Saturday, July 18, 2009

ಈ ಹಣೆಯಲ್ಲಿ ನಿನ್ನ ಒಲವ ಗೀಚಿಲ್ಲ ಬ್ರಹ್ಮ...

ಬೇಡಿಕೆ ಇದ್ದಿದ್ದು ಒಂದು ಮುಷ್ಟಿಯ ಪ್ರೀತಿ...ಆದರೆ ಈ ವಾಸು ದಕ್ಕಿಸಿಕೊಂಡಿದ್ದು ಮಾತ್ರ ತಬ್ಬಿಕೊಳ್ಳುವಷ್ಟು ನೋವು. ಕೊಟ್ಟಿದ್ದು ನೀನಾ? ಅಥವ ಆ ದೇವರಾ? ದೇವರೆ ಅನ್ನೋದು ನಿಜವಾದರೆ ಇಲ್ಲಿಂದಲೇ ಈ ಮುರಿದ ಹೃದಯದಿಂದ ಅವನಿಗೆ ಶಪಿಸಿಬಿಡುತ್ತೇನೆ. ನೀನಾದರೇ ಆ ದೇವರು ನಿನಗೆ ಶಪಿಸದಿರಲೆಂದು ತುಂಬು ಹೃದಯದಿಂದ ಕೇಳಿಕೊಳ್ಳುತ್ತೇನೆ. ನಿನ್ನ ಕುರಿತಾಗಿ ಕಂಡ ಬಂಗಾರದಂತಹ ಕನಸುಗಳೆಲ್ಲ ಹಗಲುಗನಸುಗಳಾಗುತ್ತವೆ ಅಂತ ಅಂದುಕೊಂಡಿರಲಿಲ್ಲ. ಈ ಹಣೆಯಲ್ಲಿ ನಿನ್ನ ಒಲವ ಗೀಚಿಲ್ಲ ಬ್ರಹ್ಮ ಅನ್ನುವ ಹಾಡಿನ ಸಾಲುಗಳನ್ನ ನನ್ನ ನೆನಪು ಮಾಡಿಕೊಂಡೇ ಯಾರೋ ಪುಣ್ಯಾತ್ಮ ಬರೆದಿರಬೇಕು.. ಅಥವಾ ಈ ಎದೆಯ ಮೇಲೆ ನಿನ್ನ ಹೆಸರು ಬರೆಯುವಷ್ಟು ಪವಿತ್ರ ಹೃದಯದವನು ಈ ವಾಸು ಆಗಿರಲಿಲ್ಲ ಅಲ್ಲವಾ?.


ನಿನಗೆ ನಾನು ಇಲ್ಲಿಯವರೆಗೂ ಬರೆದ ಎಲ್ಲ ಪತ್ರಗಳಲ್ಲೂ " ದೇವಕೀ...ನೀನು ತುಂಬಾ ತುಂಬಾ ಕೆಟ್ಟವಳು " ಎಂದು ಜೋರಾಗಿ ಕೂಗಬೇಕು ಅನ್ನಿಸುತ್ತೆ. ಆದರೆ ನಿಜ ಹೇಳ್ತೀನಿ ದೇವಕಿ, ನನಗೆ ಪತ್ರ ಬರೆಯಲು ಪೆನ್ನು ಹಿಡಿದಿರುವ ಈ ಕೈ ನಡುಗುತ್ತೆ, ಹೃದಯ ಒಂದೇ ಸಮನೆ ಹೊಡೆದುಕೊಳ್ಳಲಾರಂಬಿಸುತ್ತದೆ.. ಬಲವಂತದಿಂದ ಆದರೂ ನೀನು ಕೆಟ್ಟವಳು ಅಂದು ಹೇಳಿಬಿಡಬೇಕು ಅನ್ನುವಷ್ಟರಲ್ಲಿ ಹೆಗಲೇರಿ ಬಿಡುತ್ತವಲ್ಲ ನಿನ್ನ ಬಂಗಾರದ ನೆನಪುಗಳು...! ಎಲ್ಲವನ್ನು ಎಲ್ಲದನ್ನು ಮರೆಸಿಬಿಡುತ್ತವೆ. ಆ ಕ್ಷಣಕ್ಕೆ ಈ ವಾಸು ನಿನ್ನ ವಶವಾಗುತ್ತಾನೆ. ನನ್ನ ಅಲ್ಲಿಯವರೆಗಿನ ವಿರಹಗಳೆಲ್ಲ ಕ್ಷಣಮಾತ್ರದಲ್ಲಿ ಅಸುನೀಗುತ್ತವೆ. ಮತ್ತೆ ನಿನ್ನ ಅಮಾಯಕ ಕಂಗಳಲ್ಲಿ ನನ್ನ ಎಲ್ಲ ಪ್ರೀತಿಯನ್ನ ಹುಡುಕುತ್ತ "" ದೇವಕೀ ನೀನು ಕೆಟ್ಟವಳಲ್ಲ..ಯಾವತ್ತೂ "" ನನ್ನವಳು ಎಂದು ಆಕಾಶದಾಚೆ ನೋಡುತ್ತೇನೆ..


ತಥಾಸ್ತು ಅನ್ನಲು ಅಲ್ಲಿ ಯಾವ ದೇವತೆಗಳು ಇಲ್ಲ...


