೆ ಮಳೆಯಲ್ಲಿ ಅಳುವಾಗ ಕಣ್ಣೀರೇನೋ ಕಾಣಿಸುತ್ತಿರಲಿಲ್ಲ.ಆದರೆ ಹೃದಯದ ಬಿಕ್ಕುವಿಕೆಯನ್ನ ಮರೆಮಾಚಲು ಆ ಮಳೆಗೂ ಸಾಧ್ಯವಾಗಲಿಲ್ಲ.

1 comment:

  1. ಮಳೆ,ಕಣ್ಣೀರು,ವಿರಹ ಯಾವುದು ನಿರಂತರವಾಗಿರುವುದಿಲ್ಲ ವಾಸು..;)

    ReplyDelete