ಎಲ್ಲವನ್ನೂ ಮರೆತು ಬಿಡುವವನ ಡಾಲರುಗಳ ಊರಲ್ಲಿ ಬಂದು ಕುತಿದ್ದೇನೆ.. ಒಂದು ತಮಾಷೆ ಗೊತ್ತ ದೇವಕಿ.. ಬರುವ ದಾರಿಯಲ್ಲಿ ನನಗಾದ ಬೇಸರಕ್ಕೆ ಖಿನ್ನತೆಗೆ ಒಂಟಿತನಕ್ಕೆ Once Again ಜೊತೆಯಾದದ್ದು ನಿನ್ನ ನೆನಪುಗಳೆ.. ನಿನ್ನ ಬಿಟ್ಟು ಬದುಕಿ ಬಿಡುತ್ತೇನೆ ಅಂದುಕೊಂಡು ಬಂದೆನಲ್ಲಾ.. ನೀನಲ್ಲದೇ ಏನನ್ನಾದರೂ ಸಾಧಿಸುತ್ತೇನೆ ಅನ್ನುವ ಹುರುಪಿನಿಂದ ಬಂದೆ ಅಲ್ವಾ.. ಆ ಕ್ಷಣದ ಹುರುಪಿಗೂ ಕಾರಣ ನೀನೇ ದೇವಕಿ.. ನಿನ್ನನ್ನ ಮರೆಯೊದಕ್ಕೋಸ್ಕರ ಮತ್ತೆ ಮತ್ತೆ ನಿನ್ನನ್ನ ನೆನಪು ಮಾಡಿಕೊಳ್ಳುತ್ತಿರುವ ನನ್ನ ಅಸಹಾಯಕತೆಗೆ ಯಾವ ಹೆಸರು ಇಡುತ್ತೀ? ಕೆಲವೊಮ್ಮೆ ಹುಚ್ಚುತನಗಳು ಪ್ರೀತಿ ಅನ್ನಿಸಿಕೊಳ್ಳುತ್ತವೆ ಅಂತಾರಲ್ಲ್ಲಾ ಇದಕ್ಕೇನಾ? ನಾನಂದುಕೊಂಡಿದ್ದು ಇದನ್ನ ಆರಾಧನೆ ಅಂತ .. ಬದುಕು ಅಂತ..


ನೀನೇನಂದುಕೊಂಡು ಹೊದೆಯೋ....ಉತ್ತರಿಸದೇ ಹೋದವಳು ನೀನು..ಉತ್ತರಕ್ಕಾಗಿ ಕಾಯುತ್ತಿರುವವನು ವಾಸು.

5 comments:

  1. ವಿನು ಸರ್ ನಿಮಗೆ ತುಂಬಾ ತುಂಂಂಂಂಂಂಂಂಂಬಾ ಥ್ಯಾಂಕ್ಯು.... ಅಷ್ಟು ಚೆಂದದ ಸಿರೀಯಲ್ ಜೊತೆ ಇಷ್ಟು ಅದ್ಭುತವಾದ ಬ್ಲಾಗ್ ಕೊಟ್ಟಿದ್ದಕ್ಕೆ. ವಾಸುವಿನ ಅಮಾಯಕ ಪ್ರೀತಿ, ದೇವಕಿಯ ಅಸಹಾಯಕತೆ ನಡುವೆ ತಲ್ಲಣಿತ ಮನುಸುಗಳ ಭಾವನೆಗಳ ಸಂಘರ್ಷ ನಿಜಕ್ಕೂ ಅತ್ಯದ್ಭುತ.

    ReplyDelete
  2. vinu balanja avare... neevu uttama nirdeshaka annuvudu namage modle gottittu. aadare neevobba adbhuta barahagaara anta ee blog nodida mele tiliyitu...preeti premada bhaavanegalannu chandavaagi nirupisiddiri...

    vaasu ondu vele blog na barahagalanna neeve barediddare nimage dodda thanks

    akaash.p

    ReplyDelete
  3. ಬೇಡಿಕೆ ಇದ್ದಿದ್ದು ಒಂದು ಮುಷ್ಟಿಯ ಪ್ರೀತಿ...ಆದರೆ ಈ ವಾಸು ದಕ್ಕಿಸಿಕೊಂಡಿದ್ದು ಮಾತ್ರ ತಬ್ಬಿಕೊಳ್ಳುವಷ್ಟು ನೋವು. ಕೊಟ್ಟಿದ್ದು ನೀನಾ? ಅಥವ ಆ ದೇವರಾ

    gottilla sir nanage sikkiddantu bettadashtu novu.

    nirmala

    ReplyDelete
  4. ಗೌತಮ್.ಬಿJuly 20, 2009 at 12:00 AM

    ನಿಮಗೆ ತುಂಬು ಹೃದಯದ ಧನ್ಯವಾದಗಳು ವಾಸು... ಒಂದೊಳ್ಳೆ ಪತ್ರ ಬರೆದಿದ್ದಕ್ಕೆ .. ನೀವು ದೇವಕಿಗೆ ಬರೆದಿರಬಹುದು.. ನಾನು ಇದನ್ನೆ ಕಾಪಿ ಮಾಡಿಕೊಂಡು ಪ್ರೇಕ್ಷ ಅನ್ನುವ ನನ್ನ ಗೆಳತಿಗೆ ಕಳಿಸಿದ್ದೇನೆ.

    ಗೌತಮ್

    ReplyDelete
  5. ಉತ್ತರಕ್ಕಾಗಿ ಕಾಯುತ್ತಿರುವವನು ವಾಸು.

    vasu ninke bega devki siktale bidu..
    papa devki

    ReplyDelete